8 ಮಂದಿ ಜಲಸಮಾಧಿ
ಸ್ಟೇರಿಂಗ್ ಲಿಂಕ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಸಾರಿಗೆ ಸಂಸ್ಥೆ ಬಸ್‌ವೊಂದು ಕೆರೆಗೆ ಉರುಳಿ ಬಿದ್ದ ಪರಿಣಾಮ...
- ಬೇಲೂರಿನ ವಿಷ್ಣುಸಮುದ್ರ ಕೆರೆಗೆ ಉರುಳಿದ ಸಾರಿಗೆ ಸಂಸ್ಥೆ ಬಸ್.
- ಸ್ಟೇರಿಂಗ್ ಲಿಂಕ್ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ದುರಂತ.
- ಅಸುನೀಗಿದವರ ಕುಟುಂಬಕ್ಕೆ ತಲಾ 3 ಲಕ್ಷ ರು. ಪರಿಹಾರ
ಕನ್ನಡಪ್ರಭ ವಾರ್ತೆ, ಬೇಲೂರು, ಜು.23-
ಸ್ಟೇರಿಂಗ್ ಲಿಂಕ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಸಾರಿಗೆ ಸಂಸ್ಥೆ ಬಸ್‌ವೊಂದು ಕೆರೆಗೆ ಉರುಳಿ ಬಿದ್ದ ಪರಿಣಾಮ ಬಸ್ ನಿರ್ವಾಹಕ ಸೇರಿದಂತೆ 8 ಮಂದಿ ಜಲಸಮಾಧಿಯಾಗಿದ್ದು, 45 ಮಂದಿ ಗಾಯಗೊಂಡಿರುವ ದಾರುಣ ಘಟನೆ ಹಾಸನ ಜಿಲ್ಲೆ ಬೇಲೂರು ಪಟ್ಟಣದ ಬಳಿ ಮಂಗಳವಾರ ನಡೆದಿದೆ.
ಮೃತರನ್ನು ಕಡೆಗರ್ಜೆಯ ಶಾಲಾ ವಿದ್ಯಾರ್ಥಿನಿ ವಿವಿನಪಿಂಟೋ, ಅರೇಹಳ್ಳಿಯ ಮಹಮದ್, ಸಿಂಗಟಕೆರೆ ಲೋಕೇಶ್ ನಾಯಕ್, ವೆಂಕಟಪೇಟೆಯ ಸೌಮ್ಯ, ಇಂಟಿತೊಳಲು ತಮ್ಮಣ್ಣಗೌಡ, ನಂದಗೋಡನಹಳ್ಳಿ ಗೋಪಾಲ್, ಬಿಕ್ಕೋಡು ಯಶೋಧ ಹಾಗೂ ಬಸ್ ನಿರ್ವಾಹಕ ಜಾವಗಲ್ ವಿಶ್ವನಾಥ್ ಎಂದು ಗುರುತಿಸಲಾಗಿದೆ. ಗಾಯಗೊಂಡ 45 ಜನರನ್ನು ಬೇಲೂರು ತಾಲೂಕು ಆಸ್ಪತ್ರೆ, ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಏನಾಯ್ತು?: ಸಕಲೇಶಪುರದಿಂದ 8ಗಂಟೆಗೆ ಹೊರಡುವ ಕೆಎಸ್‌ಆರ್‌ಟಿಸಿ ಬಸ್ ಅರೇಹಳ್ಳಿಗೆ 9 ಗಂಟೆಗೆ ಬಂದು ನಂತರ ಬಿಕ್ಕೋಡು ಮಾರ್ಗವಾಗಿ ಬೇಲೂರಿಗೆ 10 ಗಂಟೆಗೆ ತಲುಪುತ್ತದೆ. ಹಾಸನ, ಬೇಲೂರು ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಈ ಬಸ್‌ನಲ್ಲೇ ಸಂಚರಿಸುತ್ತಾರೆ.
ಮಂಗಳವಾರ ಎಂದಿನಂತೆ ಅರೇಹಳ್ಳಿ, ಬಿಕ್ಕೋಡಿನಲ್ಲಿ ಶಾಲಾ- ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಸೇರಿದಂತೆ ಸುಮಾರು 65 ಪ್ರಯಾಣಿಕರು ಹತ್ತಿದ್ದಾರೆ. ಇನ್ನೇನು ಬೇಲೂರು ಪಟ್ಟಣ ತಲುಪಲು ಒಂದೆರಡು ಕಿ.ಮೀ. ಬಾಕಿ ಇದೆ ಎನ್ನುವಾಗಲೇ 9.50ರ ಸುಮಾರಿಗೆ ವಿಷ್ಣುಸಮುದ್ರ ಕೆರೆ (ಬಿಷ್ಠಮ್ಮನ ಕೆರೆ) ಬಳಿ ಬರುತ್ತಿದ್ದಂತೆ ಬಸ್‌ನ ಸ್ಟೇರಿಂಗ್ ಲಿಂಕ್ ಕಟ್ಟಾಗಿದೆ. ಇದರಿಂದ ಕಂಗಾಲಾದ ಚಾಲಕ ಸುರೇಶ್ ನಿಯಂತ್ರಣ ತಪ್ಪಿ ಕ್ಷಣಾರ್ಧದಲ್ಲೇ ಕೆರೆ ಏರಿ ದಿಣ್ಣೆ ಏರಿದ ಬಸ್ ಉರುಳಿ ಬಿದ್ದಿದೆ.
ಮುಳುಗಿ ಹೋಗಿದ್ದರು: ಬಸ್‌ನಲ್ಲಿದ್ದ ಪ್ರಯಾಣಿಕರು ಏನಾಗುತ್ತಿದೆ ಎಂದು ಅರಿಯುವ ಹೊತ್ತಿಗೆ ಬಸ್ ನೀರಿನಲ್ಲಿ ಮುಳುಗಿ ಹೋಗಿತ್ತು. ಕೆಳಮುಖವಾಗಿ ಬಸ್ ಉರುಳಿ ಬಿದ್ದಿದ್ದರಿಂದ ಬಾಗಿಲು ಸಹ ತೆರೆಯಲು ಸಾಧ್ಯವಾಗಲಿಲ್ಲ. ಸುಮಾರು 20ಕ್ಕೂ ಹೆಚ್ಚು ಜನ ಬಸ್‌ನ ಕಿಟಕಿ ಗಾಜುಗಳನ್ನು ಒಡೆದು ಹೊರ ಬಂದು ಈಜಿ ದಡ ಸೇರಿದರು.
ಅಪಾಯದಲ್ಲೂ ಸಾಹಸ ಮೆರೆದ ಚಾಲಕ!
ಬಸ್ ಕೆರೆಗೆ ಬೀಳುತ್ತಿದ್ದಂತೆ ಎದೆಗುಂದದ ಚಾಲಕ ಸುರೇಶ್ ಬಸ್‌ನಿಂದ ಹೊರಬಂದು ಕಿಟಕಿಯ ಗಾಜು ಒಡೆದಿದ್ದಾನೆ. ಇದರಿಂದ 20ಕ್ಕೂ ಹೆಚ್ಚು ಪ್ರಯಾಣಿಕರು ಹೊರ ಬಂದು ದಡ ಸೇರಿದ್ದಾರೆ. ಕೆಲವರನ್ನು ಬಸ್‌ನಿಂದ ಹೊರ ಹಾಕಿದ್ದಾನೆ. ಸೌಜನ್ಯ ಎಂಬವಳನ್ನು ದಡ ಸೇರಿಸಿದ್ದಾನೆ. ಚಾಲಕನ ವಿರುದ್ಧ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ
'ಕನ್ನಡಪ್ರಭ' ಮೊದಲೇ ಎಚ್ಚರಿಸಿತ್ತು
2010, ಡಿ.14ರಂದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಉಣ್ಬತ್ತಿನ ಕೆರೆ ದುರಂತ ಸಂಭವಿಸಿದ ವೇಳೆ 'ಕನ್ನಡಪ್ರಭ' 'ಮೃತ್ಯುಕೂಪ' ಎಂಬ ಸರಣಿ ವರದಿ ಪ್ರಕಟಿಸಿ ಕೆರೆಗಳಿಗೆ ತಡೆಗೋಡೆ ನಿರ್ಮಿಸುವಂತೆ ಎಚ್ಚರಿಸಿತ್ತು. ಅದರಲ್ಲಿ ವಿಷ್ಣುಸಮುದ್ರ ಕೆರೆ ಕೂಡ ಸೇರಿತ್ತು. ಅಂದಿನ ವರದಿ ಆಧರಿಸಿ ಜಿಲ್ಲಾಡಳಿತ ಎಚ್ಚೆತ್ತಿದ್ದರೆ ಇಂಥ ಅವಘಡ ಸಂಭವಿಸುತ್ತಲೇ ಇರಲಿಲ್ಲ.