ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಶಕ್ತರ ಕೃಷಿಭೂಮಿ ಉಳುಮೆಗೆ ಹಡಿಲು ಯೋಜನೆ: ಡಾ. ಹೆಗ್ಗಡೆ

Srinivasa Murthy VN
Updated On : 21 Dec 2013, 12:17 pm

ಮೂಡುಬಿದಿರೆ (ಪದ್ಮವಿಭೂಷಣ ವರ್ಗಿಸ್ ಕುರಿಯನ್ ವೇದಿಕೆ): ಸವಳು, ಜವಳು ಭೂಮಿಯಲ್ಲಿ ಕೃಷಿ ಮಾಡಲು ಸಾಧ್ಯವಿಲ್ಲದ ಭೂಮಿ ಇದ್ದರೂ ಕೃಷಿ ಮಾಡಲು ಅಶಕ್ತರಾದವರಿಗೆ ನೆರವಾಗಲು ಆಸಕ್ತರಿಂದ ಕೃಷಿ ಮಾಡಿಸುವ ಹಡಿಲು ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ, ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಮೂಡುಬಿದಿರೆ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‌ನಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 34ನೇ ಕೃಷಿ ಮೇಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳಗಾವಿಯಲ್ಲಿ ಅಣೆಕಟ್ಟೆ ನೀರು ಜಾಸ್ತಿ ಬಳಸಿ ಭೂಮಿ ಬಂಜರು ಆದಾಗ, ಅಲ್ಲಿ ಕೃಷಿಯನ್ನು ಪುನರ್ ರೂಪಿಸುವ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆ ಕೈಗೊಂಡಿದೆ. ಅದೇ ರೀತಿ ಕರಾವಳಿ ಜಿಲ್ಲೆಯಲ್ಲಿ ಜಾಗ ಇದ್ದು ಕೃಷಿ ಮಾಡಲು ಅಸಾಧ್ಯ ಎನ್ನುವವರಿದ್ದರೆ, ಗ್ರಾಮಾಭಿವೃದ್ಧಿ ಯೋಜನೆಯಿಂದ ಕೃಷಿ ಪುನಶ್ಚೇತನವಾಗಿ ಹಡಿಲು ಹೆಸರಿನಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಅಡಕೆ ಹಾನಿಕಾರ ಬಗ್ಗೆ 700 ಪುಟ ವಿವರ:
ಅಡಕೆ ಹಾನಿಕಾರಕ ಎಂಬ ಬಗ್ಗೆ ಕೇಂದ್ರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ 1,300 ಪುಟಗಳ ವರದಿಯಲ್ಲಿ 700 ಪುಟ ವರದಿ ಅಡಕೆ ಹಾನಿಕಾರಕ ಎಂದಿದೆ. ಇದಕ್ಕೆ ಅಡಕೆ ಸಂಶೋಧನಾ ಪ್ರತಿಷ್ಠಾನ ಜೊತೆ ಉಡುಪಿ ಎಸ್‌ಡಿಎಂ ಆಯುರ್ವೇದಿಕ್ ಸಂಶೋಧನಾ ಕೇಂದ್ರ ಸೇರಿಕೊಂಡು ಅಡಕೆ ಹಾನಿಕಾರಕವಲ್ಲ ಎಂದು ಕೇಂದ್ರಕ್ಕೆ ದಾಖಲೆ ಸಹಿತ ವರದಿ ಸಲ್ಲಿಸಲಿದೆ ಎಂದು ಹೇಳಿದರು.

ಪಶ್ಚಿಮವಾಹಿನಿ ಜಾರಿಗೆ ಕ್ರಮ
ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಅಭಯಚಂದ್ರ ಜೈನ್, ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆಗಳಿಗೆ 10 ಸಾವಿರ ಕೋಟಿ ನೀಡಲಾಗುತ್ತಿದೆ. ಅದೇ ರೀತಿ ಕರಾವಳಿಯಲ್ಲಿ ನದಿ ಜೋಡಣೆಯ ಪಶ್ಚಿಮವಾಹಿನಿ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಿದೆ. ಈ ಬಾರಿಯ ಬಜೆಟ್‌ನಲ್ಲಿ 400 ಕೋಟಿ ಮೀಸಲಿಡುವಂತೆ ಮುಖ್ಯಮಂತ್ರಿಯನ್ನು ಕೋರಲಾಗುವುದು ಎಂದರು. ಕೃಷಿ ಮೇಳವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಜಿಲ್ಲಾ ಮಾದರಿ ಕಣಜವನ್ನು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ವಿಚಾರಗೋಷ್ಠಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಉದ್ಘಾಟಿಸಿದರು. ಭಗವಾನ್ ಸಂಪಾದಿತ ಭೂಮಿಗೀತೆ ಕೃತಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಬಿಡುಗಡೆಗೊಳಿಸಿದರು. ಸಂಘಟಕ ಡಾ. ಮೋಹನ ಆಳ್ವ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಕೃಷಿ ಸಾಧಕ ಡಾ.ಎಲ್.ಸಿ. ಸೋನ್ಸ್, ಕೃಷಿ ತಜ್ಞ ಡಾ.ಎಂ.ಎ.ನಾರಾಯಣ ರೆಡ್ಡಿ, ಶಾಸಕ ಗೋಪಾಲ ಭಂಡಾರಿ, ಆನಂದ ಆಳ್ವ ಹಾಜರಿದ್ದರು.

ಸಾಧಕ ಕೃಷಿಕರಿಗೆ ಸನ್ಮಾನ
ಕೃಷಿಮೇಳ ಉದ್ಘಾಟನೆಯಲ್ಲಿ ನಾಲ್ವರು ಸಾಧಕ ಕೃಷಿಕರನ್ನು ಸನ್ಮಾನಿಸಲಾಯಿತು. ಮೂಡುಬಿದಿರೆಯ ಜೀವಂಧರ ಕುಮಾರ್ ಕೃಷಿ ಜೀವಮಾನ ಸಾಧಕ ಪ್ರಶಸ್ತಿ ನೀಡಲಾಯಿತು. ರು. 25 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅರುಣ್ ಕುಮಾರ್‌ಗೆ ಸಾವಯವ ಕೃಷಿ ಸಾಧಕ, ಪಿ.ಟಿ. ಜೋಸ್‌ಗೆ ಕೃಷಿಯೇತರ ಹೈನುಗಾರಿಕೆ ಕೃಷಿ ಸಾಧಕ, ಶ್ಯಾಮಣ್ಣ ನಾಯಕ್‌ಗೆ ಸಣ್ಣ ಹಿಡುವಳಿ ಕೃಷಿ ಸಾಧಕ ಪ್ರಶಸ್ತಿ ಜೊತೆ ತಲಾ ರು. 10 ಸಾವಿರ ನಗದು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

- ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement