ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಉಕ್ಕೇರಿದ ಪ್ರವಾಹ!

ರಾಜ್ಯದಲ್ಲಿ ಶುಕ್ರವಾರ ಮಳೆ ಕಡಿಮೆಯಾಗಿದ್ದರೂ ತುಂಬಿದ ಜಲಾಶಯಗಳಿಂದ ನೀರು ಹೊರ ಬಿಟ್ಟ ಪರಿಣಾಮ ವಿವಿಧೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

Srinivasa Murthy VN
Updated On : 27 Jul 2013, 12:41 pm

ಕ.ಪ್ರ.ವಾರ್ತೆ, ಬೆಂಗಳೂರು, ಜು. 26-
ರಾಜ್ಯದಲ್ಲಿ ಶುಕ್ರವಾರ ಮಳೆ ಕಡಿಮೆಯಾಗಿದ್ದರೂ ತುಂಬಿದ ಜಲಾಶಯಗಳಿಂದ ನೀರು ಹೊರ ಬಿಟ್ಟ ಪರಿಣಾಮ ವಿವಿಧೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಹಾರಾಷ್ಟ್ರದಲ್ಲಿ ಮಳೆ ಕೊಂಚ ತಗ್ಗಿದ್ದರೂ ಬೆಳಗಾವಿ ಜಿಲ್ಲೆಯ ಕೃಷ್ಣಾ, ಮಲಪ್ರಭಾ ನದಿಯ ಪ್ರವಾಹದಲ್ಲಿ ಏನೂ ಏರುಪೇರಾಗಿಲ್ಲ. ಏತನ್ಮಧ್ಯೆ, ತುಂಗಭದ್ರಾ ನದಿಯಲ್ಲಿ ಗುರುವಾರ ಸಂಜೆ ಯುವಕನೊಬ್ಬ ಕೊಚ್ಚಿಕೊಂಡು ಹೋಗಿದ್ದು, ಇನ್ನೂ ಆತನ ದೇಹ ಪತ್ತೆಯಾಗಿಲ್ಲ. ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲೂ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ.
ಮಹಾರಾಷ್ಟ್ರದ ಕೊಂಕಣಪ್ರದೇಶದಲ್ಲಿ ಮಳೆ ತಗಿದ್ದರೂ ಕೃಷ್ಣಾ ನದಿಗೆ 1.76 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿರುವುದರಿಂದ ಇನ್ನೂ ಪ್ರವಾಹ ಪರಿಸ್ಥಿತಿ ಇದ್ದು, ಈಗಾಗಲೇ ಮುಳುಗಡೆಯಾಗಿರುವ 17 ಸೇತುವೆಗಳು ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ಆಲಮಟ್ಟಿ ಜಲಾಶಯದಿಂದ ನೀರು ಬಿಟ್ಟ ಪರಿಣಾಮ ನಾರಾಯಣಪುರ ಜಲಾಶಯ ಹಿನ್ನೀರಿನಿಂದಾಗಿ ಬಾಗಲಕೋಟೆ ಜಿಲ್ಲೆಯ ಹುನಗುಂದ, ಜಮಖಂಡಿ ತಾಲೂಕಿನ 24 ಗ್ರಾಮಗಳು ಪ್ರವಾಹ ಭೀತಿಯುಂಟಾಗಿದೆ. ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ 4 ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲು ಯೋಚಿಸಿದೆ. ಅಷ್ಟೇ ಅಲ್ಲದೆ, 60 ಬೋಟ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ. ಚಿಕ್ಕೋಡಿ, ಅಥಣಿ, ರಾಯಭಾಗ ತಾಲೂಕಿನ ಕೃಷ್ಣಾ ನದಿ ತೀರದ ಪ್ರದೇಶಗಳ ಹೊಲಗಳಿಗೆ ನೀರು ನುಗ್ಗಿದ್ದು, 150 ಎಕರೆ ಪ್ರದೇಶ ಬೆಳೆ ಹಾನಿ ಸಂಭವಿಸಿದೆ. ಇದೇ ವೇಳೆ ಅಥಣಿ ತಾಲೂಕಿನ ಸಪ್ತಸಾಗರ ಬಳಿಯ ಬಾಳೆಬಣ ಜಲಾವೃತವಾಗಿದ್ದು 60 ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.

ಟಿಬಿ ಡ್ಯಾಂನಿಂದ 90000 ಸಾವಿರ ಕ್ಯುಸೆಕ್ ನೀರು: ಶುಕ್ರವಾರ ತುಂಗಭದ್ರಾ ಡ್ಯಾಂನಿಂದ 90 ಸಾವಿರ ಕ್ಯುಸೆಕ್ ನೀರು ಬಿಡಲಾಗಿದೆ. ಇದೇ ಪ್ರಮಾಣದ ನೀರನ್ನು ಶನಿವಾರವೂ ಬಿಡಲು ಯೋಜಿಸಲಾಗಿದೆ. ಹಾಗಾಗಿ, ಇನ್ನು ಹಂಪಿಯಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ಸೇತುವೆ ಮೇಲಿನ ಸಂಚಾರವನ್ನು ರದ್ದುಪಡಿಸಲಾಗಿದೆ. ಗುರುವಾರ ಸಂಜೆ ಮುನಿರಾಬಾದ್‌ನ ಆಲೋ ಬ್ಲಾಕ್‌ನ ವೆಂಕಟೇಶ್(15) ನದಿಯಲ್ಲಿ ಕೊಚ್ಚಿ ಹೋಗಿದ್ದು, ಆತನ ದೇಹಕ್ಕೆ ಶೋಧ ನಡೆದಿದೆ.  ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಳೆಯಾಗುತ್ತಿದ್ದು, ವರದಾ ಮತ್ತು ದಂಡಾವತಿ ನದಿಗಳು ತುಂಬಿ ಹರಿಯುತ್ತಿವೆ.

ಯಾದಗಿರಿ, ರಾಯಚೂರು ಜಿಲ್ಲೆಗಳ ಪ್ರವಾಹ: ಕೃಷ್ಣಾ ನದಿಗೆ ವ್ಯಾಪಕ ನೀರು ಬರುತ್ತಿರುವ ಪರಿಣಾಮ ರಾಯಚೂರು ಜಿಲ್ಲೆಯ ಲಿಂಗಸ್ಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕುಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಲಿಂಗಸ್ಗೂರು ತಾಲೂಕಿನ ಮ್ಯಾದರಗಡ್ಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಲಾಗುತ್ತಿದೆ. ದೇವದುರ್ಗ-ಗುಲ್ಬರ್ಗ ಮಧ್ಯೆದ ಸೇತುವೆ ಮೇಲಿನ ಸಂಚಾರವನ್ನು ಮುಂಜಾಗೃತ ಕ್ರಮವಾಗಿ ರದ್ದು ಮಾಡಲಾಗಿದೆ. ಕೊಪ್ಪರದ ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನವನ್ನು ಕೃಷ್ಣೆ ಸುತ್ತುವರಿದಿದ್ದಾಳೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ಪ್ರವಹಾ ಪರಿಸ್ಥಿತಿ ತಲೆದೋರಿದ್ದು, ಕೊಳ್ಳೊರು ಸೇತುವೆ ಮುಳುಗಡೆಯಾಗಿದೆ. ಅಲ್ಲದೆ, ಸಾವಿರಾರು ಎಕರೆ ಜಲಾವೃತವಾಗಿದೆ. ನಾರಾಯಣಪುರ ಜಲಾಶಯದಿಂದ 2.5 ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಮಳೆಯ ಅಬ್ಬರ ಇಳಿಮುಖಗೊಂಡಿದ್ದು, ಮಡಿಕೇರಿ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಆದರೆ, ಕಳೆದ ಎರಡು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಉಂಟಾಗಿ ಜಿಲ್ಲೆಯ ಅನೇಕ ರಸ್ತೆಗಳು ಹಾನಿಗೊಳಗಾಗಿವೆ. ಮಡಿಕೇರಿ- ಸುಂಟಿಕೊಪ್ಪ ಹೆದ್ದಾರಿ ಭೂಕುಸಿತದಿಂದಾಗಿ ಸಂಚಾರಕ್ಕೆ ಬಂದ್ ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement