ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದರ್ಬಾರ್ ಮುಗಿಸಿದ ಒಡೆಯರ್

ಸಂಸದರಾಗಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಒಡೆಯರ್ ಕೊಡುಗೆ ಅನನ್ಯ. ಸಕಲ..

Srinivasa Murthy VN
Updated On : 11 Dec 2013, 1:47 am

ಮೈಸೂರು ರಾಜ ಮನೆತನದ ಕೊನೆಯ ಕೊಂಡಿ ಕಳಚಿದೆ. ಸಂಸದರಾಗಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಒಡೆಯರ್ ಕೊಡುಗೆ ಅನನ್ಯ. ಸಕಲ ಸರ್ಕಾರಿ ಗೌರವದೊಂದಿಗೆ ಒಡೆಯರ್ ಅಂತ್ಯಸಂಸ್ಕಾರ ಇಂದು ಮೈಸೂರಿನಲ್ಲಿ ನಡೆಯಲಿದೆ.

ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಿಗೆ ಇಂದು ರಜೆ
ಬೆಂಗಳೂರು:
ಮೈಸೂರಿನ ರಾಜವಂಶಸ್ಥ, ಮಾಜಿ ಸಂಸದ ಮತ್ತು ಕರ್ನಾಟಕ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮಂಗಳವಾರ ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. 60 ವರ್ಷದ ಒಡೆಯರ್ ಅವರು, ರಾಣಿ ಪ್ರಮೋದಾ ದೇವಿ ಹಾಗೂ ಸಹೋದರಿಯರಾದ ಕಾಮಾಕ್ಷಿದೇವಿ, ವಿಶಾಲಾಕ್ಷಿ ಹಾಗೂ ಗಾಯತ್ರಿ ಅವರನ್ನು ಆಗಲಿದ್ದಾರೆ. ಬೆಂಗಳೂರು ಅರಮನೆಯಲ್ಲಿದ್ದ ಒಡೆಯರ್ ಅವರಿಗೆ ಮಧ್ಯಾಹ್ನ 1 ಗಂಟೆಯಲ್ಲಿ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಮಿಲ್ಲರ್ಸ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ 1.30ರಲ್ಲಿ ಕೊನೆಯುಸಿರೆಳೆದರು ಎಂದು ಅರಮನೆ ಕಾರ್ಯದರ್ಶಿ ಲಕ್ಷ್ಮಿನಾರಾಯಣ ತಿಳಿಸಿದ್ದಾರೆ.  
ಮೈಸೂರಿನಲ್ಲಿ ಅಂತ್ಯಕ್ರಿಯೆ: ಪಾರ್ಥಿವ ಶರೀರದ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಬುಧವಾರ ಮೈಸೂರಿನಲ್ಲಿ ನೆರವೇರಲಿದೆ.
ಕೊನೆಯ ಅರಸರ ಕುಡಿ: ಮೈಸೂರು ಸಂಸ್ಥಾನವನ್ನು ಆಳಿದ ಕೊನೆಯ ಅರಸರಾದ ಜಯಚಾಮರಾಜೇಂದ್ರ ಒಡೆಯರ್ ಹಾಗೂ ಅವರ ದ್ವಿತೀಯ ಪತ್ನಿ ರಾಣಿ ತ್ರಿಪುರಸುಂದರಿ ಅಮ್ಮಣ್ಣಿದೇವಿ ಅವರ ಏಕೈಕ ಪುತ್ರನಾಗಿ 1953ರ ಫೆಬ್ರವರಿ 20ರಂದು ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಜನಿಸಿದರು.
ಮೈಸೂರು ವಿವಿಯಿಂದ ರಾಜ್ಯಶಾಸ್ತ್ರ ಹಾಗೂ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಒಡೆಯರ್ ಅವರು 1976 ಫೆಬ್ರವರಿ 2ರಂದು ರಾಣಿ ಪ್ರಮೋದಾ ದೇವಿ ಅವರನ್ನು ವಿವಾಹವಾಗಿದ್ದರು. ಇದಕ್ಕೂ ಮುನ್ನ ಅಂದರೆ 1974ರಲ್ಲಿ ಅವರು ಮಹಾರಾಜರ ಸ್ಥಾನ ಅಲಂಕರಿಸಿದ್ದರು.
ರಾಜ್ಯದಲ್ಲಿ ಅರಸರ ಆಳ್ವಿಕೆ ಅಂತ್ಯಗೊಂಡಿತ್ತಾದರೂ ಶ್ರೀಕಂಠದತ್ತ ಒಡೆಯರ್ ಅವರನ್ನೇ ಮುಂದಿನ ಅರಸರನ್ನಾಗಿ 1974ರಲ್ಲಿ ಪಟ್ಟಾಭಿಷೇಕ ಮಾಡಲಾಗಿತ್ತು. ಹೀಗಾಗಿ ಒಡೆಯರ್ ಅವರು ಮೈಸೂರಿನಲ್ಲಿ ದಸರಾ ಆಚರಿಸಿ ಖಾಸಗಿ ದರ್ಬಾರ್ ಮೂಲಕ ತಂದೆ ಕಾಲದ ವೈಭವ ನೆನೆಪಿಸುತ್ತಿದ್ದರು.
ರಾಜಕೀಯಕ್ಕೂ ಕಾಲಿಟ್ಟಿದ್ದ ಅವರು ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿ ನಾಲ್ಕು ಬಾರಿ ಆಯ್ಕೆಯಾಗಿದ್ದರು. ಇತ್ತೀಚೆಗೆ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು. ಜತೆಗೆ ಕಲೆ, ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಅನೇಕ ಹುದ್ದೆಗಳನ್ನೂ ಅಲಂಕರಿಸಿದ್ದರು. ಇತ್ತೀಚೆಗಷ್ಟೇ ಅವರು, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದರ ವಿಜಯೋತ್ಸವವನ್ನೂ ಆಚರಿಸಿದ್ದ ಅವರು ಸಂಘದ ಚಟುವಟಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆಯಲ್ಲೇ ವಾಸ್ತವ್ಯ ಹೂಡಿದ್ದರು.

ಮಧ್ಯಾಹ್ನ ಏನಾಯಿತು ? : ಮಧ್ಯಾಹ್ನ 1ಗಂಟೆಯಲ್ಲಿ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಾಗ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಕ್ಷಣ ಆಸ್ಪತ್ರೆ ತಜ್ಞವೈದ್ಯರಾದ ಸುಭಾಷ್ಚಂದ್ರ ಹಾಗೂ ರಂಗನಾಥ್ ನಾಯಕ್ ಒಡೆಯರ್ರನ್ನು ತುರ್ತು ಚಿಕಿತ್ಸೆಗೆ ಒಳಪಡಿಸಿದರು. ಆದರೆ ಪ್ರಯೋಜನವಾಗಲಿಲ್ಲ. ಒಡೆಯರ್ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮಧ್ಯಾಹ್ನ 1.30ಕ್ಕೆ ವೈದ್ಯರು ಘೋಷಿಸಿದರು. ನಂತರ ಸಹೋದರಿಯರಾದ ಕಾಮಾಕ್ಷಿದೇವಿ ಮತ್ತು ವಿಶಾಲಾಕ್ಷಿ ಅವರು ಆಸ್ಪತ್ರೆಗೆ ಧಾವಿಸಿದರು.

ಗಣ್ಯರಿಂದ ಅಂತಿಮ ನಮನ
ರಾಜ್ಯಪಾಲ ಹಂಸರಾಜ ಭಾರದ್ವಾಜ್, ಸಚಿವರಾದ ಕೆ.ಜೆ.ಜಾರ್ಜ್, ಪ್ರಕಾಶ್ ಹುಕ್ಕೇರಿ, ವಿನಯ್ಕುಮಾರ್ ಸೊರಕೆ, ಅಂಬರೀಷ್, ಯು.ಟಿ.ಖಾದರ್ ಸೇರಿದಂತೆ ಅನೇಕ ಸಚಿವರು, ಶಾಸಕರು, ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಬ್ರಿಜೇಜ್ ಪಟೇಲ್ ಅವರು ಮಿಲ್ಲರ್ಸ್ ರಸ್ತೆಯಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿ ಒಡೆಯರ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮುಖಂಡರಾದ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ, ನಿವೃತ್ತ ಡಿಜಿಪಿ ಶಂಕರ ಬಿದರಿ ಸೇರಿ ವಿವಿಧ ಪಕ್ಷಗಳ ನಾಯಕರು ಆಸ್ಪತ್ರೆಗೆ ಭೇಟಿ ನೀಡಿದರು ಅಂತಿಮ ನಮನ ಸಲ್ಲಿಸಿದರು.

ಶೋಕಾಚರಣೆ, ಸರ್ಕಾರಿ ರಜೆ ಘೋಷಣೆ
ಒಡೆಯರ್ ಅವರ ನಿಧನದ ಹಿನ್ನೆಲೆಯಲ್ಲಿ ಸರ್ಕಾರ ಡಿ.11 ಮತ್ತು 12ರಂದು ರಾಜ್ಯಾದ್ಯಂತ ಶೋಕಾಚರಣೆ ಘೋಷಿಸಿದೆ. ಜೊತೆಗೆ ಸರ್ಕಾರಿ ರಜೆ ಇರಲಿದೆ.  ಶಿಕ್ಷಣ ಇಲಾಖೆ ಬುಧವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಅಲ್ಲದೆ, ಬುಧವಾರ ನಡೆಯಬೇಕಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಶಾಲೆ, ಕಾಲೇಜಿಗೆ 2 ದಿನ ರಜೆ
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಎರಡು ದಿನಗಳ ವರೆಗೆ ರಜೆ ಘೋಷಿಸಲಾಗಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸಾಕಷ್ಟು ಗಣ್ಯರು, ಕುಟುಂಬದವರು ಒಡೆಯರ್ ಪಾರ್ಥಿವ ಶರೀರದ ಅಂತಿಮದರ್ಶನ ಮಾಡಿದ್ದಾರೆ. ಹೀಗಾಗಿ ಬುಧವಾರ ಮೈಸೂರಿನಲ್ಲಿ ಅಂತಿಮ ದರ್ಶನಕ್ಕಿಡಲಾಗುತ್ತದೆ. ನಂತರ ಕುಟುಂಬದವರ ಇಚ್ಛೆಯಂತೆ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ.

ಗಣ್ಯರು ಸಂತಾಪ
ಒಡೆಯರ್ ನಿಧನಕ್ಕೆ ರಾಜ್ಯಪಾಲ ಹಂಸರಾಜ ಭಾರದ್ವಾಜ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಸಚಿವರಾದ ಕೆ.ಜೆ.ಜಾರ್ಜ್, ಪ್ರಕಾಶ್ ಹುಕ್ಕೇರಿ, ವಿನಯ್ಕುಮಾರ್ ಸೊರಕೆ, ಅಂಬರೀಷ್, ಯು.ಟಿ.ಖಾದರ್, ಆರ್.ವಿ.ದೇಶಪಾಂಡೆ, ಎಸ್.ಆರ್. ಪಾಟೀಲ್, ಉಮಾಶ್ರೀ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಶೋಕ ವ್ಯಕ್ತಪಡಿಸಿದ್ದಾರೆ.

ಯದುವಂಶದ ಸಂಪ್ರದಾಯ ಮುಂದುವರಿಯುವುದೇ?
ಶ್ರೀಕಂಠದತ್ತ ಒಡೆಯರ್ ದತ್ತು ಸ್ವೀಕರಿಸಿದ ಬಗ್ಗೆ ಅಧಿಕೃತವಾಗದ ಪ್ರಕ್ರಿಯೆ
ಮೈಸೂರು:
ಮೈಸೂರಿನ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದ ನಂತರ ವಿಶ್ವವಿಖ್ಯಾತ ದಸರಾ ಮಹೋತ್ಸವ ಸಂದರ್ಭದಲ್ಲಿ ರಾಜವಂಶಸ್ಥರು ನಡೆಸುತ್ತಿದ್ದ ಸಂಪ್ರದಾಯ ಮುಂದುವರಿಯುವುದೇ ಎಂಬ ಜಿಜ್ಞಾಸೆ ಕಾಡುತ್ತಿದೆ.
ಏಕೆಂದರೆ ಒಡೆಯರ್- ಪ್ರಮೋದಾದೇವಿ ದಂಪತಿಗೆ ಸಂತಾನಭಾಗ್ಯವಿಲ್ಲ. ಹೀಗಾಗಿ ಈ ವೇಳೆಗೆ ಅವರು ದತ್ತು ಸ್ವೀಕರಿಸಬೇಕಿತ್ತು. ಆದರೆ ದತ್ತಕ ಪ್ರಕ್ರಿಯೆಗಳು ಇನ್ನೂ ಅಧಿಕೃತವಾಗಿಲ್ಲ. ಹೀಗಾಗಿ ಸರಿಸುಮಾರು 403 ವರ್ಷಗಳಿಂದ ಮೈಸೂರು ರಾಜರು ನಡೆಸಿಕೊಂಡು ಬರುತ್ತಿರುವ ಸಂಪ್ರದಾಯಗಳನ್ನು ಮುಂದುವರಿಸುವವರು ಯಾರೆಂಬ ಪ್ರಶ್ನೆ ಕಾಡುತ್ತಿದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಪತ್ನಿ ಪ್ರಮೋದಾದೇವಿ ಅವರ ಸಂಬಂಧಿಯೊಬ್ಬರ ಮಗನನ್ನು ದತ್ತು ಪಡೆದಿದ್ದಾರೆ ಎಂದು ಹೇಳಲಾಗಿದೆ. ಮತ್ತೊಂದು ಮೂಲದ ಪ್ರಕಾರ ಒಡೆಯರ್ ಸಹೋದರಿ ಪುತ್ರನನ್ನು ದತ್ತು ಪಡೆದಿದ್ದಾರೆ ಎಂಬ ಮಾತೂ ಕೇಳಿ ಬರುತ್ತಿದೆ. ಆದರೆ ದತ್ತುಕ ಪ್ರಕ್ರಿಯೆಯೇ ಅಧಿಕೃತವಾಗಿಲ್ಲ. ಅಲ್ಲದೇ ಒಡೆಯರ್ ಅವರೂ ಎಲ್ಲಿಯೂ ಈ ಬಗ್ಗೆ ಪ್ರಕಟಿಸಿಲ್ಲ.
ಈಗ ಪ್ರಮೋದಾದೇವಿ ಒಡೆಯರ್ ಅವರು ತೆಗೆದುಕೊಳ್ಳುವ ತೀರ್ಮಾನದ ಮೇಲೆ ದತ್ತುಕ ಪ್ರಕ್ರಿಯೆ ಅಂತಿಮವಾಗಲಿದೆ. ದತ್ತು ತೆಗೆದುಕೊಂಡರೆ ದಸರೆ ಸಂದರ್ಭದಲ್ಲಿ ರಾಜವಂಶಸ್ಥರು ನಡೆಸುವ ಖಾಸಗಿ ದರ್ಬಾರ್ ಸೇರಿದಂತೆ ಎಲ್ಲ ಸಾಂಪ್ರದಾಯಿಕ ವಿಧಿವಿಧಾನಗಳು ಮುಂದುವರಿಯಲಿವೆ.
ಅರಮನೆ ಮಂಡಳಿ ಗೌರವ: ಅರಮನೆ ಮಂಡಳಿ ಸಿಬ್ಬಂದಿ ಮಂಗಳವಾರ ಕಚೇರಿ ಆವರಣದಲ್ಲಿ ಸೇರಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಿದರು. ನಂತರ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಮಂಡಲಿ ಉಪನಿರ್ದೇಶಕ ಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಇಂದು ರಜೆ: ಅರಮನೆ ವೀಕ್ಷಣೆಗೆ ಡಿ.11ರಂದು ರಜೆ ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.  

ಸ್ನೇಹಕ್ಕಿಂತ ಪ್ರೀತಿ ಹೆಚ್ಚಾಗಿತ್ತು ಅರಮನೆ ನೆರೆಮನೆಯಾಗಿತ್ತು
-ಅಂಬರೀಷ್, ವಸತಿ ಸಚಿವ, ನಟ

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜೊತೆ ನನಗೆ ಸ್ನೇಹ ಎನ್ನುವುದಕ್ಕಿಂತ ಅಪಾರ ಪ್ರೀತಿ ಇತ್ತು. ಅವರ ಪ್ರೀತಿ ಸಿಕ್ಕ ಮೇಲೆ ಅರಮನೆ ನನ್ನ ನೆರೆಮನೆಯಾಗಿತ್ತು.
ಅಕ್ಕ ಗಾಯತ್ರಿದೇವಿ ಅವರ ಪತಿಯವರಿಂದಾಗಿ ಶ್ರೀಕಂಠದತ್ತರು ನನಗೆ ಬಹಳ ಹತ್ತಿರವಾದವರು. ನಂತರ ದಿನಗಳಲ್ಲಿ ನಮ್ಮಿಬ್ಬರ ಪ್ರೀತಿ, ವಿಶ್ವಾಸ ವೃದ್ಧಿಯಾಗುತ್ತಲೇ ಹೋಯಿತು. ಶ್ರೀಕಂಠದತ್ತರದ್ದು ಬಹಳ ದೊಡ್ಡ ಕುಟುಂಬ, ವಿಶಾಲ ಮನಸ್ಸು. ದಾನಿಗಳು, ಲಕ್ಷಾಂತರ ಜನರ ಬದುಕಿಗೆ ಬೆಳಕಾದ ಮೈಸೂರು ಅರಸು ಕುಟಂಬಕ್ಕೆ ಇಡೀ ಪ್ರಾಂತದ ಜನ ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಸಾಲದು.
ನಾನು ಅವರನ್ನು ಆಗಾಗ ಭೇಟಿ ಮಾಡುತ್ತಿದ್ದೆ. ಅವರ ಕುಟುಂಬದ ಸದಸ್ಯರೆಲ್ಲರೂ ನನ್ನನ್ನು, 'ಅಂಬರೀಷ್ ಬಂದರು' ಎಂದು ಪ್ರೀತಿಯಿಂದಲೇ ಸ್ವಾಗತಿಸುತ್ತಿದ್ದರು. ರಾಜ ವೈಭವದ ಸುಖ ಏನು ಎಂಬುದನ್ನು ನಾನು ಕಂಡಿದ್ದು ಶ್ರೀಕಂಠದತ್ತರ ಪ್ರೀತಿಯಿಂದಲೇ ಎನ್ನುವುದು ನಂಗೆ ಖುಷಿ ಕೊಡುವ ಸಂಗತಿ. ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಕ್ಕೆ ಚಿನ್ನದ ಅಂಬಾರಿ ಕೊಡದಿರಲು ಶ್ರೀಕಂಠದತ್ತರು ನಿರ್ಧರಿಸಿದ್ದರು. ಆಗ ಜಾಣ ಮುಖ್ಯಮಂತ್ರಿ ಪಟೇಲರು ನನ್ನನ್ನು ಕರೆದು, 'ಅಂಬರೀಷ್, ನಿಮ್ಮ ಗೆಳೆಯ ಶ್ರೀಕಂಠದತ್ತರ ಮನವೊಲಿಸಿ ಅಂಬಾರಿ ಕೊಡ್ಸಪ್ಪ' ಎಂದಿದ್ದರು. ಈ ಕೆಲಸದಲ್ಲಿ ನಾನು ಯಶಸ್ವಿಯೂ ಆದೆ.
ಈ ಬಾರಿಯ ದಸರೆಯಲ್ಲಿ ನಾನು ಖಾಸಗಿ ದರ್ಬಾರ್ ನೋಡಲು ಹೋದಾಗ ಶ್ರೀಕಂಠದತ್ತರು ಬಹಳ ಒತ್ತಡದಲ್ಲಿದ್ದರು. ಆದರೂ ನನ್ನೊಂದಿಗೆ ಒಂದು ಗಂಟೆ ಕಾಲ ಮಾತನಾಡಿದರು.  
ಕೆಎಸ್ಸಿಎ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನೀವೇ ಸ್ಪರ್ಧೆ ಮಾಡಬೇಕು ಎಂಬ ಒತ್ತಡ ನನಗೂ ಬಂತು. ಆದರೆ, ನನಗೆ ಮಾಹಾರಾಜ ಶ್ರೀಕಂಠದತ್ತರನ್ನು ಎದುರಿಸುವ ಮನಸ್ಸು, ಬುದ್ಧಿ ಇರಲಿಲ್ಲ. ಹೀಗಾಗಿ ಅವರನ್ನೇ ಬೆಂಬಲಿಸಿ, ಗೆಲುವಿಗೆ ಶ್ರಮಿಸಿದ್ದೆ. ಕ್ರಿಕೆಟ್ ಕ್ಷೇತ್ರದಲ್ಲಿ ಒಂದಿಷ್ಟು ಸಾಧನೆ ಮಾಡಬೇಕು ಎಂದುಕೊಂಡಿದ್ದ ಶ್ರೀಕಂಠದತ್ತರು ಇಷ್ಟು ಬೇಗ ನಮ್ಮನ್ನು ಅಗಲಿ ಹೋಗುತ್ತಾರೆಂದು ಕನಸಿನಲ್ಲೂ ನೆನೆಸಿರಲಿಲ್ಲ.
ಕಪ್ಪು ಕನ್ನಡಕದ ಹಿಂದಿನ ರಹಸ್ಯ: ನಾಲ್ವಡಿ ಕೃಷ್ಣರಾಜ ಒಡೆಯರ್ರಿಂದ ಹಿಡಿದು ಶ್ರೀಕಂಠದತ್ತ ಒಡೆಯರ್ ತನಕ ಎಲ್ಲಾ ರಾಜರು ಪ್ರಜೆಗಳನ್ನು ಅಪಾರ ಪ್ರೀತಿ, ಮಮಕಾರ, ಸಮಾನ ಭಾವನೆಯಿಂದ ನೋಡುತ್ತಿದ್ದರು. ಹೀಗಾಗಿ ರಾಜರು ಪ್ರಜೆಗಳನ್ನು ಬರಿ ಕಣ್ಣಿನಿಂದ ನೋಡಿದಾಗ ಅವರ ದಿವ್ಯದೃಷ್ಟಿಯಲ್ಲಿ ಕೊಂಚ ವ್ಯತ್ಯಾಸವಾದರೂ ನಮಗೆ ತೊಂದರೆಯಾಗುತ್ತದೆ ಎಂದು ಜನ ಭಾವಿಸಬಾರದು. ಈ ಕಾರಣಕ್ಕಾಗಿ ಎಲ್ಲ ರಾಜರು ಕಪ್ಪು ಕನ್ನಡಕ ಹಾಕುತ್ತಿದ್ದರು ಎನ್ನುವುದನ್ನು ನಾನು ಕೇಳಿ ತಿಳಿದುಕೊಂಡಿದ್ದೇನೆ.
ಜಯಚಾಮರಾಜ ಒಡೆಯರ್ ಅವರು ದಸರಾ ವೇಳೆಯಲ್ಲಿ ಅಂಬಾರಿಯಲ್ಲಿ ಕುಳಿತು ಹೋಗುವುದನ್ನು ನೋಡುವುದೇ ಒಂದು ಸಂಭ್ರಮ. ನಾವು ಚಿಕ್ಕವರಿದ್ದಾಗ ಮೈಸೂರಿನ ಕೆ.ಆರ್. ಮಾರುಕಟ್ಟೆ, ಕೆ. ಆರ್. ಸರ್ಕಲ್ ಮುಂತಾದ ಕಡೆಗಳಲ್ಲಿರುವ ಕಟ್ಟಡಗಳಲ್ಲಿ ಕುಳಿತು ಜಂಬೂ ಸವಾರಿ ನೋಡುತ್ತಿದ್ದೆವು. ಆಗ ರಾಜರು ನಾವು ಕುಳಿತ ಕಡೆ ತಮ್ಮ ದಿವ್ಯದೃಷ್ಟಿ ಹರಿಸಿದರೆ ಸಾಕು. ನಮಗೆ ಆಗುತ್ತಿದ್ದ ಸಂತೋಷ ಅಷ್ಟಿಷ್ಟಲ್ಲ. ಆ ದಿನ ನಮ್ಮ ಜನ್ಮ ಸಾರ್ಥಕ ಎನ್ನುವ ಭಾವ ಎದ್ದು ಕಾಣುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement