ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಾಲ್ವರು ಭ್ರಷ್ಟರು ಲೋಕಾಬಲೆಗೆ

ಸರ್ಕಾರಿ ನೌಕರರ ನಿವಾಸಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಕೋಟ್ಯಂತರ ರುಪಾಯಿ ಆಸ್ತಿ ಪತ್ತೆ ಹಚ್ಚಿದ್ದಾರೆ.

Srinivasa Murthy VN
Updated On : 27 Jul 2013, 12:40 pm

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜು.26-
ರಾಜ್ಯದ ವಿವಿಧೆಡೆ ನಾಲ್ವರು ಸರ್ಕಾರಿ ನೌಕರರ ನಿವಾಸಗಳ ಮೇಲೆ ಶುಕ್ರವಾರ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಆದಾಯಕ್ಕೂ ಮೀರಿ ಸಂಪಾದಿಸಿದ್ದ ಕೋಟ್ಯಂತರ ರುಪಾಯಿ ಆಸ್ತಿ ಪತ್ತೆ ಹಚ್ಚಿದ್ದಾರೆ.
ಹಾಸನ ನಗರಸಭೆ ಸಹಾಯಕ ಅಭಿಯಂತರ ಜಿ.ಪಿ.ಆನಂದ, ಕರ್ನಾಟಕ ಗೃಹ ಮಂಡಳಿ ಬಳ್ಳಾರಿ ಪ್ರಭಾರ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಸ್.ಎಲ್.ಹಾಲೇಶಪ್ಪ, ದಾವಣಗೆರೆ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಸಹಾಯಕ ಅಭಿಯಂತರ ಎಸ್.ಎಲ್.ಆನಂದಪ್ಪ ಹಾಗೂ ಹಾಸನ ಸಾರ್ವಜನಿಕ ಆಸ್ಪತ್ರೆ ಕಚೇರಿ ಅಧೀಕ್ಷಕ ಸಿ.ಆರ್.ಮಂಜುನಾಥ ಲೋಕಾಯುಕ್ತ ದಾಳಿಗೊಳಗಾದ ಅಧಿಕಾರಿಗಳು.
ನಾಲ್ವರು ಅಧಿಕಾರಿಗಳು ತಮ್ಮ ಎಲ್ಲಾ ಆದಾಯ ಮೂಲಗಳಿಗಿಂತಲೂ ಹೆಚ್ಚಿನ ಆಸ್ತಿ ಹೊಂದಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ. ದಾವಣಗೆರೆ, ಶಿವಮೊಗ್ಗ, ಹಾಸನ ಸೇರಿದಂತೆ ಅಧಿಕಾರಿಗಳಿಗೆ ಸೇರಿದ 14 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದ್ದು ಈ ವೇಳೆ ರು. 2.2 ಕೋಟಿಗೂ ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿದೆ.

ಅಧಿಕಾರಿಗಳ ಅಕ್ರಮ ಆಸ್ತಿ ವಿವರ

-ಜಿ.ಪಿ.ಆನಂದ, ಸಹಾಯಕ ಅಭಿಯಂತರ, ಹಾಸನ ನಗರಸಭೆ
1999ರಲ್ಲಿ ಕಿರಿಯ ಅಭಿಯಂತರನಾಗಿ ತಾತ್ಕಾ ಲಿಕವಾಗಿ ನೇಮಕಗೊಂಡು 2005ರಲ್ಲಿ ಕಾಯಂಗೊಂಡಿರುವ ಜಿ.ಪಿ.ಆನಂದ ಅವರು, ಹಾಸನ ನಗರದ  ಉದಯಗಿರಿ ಬಡಾವಣೆಯಲ್ಲಿ ರು. 55 ಲಕ್ಷ ಮೌಲ್ಯದ ಮನೆ ಹೊಂದಿದ್ದಾರೆ. ಅದೇ ಪ್ರದೇಶದಲ್ಲಿ ಪತ್ನಿ ಹೆಸರಿನಲ್ಲಿ ರು. 6.73 ಲಕ್ಷ ಮೌಲ್ಯದ ನಿವೇಶನ ಹೊಂದಿದ್ದಾರೆ. ಪತ್ನಿಯ ಸಹೋದರನ ಹೆಸರಿನಲ್ಲಿ ರು. 5 ಲಕ್ಷ ಮೌಲ್ಯದ ಕಾರು, ಬೇನಾಮಿ ಹೆಸರಿನಲ್ಲಿ ಎರಡು ದ್ವಿಚಕ್ರ ವಾಹನಗಳು  ರು. 5.5 ಲಕ್ಷ ನಗದು, ರು. 4.25 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು, ರು. 12.96 ಲಕ್ಷ ಮೌಲ್ಯದ 540 ಗ್ರಾಂ ಚಿನ್ನಾಭರಣ ಸೇರಿದಂತೆ ಇತರ ಆಸ್ತಿ ಪತ್ತೆಯಾಗಿದೆ. ಜಿ.ಪಿ.ಆನಂದ ಅವರ ಅಸಮತೋಲನ ಆಸ್ತಿಯ ಮೌಲ್ಯ ರು. 65 ಲಕ್ಷಕ್ಕೂ ಅಧಿಕ.
ಸಿ.ಆರ್.ಮಂಜುನಾಥ, ಕಚೇರಿ ಅಧೀಕ್ಷಕ ಹಾಸನ ಸಾರ್ವಜನಿಕ ಆಸ್ಪತ್ರೆ: 2003ರಲ್ಲಿ ಎಫ್‌ಡಿಎ ಆಗಿ ನೇಮಕಗೊಂಡು 2011ರಲ್ಲಿ ಕಚೇರಿ ಅಧೀಕ್ಷಕರಾಗಿ ಮುಂಬಡ್ತಿ ಪಡೆದಿರುವ ಸಿ.ಆರ್.ಮಂಜುನಾಥ ಹಾಸನದ ಕುವೆಂಪು ನಗರದಲ್ಲಿ ರು. 8.3 ಲಕ್ಷ ಮೌಲ್ಯದ ಆಸ್ತಿ, ಪತ್ನಿ ಹೆಸರಿನಲ್ಲಿ ಚನ್ನಪಟ್ಟಣದಲ್ಲಿ ರು. 8.61 ಲಕ್ಷ ಮೌಲ್ಯದ ನಿವೇಶನದಲ್ಲಿ ರು. 40 ಲಕ್ಷ ಮೌಲ್ಯದ ಮನೆ ನಿರ್ಮಾಣ ಕಾರ್ಯ ಸಾಗುತ್ತಿದೆ. ಎರಡು ದ್ವಿಚಕ್ರ ವಾಹನಗಳು, ಒಂದು ಕಾರು, ಗೃಹ ಬಳಕೆಯ ವಸ್ತುಗಳು, ಚಿನ್ನಾಭರಣ ಸೇರಿದಂತೆ ರು. 10 ಲಕ್ಷ ಮೌಲ್ಯದ ವಸ್ತುಗಳನ್ನು ಹೊಂದಿದ್ದಾರೆ. ಸಿ.ಆರ್.ಮಂಜುನಾಥ ಅವರ ಅಸಮತೋಲನ ಆಸ್ತಿ ರು. 57.96 ಲಕ್ಷ.
ಎಸ್.ಎಲ್.ಹಾಲೇಶಪ್ಪ, ಸಹಾಯಕ ಎಂಜಿನಿಯರ್ ಕರ್ನಾಟಕ ಗೃಹ ಮಂಡಳಿ ಬಳ್ಳಾರಿ: 2000ರಲ್ಲಿ ಸರ್ಕಾರಿ ಸೇವೆಗೆ ಸೇರಿದ ಎಸ್.ಎಲ್.ಹಾಲೇಶಪ್ಪ ಅವರು ತಮ್ಮ ಪತ್ನಿ ಹೆಸರಿನಲ್ಲಿ ಶಿವಮೊಗ್ಗದ ವಿನೋಬ ನಗರದಲ್ಲಿ ರು. 60 ಲಕ್ಷ ಮೌಲ್ಯದ ಆಸ್ತಿ ಹೊಂದಿದ್ದಾರೆ. ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ 7 ಲಕ್ಷ ಮೌಲ್ಯದ ಆಸ್ತಿ, ಬೆಂಗಳೂರಿನ ಸುವರ್ಣ ನಗರದಲ್ಲಿ ರು. 8.37 ಲಕ್ಷ ಮೌಲ್ಯದ ನಿವೇಶನ, ರು. 16.50 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು, ರು. 3 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಹೊಂದಿದ್ದಾರೆ. ಅವರ ಅಸಮತೋಲನ ಆಸ್ತಿ ರು. 57.31 ಲಕ್ಷ.
ಎಸ್.ಎಲ್.ಆನಂದಪ್ಪ, ಸಹಾಯಕ ಅಭಿಯಂತರ, ದಾವಣಗೆರೆ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗ: 1983ರ ರಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ಇವರು ದಾವಣಗೆರೆ ಎಸ್.ಎಸ್.ಬಡಾವಣೆಯಲ್ಲಿ ಪತ್ನಿ ಹೆಸರಿನಲ್ಲಿ ನಿವೇಶನಗಳನ್ನು ಹೊಂದಿದ್ದು ಇದರ ಮೌಲ್ಯ ರು. 54 ಲಕ್ಷ, ದಾವಣಗೆರೆಯಲ್ಲಿ ರು. 25 ಲಕ್ಷ ಮೌಲ್ಯದ ಮನೆಯನ್ನು ಹೊಂದಿದ್ದಾರೆ. ದಾವಣಗೆರೆ ಕೈದಾಳ ಗ್ರಾಮದಲ್ಲಿ 3 ಎಕರೆ ಜಮೀನು, ದಾವಣಗೆರೆ ಅವರೆಗೆರೆ ಗ್ರಾಮದಲ್ಲಿ ಬೇನಾಮಿ ಹೆಸರಿನಲ್ಲಿ ರು. 4.27 ಲಕ್ಷ ಮೌಲ್ಯದ ನಿವೇಶನ, ಒಂದು ಕಾರು, ಎರಡು ದ್ವಿಚಕ್ರ ವಾಹನಗಳು, ರು. 6.25 ಲಕ್ಷ ಮೌಲ್ಯದ ಚಿನ್ನಾಭರಣ, ರು. 4 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಹಾಗೂ ಜೀವ ವಿಮೆ ಪಾಲಿಸಿಗಳಲ್ಲಿ ರು. 5.37 ಲಕ್ಷ ಹೂಡಿಕೆ ಮಾಡಿದ್ದಾರೆ. ಎಸ್.ಎಲ್.ಆನಂದಪ್ಪ ಅವರ ಅಸಮತೋಲನ ಆಸ್ತಿ ರು. 39.93 ಲಕ್ಷ. ಪತ್ತೆಯಾಗಿರುವ ಆಸ್ತಿ ವಿವರದ ಬಗ್ಗೆ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement