ಪ್ರವಾಹ ನೋಡಲು ಬಂದು ನೀರುಪಾಲಾದರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ವರು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಬ್ಬ ಸೇರಿ ಒಟ್ಟು ಐವರು ಮಳೆಗೆ ಗುರುವಾರ ಬಲಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು, ಚಿಕ್ಕಮಗಳೂರಿನ ಒಬ್ಬ ಮಳೆಗೆ ಬಲಿ ಹಲವೆಡೆ ಭೂ ಕುಸಿತ
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ವರು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಬ್ಬ ಸೇರಿ ಒಟ್ಟು ಐವರು ಮಳೆಗೆ ಗುರುವಾರ ಬಲಿಯಾಗಿದ್ದಾರೆ.
ದ.ಕ. ಜಿಲ್ಲೆಯ ಅಮ್ಮುಂಜೆ ಗ್ರಾಮದ ಬಡಕಬೈಲು ಎಂಬಲ್ಲಿ ಇಬ್ರಾಹಿಂ ಎಂಬವರ ಮಗ ಅಬ್ದುಲ್ ರಝಾಕ್ (23) ಹಾಗೂ ಅಬೂಬಕರ್ ಎಂಬವರ ಮಗ ಇಜಾಝ್ (19) ನೇತ್ರಾವತಿ ನದಿಯ ಪ್ರವಾಹ ಪಾಲಾಗಿದ್ದಾರೆ. ಬಡಕಬೈಲು ಮಸೀದಿಯಿಂದ ನಾಲ್ಕು ಮಂದಿ ಯುವಕರು ಪ್ರವಾಹ ವೀಕ್ಷಿಸಲೆಂದು ಹೋದವರು ಆ ನೀರಿನಲ್ಲಿ ಕೈಕಾಲು ತೊಳೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಅಶ್ಫಕ್ ಹಾಗೂ ಹಸನ್ ಎಂಬವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ರಝಾಕ್ ಹಾಗೂ ಇಜಾಝ್ ನೀರುಪಾಲಾಗಿದ್ದಾರೆ. ಮಳೆಯ ಪ್ರವಾಹ ಹರಿಯುತ್ತಿದ್ದ ನೇತ್ರಾವತಿ ನದಿಗೆ ಬಿದ್ದು ಹರೇಕಳ ಕೊಜಪಾಡಿ ನಿವಾಸಿ ಖಲಂದರ್(21)ಗುರುವಾರ ಮೃತಪಟ್ಟಿದ್ದಾರೆ. ಸಂಜೆ ನದಿ ದಂಡೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಆಯತಪ್ಪಿ ನದಿಗೆ ಬಿದ್ದಿದ್ದರು. ಅಲ್ಲಿ ನೀರಿನಲ್ಲಿ ಮುಳುಗಿ ಕೆಸರಿನಲ್ಲಿ ಸಿಲುಕಿ ಸಾವಿಗೀಡಾದರು ಎನ್ನಲಾಗಿದೆ. ಈತ ಸ್ಥಳೀಯವಾಗಿ ಎಲೆಕ್ಟ್ರಿಕಲ್ ಕೆಲಸ ನಿರ್ವಹಿಸುತ್ತಿದ್ದನು. ಸ್ಥಳೀಯರು ಆಗಮಿಸಿ ನದಿಯಿಂದ ಆತನ ಶವವನ್ನು ಮೇಲಕ್ಕೆತ್ತಿದ್ದಾರೆ. ಮತ್ತೊಂದೆಡೆ ಬೆಳ್ತಂಗಡಿ ತಾಲೂಕಿನ ನಾವೂರಿನ ಮಹಾಬಲ ಮೂಲ್ಯ ಎಂಬುವರು ನದಿ ದಾಟುತ್ತಿದ್ದಾಗ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಇದೇ ವೇಳೆ, ಚಿಕ್ಕಮಗಳೂರು ಜಿಲ್ಲೆಯ ಬನ್ನೂರು ತೆಪ್ಪದಂಗಡಿ ಬಳಿ ನೆರೆಗೆ ಸಿಲುಕಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಿವಾಸಿ ಜುಲ್ಫಿಕರ್ ಎಂಬಾತ ಸಾವಿಗೀಡಾಗಿದ್ದಾರೆ.
ಮಳವೂರು ಡ್ಯಾಂ ಬ್ಲಾಕ್: ಮಳವೂರಿನ ಅಣೆಕಟ್ಟೆಯಲ್ಲಿ ಕಸಕಡ್ಡಿ, ಮರತುಂಡು, ಹೂಳು ತುಂಬಿ ಬ್ಲಾಕ್ ಆಗಿದ್ದು, ನೀರು ಹತ್ತಿರದ ಮನೆಗಳಿಗೆ ನುಗ್ಗಿದೆ. ಗುತ್ತಿಗೆ ಕಂಪನಿಯ ಕಚೇರಿ ಜಲಾವೃತವಾಗಿದೆ. 10 ರಿಂದ 15 ಮನೆ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಇದೇ ರೀತಿ ಅಡ್ಡೂರು, ಕೊಳಂಬೆ, ಆದ್ಯಪಾಡಿ ಕುದ್ರುಗಳಲ್ಲಿ ಪ್ರವಾಹದ ಆಟಾಟೋಪ ನಡೆದಿದೆ. ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಪ್ರವಾಹ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದ.ಕ.ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ಜು.5ರಂದು ರಜೆ ಸಾರಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಾಶ್ ತಿಳಿಸಿದ್ದಾರೆ. ಮಂಗಳೂರು ನಗರ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಭಾರಿ ಮಳೆ ಹಿನ್ನಲೆಯಲ್ಲಿ ಗುರುವಾರ ಮಧ್ಯಾಹ್ನ ರಜೆ ನೀಡಲಾಯಿತು. ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳ ಶಾಲೆಗಳಿಗೆ ಗುರುವಾರ ರಜೆ ಸಾರಲಾಗಿತ್ತು.
ಸುಬ್ರಹ್ಮಣ್ಯ ಭಾಗಶಃ ದ್ವೀಪ: ಸುಬ್ರಹ್ಮಣ್ಯ ಪರಿಸರ, ಕುಮಾರಪರ್ವತ ಹಾಗೂ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಗಾಳಿ ಮಳೆಯಿಂದ ಪ್ರವಾಹ ಉಂಟಾಗಿ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಭಾಗಶಃ ದ್ವೀಪದಂತಾಗಿದ್ದು, ಸಂಜೆ ವೇಳೆಗೆ ನೆರೆ ಇಳಿಮುಖವಾಗಿದೆ.
ಕಾವೇರಿ ರೌದ್ರಾವತಾರ
ವರ್ಷಧಾರೆಗೆ ಕಾವೇರಿ ರೌದ್ರರೂಪ ತಾಳಿದ್ದು, ತವರು ಜಿಲ್ಲೆ ಕೊಡಗು ನಲುಗಿದೆ. ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಭಾಗಮಂಡಲ ದ್ವೀಪದಂತಾಗಿದ್ದರೆ, ಹಲವಾರು ಗ್ರಾಮಗಳು ನದಿ ಪ್ರವಾಹದಿಂದಾಗಿ ಸಂಪರ್ಕವನ್ನೇ ಕಡಿದುಕೊಂಡಿವೆ. ಭಾಗಮಂಡಲದಲ್ಲಿ ಪ್ರವಾಹದ ಮಧ್ಯೆ ಮೋಟಾರ್ ಬೋಟ್ ಹಾಳಾಗಿ ಪ್ರಯಾಣಿಕರು ಜೀವ ಭಯ ಅನುಭವಿಸಿದ ಘಟನೆಯೂ ನಡೆದಿದೆ. ಮಳೆ ದೈವ ಪಾಡಿ ಇಗ್ಗುತ್ತಪ್ಪ ದೇವಾಲಯ ವ್ಯಾಪ್ತಿಯೂ 10 ವರ್ಷಗಳ ಬಳಿಕ ನೀರಿನಿಂದ ಆವೃತವಾಗಿದೆ. ಮಳೆ, ನೆರೆ ಸಂತ್ರಸ್ತರ ನೆರವಿಗೆ ಬಾರದ ಜಿಲ್ಲಾಡಳಿತದ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದ್ವೀಪವಾದ ಭಾಗಮಂಡಲ: ಗ್ರಾಮೀಣ ಪ್ರದೇಶಗಳು ಮಳೆ ಆರ್ಭಟಕ್ಕೆ ನಲುಗಿವೆ. ಭಾಗಮಂಡಲದಲ್ಲಿ ಕಾವೇರಿ ನದಿ ನೀರು ಪ್ರವಾಹೋಪಾದಿಯಲ್ಲಿ ಸಾಗಿದ್ದು, ಭಾಗಮಂಡಲದಿಂದ ಮಡಿಕೇರಿಗೆ ಮತ್ತು ಭಾಗಮಂಡಲದಿಂದ ನಾಪೋಕ್ಲಿಗೆ ತೆರಳುವ ರಸ್ತೆಗಳ ಮೇಲೆ ನೀರಿನ ಹರಿವಿನಿಂದಾಗಿ ಭಗಂಡಕ್ಷೇತ್ರಕ್ಕೆ ವಾಹನ ಸಂಚಾರ ಸ್ಥಗಿತಗೊಂಡಿದೆ.
16 ಗ್ರಾಮಗಳಿಗೆ ಸಂಪರ್ಕ ಕಡಿತ: ಭಾಗಮಂಡಲದಲ್ಲಿ ನಡುಮಟ್ಟಕ್ಕೆ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಈ ವ್ಯಾಪ್ತಿಯ ಸಣ್ಣಪುಲಿಕೋಟು, ದೊಡ್ಡ ಪುಲಿಕೋಟು, ಕೋರಂಗಾಲ ಸೇರಿದಂತೆ ಸುಮಾರು 16 ಗ್ರಾಮಗಳಿಗೆ ಸಂಚಾರ ಕಡಿತಗೊಂಡಿದೆ. ಈ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕವೂ ನಿಲುಗಡೆಗೊಂಡಿದ್ದು, ಹೊರಜಗತ್ತಿನ ಸಂಪರ್ಕವೇ ಅನೇಕ ಗ್ರಾಮಗಳಿಗೆ ಇಲ್ಲದಂತಾಗಿದೆ. ಸಿದ್ದಾಪುರ, ಬಲಮುರಿ, ಮೂರ್ನಾಡು, ಕುಶಾಲನಗರ ಹೀಗೆ ಕಾವೇರಿ ನದಿ ಹರಿವಿನ ಪ್ರದೇಶಗಳಲ್ಲಿ ಎಲ್ಲಿ ನೋಡಿದರೂ ಕಾವೇರಿ ಪ್ರವಾಹದ ರೌದ್ರ ರೂಪವೇ ಕಂಡುಬರುತ್ತಿದೆ. ಅಲ್ಲಲ್ಲಿ ಭೂಕುಸಿತದ ದೃಶ್ಯಗಳೂ ಸಾಮಾನ್ಯವಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ನಗರದ ರಸ್ತೆಗಳು ಗುಂಡಿಬೀಳುತ್ತಿದ್ದರೆ, ಭೂಕುಸಿತ ಭೀತಿಯಲ್ಲಿ ಮಡಿಕೇರಿಯ ಬೆಟ್ಟದ ಜೀವಿಗಳಿದ್ದಾರೆ.
ಪೂಜಾರಿ ಮನೆಯೂ ಜಲಾವೃತ
ದ.ಕ.ಜಿಲ್ಲೆಯ ಬಸ್ತಿಪಡ್ಪುನಲ್ಲಿರುವ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ನಿವಾಸಕ್ಕೂ ಪ್ರವಾಹ ನೀರು ನುಗ್ಗಿದ್ದು, ಅವರ ಪತ್ನಿ ಹಾಗೂ ಮೊಮ್ಮಕ್ಕಳನ್ನು ಮುಂಜಾನೆ ಅಗ್ನಿಶಾಮಕದಳದ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಹಾಗೆಯೇ ಬಂಟ್ವಾಳ ಎಸ್‌ವಿಎಸ್ ದೇವಳ ಶಾಲೆ ಬಳಿ ಪಾಂಡುರಂಗ ಎಂಬವರ ಮನೆಯೂ ಮುಳುಗಡೆಯಾಗಿದ್ದು, ಅಲ್ಲಿದ್ದ ನಾಲ್ಕು ಮಂದಿಯನ್ನು ಅಗ್ನಿಶಾಮಕದಳದ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಕೆಆರ್‌ಎಸ್‌ನಲ್ಲೀಗ 95 ಅಡಿ ನೀರು
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ(ಕೆಆರ್‌ಎಸ್) ಅಣೆಕಟ್ಟೆಯ ನೀರಿನ ಮಟ್ಟ 95 ಅಡಿಗೆ ಏರಿದೆ. ಕೊಡಗು ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಸುಮಾರು 25 ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದೆ. ಹೊರ ಹರಿವಿನ ಪ್ರಮಾಣ ಕೇವಲ 1489 ಕ್ಯುಸೆಕ್ ಇದೆ. ಇದೇ ಮೊದಲ ಬಾರಿಗೆ ಜುಲೈ ತಿಂಗಳ ಮೊದಲ ವಾರದಲ್ಲಿ ಅಣೆಕಟ್ಟೆಗೆ ಭಾರಿ ಪ್ರಮಾಣ ನೀರು ಹರಿದು ಬರುತ್ತಿದೆ. ಅಣೆಕಟ್ಟೆಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ವಿ.ಸಿ. ನಾಲೆಗಳಿಗೆ ನೀರು ಬಿಡುವ ಸಾಧ್ಯತೆ ಇದೆ. ಇದೇ ಪ್ರಮಾಣದಲ್ಲಿ ನೀರು ಹರಿದು ಬಂದರೆ ಭಾನುವಾರದೊಳಗೆ ಅಣೆಕಟ್ಟೆಗೆ 100 ಅಡಿ ನೀರು ಬರಬಹುದು ಎಂಬ ನಿರೀಕ್ಷೆ ಇದೆ.
ಉಕ್ಕಿ ಹರಿದ ನೇತ್ರಾವತಿ, ಕುಮಾರಧಾರ
ಉಪ್ಪಿನಂಗಡಿ ಪರಿಸರದಲ್ಲಿ ನೇತ್ರಾವತಿ ಮತ್ತು ಕುಮಾರಧಾರ ನದಿಗಳೆರಡೂ ಉಕ್ಕಿ ಹರಿದಿದ್ದು, ಧಾರ್ಮಿಕವಾಗಿ ಮಹತ್ವವನ್ನು ಪಡೆದಿರುವ ಉಭಯ ನದಿಗಳು ಶ್ರೀ ಸಹಸ್ರಲಿಂಗೇಶ್ವರ ದೇವಳದ ಎದುರು ಬುಧವಾರ ಮಧ್ಯರಾತ್ರಿ 1.45 ರ ಸುಮಾರಿಗೆ ಸಂಗಮಗೊಂಡಿತು. ನೇತ್ರಾವತಿ ಮತ್ತು ಕುಮಾರಾಧಾರ ನದಿಗಳೆರಡೂ ತುಂಬಿ ಹರಿಯುತ್ತಿರುವ ಪರಿಣಾಮ ಉಪ್ಪಿನಂಗಡಿ, ಮತ್ತು ಸುತ್ತಮುತ್ತಲಿನ ಪ್ರದೇಶಗಳ ಹಲವು ಮನೆಗಳು ಜಲಾವೃತಗೊಂಡಿದೆ.