ವಾರದೊಳಗೆ ಸಾಲ ಮನ್ನಾ ಬಾಕಿ ಬಿಡುಗಡೆ
ರೈತರ ಬೆಳೆಸಾಲ ಮನ್ನಾ ಬಾಕಿ 492 ಕೋಟಿಯನ್ನು ಇನ್ನು ಒಂದು ವಾರದೊಳಗೆ ಬಿಡುಗಡೆ ಮಾಡುವುದಾಗಿ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹೇಳಿದ್ದಾರೆ.
ಕ.ಪ್ರ.ವಾರ್ತೆ, ಬೆಂಗಳೂರು, ಡಿ.16-
ರೈತರ ಬೆಳೆಸಾಲ ಮನ್ನಾ ಬಾಕಿ 492 ಕೋಟಿಯನ್ನು ಇನ್ನು ಒಂದು ವಾರದೊಳಗೆ ಬಿಡುಗಡೆ ಮಾಡುವುದಾಗಿ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹೇಳಿದ್ದಾರೆ.
ಬೆಳೆಸಾಲ ಮನ್ನಾ ಬಾಕಿ ಕುರಿತಂತೆ ರಾಜ್ಯ ಸರ್ಕಾರ 792 ಕೋಟಿ ಬಿಡುಗಡೆ ಮಾಡಬೇಕಿದ್ದು, ಈ ಪೈಕಿ 492 ಕೋಟಿಗೆ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಂದ ಕೋರಿಕೆ ಬಂದಿದೆ. ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಇದಕ್ಕಾಗಿ 500 ಕೋಟಿ ಬಿಡುಗಡೆಗೆ ಪೂರಕ ಅಂದಾಜಿನಲ್ಲಿ ಅನುಮೋದನೆ ಪಡೆಯಲಾಗಿದ್ದು, 482 ಕೋಟಿಯನ್ನು ವಾರದೊಳಗೆ ಬಿಡುಗಡೆ ಮಾಡಲಾಗುವುದು. ಉಳಿದ 300 ಕೋಟಿಗೆ ಜಿಲ್ಲಾ ಬ್ಯಾಂಕ್‌ಗಳಿಂದ ಕೋರಿಕೆ ಬಂದ ತಕ್ಷಣ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಸಾಲ ಮನ್ನಾ ಬಾಕಿ ಪಾವತಿ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ವಿನಾ ಕಾರಣ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದರೂ ಅದು ಅಲ್ಪಾವಧಿ ಆಗಿದ್ದರಿಂದ ಸರ್ಕಾರ ಹೇಗೆ ನಡೆಸಬೇಕು ಎಂಬುದನ್ನು ಪೂರ್ಣ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಬೆಳೆಸಾಲ ಮನ್ನಾ ವಿಚಾರದಲ್ಲಿ ಸರ್ಕಾರದ ಮೇಲೆ ವಿನಾ ಕಾರಣ ಟೀಕೆ ಮಾಡುತ್ತಿದ್ದಾರೆ ಎಂದರು.
ಸಮಸ್ಯೆಗೆ ತರಾತುರಿ ನಿರ್ಣಯ ಕಾರಣ: ರೈತರ ಬೆಳೆಸಾಲ ಮನ್ನಾ ಕುರಿತಂತೆ ಹಿಂದಿನ ಬಿಜೆಪಿ ಸರ್ಕಾರ ತರಾತುರಿಯಿಂದ ನಿರ್ಧಾರ ಕೈಗೊಂಡು ಅಗತ್ಯ ಅನುದಾನ ನೀಡದಿರುವುದೇ ಬೆಳೆಸಾಲ ಮನ್ನಾ ಬಾಕಿ ಪಾವತಿ ಉಳಿದುಕೊಳ್ಳಲು ಕಾರಣ ಎಂದು ಹೇಳಿದರು.
ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಅವರು ವಿಧಾನಸಭೆಯಲ್ಲಿ ಮಾತನಾಡುತ್ತಿದ್ದಾಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎದ್ದುನಿಂತು ರೈತರ ಸಾಲ ಮನ್ನಾ ಮಾಡಿ ಎಂದು ಬೊಬ್ಬೆ ಹಾಕಿದರು. ಅವರಿಗೆ ಹೆದರಿ ಶೆಟ್ಟರ್ ಅವರು ಯೋಜನೆ ಘೋಷಣೆ ಮಾಡಿದರು. ಅದಕ್ಕೆ ತಕ್ಕಂತೆ ಅನುದಾನ ನಿಗದಿಪಡಿಸಲೇ ಇಲ್ಲ ಎಂದು ದೂರಿದರು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬೆಳೆಸಾಲ ಮನ್ನಾ ಮಾಡುವಾಗ 1371 ಕೋಟಿ ನೀಡಬೇಕಿತ್ತು. ಆದರೆ, ಬಜೆಟ್‌ನಲ್ಲಿ ಕೇವಲ 900 ಕೋಟಿ ಮಾತ್ರ ನಿಗದಿಪಡಿಸಲಾಯಿತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 1375 ಕೋಟಿ ಬಿಡುಗಡೆ ಮಾಡಲಾಗಿದೆ. ಇನ್ನು ಒಂದು ವಾರದಲ್ಲಿ ಮತ್ತೆ 482 ಕೋಟಿ ಬಿಡುಗಡೆ ಮಾಡಿದ ಬಳಿಕವೂ ಇಲಾಖೆಯಲ್ಲಿ ಸಾಲ ಮನ್ನಾಕ್ಕೆಂದೇ ಇನ್ನೂ 8 ಕೋಟಿ ಉಳಿಯುತ್ತದೆ. ಹೀಗಿರುವಾಗ ಸಾಲ ಮನ್ನಾ ವಿಚಾರದಲ್ಲಿ ರಾಜಕೀಯ ಭಾಷಣ ಮಾಡುವ ಬದಲು ವಾಸ್ತವ ಸ್ಥಿತಿ ಅರಿಯಲಿ ಎಂದು ಸಲಹೆ ಮಾಡಿದರು. ಸರ್ಕಾರ ಸಾಲಮನ್ನಾ ಬಾಕಿ ಪಾವತಿಸದ ಕಾರಣ ರೈತರಿಗೆ ಸಾಲ ಸಿಗುತ್ತಿಲ್ಲ ಎಂಬ ಆರೋಪಗಳನ್ನು ತಳ್ಳಿಹಾಕಿದ ಅವರು, ಕಳೆದ ವರ್ಷ ಇದೇ ಅವಧಿಗೆ 3848 ಕೋಟಿ ಸಾಲ ವಿತರಿಸಲಾಗಿತ್ತು. ಈ ಬಾರಿ ಇದುವರೆಗೆ 4814 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಸದಾನಂದಗೌಡ ಅವರ ಜಿಲ್ಲೆ ಅವಿಭಜಿತ ದಕ್ಷಿಣಕನ್ನಡದಲ್ಲಿ ಕಳೆದ ವರ್ಷ ಈ ಅವಧಿಗೆ 539 ಕೋಟಿ ಸಾಲ ವಿತರಿಸಿದ್ದರೆ ಈ ವರ್ಷ 848 ಕೋಟಿ ಸಾಲ ವಿತರಿಸಲಾಗಿದೆ ಎಂದರು.
12 ಸಾವಿರ ಕೋಟಿ ಬೆಳೆಸಾಲ ವಿತರಣೆ ಗುರಿ: ಕಾಂಗ್ರೆಸ್ ಸರ್ಕಾರ ತನ್ನ ಅವಧಿ ಪೂರ್ಣಗೊಳಿಸುವ ವೇಳೆಗೆ 12 ಸಾವಿರ ಕೋಟಿ ಬೆಳೆಸಾಲವನ್ನು ಶೂನ್ಯ ಬಡ್ಡಿದರದಲ್ಲಿ ರೈತರಿಗೆ ವಿತರಿಸಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಬೆಳೆಸಾಲಕ್ಕೆ ನಿಗದಿಪಡಿಸುವ ಮೊತ್ತವನ್ನು ಪ್ರತಿ ವರ್ಷ 1 ಸಾವಿರ ಕೋಟಿಯಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಕೃಷಿ ಚಟುವಟಿಕೆ ನಡೆಸುವ ಎಲ್ಲಾ ರೈತರಿಗೂ ಬಡ್ಡಿರಹಿತ ಬೆಳೆಸಾಲ ಸಿಗಬೇಕು ಎಂಬ ಉದ್ದೇಶ ಸರ್ಕಾರದ್ದಾಗಿದೆ ಎಂದರು.
ಈ ನಿಟ್ಟಿನಲ್ಲಿ 2013-14ನೇ ಸಾಲಿನಲ್ಲಿ 20 ಲಕ್ಷ ರೈತರಿಗೆ 6900 ಕೋಟಿ ಸಾಲ ವಿತರಿಸಲು ತೀರ್ಮಾನಿಸಲಾಗಿದ್ದು, ಇದು ಕಳೆದ ವರ್ಷಕ್ಕಿಂತ 900 ಕೋಟಿ ಹೆಚ್ಚು. ಹೀಗಿರುವಾಗ ರೈತರಿಗೆ ಸಾಲ ವಿತರಿಸುತ್ತಿಲ್ಲ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.
ಫೆಬ್ರವರಿಯಿಂದ ಯಶಸ್ವಿನಿ ಜಾರಿ
ಬೆಂಗಳೂರು: ಗ್ರಾಮೀಣ ಪ್ರದೇಶದ ಸಹಕಾರಿಗಳಿಗೆ ಜಾರಿಯಲ್ಲಿರುವ ಯಶಸ್ವಿನಿ ಯೋಜನೆ ಮುಂಬರುವ ಫೆಬ್ರವರಿಯಿಂದ ನಗರ ಮತ್ತು ಪಟ್ಟಣ ಪ್ರದೇಶಗಳ ಸಹಕಾರಿಗಳಿಗೂ ಅನ್ವಯವಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಈ ವಿಷಯ ತಿಳಿಸಿದ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್, ನಗರ ಮತ್ತು ಪಟ್ಟಣ ಪ್ರದೇಶಗಳ ಸಹಕಾರಿ ಸಂಸ್ಥೆಗಳ ಸದಸ್ಯರಿಗೆ ಯಶಸ್ವಿನಿ ಯೋಜನೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದ್ದು, ಮುಂದಿನ ಫೆಬ್ರವರಿಯಿಂದ ನೋಂದಣಿ ಆರಂಭವಾಗಲಿದೆ. ಜೂನ್ ತಿಂಗಳಿನಿಂದ ಈ ಯೋಜನೆಯಡಿ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು. ಯಶಸ್ವಿನಿ ಯೋಜನೆ ವಿಸ್ತರಿಸುವ ಬಗ್ಗೆ ಯಶಸ್ವಿನಿ ಟ್ರಸ್ಟ್‌ನಲ್ಲಿ ಈಗಾಗಲೇ ತೀರ್ಮಾನಿಸಲಾಗಿದೆ. ಇದಕ್ಕೆ ಸುಮಾರು 50 ಕೋಟಿಯಿಂದ 60 ಕೋಟಿ ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ. ಸಹಕಾರ ಸಂಸ್ಥೆಗಳ ಸದಸ್ಯರು ಯೋಜನೆಯಡಿ 2 ಲಕ್ಷದವರೆಗಿನ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದರು.
ಪ್ರೀಮಿಯಂ ಮೊತ್ತ ಹೆಚ್ಚಳ: ಯಶಸ್ವಿನಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಸಹಕಾರಿಗಳಿಗೆ ವಾರ್ಷಿಕ 210 ಪ್ರೀಮಿಯಂ ನಿಗದಿಪಡಿಸಲಾಗಿದೆ. ಆದರೆ, ನಗರ ಮತ್ತು ಪಟ್ಟಣ ಪ್ರದೇಶದ ಜನರಿಗೆ ಈ ಮೊತ್ತವನ್ನು 1000ದಿಂದ 1200ವರೆಗೆ ನಿಗದಿಪಡಿಸಲಾಗುವುದು. ಇದು ಸ್ವಲ್ಪ ಹೆಚ್ಚು ಎನಿಸಬಹುದಾದರೂ ನಗರ ಪ್ರದೇಶದ ಜನಜೀವನಕ್ಕೆ ತಕ್ಕಂತೆ ಪ್ರೀಮಿಯಂ ಮೊತ್ತ ನಿಗದಿಪಡಿಸಲಾಗುತ್ತದೆ ಎಂದರು. ಯಶಸ್ವಿನಿ ಫಲಾನುಭವಿಗಳು ಶಸ್ತ್ರಚಿಕಿತ್ಸೆ ಮಾತ್ರವಲ್ಲದೆ ಸಾಮಾನ್ಯ ಆರೋಗ್ಯ ತಪಾಸಣೆಗಳನ್ನೂ ರಿಯಾಯಿತಿ ದರದಲ್ಲಿ ಪಡೆದುಕೊಳ್ಳಲು ಅವಕಾಶವಿದೆ. ನಗರ ಪ್ರದೇಶದ ಸುಮಾರು 40 ಲಕ್ಷ ಸಹಕಾರಿಗಳು ಇದರ ಅನುಕೂಲ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ನಿಯಮಗಳಿಗೆ ತಿದ್ದುಪಡಿ: ರಾಜ್ಯದಲ್ಲಿ 500ಕ್ಕೂ ಹೆಚ್ಚು ಗೃಹ ನಿರ್ಮಾಣ ಸಹಕಾರ ಸಂಘಗಳಿವೆ. ಆದರೆ, ಕಾರಣಾಂತರಗಳಿಂದ ಮತ್ತು ನಿಯಮಗಳಲ್ಲಿ ಸಣ್ಣ ಪುಟ್ಟ ತೊಡಕುಗಳಿರುವುದರಿಂದ ಸದಸ್ಯರಿಗೆ ನಿವೇಶನಗಳನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗೃಹ ನಿರ್ಮಾಣ ಸಹಕಾರ ಸಂಘಗಳ ನಿಯಮಾವಳಿಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಯಾವುದೇ ಗೃಹ ನಿರ್ಮಾಣ ಸಹಕಾರ ಸಂಘ ನೇರವಾಗಿ ಭೂಮಿ ಖರೀದಿಸಿ ಅದನ್ನು ಅಭಿವೃದ್ಧಿಪಡಿಸಿ ನಿವೇಶನಗಳನ್ನು ಹಂಚಲು ನಿಯಮಗಳಲ್ಲಿ ಅವಕಾಶವಿಲ್ಲ. ಸಂಘದ ಯಾವುದಾದರೂ ಪದಾಧಿಕಾರಿಗಳ ಹೆಸರಲ್ಲಿ ಭೂಮಿ ಖರೀದಿಸಿ ಅದನ್ನು ಅಭಿವೃದ್ಧಿಪಡಿಸಲಾಗುತ್ತದೆ. ನಂತರ ಅದನ್ನು ಸಂಘ ಪಡೆದುಕೊಂಡು ಸದಸ್ಯರಿಗೆ ನಿವೇಶನಗಳನ್ನು ವಿತರಿಸುತ್ತದೆ. ಆದರೆ, ಈ ಸಂದರ್ಭದಲ್ಲಿ ಆಗುವ ಲೋಪಗಳಿಂದ ಅನೇಕ ಸಂಘಗಳು ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು. ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಲು ಅನುಕೂಲವಾಗುವಂತೆ ನಿಯಮಾವಳಿಗಳಿಗೆ ತಿದ್ದುಪಡಿ ತರಲಾಗುವುದು ಎಂದರು.