ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಜಕಾರಣಿಗಳಿಂದಲೇ ಭೂ ಕಬಳಿಕೆ!

ರಾಜಕಾರಣಿಗಳು, ಅವರ ಹಿಂಬಾಲಕರು, ಹಿತೈಷಿಗಳೂ ಸರ್ಕಾರಿ ಭೂ ಕಬಳಿಕೆಯಲ್ಲಿ ಇದ್ದಾರೆ. ಇದರಲ್ಲಿ ಪಕ್ಷ ಭೇದ ಇಲ್ಲ....

Srinivasa Murthy VN
Updated On : 24 Jul 2013, 1:06 am

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜು.23-
ರಾಜಕಾರಣಿಗಳು, ಅವರ ಹಿಂಬಾಲಕರು, ಹಿತೈಷಿಗಳೂ ಸರ್ಕಾರಿ ಭೂ ಕಬಳಿಕೆಯಲ್ಲಿ ಇದ್ದಾರೆ. ಇದರಲ್ಲಿ ಪಕ್ಷ ಭೇದ ಇಲ್ಲ. ಎಲ್ಲ ನಾಯಕರ ಜತೆ ಒಡನಾಟ ಇಟ್ಟುಕೊಂಡವರು ಭೂಮಿ ಕಬಳಿಸಿದ್ದಾರೆ. ಸರ್ಕಾರ ಸಮಯ ವ್ಯರ್ಥ ಮಾಡಬಾರದು. ಈ ನಿಟ್ಟಿನಲ್ಲಿ ಅತ್ಯಂತ ಕಠಿಣ ನಿರ್ಧಾರ ಮಾಡಬೇಕು...
ನನ್ನ ಅವಧಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ ಎಂದು ಹೇಳಿದ್ದೆ. ಒತ್ತಡದ ಪ್ರಶ್ನೆಯೇ ಇರಲಿಲ್ಲ. ಹೀಗಾಗಿ, 9000 ಎಕರೆ ಭೂಮಿ ವಾಪಸ್ ಪಡೆಯಲಾಯಿತು. ನಂತರ ಬಂದ ಸರ್ಕಾರಗಳು ಸಮಿತಿ ವರದಿಗಳತ್ತ ಗಮನಹರಿಸಲೇ ಇಲ್ಲ.
ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಸ್ಪಷ್ಟ ನುಡಿಗಳಿವು. 'ಕನ್ನಡಪ್ರಭ'ದಲ್ಲಿ ಪ್ರಕಟವಾದ ಒತ್ತು'ವರಿ' ಲೇಖನಮಾಲೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಎಚ್.ಡಿ. ಕುಮಾರಸ್ವಾಮಿ, ಈಗಾಗಲೇ ಸಾಕಷ್ಟು ಸಮಯ ವ್ಯರ್ಥ ಆಗಿದೆ. ಎ.ಟಿ. ರಾಮಸ್ವಾಮಿ ಹಾಗೂ ವಿ. ಬಾಲಸುಬ್ರಮಣಿಯನ್ ಕಾರ್ಯಪಡೆ ವರದಿಯಂತೆ ಈಗಲಾದರೂ ಸರ್ಕಾರ ತತ್‌ಕ್ಷಣದಿಂದಲೇ ಒತ್ತುವರಿ ತೆರವುಗೊಳಿಸಬೇಕು ಎಂದು ಹೇಳಿದ್ದಾರೆ.

ಸಂದರ್ಶನದ ಸಾರಾಂಶ: ನಾನು ಮುಖ್ಯಮಂತ್ರಿಯಾಗಿದ್ದಾಗ ಜಂಟಿ ಸದನ ಸಮಿತಿ ರಚನೆ ಮಾಡುವುದರಿಂದ ಏನೂ ಉಪಯೋಗಕ್ಕೆ ಬರುವುದಿಲ್ಲ ಎಂದಿದ್ದರು. ಆದರೂ, ಸ್ಪೀಕರ್ ಅವರಿಗೆ ಸದನ ಸಮಿತಿ ರಚನೆ ಮಾಡಿ ಎಂದು ನಾನೇ ಹೇಳಿದೆ. ಎ.ಟಿ. ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ಇತರೆ ಸದನ ಸಮಿತಿಗಳಿಗಿಂತ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಜಂಟಿ ಸದನ ಸಮಿತಿಯವರು ಕೊಟ್ಟ ಮಧ್ಯಂತರ ವರದಿ ಆಧಾರದ ಮೇಲೆ ಸುಮಾರು 9000 ಎಕರೆ ಭೂಮಿ ವಾಪಸ್ ಪಡೆದುಕೊಳ್ಳಲಾಯಿತು. ಕಂದಾಯ ಭೂಮಿ ಒತ್ತುವರಿ ಜತೆಗೆ ರಾಜ ಕಾಲುವೆಗಳು, ಕೆರೆ-ಕುಂಟೆಗಳ ಒತ್ತುವರಿ ತೆರವು ಮಾಡಲಾಯಿತು. ಸುಳ್ಳು ದಾಖಲೆ ಸೃಷ್ಟಿಸಿ ಅಮಾಯಕರಿಗೆ ಮಾರಾಟ ಮಾಡಿರುವ ಪ್ರಕರಣಗಳು ಸಾಕಷ್ಟಿವೆ. ಅಂತಹವರ ಮೇಲೆ ಕಠಿಣವಾದ ಕ್ರಮ ಕೈಗೊಳ್ಳುವಂತೆ ಸದನ ಸಮಿತಿ ಶಿಫಾರಸು ಮಾಡಿತ್ತು. ಅದರಂತೆ ಕಾರ್ಯ ನಿರ್ವಹಿಸಿದೆ.

ಕಾಲಮಿತಿ ನಿಗದಿ ಮಾಡಿ: ಕಾಫಿ ಪ್ಲಾಂಟರ್‌ಗಳು ಸಾಕಷ್ಟು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಅರಣ್ಯ ಭೂಮಿ ಯಾರಿಗೂ ಕೊಡಲು ಬರುವುದಿಲ್ಲ. ಅದನ್ನು ತೆರವುಗೊಳಿಸಬೇಕು. ಕಂದಾಯ ಭೂಮಿಯಲ್ಲಿ ಅವರು ಒತ್ತುವರಿ ಮಾಡಿಕೊಂಡಿದ್ದರೆ, ಅದಕ್ಕೊಂದು ದರ ನಿಗದಿ ಮಾಡಿ ವರ್ಷಕ್ಕೆ ಇಷ್ಟು ಎಂದು ಹಣ ಸಂದಾಯ ಮಾಡಿಸಿಕೊಳ್ಳಬೇಕು. ಅವರು ಅಲ್ಲಿ ಉತ್ತಮವಾದ ಬೆಳೆ ಹಾಕಿರುತ್ತಾರೆ. ಇದರಿಂದ ಪರಿಸರ ಉಳಿಸಿಕೊಂಡಂತಾಗುತ್ತದೆ. ಅವರನ್ನು ಒಕ್ಕಲೆಬ್ಬಿಸಿ ಅಡಕೆ, ಕಾಫಿ ಕಡಿಯುವುದು ಸರಿಯಲ್ಲ. ಇದಕ್ಕೊಂದು ಕಾಲಮಿತಿ ನಿಗದಿ ಮಾಡಿ, ಸದನಕ್ಕೆ ತರಬೇಕು. ಮುಂದೆಯೂ ಇಂತಹದ್ದೇ ಸಕ್ರಮ ಆಗುತ್ತದೆ ಎಂಬುದಕ್ಕೆ ಅವಕಾಶ ಬೇಡ.

ಬಿಡಿಎಗೆ ಸ್ವಾಧೀನವೇ ಬೇಕಿಲ್ಲ: ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಅವರ ಜೀವನವೆಲ್ಲ ದುಡಿದರೂ ಒಂದು ನಿವೇಶನ ಖರೀದಿಸಲು ಆಗುವುದಿಲ್ಲ. ಹೀಗಾಗಿ, ಈ ಒತ್ತುವರಿ ತೆರವು ಮಾಡಿದ ಭೂಮಿಯಲ್ಲಿ 700-800 ಎಕರೆ ಭೂಮಿಯನ್ನು ಬಿಡಿಎಗೇ ಮಂಜೂರು ಮಾಡಿದೆ. ಅಲ್ಲಿ ಬಹು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿ ಮನೆಗಳನ್ನು ನೀಡಿ ಎಂದು ಆದೇಶಿಸಿದ್ದೆ. ಆದರೆ ಯಾರೂ ಅತ್ತ ಗಮನ ಕೊಡಲೇ ಇಲ್ಲ.
2007ರಲ್ಲಿ ಬೆಂಗಳೂರಿನಲ್ಲಿ ಐದು ಬಡಾವಣೆ ನಿರ್ಮಾಣ ಮಾಡುವ ಘೋಷಣೆ ಮಾಡಿದೆ. ಇವತ್ತು ನಾವು ವಿ. ಬಾಲಸುಬ್ರಮಣಿಯನ್ ಹಾಗೂ ಎ.ಟಿ ರಾಮಸ್ವಾಮಿ ವರದಿ ನೋಡಿದರೆ, ಬೆಂಗಳೂರು ಹಾಗೂ ಸುತ್ತಮುತ್ತ ಬಡಾವಣೆ ನಿರ್ಮಿಸಲು ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುವ ಅಗತ್ಯವೇ ಇಲ್ಲ. ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿದ ಭೂಮಿಯಲ್ಲೇ  ವಸತಿ ಕಲ್ಪಿಸಬಹುದು. ಬಿಡಿಎಯಲ್ಲಿ 10 ವರ್ಷ 15 ವರ್ಷ ಬಡಾವಣೆ ರಚನೆಯೇ ಆಗುತ್ತಿಲ್ಲ. ಇಂದು ಅಗತ್ಯಕ್ಕಿಂತ ಹೆಚ್ಚಿನ ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿರುವುದೇ ಡಿನೋಟಿಫೈಗೆ ಕಾರಣವಾಗಿದೆ. ಉದಾಹರಣೆಗೆ ಕೆಂಪೇಗೌಡ ಬಡಾವಣೆಗಾಗಿ ಅಗತ್ಯಕ್ಕಿಂತ ಹೆಚ್ಚಾಗಿ 700-800 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. ನಂತರ ಡಿನೋಟಿಫೈ ಮಾಡಲಾಗುತ್ತದೆ. ಸ್ವಾಧೀನದ ಬಗ್ಗೆ ಸಂಶಯ ಮೂಡುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು.

ಬಡಾವಣೆ ನಿರ್ಮಾಣ ಮಾಡಿ:
ಬಿಡಿಎ ನಿವೇಶನಕ್ಕಾಗಿ ಬಡವರು ಅಥವಾ ನಿವೇಶನದಾರರು ಹಣ ಕಟ್ಟಿರುತ್ತಾರೆ. ಬಡಾವಣೆ ನಿರ್ಮಾಣವಾಗದೆಯೇ ಹಂಚಿಕೆ ಮಾಡುತ್ತಾರೆ. ಹೀಗಾಗಿ ಎಲ್ಲ ಸೌಲಭ್ಯ ಮೊದಲೇ ಮಾಡಿ, ನಂತರ ಹಂಚಿಕೆ ಮಾಡಬೇಕು. ಈಗ ಬಾಕಿ ಉಳಿದಿರುವ ಬಡಾವಣೆಗಳಲ್ಲಿ ತತಕ್ಷಣವೇ ಬಡಾವಣೆ ನಿರ್ಮಾಣ ಮಾಡಿ ನಿವೇಶನ ಹಂಚಿಕೆ ಮಾಡಬೇಕು. ಬೆಂಗಳೂರು ಹಾಗೂ ನಗರ ಪ್ರದೇಶಗಳಲ್ಲಿ ಸಾಕಷ್ಟು ಜಮೀನು ಗುತ್ತಿಗೆ ನೀಡಲಾಗಿದೆ. ಅವುಗಳ ಮೂಲ ಫೈಲೇ ಕಾಣೆ ಆಗುತ್ತಿವೆ.

- ಕೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement