ಸಂತೋಷ್ ಲಾಡ್ ಕಂಡ ರುದ್ರಭೂಮಿ
ಮಹಾಮಳೆ ಬಳಿಕ ಯಾತ್ರಾ ಸ್ಥಳಗಳ ಮಾರ್ಗ ಹಾಗೂ ನದಿ ತೀರದ ಪ್ರದೇಶಗಳು ಅಕ್ಷರಶಃ ರುದ್ರಭೂಮಿಯಾಗಿದ್ದವು
ಕನ್ನಡಪ್ರಭ ವಾರ್ತೆ ಬೆಂಗಳೂರು ಜು.2
ಮಹಾಮಳೆ ಬಳಿಕ ಯಾತ್ರಾ ಸ್ಥಳಗಳ ಮಾರ್ಗ ಹಾಗೂ ನದಿ ತೀರದ ಪ್ರದೇಶಗಳು ಅಕ್ಷರಶಃ ರುದ್ರಭೂಮಿಯಾಗಿದ್ದವು. ಎಲ್ಲೆಲ್ಲೂ ಶವಗಳು, ಅಪಘಾತ, ಕಿತ್ತು ಹೋದ ರಸ್ತೆಗಳು, ಸಹಾಯಕ್ಕಾಗಿ ಜನರ ಆಕ್ರಂದನ, ಈ ಎಲ್ಲವೂ ನನ್ನ ಜೀವನದಲ್ಲಿ ಮೊದಲು...
ಉತ್ತರಾಖಂಡ ಪ್ರವಾಹದಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆಗಾಗಿ ಹೋಗಿದ್ದ ವಾರ್ತಾ ಸಚಿವ ಸಂತೋಷ್ ಲಾಡ್ ಅವರ ಅನುಭವ ಇದು. 56 ಯಾತ್ರಾರ್ಥಿಗಳೊಂದಿಗೆ ಮಂಗಳವಾರ ಸಂಜೆ ಬೆಂಗಳೂರಿಗೆ ಬಂದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಅವರು ರಕ್ಷಣಾ ಕಾರ್ಯಾಚರಣೆ ವೇಳೆ ತಾವು ಕಂಡ ಭಯಾನಕ ದೃಶ್ಯಾವಳಿಗಳನ್ನು ವಿವರಿಸಿದರು. ಇದೇ ವೇಳೆ ಯಾತ್ರಾರ್ಥಿಗಳೂ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಎಲ್ಲಾ ರಾಜ್ಯಗಳು, ಕೇಂದ್ರ ಸರ್ಕಾರ, ಸೇನಾ ಸಿಬ್ಬಂದಿ ಸಂಕಷ್ಟಕ್ಕೀಡಾದ ಜನರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ವಯಸ್ಸಾದವರು, ಮಕ್ಕಳು, ಮಹಿಳೆಯರು ಹೀಗೆ ಆದ್ಯತೆಯ ಮೇರೆ ಒಬ್ಬೊಬ್ಬರನ್ನಾಗಿ ನಾವು ರಕ್ಷಿಸುತ್ತಿದ್ದೆವು ಎಂದು ಸಂತೋಷ ಲಾಡ್ ಹೇಳಿದರು. 'ನನ್ನ ಮೇಲೆ ವಿಶ್ವಾಸವಿಟ್ಟು ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು' ಎಂದರು.
ಸಂತೋಷ ತಂದಿದೆ-ಸಿಎಂ: ಉತ್ತರಾಖಂಡ ಮಹಾಮಳೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡ ಯಾತ್ರಾರ್ಥಿಗಳು ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ್ದು ಸಂತೋಷ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು. ಕರ್ನಾಟಕ ಸರ್ಕಾರದ ನೆರವಿನಿಂದ ದೆಹಲಿ ಮೂಲಕ ಬೆಂಗಳೂರಿಗೆ ಆಗಮಿಸಿದ್ದ ರಾಜ್ಯದ ಬಿಜಾಪುರ, ಬಾಗಲಕೋಟೆ, ರಾಯಚೂರು, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ 56 ಯಾತ್ರಿಗಳನ್ನು ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದರು. 'ಅನಿರೀಕ್ಷಿತ ಮಳೆಯಿಂದಾಗಿ ಕನ್ನಡಿಗರು ಸೇರಿದಂತೆ ಸಾವಿರಾರು ಜನರ ರಕ್ಷಣೆಯ ಜವಾಬ್ದಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲಿತ್ತು. ಜೂನ್ 15 ಹಾಗೂ 16 ರಂದು ಸುರಿದ ಭಾರಿ ಮಳೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿರುವುದು ಪತ್ರಿಕೆಗಳು ಹಾಗೂ ಮಾಧ್ಯಮಗಳಿಂದ ಗೊತ್ತಾಯಿತು. ಮಹಾಮಳೆಗೆ ಕರ್ನಾಟಕ ರಾಜ್ಯದ ಸಾವಿರಾರು ಪ್ರವಾಸಿಗರು ಸಿಲುಕಿದ್ದರು ಎನ್ನುವುದು ತಿಳಿದು ಬಂತು. ಅವರ ರಕ್ಷಣೆಗೆ ತಡ ಮಾಡದೇ ರಾಜ್ಯದಿಂದ ಮೂವರು ಅಧಿಕಾರಿಗಳು, ವೈದ್ಯಕೀಯ ತಂಡವನ್ನು ಕಳುಹಿಸಿಕೊಡಲಾಯಿತು' ಎಂದರು.
ಅಧಿಕಾರಿಗಳೊಂದಿಗೆ ಸಚಿವರು ಇದ್ದರೆ ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ಸುಲಭ ಎನ್ನುವ ಕಾರಣಕ್ಕೆ ಸಚಿವರನ್ನು ಕಳುಹಿಸಿಕೊಡಲು ತೀರ್ಮಾನಿಸಲಾಗಿತ್ತು. ಹಿಂದಿ, ಇಂಗ್ಲಿಷ್ ಭಾಷೆ, ಸಾಹಸ ಮನೋಭಾವದ ವ್ಯಕ್ತಿ ಸಂತೋಷ ಲಾಡ್ ಎನಿಸಿ ಅವರನ್ನು ಕಳುಹಿಸಿಕೊಡಲಾಯಿತು. ಬದರಿನಾಥದಿಂದ ಜೋಷಿಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಸುರಕ್ಷಿತವಾಗಿ ಕರೆ ತರಲು ಎರಡು ಹೆಲಿಕಾಪ್ಟರ್ಗಳನ್ನು ರಾಜ್ಯ ಸರ್ಕಾರ ಕಳುಹಿಸಿಕೊಟ್ಟಿತ್ತು. ಇದರಿಂದಾಗಿ ಇದುವರೆಗೂ ರಾಜ್ಯದ 450 ಯಾತ್ರಿಗಳನ್ನು ಸುರಕ್ಷಿತವಾಗಿ ಕರೆ ತರಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಜೂನ್ 21 ರಿಂದ 13 ದಿನಗಳ ಕಾಲ ಉತ್ತರಾಖಂಡದಲ್ಲಿ ಉಳಿದು ಕನ್ನಡಿಗರು ಸೇರಿದಂತೆ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ ಜನರ ರಕ್ಷಣೆಯಲ್ಲಿ ನಿರಂತರವಾಗಿ ತೊಡಗಿದ್ದ ಸಚಿವ ಸಂತೋಷ ಲಾಡ್ ಹಾಗೂ ಅಧಿಕಾರಿಗಳ ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧನ್ಯವಾದ ಹೇಳಿದರು. ಜನರನ್ನು ರಕ್ಷಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದ್ದು ಅದನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು. ದೆಹಲಿಯಿಂದ ಆಗಮಿಸಿರುವ ಎಲ್ಲರನ್ನು ಶಿಕ್ಷಕರ ಸದನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು ನಾಳೆ ಅವರವರ ಊರುಗಳಿಗೆ ಕಳುಹಿಸಲಾಗುವುದು.
ಯಾತ್ರಿಗಳ ರಕ್ಷಣೆಯಲ್ಲಿ ರಾಜ್ಯ ಸರ್ಕಾರ ತನ್ನ ಕರ್ತವ್ಯ ನಿರ್ವಹಿಸಿದೆ. ಯಾತ್ರಿಗಳು ಸುರಕ್ಷಿತವಾಗಿ ಬಂದಿರುವುದು ಸಂತೋಷ. ನಾಪತ್ತೆಯಾಗಿರುವ 14 ಯಾತ್ರಿಗಳ ಹುಡುಕಾಟಕ್ಕೆ ಉತ್ತರಾಖಂಡ ಸರ್ಕಾರದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ನಾನು ನನ್ನ ಇಬ್ಬರು ಸಂಬಂಧಿಕರೊಂದಿಗೆ ಬದರಿನಾಥದಲ್ಲಿದ್ದೆವು. ಯಾವಾಗ ಊರು ತಲುಪುತ್ತೇವೆ ಎನ್ನುವ ಕಾತರವಿತ್ತು. ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ ನೆರವಿಗೆ ಬಂದು ಹೆಲಿಕಾಪ್ಟರ್ ಮೂಲಕ ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುತ್ತಿತ್ತು.
-ವಿದ್ಯಾ ಓಂಕಾರ, ಬಿಜಾಪುರ ಯಾತ್ರಿ
ಇನ್ನೂ ಹದಿನಾಲ್ಕು ಜನ ನಾಪತ್ತೆ
ಮಂಡ್ಯ ಜಿಲ್ಲೆ ಮದ್ದೂರಿನ ಒಂದೇ ಕುಟುಂಬದ 13 ಜನ ಹಾಗೂ ಮಂಗಳೂರಿನ ಒಬ್ಬ ಯಾತ್ರಿ ಇದುವರೆಗೂ ಪತ್ತೆಯಾಗಿಲ್ಲ. ಬದರಿನಾಥದಿಂದ ಜೋಷಿಮಠದ ಕಡೆ ಆಗಮಿಸುವ ವೇಳೆ ಮಳೆ ಸುರಿಯುತ್ತಿತ್ತು. ಅದೇ ಕೊನೆಯ ಬಾರಿ ಯಾತ್ರಿಗಳೊಂದಿಗೆ ಮಂಡ್ಯದ ಸಂಬಂಧಿಗಳು ದೂರವಾಣಿ ಮೂಲಕ ಮಾತನಾಡಿದ್ದರು. ಅವರ ಹುಡುಕುವ ಪ್ರಯತ್ನಗಳು ಫಲ ನೀಡಿಲ್ಲ.
ಯೋಧನ ಶವ ಪತ್ತೆಯಾಗಿಲ್ಲ
ರಕ್ಷಣಾ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮನಾದ ಐಟಿಬಿಪಿ ಯೋಧ ಗದಗ ಮೂಲದ ಬಸವರಾಜ್ ಯರಗಟ್ಟಿ ಶವ ಇನ್ನು ಪತ್ತೆಯಾಗಿಲ್ಲ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ಬಸವರಾಜ್ ಪೋಷಕರ ಡಿಎನ್ಎ ಮಾದರಿಯನ್ನು ಘಟನಾ ಸ್ಥಳದಲ್ಲಿ ದೊರಕಿದ ಶವಗಳ ಮಾದಿರಯೊಂದಿಗೆ ಹೋಲಿಕೆ ಮಾಡಿದಾಗ ಹೋಲಿಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ ಎಂದು ಅವರು ತಿಳಿಸಿದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭಾರತೀಯ ವಾಯುಸೇನಾ ಹೆಲಿಕಾಪ್ಟರ್ ಪತನವಾದ ಸ್ಥಳದಿಂದ ಕೆಲವು ನಿಮಿಷಗಳ ಮುಂಚೆ ನಾವು ಪಾಸ್ ಆಗಿದ್ದೆವು. ಮಂಜು ಮುಸುಕಿದ ವಾತಾವರಣದ ನಡುವೆ ಹೆಲಿಕಾಪ್ಟರ್ಗಳ ಹಾರಾಟ ದುಸ್ತರವಾಗಿತ್ತು. ನಾವು ಹೆಲಿಕಾಪ್ಟರ್ನಿಂದ ಕೆಳಗೆ ಇಳಿಯುತ್ತಿದ್ದಂತೆ ಸೇನಾ ಹೆಲಿಕಾಪ್ಟರ್ ಪತನವಾಗಿರುವ ಸುದ್ದಿ ಬಂತು. 13 ದಿನಗಳ ಕಾಲ ಪ್ರತಿಕೂಲ ಹವಾಮಾನದಲ್ಲೂ ದೇವರ ದಯೆಯಿಂದ ನನ್ನ ಆರೋಗ್ಯ ಚೆನ್ನಾಗಿತ್ತು.
-ಸಂತೋಷ್ ಲಾಡ್, ವಾರ್ತಾ ಸಚಿವ
ಮಳೆ ಸುರಿಯುತ್ತಿರುವುದು ಹಾಗೂ ಜನರ ಸಾವಿನ ಸುದ್ದಿ ಕೇಳಿ ವಾಪಸ್ ಬೆಂಗಳೂರಿಗೆ ಆಗಮಿಸುವ ಭರವಸೆ ಇರಲಿಲ್ಲ. ವಿದ್ಯುತ್, ಮೊಬೈಲ್ ನೆಟವರ್ಕ್, ದುಡ್ಡು, ಕುಡಿಯಲು ನೀರು ಯಾವುದೂ ಸಿಗುತ್ತಿರಲಿಲ್ಲ. ಈ ವೇಳೆ ಪೇಜಾವರಶ್ರೀಗಳು ಸ್ಥಳೀಯ ಮಠದಿಂದ ನಮಗೆ ಆಹಾರದ ವ್ಯವಸ್ಥೆ ಮಾಡಿದ್ದರು. ಸಂತೋಷ ಲಾಡ್ ಬಂದ ಬಳಿಕ ನಮಗೆ ಧೈರ್ಯ ಬಂತು.
- ಅಡವಿ ಆಚಾರ್ಯ, ಬೆಂಗಳೂರು ಯಾತ್ರಿ
ನಾಪತ್ತೆಯಾದವರು ಹೆಸರುಗಳು ಮಂಡ್ಯ ಜಿಲ್ಲೆ ಮದ್ದೂರಿನವರಾದ
ನಮ್ಮ ತಂಡದಿಂದ ಒಟ್ಟು 125 ಜನ ಯಾತ್ರೆಗೆ ತೆರಳಿದ್ದೆವು. ಮೂರು ದಿನಗಳ ಕಾಲ ಎಲ್ಲೂ ಹೋಗಲು ಸಾಧ್ಯವಾಗಲಿಲ್ಲ. ತೊಂದರೆಗೆ ಸಿಲುಕಿದವರಿಗೆ ಸೇನೆ ಹಾಗೂ ಅಧಿಕಾರಿಗಳು ಸಹಾಯ ಮಾಡುತ್ತಿದ್ದರಾದರೂ ಅದು ಸರಿಯಾಗಿ ದೊರಕುತ್ತಿರಲಿಲ್ಲ. ಎಲ್ಲಾ ಸಂಕಷ್ಟದಿಂದ ಪಾರಾಗಿ ಬಂದಿರುವುದಕ್ಕೆ ಖುಷಿಯಾಗಿದೆ.
-ಪಾಂಡುರಂಗರಾವ್, ಯಾತ್ರಿ ಬೆಂಗಳೂರು
ಎಂ.ಜಿ.ನಾಗರಾಜ್ (66), ಸುಮಾ ನಾಗರಾಜ್ (55), ಎಂ.ಎನ್.ನಾಗಶ್ರೀ ನಾಗರಾಜ್ (33), ಅತುಲ್ ಚಂದ್ರ (10), ಹಮೀತ್ ಚಂದ್ರ (5), ಲತಾ ಸೀತಾರಾಮ್ (52), ಎಂ.ಜಿ.ಗುರುರಾಜ್ (58), ಉಮಾ ಗುರುರಾಜ್ (51), ವಸಂತಕುಮಾರ್ ಎಸ್.ಪಿ (59), ಗೀತಾ (53), ಎಂ.ಜಿ.ರಮೇಶ (49), ಲಕ್ಷ್ಮೀ (40), ಅನಿರುದ್ಧ (11) ಹಾಗೂ ಮಂಗಳೂರಿನ ರವಿಕಿರಣ್.