ಅದುರಿದ ಅದಿರು ಅಕ್ರಮ ರಫ್ತುದಾರರು
ಕ.ಪ್ರ.ವಾರ್ತೆ, ಬಳ್ಳಾರಿ, ಡಿ. 11-
ರಾಜ್ಯದ ಅದಿರನ್ನು ದೇಶದ 9 ಬಂದರುಗಳ ಮೂಲಕ ಅಕ್ರಮವಾಗಿ ರಫ್ತು ಮಾಡಿರುವ ಪ್ರಕರಣಗಳನ್ನು ಸಿಬಿಐ ತನಿಖೆಗೆ ರಾಜ್ಯ ಸಚಿವ ಸಂಪುಟ ವಹಿಸಿಕೊಟ್ಟಿರುವ ಪ್ರಕರಣ ಗಣಿ ರಫ್ತುದಾರರ ನಿದ್ದೆಗೆಡಿಸಿದೆ. ಇದೀಗ ಪ್ರಕರಣದ ಕಡತಗಳು ಪ್ರಧಾನಮಂತ್ರಿ ಕಚೇರಿಯ ಅಧೀನದಲ್ಲಿ ಬರುವ ಡಿಪಾರ್ಟ್‌ಮೆಂಟ್ ಆಫ್ ಪರ್ಸೋನಲ್ ಆ್ಯಂಡ್ ಟ್ರೈನಿಂಗ್‌ನಲ್ಲಿದ್ದು, ಕಚೇರಿಗೆ ಡಿಎಸ್‌ಪಿಇ (ಡೆಲ್ಲಿ ಸ್ಪೇಷಲ್ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಆ್ಯಕ್ಟ್) ಅಡಿಯಲ್ಲಿ ನೋಟಿಫಿಕೇಷನ್ ಹೊರಡಿಸಿದರೆ ತನಿಖೆಗೆ ಸಿಬಿಐ ಚಾಲನೆ ನೀಡಲಿದೆ. ಸಿಬಿಐ ಕೇಂದ್ರ ಸರ್ಕಾರದ ನೋಟಿಫಿಕೇಷನ್‌ಗಾಗಿ ಕಾದು ಕುಳಿತಿದೆ.
ಒಎಂಸಿ, ಎಎಂಸಿ, ಡಿಎಂಎಸ್ ಹಾಗೂ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ಅಕ್ರಮ ಗಣಿಗಾರಿಕೆ ವಿಶ್ವರೂಪವನ್ನು ಸಿಬಿಐ ಪರಿಚಯಿಸಿದೆ. ತನಿಖೆಯಲ್ಲಿ ಸಾವಿರಾರು ಕೋಟಿ ರುಪಾಯಿ ಅಕ್ರಮ ನಡೆದಿದ್ದು, ಹಲವು ಜನರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಶಾಸಕರು, ಮಾಜಿ ಸಚಿವರು, ಅಧಿಕಾರಿಗಳು ಸೇರಿದಂತೆ ಹಲವು ಜನರನ್ನು ಬಂಧಿಸಿದೆ. ಇದೀಗ ರಾಜ್ಯದಲ್ಲಿ 2006ರಿಂದ 2010ರವರೆಗೆ ರಾಜ್ಯದ ಅದಿರನ್ನು ದೇಶದ ವಿವಿಧ ಬಂದರುಗಳ ಮೂಲಕ ರಫ್ತು ಮಾಡಿರುವ ಪ್ರಕರಣವನ್ನು ಸಿಬಿಐಗೆ ವಹಿಸಿಕೊಟ್ಟಿರುವ ರಾಜ್ಯ ಸರ್ಕಾರದ ನಿಲುವು, ಗಣಿ ಉದ್ಯಮದಲ್ಲಿ ಮತ್ತಷ್ಟು ಅಕ್ರಮ ಮಾಡಿದ ಅದೆಷ್ಟೋ ಮುಖಗಳನ್ನು ಪರಿಚಯ ಮಾಡಿದಂತಾಗುತ್ತದೆ.
ಡಿಒಪಿಟಿ ವಿಭಾಗಕ್ಕೆ: ಸಚಿವ ಸಂಪುಟದ ನಿರ್ಧಾರದಂತೆ ರಾಜ್ಯ ಸರ್ಕಾರ ಈಗಾಗಲೇ ದೆಹಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಆ್ಯಕ್ಟ್-1946ರ ಕಲಂ 6ರ ಅಡಿಯಲ್ಲಿ ತನಿಖೆ ನಡೆಸುವಂತೆ ರಾಜ್ಯದ ಸಿಬಿಐ ಕಚೇರಿಗೆ ತನ್ನ ಕಡತ ಕಳುಹಿಸಿ ಕೊಟ್ಟಿದೆ. ಸಿಬಿಐ ಅಧಿಕಾರಿಗಳು ಹೈದರಾಬಾದ್‌ನ ಜಂಟಿ ನಿರ್ದೇಶಕರ ಕಚೇರಿ ಮೂಲಕ ನವದೆಹಲಿಯ ಸಿಬಿಐ ನಿರ್ದೇಶಕರ ಕಚೇರಿಗೆ ಪ್ರಕರಣವನ್ನು ಕಳುಹಿಸಿಕೊಟ್ಟಿದ್ದಾರೆ. ಇದೀಗ ನಿರ್ದೇಶಕರ ಕಚೇರಿಯು ಡಿಒಪಿಟಿ ವಿಭಾಗಕ್ಕೆ ಕಳುಹಿಸಿದ್ದು, ಇದೀಗ ಡಿಒಪಿಟಿ ವಿಭಾಗವು ಡಿಎಸ್‌ಪಿಎ ಆ್ಯಕ್ಟ್‌ನ ಕಲಂ 5ರಡಿ ನೋಟಿಫಿಕೇಷನ್ ಹೊರಡಿಸಬೇಕಿದೆ.
12,228 ಕೋಟಿಗೂ ಅಧಿಕ ಮೌಲ್ಯದ ಅದಿರು: ಬೇಲೆಕೇರಿ ಸೇರಿದಂತೆ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ನಡೆಯುತ್ತಿದ್ದು, ಇದೀಗ 9 ಬಂದರುಗಳ ತನಿಖೆಯನ್ನು ಸಾಕಷ್ಟು ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಗಣಿ ಉದ್ಯಮಕ್ಕೆ ಸಿಬಿಐ ತನಿಖೆ ಆತಂಕ ಮತ್ತಷ್ಟು ದಿನಗಳವರೆಗೆ ಮುಂದುವರಿಯಲಿದೆ. 2006ರಿಂದ 2010ರವರೆಗೆ ರಾಜ್ಯದ ಅದಿರನ್ನು 9 ಬಂದರುಗಳ ಮೂಲಕ 1,22,28,14,22,854 ಮೌಲ್ಯದ 2,98,60,647 ಮೆಟ್ರಿಕ್ ಟನ್ ಅದಿರು ರಫ್ತಾಗಿದೆ. ಇದೀಗ ಇಡೀ ತನಿಖೆಯನ್ನು ಸಿಬಿಐ ಅಧಿಕಾರಿಗಳು ಕೈಗೆತ್ತಿಕೊಳ್ಳಲಿದ್ದಾರೆ. ಆ ಮೂಲಕ ಈ ತನಿಖೆಯು ಅದೆಷ್ಟು ಜನರನ್ನು ಕಂಬಿ ಹಿಂದೆ ತಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಇದು ಸಾವಿರಾರು ಕೋಟಿ ರು.ಗಳ ಹಗರಣವಾಗಿರುವುದರಿಂದ ತೀರಾ ಗಂಭೀರ ತನಿಖೆಯಾಗಿದೆ.
ಕೇಂದ್ರ ಸರ್ಕಾರ ನೋಟಿಫಿಕೇಷನ್ ಹೊರಡಿಸುವುದನ್ನು ಸಿಬಿಐ ಕಾಯುತ್ತಿದ್ದು, ನೋಟಿಫಿಕೇಷನ್ ಆದ ತಕ್ಷಣ ಸಿಬಿಐಗೆ ವಹಿಸಿದ ನಂತರ, ಸಿಬಿಐ ಅಧಿಕಾರಿಗಳು ಈ ತನಿಖೆಯನ್ನು ಸಿಬಿಐನ ಯಾವ ವಿಭಾಗಕ್ಕೆ ವಹಿಸಬೇಕೆಂದು ಚಿಂತಿಸಿ, ನಂತರ ತನಿಖೆಯನ್ನು ಆರಂಭಿಸಲಿದೆ. ಅಲ್ಲಿಗೆ ಈ ಅಕ್ರಮದಲ್ಲಿ ತೊಡಗಿದ್ದ ಗಣಿ ಉದ್ಯಮಿಗಳು ಒಬ್ಬೊಬ್ಬರಾಗಿ ಜೈಲು ಪಾಲಾಗುವರು ಎಂಬ ಮಾತುಗಳು ಗಣಿ ವಲಯದಲ್ಲೇ ಕೇಳಿಬರುತ್ತಿವೆ.
ಹಲವರಿಗೆ ಸಿಬಿಐ ಭೀತಿ
ಅ.18ರಂದು ನಡೆದ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಬೇಲೆಕೇರಿ, ಕಾರವಾರ, ನವಮಂಗಳೂರು, ತಮಿಳುನಾಡಿನ ಚೆನ್ನೈ, ಎನ್ನೂರ್, ಆಂಧ್ರದ ಕಾಕಿನಾಡ, ವಿಶಾಖಪಟ್ಟಣಂ, ಕೃಷ್ಣಪಟ್ಟಣಂ ಬಂದರು ಮೂಲಕ ರಾಜ್ಯದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿರುವುದನ್ನು ಸಿಬಿಐ ತನಿಖೆಗೆ ವಹಿಸಿಕೊಡಲಾಗಿತ್ತು. ಅಲ್ಲದೇ ಅ.31ರಂದು ಮರ್ಮಗೋವಾ ಮತ್ತು ಪಣಜಿ ಬಂದರುಗಳ ಮೂಲಕ ಅದಿರನ್ನು ರಫ್ತು ಮಾಡಿರುವುದನ್ನು ಸಿಬಿಐಗೆ ವಹಿಸಿಕೊಡಲಾಗಿತ್ತು. ಈಗ ಅದಿರು ಸಾಗಾಣಿಕೆ ಹಾಗೂ ರಫ್ತಿನಲ್ಲಿ ಸಾಕಷ್ಟು ಜನರು ಇರುವುದರಿಂದ ಅವರಿಗೆಲ್ಲ ಸಿಬಿಐ ತನಿಖೆ ಭೀತಿ ಆವರಿಸಿದೆ.
- ಶಶಿಧರ ಮೇಟಿ