ವೃತ್ತಿ ಶಿಕ್ಷಣ ಪರ ಕಾಯ್ದೆ; ಅನುಕೂಲ
ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರುತ್ತಿರುವ ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಕಾಯ್ದೆಯಿಂದ..
ಬೆಂಗಳೂರು: ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರುತ್ತಿರುವ ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಕಾಯ್ದೆಯಿಂದ ಸ್ನಾತಕೋತ್ತರ ಪದವಿ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಅನುಕೂಲವೇ ವಿನಃ ಸಮಸ್ಯೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ.
ಜಾರಿಗೆ ತರುತ್ತಿರುವ ಕಾಯ್ದೆ ಕುರಿತಂತೆ ವಿದ್ಯಾರ್ಥಿ ಸಮುದಾಯ ಮಾತ್ರವಲ್ಲದೆ ಪೋಷಕರು, ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲ ಮತ್ತು ಆತಂಕಗಳಿವೆ. ಆದರೆ, ಈ ಕಾಯ್ದೆ ಪದವಿ ಆಕಾಂಕ್ಷಿ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳ ಸ್ನೇಹಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಈ ಕಾಯ್ದೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು. ಸುಪ್ರೀಂ ಕೋರ್ಟ್ ಆದೇಶದಂತೆ ಈ ಕಾಯ್ದೆ ರೂಪಿಸಲಾಗಿದ್ದು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನೇಮಿಸಿದ ಶುಲ್ಕ ನಿಯಂತ್ರಣ ಸಮಿತಿ ಮತ್ತು ಪ್ರವೇಶ ಮೇಲ್ವಿಚಾರಣಾ ಸಮಿತಿ ವ್ಯಾಪ್ತಿಯಲ್ಲೇ ಖಾಸಗಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಮತ್ತು ಶುಲ್ಕ ನಿಗದಿಯಾಗುವುದರಿಂದ ಇಲ್ಲಿ ಅನ್ಯಾಯವಾಗಲು ಅವಕಾಶವಿಲ್ಲ ಎಂದರು.
ಮೀಸಲು ವಿದ್ಯಾರ್ಥಿಗಳಿಗೆ ಲಾಭ: ಈ ಹಿಂದೆ ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಮಧ್ಯೆ ಸಹಮತದ ಒಪ್ಪಂದದಿಂದ ಸರ್ಕಾರಿ ಕೋಟಾದಡಿ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಶೇ. 25ರಷ್ಟು ಕೂಡ ಮೀಸಲು ಸಿಗುತ್ತಿರಲಿಲ್ಲ. ಆದರೆ, ಈಗ ಕಾಯ್ದೆ ಜಾರಿಯಾಗಿರುವುದರಿಂದ ಖಾಸಗಿ ಕಾಲೇಜುಗಳು ಶೇ.50ರಷ್ಟು ಮೀಸಲು ನೀಡಲೇ ಬೇಕಾಗುತ್ತದೆ. ಇಲ್ಲದೇ ಇದ್ದರೆ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರವಿದೆ ಎಂದರು.
ಅದೇ ರೀತಿ ಭಾಷಾ ಮತ್ತು ಮತೀಯ ಅಲ್ಪಸಂಖ್ಯಾತರ ಕಾಲೇಜುಗಳಲ್ಲಿ ಶೇ.66ರಷ್ಟು ಸೀಟುಗಳನ್ನು ಅಲ್ಪಸಂಖ್ಯಾತರಿಗೆ ನೀಡಲೇ ಬೇಕು. ಆದರೆ, ಇದುವರೆಗೆ ಕಾಲೇಜುಗಳು ನಿಯಮ ಪಾಲಿಸುತ್ತಿರಲಿಲ್ಲ. ಇನ್ನು ಮುಂದೆ ಖಾಸಗಿ ಕಾಲೇಜುಗಳು ನಡೆಸುವ ಸಿಇಟಿಯಲ್ಲಿ ಅಷ್ಟು ಸೀಟುಗಳು ಲಭ್ಯವಾಗದೇ ಇದ್ದರೆ ಸರ್ಕಾರ ನಡೆಸಿದ ಸಿಇಟಿಯಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತರ ಸೀಟುಗಳನ್ನು ಪಡೆದು ಮೀಸಲು ಭರ್ತಿ ಮಾಡಬೇಕು. ಈ ಎರಡೂ ಸಂದರ್ಭದಲ್ಲಿ ಸೀಟು ಭರ್ತಿಯಾಗದೇ ಇದ್ದರೆ ಮಾತ್ರ ಸಾಮಾನ್ಯ ಕೋಟಾದ ವಿದ್ಯಾರ್ಥಿಗಳನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಬಹುದು ಎಂದು ವಿವರಿಸಿದರು. ಮೇಲಾಗಿ ಪ್ರವೇಶ ಪರೀಕ್ಷೆಗೂ ನಿರ್ಬಂಧವಿದೆ. ಈ ಹಿಂದೆ ಸರ್ಕಾರಿ ಸಿಇಟಿ ಜತೆಗೆ ಖಾಸಗಿ ಕಾಲೇಜುಗಳು, ಅಲ್ಪಸಂಖ್ಯಾತ ಖಾಸಗಿ ಕಾಲೇಜುಗಳು ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳು ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತಿದ್ದವು. ಆದರೆ, ಹೊಸ ಕಾಯ್ದೆಯನ್ವಯ ಸರ್ಕಾರಿ ಸಿಇಟಿ ಜತೆಗೆ ಈ ಎಲ್ಲಾ ಕಾಲೇಜುಗಳು ಸೇರಿ ಒಟ್ಟಾಗಿ ಒಂದು ಸಿಇಟಿ ನಡೆಸಲು ಮಾತ್ರ ಅವಕಾಶವಿದೆ. ಇದರಿಂದ ವಿದ್ಯಾರ್ಥಿಗಳು ಅನೇಕ ಕಡೆ ಪ್ರವೇಶ ಪರೀಕ್ಷೆ ಬರೆಯುವ ಕಷ್ಟ ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜುಗಳಿಗೆ ಶೇ.8ರಿಂದ 10 ಮಾತ್ರ ಲಾಭ: ಈ ಹಿಂದೆ ಖಾಸಗಿ ಕಾಲೇಜುಗಳು ಮ್ಯಾನೇಜ್ಮೆಂಟ್ ಕೋಟಾ ಹೆಸರಿನಲ್ಲಿ ಖಾಸಗಿ ಕಾಲೇಜುಗಳು ಬೇಕಾಬಿಟ್ಟು ಶುಲ್ಕ ವಸೂಲಿ ಮಾಡುತ್ತಿದ್ದವು. ಅಲ್ಲದೆ, ನಿರ್ವಹಣಾ ವೆಚ್ಚ ಮತ್ತಿತರೆ ಹೆಸರಿನಲ್ಲಿ ಸರ್ಕಾರಿ ಕೋಟಾ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕಗಳನ್ನು ವಸೂಲಿ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಅಂತಹ ನಡೆವಳಿಕೆಗೆ ಅವಕಾಶವಿಲ್ಲ. ಶುಲ್ಕ ನಿಯಂತ್ರಣ ಸಮಿತಿ ಕಾಲೇಜು ನಿರ್ವಹಣೆ ಮತ್ತಿತರೆ ವೆಚ್ಚ ಸೇರಿ ಶುಲ್ಕ ನಿಗದಿಪಡಿಸುತ್ತದೆ. ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಗಳಿಗೆ ಶೇ. 8ರಿಂದ ಶೇ. 10ರಷ್ಟು ಮಾತ್ರ ಲಾಭಾಂಶ ಸಿಗಲಿದೆ. ಅದಕ್ಕಿಂತ ಹೆಚ್ಚು ಸುಲ್ಕ ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಹೊಸ ಕಾಯ್ದೆ ಜಾರಿಗೆ ಬಂದಿರುವುದರಿಂದ ಸೀಟ್ ಬ್ಲಾಕಿಂಗ್ಗೆ ಅವಕಾಶವಿಲ್ಲ. ಕ್ಯಾಪಿಟೇಷನ್ ಶುಲ್ಕ ಇರುವುದಿಲ್ಲ. ಸೀಟು ಹಂಚಿಕೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಲಿದ್ದು, ಪ್ರತಿಭಾವಂತರಿಗೆ ಅನುಕೂಲವಾಗಲಿದೆ ಎಂದರು.
ಸರ್ಕಾರಿ ವೈದ್ಯ ಕಾಲೇಜುಗಳಲ್ಲಿ 900 ಹೆಚ್ಚುವರಿ ಸೀಟು
ಮುಂದಿನ ಶೈಕ್ಷಣಿಕ ವರ್ಷದಿಂದ 6 ಹೊಸ ವೈದ್ಯ ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದ್ದು, ಇದರಿಂದ 900 ಹೆಚ್ಚುವರಿ ಸೀಟುಗಳು ಸರ್ಕಾರಕ್ಕೆ ಲಭ್ಯವಾಗಲಿದೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ. ಪ್ರತಿ ವರ್ಷ ಸರ್ಕಾರಿ ವೈದ್ಯ ಕಾಲೇಜುಗಳಲ್ಲಿ 1500 ಸೀಟುಗಳು ಲಭ್ಯವಿರುತ್ತವೆ. ಇದರ ಜತೆಗೆ ಖಾಸಗಿ ಕಾಲೇಜುಗಳು ಒಂದು ಸಾವಿರ ಸರ್ಕಾರಿ ಕೋಟಾ ಸೀಟುಗಳನ್ನು ನೀಡುತ್ತವೆ. ಹೊಸ ಕಾಯ್ದೆ ಜಾರಿಗೆ ಬರುತ್ತಿರುವ ಕಾರಣ ಖಾಸಗಿ ಕಾಲೇಜುಗಳು ಸರ್ಕಾರಿ ಕೋಟಾ ಸೀಟುಗಳನ್ನು ನೀಡುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಮುಂದಿನ ವರ್ಷದಿಂದಲೇ ಆರು ಕಾಲೇಜುಗಳನ್ನು ಆರಂಭಿಸಲಾಗುತ್ತಿದ್ದು, ಖಾಸಗಿ ಕಾಲೇಜುಗಳು ನೀಡುತ್ತಿದ್ದ 1000 ಸೀಟುಗಳ ಪೈಕಿ 900 ಸೀಟುಗಳು ಈ ಕಾಲೇಜುಗಳಲ್ಲಿ ಲಭ್ಯವಾಗುತ್ತವೆ ಎಂದು ಅವರು ತಿಳಿಸಿದರು.
ಯಾವುದೇ ವಿದ್ಯಾರ್ಥಿ ಶುಲ್ಕ ಪಾವತಿಸಲು ಆಗುತ್ತಿಲ್ಲ ಎಂದು ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಸ್ನಾತಕೋತ್ತರ ಕೋರ್ಸ್ಗಳನ್ನು ಮಾಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಉದ್ಭವವಾಗದಂತೆ ನೋಡಿಕೊಳ್ಳಲಾಗುವುದು. ಇದು ಸರ್ಕಾರದ ಬದ್ಧತೆ. ಪ್ರತಿಭಾವಂತ ಬಡ ವಿದ್ಯಾರ್ಥಿ ಪಿಜಿ ಪದವಿ ಪಡೆಯುವಂತೆ ಸರ್ಕಾರ ನೋಡಿಕೊಳ್ಳಲಿದೆ. ಆದ್ದರಿಂದ ಬಡ ವಿದ್ಯಾರ್ಥಿಗಳಿಗೆ ಆತಂಕ ಬೇಡ.
- ಡಾ. ಶರಣಪ್ರಕಾಶ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ