ನೂರು ವರ್ಷಗಳ ನೆಪಕ್ಕಾದರೂ ನೆನಪಾಗುತ್ತಿಲ್ಲ ಸರ್ಕಾರಕ್ಕೆ ಕಸಾಪ, ಛೇ, ಕನ್ನಡಿಗರಿಗೆ ಇದೆಂಥಾ ಶಾಪ..?
ನೆಲ, ಜನ ಮತ್ತು ಭಾಷೆಗೆ ಆದ್ಯತೆ ಎಂದು ಹೇಳುವ ಆಡಳಿತ ನಡೆಸುವ ಮಂದಿ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತನ್ನೇ ನಿರ್ಲಕ್ಷಿಸಿದರೆ..?
ಕನ್ನಡಿಗರ ಸಾಕ್ಷಿಪ್ರಜ್ಞೆ ಸಂಕೇತವಾಗಿರುವ ಕನ್ನಡ ಸಾಹಿತ್ಯ ಪರಿಷತ್ ಬಗ್ಗೆ ಕರ್ನಾಟಕ ಸರ್ಕಾರದ ಅಸಡ್ಡೆ ಒಂದೆಡೆಯಾದರೆ,ಶತಮಾನೋತ್ಸವ ಆಚರಣೆಗೆ ನೆರವು ನೀಡದೆ ಸತಾಯಿಸುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರಿ ಅವರ ಅಹಂಕಾರದ ವರ್ತನೆ ಇನ್ನೊಂದೆಡೆ.
3 ಪ್ರಮುಖ ಬೇಡಿಕೆಗಳು
ಶತಮಾನೋತ್ಸವ ಭವನಕ್ಕೆ ಆರ್ಥಿಕ ನೆರವು ನೀಡಿ
ಪ್ರತಿ ವರ್ಷ ಆಯವ್ಯಯದಲ್ಲಿ ಸಾಹಿತ್ಯ ಪರಿಷತ್ತಿಗೆ ನೀಡುವ ಆರ್ಥಿಕ ನೆರವು ಮುಂದುವರಿಸಿ
ಶತಮಾನೋತ್ಸವ ಸಂದರ್ಭದಲ್ಲಿ ಪರಿಷತ್ ಹಾಕಿಕೊಳ್ಳುವ ಯೋಜನೆಗಳಿಗೆ ಸ್ಪಂದಿಸಿ
ಕನ್ನಡಪ್ರಭ ವಾರ್ತೆ, ಬೆಂಗಳೂರು, ಡಿ.16-
ನೆಲ, ಜನ ಮತ್ತು ಭಾಷೆಗೆ ಆದ್ಯತೆ ಎಂದು ಹೇಳುವ ಆಡಳಿತ ನಡೆಸುವ ಮಂದಿ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತನ್ನೇ ನಿರ್ಲಕ್ಷಿಸಿದರೆ..?
ಭಾಷೆಯ ರಕ್ಷಣೆಗೆ ಕಟಿಬದ್ಧವಾಗಿರುತ್ತೇವೆ ಎಂದು ಘೋಷಿಸುವ ಜನಪ್ರತಿನಿಧಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆಯೇ ಗಮನಹರಿಸದೇ ಇದ್ದರೆ..?
ಹೌದು, ಶತಮಾನದ ಹೊಸ್ತಿಲಲ್ಲಿದ್ದು, ಶತಮಾನೋತ್ಸವ ಆಚರಣೆಗೆ ಆರ್ಥಿಕ ಸಹಾಯ ಮಾಡಿ ಎಂದು ಕೇಳಿರುವ ಸಾಹಿತ್ಯ ಪರಿಷತ್ತಿನ ಬೇಡಿಕೆ ಕುರಿತಂತೆ ಸರ್ಕಾರದ ಧೋರಣೆ ಈ ಪ್ರಶ್ನೆಗಳನ್ನು ಹುಟ್ಟಿಹಾಕಿದೆ.
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಮುಂದಿನ ವರ್ಷದ ಮೇ ತಿಂಗಳಿಗೆ 99 ವರ್ಷ ಭರ್ತಿಯಾಗಿ 100ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂಭ್ರಮವನ್ನು ಜನ ಸಮುದಾಯದ ಮಧ್ಯೆ ಆಚರಿಸಬೇಕು, ಶತಮಾನೋತ್ಸವದ ನೆನಪಿಗಾಗಿ ಒಂದು ಭವನ ನಿರ್ಮಿಸಬೇಕು, ವಿಶೇಷವಾದುದನ್ನೇನಾದರೂ ಮಾಡಬೇಕು ಎಂಬ ಆಸೆ ಎಲ್ಲಾ ಕನ್ನಡಿಗರಲ್ಲೂ ಇದ್ದದ್ದೆ.
ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ಕೂಡ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ಆದರೆ, ಇದಕ್ಕೆ ಸ್ಪಂದಿಸುವ ಆಸಕ್ತಿಯನ್ನೇ ಸರ್ಕಾರ ತೋರಿಸುತ್ತಿಲ್ಲ. ಕನಿಷ್ಠ ಭರವಸೆಗಳನ್ನೂ ನೀಡದೆ ಮೌನಕ್ಕೆ ಶರಣಾಗಿದೆ. ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಭಾನುವಾರ ಕಾರ್ಯಕ್ರಮವೊಂದರಲ್ಲಿ ಸರ್ಕಾರ, ಸಚಿವರ ವಿರುದ್ಧ ಧಿಕ್ಕಾರ ಕೂಗಿ ಪರಿಷತ್ತಿಗೆ ಬೀಗ ಹಾಕಿ ಎಂದು ಖಾರವಾಗಿ ಮಾತನಾಡಲು ಈ ನಿರಾಸಕ್ತಿಯೇ ಕಾರಣ.
ಈ ಶತಮಾನೋತ್ಸವ ಸಂಭ್ರಮವನ್ನು ಅರ್ಥಪೂರ್ಣವಾಗಿಸಲು ಸಾಹಿತ್ಯ ಪರಿಷತ್ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.
ಅವುಗಳಲ್ಲಿ ಪ್ರಮುಖವಾಗಿ ಶತಮಾನೋತ್ಸವ ಭವನ ನಿರ್ಮಾಣ. ಸಾಹಿತ್ಯ ಪರಿಷತ್ ಸುವರ್ಣ ಮಹೋತ್ಸವ ಪೂರೈಸಿದಾಗ ಅದರ ನೆನಪಿಗಾಗಿ ಒಂದು ಭವನ ನಿರ್ಮಿಸಲಾಗಿತ್ತು. ಅದೇ ಮಾದರಿಯಲ್ಲಿ ಶತಮಾನೋತ್ಸವ ಭವನ ನಿರ್ಮಿಸಬೇಕು ಎಂಬುದು ಸಾಹಿತ್ಯ ಪರಿಷತ್ ಅಧ್ಯಕ್ಷರ ಹೆಬ್ಬಯಕೆ. ಇದಕ್ಕಾಗಿ ಸುಮಾರು 45 ಸಾವಿರ ವೆಚ್ಚ ಮಾಡಿ ನೀಲನಕ್ಷೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದರ ಜತೆಗೆ ಭವನ ನಿರ್ಮಾಣಕ್ಕೆ 5 ಕೋಟಿ ನೀಡುವಂತೆ ಸರ್ಕಾರವನ್ನು ಕೋರಲಾಗಿತ್ತು.
ಸಾಹಿತ್ಯ ಪರಿಷತ್ ಅಧ್ಯಕ್ಷರು ರಾಜ್ಯದ ಎಲ್ಲಾ 30 ಜಿಲ್ಲೆಗಳ ಸಾಹಿತ್ಯ ಪರಿಷತ್ ಅಧ್ಯಕ್ಷರು ಮತ್ತು ಹೊರನಾಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಜತೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ನೋಡೋಣ ಎಂದು ಹೇಳಿದ್ದ ಮುಖ್ಯಮಂತ್ರಿಗಳು ನಂತರ ಯಾವುದೇ ರೀತಿ ಸ್ಪಂದಿಸಲಿಲ್ಲ.
ಇನ್ನು ಪರಿಷತ್ತಿನ ಶತಮಾನೋತ್ಸವ ಸಂದರ್ಭದಲ್ಲಿ ಜನ ಸಮುದಾಯದ ಮಧ್ಯೆ ಸಂಭ್ರಮಿಸಬೇಕು ಎಂಬ ಕಾರಣಕ್ಕಾಗಿ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಇದರ ಜತೆಗೆ ಕೇಂದ್ರ ಪರಿಷತ್ ವತಿಯಿಂದ ಧಾರವಾಡದಲ್ಲಿ ಶತಮಾನೋತ್ಸವ ಕಾರ್ಯಕ್ರಮಗಳ ಉದ್ಘಾಟನೆ, ಮೈಸೂರಿನಲ್ಲಿ ಸಮಾರೋಪ ಸಮಾರಂಭ ನಡೆಸಬೇಕು. ಮಧ್ಯೆ ರಾಜಧಾನಿ ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ರೂಪಿಸಬೇಕು ಎಂದು ತೀರ್ಮಾನಿಸಿತ್ತು. ಈ ಎಲ್ಲಾ ಕಾರ್ಯಕ್ರಮಗಳಿಗೆ 7 ಕೋಟಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಪರಿಷತ್ತಿನಿಂದಲೇ ಪ್ರಕಟ
ಈ ಮಧ್ಯೆ ಸಾಹಿತ್ಯ ಪರಿಷತ್ ಶತಮಾನೋತ್ಸವದ ಅಂಗವಾಗಿ ಮುದ್ದಣನಿಂದ ಕುವೆಂಪು ಅವರವರೆಗಿನ ಕನ್ನಡ ಸಾಹಿತ್ಯ ಚರಿತ್ರೆಯ 17 ಸಂಪುಟಗಳನ್ನು 17 ವಿಮರ್ಶಕರಿಂದ ಬರೆದು ಹೊರತರುತ್ತಿದೆ. ಜತೆಗೆ 100 ವರ್ಷಗಳ ಅವಧಿಯಲ್ಲಿ ಪ್ರಕಟವಾದ ಮೌಲಿಕ ಗ್ರಂಥಗಳನ್ನು ತೆಗೆದುಕೊಂಡು 100 ಪ್ರತಿಗಳನ್ನು ಪ್ರಕಟಿಸುತ್ತಿದೆ. ಅಲ್ಲದೆ, ಪರಿಷತ್ ಒಂದು ನೆನಪು ಎನ್ನುವ ವಿಶಿಷ್ಟ ಸಂಚಿಕೆ ತರಲಾಗುತ್ತಿದೆ. ಇದೆಲ್ಲವನ್ನೂ ಪರಿಷತ್ತಿನಲ್ಲಿ ಲಭ್ಯವಿರುವ ಸಂಪನ್ಮೂಲದಲ್ಲೇ ಸಿದ್ಧಪಡಿಸಲಾಗುತ್ತಿದೆ.
ಹೀಗಿರುವಾಗ ಸರ್ಕಾರ ಏಕೆ ಶತಮಾನೋತ್ಸವ ಸಂಭ್ರಮಕ್ಕೆ ನೆರವು ನೀಡಬಾರದು ಎಂಬುದು ಸಾಹಿತ್ಯಾಸಕ್ತರ ಪ್ರಶ್ನೆ. ಸಾಹಿತ್ಯ ಪರಿಷತ್ ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದರೂ ಮೌನಕ್ಕೆ ಶರಣಾಗಿ ನೆರವಿನ ಬಗ್ಗೆ ಕನಿಷ್ಠ ಭರವಸೆಯನ್ನೂ ನೀಡದೇ ಇರುವುದು ಸಹಜವಾಗಿಯೇ ಬೇಸರ ಮತ್ತು ಸಿಟ್ಟು ತರಿಸಿದೆ. ಇದು ಅಧ್ಯಕ್ಷರ ಬಾಯಿಯಿಂದ ಹೊರಬಿದ್ದಿದೆ ಅಷ್ಟೆ.
ನಾನು ಸಾಹಿತ್ಯ ಪರಿಷತ್ತಿನ ಹಿತದೃಷ್ಟಿಯಿಂದ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದೇನೆಯೇ ಹೊರತು ವೈಯಕ್ತಿಕ ಆಸಕ್ತಿ ಏನೂ ಇಲ್ಲ. ಇನ್ನು ಒಂದು ತಿಂಗಳೊಳಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬೇಡಿಕೆಗಳಿಗೆ ಸ್ಪಂದಿಸದೇ ಇದ್ದಲ್ಲಿ ಪರಿಷತ್ಗೆ ಸ್ಪಂದಿಸಿ ಇಲ್ಲವೇ ಮುಚ್ಚಿಸಿ ಬೀಗ ಹಾಕಿ ಎಂದು ಸರ್ಕಾರವನ್ನು ಒತ್ತಾಯಿಸಿ ಆಮರಣಾಂತ ಉಪವಾಸ ಕುಳಿತುಕೊಳ್ಳುತ್ತೇನೆ.
- ಪುಂಡಲೀಕ ಹಾಲಂಬಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
- ಪ್ರದೀಪ್ಕುಮಾರ್ ಎಂ.