ನವ ಮಂತ್ರಾಲಯ
ರಾಯರ ಕೃಪೆಯಿಂದ ಎಲ್ಲ ಕೆಲಸಗಳು ಸುಸೂತ್ರ: ಕನ್ನಡಪ್ರಭ ಸಂದರ್ಶನದಲ್ಲಿ ರಾಜಾ ಎಸ್.ಎನ್. ಸುಯಮೀಂದ್ರಾಚಾರ್ಯ ಅಭಿಮತ
ಕ.ಪ್ರ.ವಾರ್ತೆ, ಬೆಂಗಳೂರು, ಆ. 28-
ಪ್ರವಾಹ ಪೀಡಿತ ಮಂತ್ರಾಲಯ ಸ್ಮಶಾನ ಸದೃಶವಾಗಿ ಕಾಣುತ್ತಿತ್ತು. ಸುತ್ತಲಿನ ನಾಲ್ಕು ಕಿಮೀ ಪರಿಮಿತಿ ಪ್ರದೇಶದಲ್ಲಿ ಮೊಳಕಾಲವರೆಗೆ ಮಣ್ಣು ತುಂಬಿತ್ತು. ಕಣ್ಣು ಹಾಯಿಸಿದಲೆಲ್ಲ ಸತ್ತ ಪ್ರಾಣಿಗಳು, ಸರಿಸೃಪಗಳು. ಹೆಚ್ಚೇಕೆ, ಒಂದು ಮೊಂಬತ್ತಿಯೂ ಸಿಗದ ಸ್ಥಿತಿ ಇತ್ತು. ಆದರೆ ರಾಯರ ಕೃಪೆಯಿಂದ ಇಂದು ನವಮಂತ್ರಾಲಯ ನಿರ್ಮಾಣವಾಗಿದೆ.
ಇದು ಪ್ರವಾಹ ಪೀಡಿತ ಮಂತ್ರಾಲಯವನ್ನು 'ನವ ಮಂತ್ರಾಲಯ'ವಾಗಿ ಪರಿವರ್ತಿಸಲು ಹರ ಸಾಹಸಪಟ್ಟು ಯಶಸ್ವಿಯಾಗಿರುವ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಶ್ರೀ ಸುಯತೀಂದ್ರ ತೀರ್ಥ ಶ್ರೀಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ರಾಜಾ ಎಸ್.ಎನ್. ಸುಯಮೀಂದ್ರಾಚಾರ್ಯರ ಅನುಭವದ ನುಡಿ.
2009ರಲ್ಲಿ ಭಾರಿ ಪ್ರವಾಹದಿಂದಾಗಿ ಜರ್ಜರಿತಗೊಂಡಿದ್ದ ಮಂತ್ರಾಲಯವನ್ನು ರಾಯರ ಕೃಪೆ ಹಾಗೂ ದಾನಿಗಳ ನೆರವಿನಿಂದ ನವ ಮಂತ್ರಾಲಯವಾಗಿ ಪರಿವರ್ತಿಸಿದ ಹಿಂದಿನ ತಮ್ಮ ಶ್ರಮವನ್ನು ಕನ್ನಡಪ್ರಭದ ಜತೆ ಅವರು ಹಂಚಿಕೊಂಡಿದ್ದಾರೆ.
ಸಂದರ್ಶನ ಹೀಗಿದೆ...
ಮಂತ್ರಾಲಯವನ್ನು ಮೊದಲಿನ ಸ್ಥಿತಿಗೆ ತರುವುದಕ್ಕೆ ಕನಿಷ್ಠ ಮೂರು ವರ್ಷಗಳು ಬೇಕು ಎಂದು ಭಾರತೀಯ ಸೇನಾಪಡೆಯ ಮದ್ರಾಸ್ ಎಂಜಿನಿಯರ್ ವಿಭಾಗದ ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ ಎಷ್ಟು ಸಾಧ್ಯವೋ ಅಷ್ಟು ಬೇಗ ಮಂತ್ರಾಲಯವನ್ನು ಮೊದಲಿನ ಸ್ಥಿತಿಗೆ ತರಬೇಕು ಎಂಬುದು ನಮ್ಮ ಛಲವಾಗಿತ್ತು. ಇದಕ್ಕೆ ಪೂರಕವಾಗಿ ಶ್ರೀಗಳು ಪಾದಯಾತ್ರೆ ನಡೆಸಿ ದಾನಿಗಳಿಂದ ನೆರವು ಕೇಳಿದರು. ರು, 10 ರಿಂದ ರು, 75 ಲಕ್ಷದವರೆಗೆ ನೆರವು ಹರಿದು ಬಂತು.
ವಿಷನ್ 2030 : ಇದರ ಜತೆಗೆ ಶ್ರೀ ಮಂಠದಿಂದ 'ವಿಷನ್ 2030' ಎಂಬ ಯೋಜನೆ ರೂಪಿಸಲಾಯಿತು. ಒಂದೆಡೆ ಮಠದ ಭಕ್ತರು, ಸುತ್ತಲಿನ ಹಳ್ಳಿಯ ಜನರು, ಆರ್ಎಸ್ಎಸ್, ಸಿದ್ದಿ ಸಮಾಜ ಯೋಗದಂತ ಸಂಸ್ಥೆಯ ಕಾರ್ಯಕರ್ತರು ಹಗಲಿರುಳೆನ್ನದೇ ಪರಿಹಾರ ಕಾರ್ಯದಲ್ಲಿ ಮಗ್ನರಾಗಿದ್ದರು.
ಮಂತ್ರಾಲಯಕ್ಕೆ 15 ಲಕ್ಷ ಜನ ಬಂದರೆ ಅವರಿಗೆ ಯಾವ ರೀತಿಯಲ್ಲಿ ಅನುಕೂಲ ಕಲ್ಪಿಸಲು ಸಾಧ್ಯ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಈ ವಿಷನ್ 2030 ಯೋಜನೆ ರೂಪಿಸಲಾಯಿತು. ಮಠದ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಈ ಯೋಜನೆಯ ಮೂಲ ಧ್ಯೇಯ. ಇದರೊಂದಿಗೆ ಸಾಮಾಜಿಕ ಮತ್ತು ಮಠದ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಎರಡನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಯಿತು. ಇದೆಲ್ಲಕ್ಕಿಂತ ಹೆಚ್ಚಾಗಿ ಗ್ರೀನ್ ಮಂತ್ರಾಲಯ ಎಂಬ ವಿನೂತನ ಕಲ್ಪನೆಯನ್ನು ರೂಪಿಸಲಾಯಿತು.
ಪ್ರವಾಹ ನಂತರದ ದಿನದಲ್ಲಿ ಮಂತ್ರಾಲಯದಲ್ಲಿ ಒಂದೇ ಒಂದು ಕೊಠಡಿ ವಾಸಕ್ಕೆ ಯೋಗ್ಯವಾಗಿರಲಿಲ್ಲ. ರಾಯರ ದರ್ಶನ ಮತ್ತು ಆರಾಧನಾ ಸ್ಥಳ ನಿರ್ಮಾಣಕ್ಕೆ ನಾಲ್ಕು ತಿಂಗಳು ಬೇಕಾಯಿತು. ನಂತರ ಎಡ-ಬಲದ ಪ್ರಾಕಾರ, ಪರಿಮಳ ಪ್ರಸಾದ ಪಾಕಶಾಲೆ ನಿರ್ಮಾಣಕ್ಕೆ ಕೈ ಹಾಕಲಾಯಿತು. ಸಂಸದ ರಾಜೀವ್ ಚಂದ್ರಶೇಖರ್ ಫೌಂಡೇಶನ್ ಹಾಗೂ ಸುಧಾಮೂರ್ತಿ ಪೌಂಡೇಶನ್ ವತಿಯಿಂದ ಮನೆ ನಿರ್ಮಾಣ ಕಾರ್ಯ ಆರಂಭಿಸಲಾಯಿತು. 'ರಾಯರ ಮನೆ' ಎಂಬ ಹೆಸರಿನಲ್ಲಿ ಪ್ರವಾಹದಲ್ಲಿ ಸಂತ್ರಸ್ತರಾದವರು ಹಾಗೂ ಪ್ರಾಣ ಕಳೆದುಕೊಂಡವರ 80ಕ್ಕೂ ಹೆಚ್ಚು ಮಕ್ಕಳು ಈಗ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದೊಂದು ಜಾತ್ಯತೀತ, ಮತಾತೀತ ವಿದ್ಯಾಕೇಂದ್ರವಾಗಿ ಈಗ ಪರಿವರ್ತಿತವಾಗಿದೆ.
ವ್ಯಾಸತೀರ್ಥ : ಅದೇ ರೀತಿ ಸುತ್ತಲಿನ 8 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆ ಪೂರ್ಣಗೊಂಡಿದೆ. ವ್ಯಾಸತೀರ್ಥ ಎಂಬ ಹೆಸರಿನಲ್ಲಿ 37 ಹಳ್ಳಿಗಳಿಗೆ ಇದನ್ನು ವಿಸ್ತರಿಸುವ ಉದ್ದೇಶವಿದೆ. ಹೆಚ್ಚುವರಿಯಾಗಿ 600 ಎಕರೆ ಭೂಮಿ ಖರೀದಿಸಲಾಗಿದ್ದು, ಇಲ್ಲಿ ಹೊಸದಾಗಿ 146 ಕೊಠಡಿ ನಿರ್ಮಿಸಲಾಗಿದೆ. ಇದೆಲ್ಲದರ ಜತೆಗೆ ಜನಸಾಮಾನ್ಯರಿಗೆ ವೇದಾಂತ ಹಾಗೂ ಸನಾತನ ಪರಂಪರೆಯನ್ನು ತಲುಪಿಸಲು ಸಂಸ್ಕೃತ ವಿಶ್ವವಿದ್ಯಾಲಯ ಆರಂಭಿಸಲಾಗಿದೆ. ಇದಕ್ಕೂ ರಾಜೀವ್ ಚಂದ್ರಶೇಖರ್ ಫೌಂಡೇಶನ್ ಅನುದಾನ ನೀಡಿದೆ.
ಗ್ರೀನ್ ಮಂತ್ರಾಲಯ : ಇದೆಲ್ಲದಕ್ಕಿಂತ ಮುಖ್ಯವಾಗಿ ಗ್ರೀನ್ ಮಂತ್ರಾಲಯ ಎಂಬ ವಿನೂತನ ಕಾರ್ಯಕ್ಕೆ ಮುಂದಾಗಿದ್ದೇವೆ. ಮಂತ್ರಾಲಯದ ಸುತ್ತ 5 ಲಕ್ಷ ಸಸಿಗಳನ್ನು ನೆಡುವುದು ಇದರ ಉದ್ದೇಶ. 'ಸ್ವಚ್ಛ, ಸುಂದರ, ಸಂಪೂರ್ಣ ಮಂತ್ರಾಲಯ' ಇದರ ಧ್ಯೇಯ. ಮಠಕ್ಕೆ ಬಂದವರು ಆರೋಗ್ಯಕರ ವಾತಾವರಣದಲ್ಲಿ ನೆಮ್ಮದಿ ಅರಸುವುದಕ್ಕೆ ಇದರಿಂದ ನೆರವಾಗಲಿದೆ. ಕಳೆದ ಮೂರು ವರ್ಷದಲ್ಲಿ ಮಂತ್ರಾಲಯ ಪುನರ್ ನಿರ್ಮಾಣ ಕಾರ್ಯ ಶೇ.90ರಷ್ಟು ಪೂರ್ಣಗೊಂಡಿದೆ. ಪ್ರಕೃತಿಗೆ ವಿರುದ್ಧವಾಗಿ ಸೆಣೆಸುವುದು ಅಸಾಧ್ಯ. ಆದರೆ ಮುಂಬರುವ ದಿನಗಳಲ್ಲಿ ಇಂತ ಅನಾಹುತ ಎದುರಾದರೆ ಏನು ಮಾಡಬೇಕೆಂಬ ಬಗ್ಗೆ ಯೋಜನೆ ರೂಪಿಸಲಾಗಿದೆ. ಮಂತ್ರಾಲಯದಿಂದ 6 ಕಿಮೀ ದೂರದ ಕೊಂಡಾಪುರದಲ್ಲಿ ವಿದ್ಯಾಪೀಠವನ್ನು ಸ್ಥಾಪಿಸಲಾಗಿದೆ. ಜತೆಗೆ ಬೃಂದಾವನದ ಸುತ್ತ ಶಿಲಾಮಯ ಪ್ರಾಕಾರವನ್ನು ತಿರುಪತಿ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಹೆಚ್ಚು ಮಳೆ ಬಂದರೂ ಮಣ್ಣನ್ನು ಸೆರೆ ಹಿಡಿದುಕೊಳ್ಳಬಲ್ಲ ಸಾಮರ್ಥ್ಯ ಇರುವ ಸಸಿಗಳನ್ನು ನೆಡಲಾಗುತ್ತಿದೆ ಎಂದು ಸುಯಮೀಂದ್ರಾಚಾರ್ಯರು ಹೇಳಿದರು.
ದೂಪ-ದೀಪ-ನೈವ್ಯೇದ್ಯ ಯೋಜನೆ
ಶ್ರೀಮಠದ ವತಿಯಿಂದ ದೂಪ-ದೀಪ-ನೈವ್ಯೇದ್ಯ ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಹಿಂದೂ ದೇವಾಲಯದಲ್ಲಿ ಪ್ರತಿ ದಿನ ಅರ್ಚನೆ ನಡೆಸುವುದಕ್ಕಾಗಿ ಈ ಯೋಜನೆ ರೂಪಿಸಲಾಗಿದೆ. ಸಣ್ಣ ದೇವಾಲಯಗಳಲ್ಲಿನ ಅರ್ಚಕರಿಗೆ ಈ ಕಾರಣಕ್ಕಾಗಿ ಪ್ರತಿ ತಿಂಗಳು ರು, 2 ಸಾವಿರ ನೀಡಲಾಗುತ್ತದೆ. ಅರ್ಚಕರು ಯಾವುದೇ ಜಾತಿಗೆ ಸೇರಿದ್ದರೂ ಹಣ ನೀಡಲಾಗುತ್ತದೆ. ಒಟ್ಟಿನಲ್ಲಿ ಹಿಂದು ದೇವಾಲಯಗಳಲ್ಲಿ ಪ್ರತಿ ದಿನ ಪೂಜೆ ನಡೆಯಬೇಕು ಎಂಬುದು ಇದರ ಉದ್ದೇಶ. ಕರ್ನಾಟಕದ 16, ಆಂಧ್ರಪ್ರದೇಶದ 29 ಹಾಗೂ ತಮಿಳುನಾಡಿನ 9 ದೇವಾಲಯಗಳಿಗೆ ಈಗಾಗಲೇ ನೆರವು ನೀಡಲಾಗುತ್ತಿದೆ.
ಇದರ ಜತೆಗೆ ಮಂತ್ರಾಲಯದ ಸುತ್ತಲಿನ ಹಳ್ಳಿಗರಿಗೆ ಕೃಷಿಗೆ ಅನುಕೂಲವಾಗಲಿ ಎಂದು 1 ಎಕರೆಗಿಂತ ಕಡಿಮೆ ಭೂಮಿ ಇರುವ ರೈತರಿಗೆ ಜೋಡಿ ಎತ್ತನ್ನು ನೀಡಲಾಗುತ್ತಿದೆ. ಎತ್ತು ವಯಸ್ಸಾದ ನಂತರ ಅದನ್ನು ಮರಳಿ ಮಠಕ್ಕೆ ವಾಪಾಸ್ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಈಗಾಗಲೇ 380 ಫಲಾನುಭವಿಗಳಿದ್ದಾರೆ. ಗ್ರಾಮಸ್ಥರು ಇದನ್ನು ರಾಯರ ಪ್ರಸಾದ ಎಂದು ಪ್ರೀತಿಯಿಂದ ಸ್ವೀಕರಿಸುತ್ತಿದ್ದಾರೆ. ಇದರ ಜತೆಗೆ ಸುಸಜ್ಜಿತ ಆಸ್ಪತ್ರೆಯನ್ನು ಬಡವರಿಗಾಗಿ ನಿರ್ಮಾಣ ಮಾಡುತ್ತಿದ್ದೇವೆ ಎಂದು ಸುಯಮೀಂದ್ರಾಚಾರ್ಯರು ವಿವರಿಸಿದರು.
- ರಾಘವೇಂದ್ರ ಭಟ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.