ಸಾವಿನ ಸಮೀಪದಲ್ಲಿ ರಕ್ತಸ್ರಾವ ರೋಗಿ!
ಯಾವ ಶಾಪವೋ, ಅದ್ಯಾವ ಕರ್ಮವೋ ಏನೋ ಇವರ ಬದುಕಂತೂ ನಿತ್ಯ ನರಕ. ಇವರ ಕಾಯಿಲೆಗೆ ಔಷಧ ಮಾತ್ರ ಇಲ್ಲ.
ಬೆಂಗಳೂರು: ಯಾವ ಶಾಪವೋ, ಅದ್ಯಾವ ಕರ್ಮವೋ ಏನೋ ಇವರ ಬದುಕಂತೂ ನಿತ್ಯ ನರಕ. ಇವರ ಕಾಯಿಲೆಗೆ ಔಷಧ ಮಾತ್ರ ಇಲ್ಲವೇ ಇಲ್ಲ. ಇನ್ನು ಶಸ್ತ್ರಚಿಕಿತ್ಸೆಯ ಮಾತೂ ಇವರ ಪಾಲಿಗಿಲ್ಲ.
ರಕ್ತಸ್ರಾವ ತಂದೊಡ್ಡುವ 'ಹಿಮೋಫಿಲಿಯಾ' ಎಂಬ ಭಯಾನಕ ರೋಗಕ್ಕೆ ತುತ್ತಾದವರ ಕರುಣಾಜನಕ ಕಥೆ ಇದು.
ಏನು ಮಾಡುವಂತಿಲ್ಲ: ಈ ರೋಗಿಗಳ ರಕ್ತಸ್ರಾವ ನಿಲ್ಲಿಸಲು ಶಸ್ತ್ರ ಚಿಕಿತ್ಸೆ ಮಾಡುವಂತಿಲ್ಲ.
ಚುಚ್ಚುಮದ್ದು ಕೊಡುವಂತಿಲ್ಲ. ರಕ್ತಸ್ರಾವ ನಿಲ್ಲಬೇಕಾದರೆ ರಕ್ತವನ್ನೇ ನೀಡಬೇಕು.10,000 ಜನರಲ್ಲಿ ಒಬ್ಬರನ್ನು ಬೆನ್ನತ್ತುವ ಕಾಯಿಲೆ ಇದಾಗಿದೆ. ಇಂತಹ ರೋಗಿಗಳು ರಾಜ್ಯದಲ್ಲಿ ಆರು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ, ಗುರುತಿಗೆ ಸಿಕ್ಕವರು 2000 ಮಂದಿ ಮಾತ್ರ.
ವೈದ್ಯರು ಕಾಳಜಿ ವಹಿಸುತ್ತಿಲ್ಲ: ವಿಪರ್ಯಾಸವೆಂದರೆ, ಇವರಿಗೆ ರೋಗ ನಿಯಂತ್ರಿಸಬಹುದಾದ ರಕ್ತ ಹಾಗೂ ಔಷಧ ಎಲ್ಲೂ ಸಿಗುತ್ತಿಲ್ಲ. ನೋವಿನ ಸಂಗತಿ ಎಂದರೆ, ಈ ರೋಗಿಗಳ ಸಂಖ್ಯೆ ಕಡಿಮೆ ಎಂದು ಉದಾಸೀನ ಮಾಡಿರುವ ಆರೋಗ್ಯ ಇಲಾಖೆ ಹಿಮೋಫಿಲಿಯಾ ರೋಗಿಗಳಿಗೆ ಬೇಕಾದ ರಕ್ತದ ಅಂಶಗಳು ಹಾಗೂ ಔಷಧ ಖರೀದಿಸುತ್ತಲೇ ಇಲ್ಲ.ಖರೀದಿಸಿದರೂ ಒಂದೆರಡು ಆಸ್ಪತ್ರೆಗಳಿಗೆ ಅತ್ಯಲ್ಪ ಪ್ರಮಾಣದಲ್ಲಿ ಹಂಚಿಕೆ ಮಾಡಿ ಶಾಸ್ತ್ರ ಮುಗಿಸುತ್ತಿದೆ.
ಹೀಗಾಗಿ 2000ಕ್ಕೂ ಹೆಚ್ಚು ಹಿಮೋಫಿಲಾಯಿ ರೋಗಿಗಳು ನಿತ್ಯ ಜಿಲ್ಲಾಸ್ಪತ್ರೆಗಳಿಗೆ ಹೋಗಿ ವೈದ್ಯರನ್ನು ಗೋಗರೆಯುತ್ತಿದ್ದಾರೆ. ಆದರೆ ಜಿಲ್ಲಾ ವೈದ್ಯಾಧಿಕಾರಿಗಳು ಇವರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇನ್ನು ಕೆಲವು ಜಿಲ್ಲಾ ವೈದ್ಯರಿಗೆ ಈ ರೋಗದ ಬಗ್ಗೆ ಏನೇನೂ ತಿಳಿವಳಿಕೆ ಇಲ್ಲ. ಕೆಲವೆಡೆ ಹಿಮೋಫಿಲಿಯಾ ರೋಗಿಗಳು ಎಂದಾಕ್ಷಣ ವೈದ್ಯರು ಅವರ ಹತ್ತಿರಕ್ಕೂ ಸುಳಿಯುತ್ತಿಲ್ಲ.
ರಷ್ಯಾದ ನಂಟು?: ಹಿಮೋಫಿಲಿಯಾ ಕಾಯಿಲೆಗೆ ಭಾರಿ ಇತಿಹಾಸವೇ ಇದೆ. ಏಕೆಂದರೆ, ಮೊದಲು ಇದು ಪತ್ತೆಯಾಗಿದ್ದು ರಷ್ಯಾದಲ್ಲಿ. ಅದೂ ಅಲ್ಲಿನ ರಾಜ ದಂಪತಿಗೆ ಜನಿಸಿದ ಮಕ್ಕಳಲ್ಲಿ ಇದು ಪತ್ತೆಯಾಗಿತ್ತು. ಆನಂತರ ವಿವಿಧ ರಾಷ್ಟ್ರಗಳಲ್ಲಿ ಹಿಮೋಫಿಲಿಯಾ ಕಾಯಿಲೆ ಎಂದು ಗುರುತಿಸಲಾಯಿತು.
ಇದ್ದಕ್ಕಿದ್ದಂತೆ ರಕ್ತ ಸ್ರಾವವಾಗುವುದು ರೋಗದ ಪ್ರಮುಖ ಲಕ್ಷಣ. ಅದೂ ದೇಹದ ಒಳಭಾಗದಲ್ಲಿ. ಕಾಲು, ಕೈ, ಭುಜ ಮತ್ತಿತರ ಕಡೆ. ಒಮ್ಮೆ ರಕ್ತ ಸ್ರಾವವಾದರೆ ಆ ಜಾಗ ಊದಿಕೊಳ್ಳುತ್ತದೆ. ಚಿಕಿತ್ಸೆ ನೀಡದಿದ್ದರೆ ಆ ಭಾಗ ಪಾರ್ಶವಾಯುವಿಗೆ ತುತ್ತಾದಂತಾಗುತ್ತದೆ. ಇದೇ ರೀತಿ ಮೆದುಳಿನಲ್ಲಿ ರಕ್ತ ಸ್ರಾವವಾದರೆ ರೋಗಿ ಕಥೆ ಮುಗಿದಂತೆಯೇ! ರಕ್ತಸ್ರಾವ ತಿಂಗಳಲ್ಲಿ 10ರಿಂದ 15 ಬಾರಿ ಸಂಭವಿಸುವ ಸಾಧ್ಯತೆ ಇದೆ.
ಚಿಕಿತ್ಸೆ ಏನು?: ಮನುಷ್ಯನ ರಕ್ತದಲ್ಲಿರುವ ಪ್ಲಾಸ್ಮಾದಲ್ಲೇ 13 ಅಂಶಗಳಿವೆ. ಇದರಲ್ಲಿ 7, 8 ಮತ್ತು 9ನೇ ಅಂಶಗಳು ಮನುಷ್ಯನಲ್ಲಿ ಉತ್ಪತ್ತಿಯಾಗದಿದ್ದರೆ ಅಂಥವರಿಗೆ ಹಿಮೋಫಿಲಿಯಾ ಕಾಯಿಲೆ ಕಟ್ಟಿಟ್ಟ ಬುತ್ತಿ.
ಆದರೆ, ಈ ಕಾಯಿಲೆ ಅನುವಂಶಿಯಾಗಿರುವುದರಿಂದ ಕೆಲವೊಮ್ಮೆ ಕುಟುಂಬದಲ್ಲೇ ಇಬ್ಬರು, ಮೂವರಿಗೆ ಇರುತ್ತದೆ. ರಕ್ತಸ್ರಾವವಾದ ತಕ್ಷಣ ರಕ್ತದಲ್ಲಿರುವ 8 ಅಥವಾ 9ನೇ ಅಂಶಗಳಿರುವ ಔಷಧಗಳನ್ನು ನೀಡಬೇಕು. ಒಮ್ಮೆ ರಕ್ತಸ್ರಾವವಾದರೆ ರೋಗಿ 15,000 ವೆಚ್ಚ ಮಾಡಿ ಔಷಧ ಖರೀದಿಸಬೇಕು. ರೋಗಿಗಳಲ್ಲಿ ಅಷ್ಟು ಚೈತನ್ಯವಿಲ್ಲ. ಹಣ ಹೊಂದಿಸಿದರೂ ಔಷಧ ಸಿಗುತ್ತಿಲ್ಲ.
ರೋಗಿಗಳ ಬಗ್ಗೆ ಈ ನಿರ್ಲಕ್ಷ್ಯ ಏಕೆ?
ಹಿಮೋಫಿಲಿಯಾ ರೋಗಕ್ಕೆ ಔಷಧ ಪೂರೈಸುವ ವ್ಯವಸ್ಥೆಯನ್ನು ಆರಂಭಿಸಿದ್ದು ಕರ್ನಾಟಕದ ಆರೋಗ್ಯ ಇಲಾಖೆ. ಅದೂ 2005ರಲ್ಲಿ ಚಲುವರಾಯಸ್ವಾಮಿ ಆರೋಗ್ಯ ಸಚಿವರಾಗಿದ್ದಾಗ. ಬಳಿಕ ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ರೋಗಿಗಳನ್ನು ಪತ್ತೆ ಮಾಡಿ ಔಷಧವನ್ನು ಉಚಿತವಾಗಿ ನೀಡಲಾಯಿತು.
ಆದರೆ, 2007ರ ನಂತರ ಕರ್ನಾಟಕ ಮಾತ್ರ ಹಿಮೋಫಿಲಿಯಾ ರೋಗಿಗಳನ್ನೇ ಮರೆಯಿತು. ಔಷಧ ಖರೀದಿಸಿ ಹಂಚಿಕೆ ಮಾಡುವುದನ್ನೂ ಕಡಿಮೆ ಮಾಡಿತು. ತಿಂಗಳಿಗೆ 4 ಕೋಟಿಯಷ್ಟು ಔಷಧ ಖರೀದಿಸತ್ತಿದ್ದ ಆರೋಗ್ಯ ಇಲಾಖೆ ಈಗ 25ಲಕ್ಷ ಮೊತ್ತದ ಔಷಧ ಖರೀದಿಸಿ ಬೆಂಗಳೂರಿನ ಕೆ.ಸಿ.ಜನರಲ್, ಧಾರವಾಡ, ಉಡುಪಿ ಸೇರಿದಂತೆ ಕೆಲವೇ ಆಸ್ಪತ್ರೆಗಳಿಗೆ ಹಂಚುತ್ತಿತ್ತು. ಆದರೆ, ಇಲಾಖೆ ಈ ವರ್ಷ ಔಷಧಿಯನ್ನೇ ಖರೀದಿಸಿ ಹಂಚಿಕೆ ಮಾಡಿಲ್ಲ. ಇದರಿಂದ ರೋಗಿಗಳ ಪರದಾಟ ಹೇಳತೀರದಾಗಿದೆ. ಹೀಗಾಗಿ ಪ್ರತಿವರ್ಷ ರೋಗಿಗಳು ಹೆಚ್ಚುತ್ತಿದ್ದಾರೆಯೇ ವಿನಃ ಚಿಕಿತ್ಸಾ ಸೌಲಭ್ಯ ಅಥವಾ ರೋಗದ ಹೆಚ್ಚಾಗುತ್ತಿಲ್ಲ. ಇಂಥವರಿಗೆ ಸಾರ್ವಜನಿಕರು ಸಹಾಯ ನೀಡುವುದಾದರೆ ರಾಜ್ಯ ಹಿಮೋಫಿಲಿಯಾ ಸೊಸೈಟಿ (22208736, 8861002896) ಸಂಪರ್ಕಿಸಬಹುದು ಎಂದು ರೋಗಿಗಳಿಗಾಗಿ ಶ್ರಮಿಸುತ್ತಿರುವ ಶ್ರೀಧರ್ ವಿನಂತಿಸುತ್ತಾರೆ.
- ಶಿವಕುಮಾರ್ ಬೆಳ್ಳಿತಟ್ಟೆ