ಕನ್ಯೆ.. ಕನ್ಯೆ... ಎಂದು ಊರೂರು ಸುತ್ತಿದ ವರಗಳಿಗೆ ಈಗ ದಕ್ಕಿದೆ ವಿಶೇಷ ಸ್ಥಾನಮಾನ, 371 ಆಯಿತು 'ವರ'ದಾನ!
- ಹೈ- ಕ ಗಂಡುಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!
- ಕಲಂ 371 ಜೆ ಅನುಷ್ಠಾನಕ್ಕೆ ಒಪ್ಪಿಗೆ ಸಿಕ್ಕಿದ್ದರ ಫಲ
- ನೇಮಕಾತಿ ವೇಳೆ ಮೀಸಲಾತಿ ಇರುವುದರಿಂದ ಸರ್ಕಾರಿ ನೌಕರಿ ಸಿಗುತ್ತದೆಂಬ ವಿಶ್ವಾಸ
- ಸರ್ಕಾರದ ಗೆಜೆಟ್ ನೋಟಿಫಿಕೇಷನ್ನಲ್ಲಿ ನಿಯಮ
- ಈ ಭಾಗದ ಕನ್ಯೆಯನ್ನು ಮದುವೆಯಾ ದವರಿಗೆ ಸೌಲಭ್ಯ ಸಿಗುವ ಬಗ್ಗೆ ಪ್ರಸ್ತಾಪ ಇಲ್ಲ
ಕೊಪ್ಪಳ: ಲಿಂಗಾನುಪಾತದ ಏರುಪೇರಿನಿಂದ ಮದುವೆಗೆ ಹೆಣ್ಣು ಸಿಗುವುದೇ ಕಷ್ಟವಾಗಿದೆ. ಆದರೆ, ಹೈದರಾಬಾದ್ ಕರ್ನಾಟಕ ವ್ಯಾಪ್ತಿಯಲ್ಲಿ ಮಾತ್ರ ತುಸು ವಿಭಿನ್ನ. ಈ ಭಾಗದ ವರನಿಗೆ ಹೆಣ್ಣು ಕೊಡಲು ಹೆಣ್ಣು ಹೆತ್ತವರು ತುದಿಗಾಲ ಮೇಲೆ ನಿಂತಿದ್ದಾರೆ. ಹೀಗಾಗಿ ಹೈ-ಕ ವ್ಯಾಪ್ತಿಯಲ್ಲಿನ ವರನಿಗೆ ಭಾರಿ ಬೇಡಿಕೆ ಬಂದಿದೆ!
'ಮೀಸೆ ಹೊತ್ತ ಗಂಡಸನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು' ಎನ್ನುವ ಹಾಡನ್ನು ತುಸು ಬದಲಿಸಿ 'ಹೈ-ಕ ಭಾಗದ ವರನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು' ಎಂದು ಹಾಡು ಕಟ್ಟುವ ಕಾಲ ಬಂದಿದೆ. ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ವರ ಎಂದರೆ ಸಾಕು ಹೆಣ್ಣು ಕಣ್ಣು ಮುಚ್ಚಿ ಕೊಡಲು ಮುಂದಾಗುತ್ತಿದ್ದಾರೆ. ಇದೆಲ್ಲಾ ಹೈ-ಕ ಪ್ರದೇಶಕ್ಕೆ ಸಿಕ್ಕಿರುವ 371 (ಜೆ) ವಿಶೇಷ ಸ್ಥಾನಮಾನದ ಪರಿಣಾಮ!
ರಾಜ್ಯ ಸರ್ಕಾರ ಪ್ರಸ್ತಾವನೆ ಕಳುಹಿಸಿರುವುದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಸಂವಿಧಾನ ತಿದ್ದುಪಡಿ ಮಾಡಿ 371 ಜೆ ಸೌಲಭ್ಯ ನೀಡಿರುವುದನ್ನು ರಾಜ್ಯ ಸರ್ಕಾರ ಈಗಾಗಲೇ ಗೆಜೆಟ್ ನೋಟಿಫಿಕೇಷನ್ ಕೂಡಾ ಮಾಡಿದೆ. ಇದರಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದವರು ಎಂದರೇ ಯಾರು, ಯಾರ್ಯಾರಿಗೆ ಈ ಸೌಲಭ್ಯ ದೊರೆಯುತ್ತದೆ ಎಂದು ಹೇಳಿರುವುದೇ ಈಗ ಹೈ-ಕ ಪ್ರದೇಶದ ವರಗಳಿಗೆ ಡಿಮ್ಯಾಂಡ್ ಬರಲು ಕಾರಣವಾಗಿದೆ. ಇದರಿಂದ ಈಗ ಹೈ-ಕ ಪ್ರದೇಶದ ಆರು ಜಿಲ್ಲೆಯಲ್ಲಿರುವ ವರಗಳು ಮಾತ್ರ ಮೀಸೆ ಮೇಲಿಟ್ಟರುವ ಕೈಯನ್ನು ತೆಗೆಯುತ್ತಲೇ ಇಲ್ಲ! ನೆಲಕ್ಕೆ ಮುಖ ಮಾಡುತ್ತಿಲ್ಲ. ಎದೆಯುಬ್ಬಿಸಿ ಓಡಾಡುತ್ತಿದ್ದಾರೆ. ಅಷ್ಟೆ ಯಾಕೆ ಇದುವರೆಗೂ ಕನ್ಯೆ.. ಕನ್ಯೆ.. ಎಂದು ನೂರು ಊರು ಸುತ್ತಿದರೂ ಸಿಗದವರಿಗೆ ಈಗ ಅವರೇ ಮರಳಿ ದುಂಬಾಲು ಬೀಳುವಂತಾಗಿದೆ.
ಏನು ಹೇಳುತ್ತೆ ನಿಯಮ?
ರಾಜ್ಯ ಸರ್ಕಾರ ಹೊರಡಿಸಿರುವ ಗೆಜೆಟ್ ಆದೇಶದಲ್ಲಿ ಈ ಕುರಿತು ಸ್ಪಷ್ಟವಾಗಿ ಹೇಳಲಾಗಿದೆ. ಹೈ-ಕ ಪ್ರದೇಶದವರು ಯಾರು ಮತ್ತು ಯಾರ್ಯಾರಿಗೆ ಈ ಸೌಲಭ್ಯ ದೊರೆಯುತ್ತದೆ ಎನ್ನುವುದನ್ನು ವಿವರಣೆಯಲ್ಲಿ ಹೇಳಿರುವಂತೆ, ಯಾವುದೇ ಮಹಿಳೆ ಹೈ-ಕ ಪ್ರದೇಶದಲ್ಲಿರುವ ವ್ಯಕ್ತಿಯನ್ನು ಮದುವೆಯಾದರೆ ಆಕೆಗೆ 371 ಜೆ ಸೌಲಭ್ಯ ಸಹಜವಾಗಿಯೇ ದೊರೆಯುತ್ತದೆ. ಹೀಗಾಗಿ, ರಾಜ್ಯ, ಸೇರಿದಂತೆ ದೇಶದ ಯಾವುದೇ ಪ್ರದೇಶದವರಾಗಿದ್ದರೂ ಇಲ್ಲಿಯ ವ್ಯಕ್ತಿಯನ್ನು ಮದುವೆಯಾದ ತಕ್ಷಣ ಆಕೆಗೆ ಈ ಸೌಲಭ್ಯ ದೊರೆಯುತ್ತದೆ ಎಂದು ನಿಖರವಾಗಿ ಹೇಳಲಾಗಿದೆ. ಹೀಗಾಗಿ, ಇಲ್ಲಿಯ ವರಗಳನ್ನು ಮದುವೆಯಾಗಲು ಬೇರೆ ಬೇರೆ ಜಿಲ್ಲೆಯವರು ಸಹಜವಾಗಿಯೇ ಉತ್ಸುಕರಾಗಿದ್ದಾರೆ, ದುಂಬಾಲು ಬೀಳುತ್ತಿದ್ದಾರೆ. ಪರಿಣಾಮ ಈ ಭಾಗದ ವರಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಆದರೆ, ಇಲ್ಲಿರುವ ಕನ್ಯೆಯನ್ನು ಮದುವೆಯಾದವರಿಗೆ 371 ಜೆ ಸೌಲಭ್ಯ ಸಿಗುತ್ತದೆ ಎನ್ನುವ ಕುರಿತು ಯಾವುದೇ ಪ್ರಸ್ತಾವನೆಯೇ ಇಲ್ಲ. ಆದರೆ, ಇಲ್ಲಿರುವವರಿಗೆ ಸಹಜವಾಗಿಯೇ ಆ ಸೌಲಭ್ಯ ದೊರೆಯುತ್ತದೆಯೇ ಹೊರತು ಇಲ್ಲಿಯ ಕನ್ಯೆಯನ್ನು ಮದುವೆಯಾದವರಿಗೆ ಸಿಗುವುದಿಲ್ಲ ಎನ್ನುವುದು ಮಾತ್ರ ಸ್ಪಷ್ಟ.
ಆರು ಜಿಲ್ಲೆಗಳಿಗೆ ಅನ್ವಯ
ಬೀದರ್, ಗುಲ್ಬರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ಜಿಲ್ಲೆಗಳಲ್ಲಿ ಕಲಂ 371 ಜೆ ಅನುಷ್ಠಾನಗೊಳ್ಳಲಿದೆ. ಹಿಂದುಳಿದ ಆರು ಜಿಲ್ಲೆಗಳಲ್ಲಿ ಅಭಿವೃದ್ಧಿ ಅನುಕೂಲವಾಗಲು ಕೇಂದ್ರ ಸರ್ಕಾರ ದಶಕಗಳ ಹೋರಾಟದ ಬಳಿಕ ಈ ಸೌಲಭ್ಯ ದೊರೆತಿದೆ.
ಇಲ್ಲಿಗೆ ಮದುವೆಯಾಗಿ ಬರುವ ಮಹಿಳೆಗೂ 371 ಜೆ ಸೌಲಭ್ಯ ಸಿಗಲಿದೆ. ಇದರಿಂದ ಇಲ್ಲಿಯವರೊಂದಿಗೆ ಸಂಬಂಧ ಬೆಳೆಸುವವರಿಗೂ ಈ ಸೌಲಭ್ಯ ಸಿಗುವುದರಿಂದ ನಾನಾ ಪ್ರದೇಶದೊಂದಿಗೆ ಹೈ-ಕ ಪ್ರದೇಶದ ಸಂಬಂಧ ವೃದ್ಧಿಸುತ್ತದೆ. ಈ ಭಾಗವೂ ಇತರೆ ಪ್ರದೇಶದೊಂದಿಗೂ ಉತ್ತಮ ಬಾಂಧವ್ಯ ದೊರೆಯುವುದಕ್ಕೆ ಅವಕಾಶ ನೀಡಿದಂತೆ ಆಗುತ್ತದೆ. ಹೀಗಾಗಿ, ಇದೊಂದು ರೀತಿಯಲ್ಲಿ ಅರ್ಥಪೂರ್ಣ.
-ಡಾ. ರಜಾಕ ಉಸ್ತಾದ, ರಾಜ್ಯ ಉಪಾಧ್ಯಕ್ಷರು, ಹೈ-ಕ ಹೋರಾಟ ಸಮಿತಿ
- ಸೋಮರಡ್ಡಿ ಅಳವಂಡಿ