ಕಡೆಗೂ ಹೇಳಿಕೆ ನೀಡಿದ ನತದೃಷ್ಟೆ
ಮಣಿಪಾಲದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತ ವೈದ್ಯ ವಿದ್ಯಾರ್ಥಿನಿ ಕೊನೆಗೂ ಪೊಲೀಸರಿಗೆ ತನ್ನ ಹೇಳಿಕೆ ನೀಡಿದ್ದಾಳೆ.
ಕ.ಪ್ರ. ವಾರ್ತೆ ಉಡುಪಿ ಜು.2
ದೇಶಾದ್ಯಂತ ಚರ್ಚೆಗೆ ಗ್ರಾಸವಾದ ಮಣಿಪಾಲದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತ ವೈದ್ಯ ವಿದ್ಯಾರ್ಥಿನಿ ಕೊನೆಗೂ ಪೊಲೀಸರಿಗೆ ತನ್ನ ಹೇಳಿಕೆ ನೀಡಿದ್ದಾಳೆ. ಇದರೊಂದಿಗೆ ಈ ಪ್ರಕರಣದ ಆರೋಪಿಗಳನ್ನು ಕಠಿಣ ಶಿಕ್ಷೆಗೊಳಪಡಿಸಲು ಪೊಲೀಸರಿಗೆ ದೊಡ್ಡ ಪುರಾವೆ ದೊರೆತಂತಾಗಿದೆ.
ಆದರೆ ತನ್ನ ಹೇಳಿಕೆಯನ್ನು ನೀಡುವ ಮೊದಲು ಆಕೆ ಪೊಲೀಸರಿಗೆ ಕೆಲವು ಷರತ್ತುಗಳನ್ನು ವಿಧಿಸಿದ್ದು, ಹೇಳಿಕೆಯನ್ನು ಎಲ್ಲಿಯೂ, ಯಾವುದೇ ಸಂದರ್ಭದಲ್ಲಿಯೂ ಸಾರ್ವಜನಿಕವಾಗಿ ಬಹಿರಂಗಪಡಿಸಬಾರದು, ತನ್ನ ಮತ್ತು ತನ್ನ ಕುಟುಂಬದವರ ಬಗ್ಗೆ ಸಂಪೂರ್ಣ ಗೌಪ್ಯತೆ ಕಾಪಾಡಬೇಕು ಎಂದಿದ್ದಾಳೆ.
ಅತ್ಯಾಚಾರ ನಡೆದು 11 ದಿನಗಳಾದರೂ ವಿದ್ಯಾರ್ಥಿನಿ ಪೊಲೀಸರಿಗೆ ಹೇಳಿಕೆ ನೀಡಲು ನಿರಾಕರಿಸುತ್ತಿದ್ದಳು. ಅತ್ಯಾಚಾರಕ್ಕೊಳಗಾದವರು ಹೇಳಿಕೆಯನ್ನು ನೀಡಿದರೆ ತನಿಖೆಗೆ ಅನುಕೂಲವಾಗುತ್ತದೆ. ಆದರೆ, ಕಾನೂನು ಪ್ರಕಾರ ಹೇಳಿಕೆಯನ್ನು ಒತ್ತಡ ಹಾಕಿ ತೆಗೆದುಕೊಳ್ಳುವಂತಿಲ್ಲ. ಈಗ ವಿದ್ಯಾರ್ಥಿನಿಯೇ ಹೇಳಿಕೆ ನೀಡಿರುವುದರಿಂದ ಈ ಪ್ರಕರಣದ ತನಿಖೆ ಮತ್ತಷ್ಟು ಸರಳವಾಗಲಿದೆ.
ವಿದ್ಯಾರ್ಥಿನಿಯ ಹೇಳಿಕೆಯಿಂದಾಗಿ ಶೇ.99ರಷ್ಟು ತಮ್ಮ ಬಾಹ್ಯ ತನಿಖೆ ಪೂರ್ಣಗೊಂಡಿದೆ ಎಂದು ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ವೈದ್ಯರ ಮೂಲಕವೇ ಹೇಳಿಕೆ: ವಿದ್ಯಾರ್ಥಿನಿಗೆ ಮಾನಸಿಕ ತಜ್ಞ ವೈದ್ಯರೊಬ್ಬರು ಚಿಕಿತ್ಸೆ ನೀಡುತ್ತಿದ್ದು, ಅವರ ಮೂಲಕ ಸಾಕಷ್ಟು ಮನವೊಲಿಸಿದ ನಂತರವೇ ಆಕೆ ಹೇಳಿಕೆ ನೀಡಿದ್ದಾಳೆ. ಪೊಲೀಸರೂ ಹೇಳಿಕೆಯನ್ನು ಈ ವೈದ್ಯರ ಮೂಲಕವೇ ಪಡೆದಿದ್ದಾರೆ. ಅಗತ್ಯವಿದ್ದಲ್ಲಿ ಇನ್ನಷ್ಟು ಹೇಳಿಕೆಯನ್ನು ಆಕೆಯಿಂದ ಪಡೆಯಲಾಗುವುದು ಎಂದು ಐಜಿಪಿ ರೆಡ್ಡಿ ತಿಳಿಸಿದ್ದಾರೆ.
ಸಾಕ್ಷ್ಯ ನಾಶ ಮತ್ತಿಬ್ಬರ ಸೆರೆ
ವೈದ್ಯಕೀಯ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣದ 3 ಆರೋಪಿಗಳೊಂದಿಗೆ ಇದೀಗ ಸಾಕ್ಷ್ಯಾಧಾರಗಳನ್ನು ನಾಶಗೊಳಿಸಿದ ಆರೋಪದ ಮೇಲೆ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿದೆ. ಅಂಜಾರು ಗ್ರಾಮದ ಬಾಲಚಂದ್ರ ಶಾಂತಪ್ಪ ಪೂಜಾರಿ (40), ಬಡಗುಬೆಟ್ಟು ಗ್ರಾಮದ ನೆಡುದಾರೆ ಎಂಬಲ್ಲಿನ ನಿವಾಸಿ ಹರೀಂದ್ರ ನಾರಾಯಣ ಪೂಜಾರಿ (29) ಬಂಧಿತರು. ಇವರಿಬ್ಬರೂ ಅತ್ಯಾಚಾರ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗದೇ ಹೋದರೂ, ಆರೋಪಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಸಹಾಯ ಮಾಡಿದ್ದಾರೆ. ವಿಚಾರಣೆ ವೇಳೆ ಪೊಲೀಸರಿಗೂ ಪ್ರಕರಣದ ಬಗ್ಗೆ ತಿಳಿದಿದ್ದರೂ ಯಾವುದೇ ಮಾಹಿತಿ ನೀಡಿರಲಿಲ್ಲ.