ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನೆಪದ ಬಜೆಟ್

ಮತ್ತದೇ ಈಡೇರದ ನಿರೀಕ್ಷೆಗಳೊಂದಿಗೆ ಬಿಬಿಎಂಪಿ 2013-14ನೇ ಸಾಲಿನ ಬಜೆಟ್ ಮಂಡಿಸುವ ಮೂಲಕ ಸರ್ಕಾರದಿಂದ ಅನುದಾನ ಪಡೆಯಲು ದಾರಿ ಮಾಡಿಕೊಂಡಿದೆ.

Srinivasa Murthy VN
Updated On : 27 Jul 2013, 12:39 pm

ಬೆಂಗಳೂರು: ಗುರಿ ಸಾಧನೆಯಾಗುತ್ತದೋ ಇಲ್ಲವೋ, ಬಜೆಟ್ ಮಂಡಿಸಿ ಕೈತೊಳೆದುಕೊಂಡರೆ ಸಾಕು ಎನ್ನುವುದು ಬಿಬಿಎಂಪಿ ಆಡಳಿತದ ಉದ್ದೇಶ. ಹೀಗಾಗಿ ಮತ್ತದೇ ಈಡೇರದ ನಿರೀಕ್ಷೆಗಳೊಂದಿಗೆ ಬಿಬಿಎಂಪಿ 2013-14ನೇ ಸಾಲಿನ ಬಜೆಟ್ ಮಂಡಿಸುವ ಮೂಲಕ ಸರ್ಕಾರದಿಂದ ಅನುದಾನ ಪಡೆಯಲು ದಾರಿ ಮಾಡಿಕೊಂಡಿದೆ.
ಆದರೆ, ವಿಳಂಬವಾಗಿ ಬಜೆಟ್ ಮಂಡಿಸಿ ಸರ್ಕಾರದಿಂದ ಛೀಮಾರಿಗೊಳಗಾದರೂ ಬುದ್ಧಿ ಕಲಿಯದೆ ಮತ್ತೆ ತಡವಾಗಿ ಬಜೆಟ್ ಮಂಡಿಸಿದ್ದರಿಂದ ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸುವುದೇ ಎಂಬುದೇ ಈಗ ಮುಂದಿರುವ ಪ್ರಶ್ನೆ.
ಹೌದು, 2012-13ನೇ ಸಾಲಿನಲ್ಲಿ 9729.60 ಕೋಟಿ ಆದಾಯ ಮತ್ತು 9920.35 ಕೋಟಿ ಖರ್ಚು ಮಾಡುವ ಆಯವ್ಯಯ ಮಂಡಿಸಿ ಅದರ ಶೇ. 50ರಷ್ಟು ಗುರಿ ಸಾಧಿಸಲಾಗದೇ ಇದ್ದರೂ 2013-14ನೇ ಸಾಲಿಗೆ ಮತ್ತೆ 8520.56 ಕೋಟಿ ಆದಾಯ ಹಾಗೂ 8519.66 ಕೋಟಿ ಖರ್ಚಿನ ಗುರಿಯೊಂದಿಗೆ 90 ಲಕ್ಷ ಮೊತ್ತದ ಉಳಿತಾಯ ಬಜೆಟ್ ಮಂಡಿಸಿದೆ.
2012-13ನೇ ಸಾಲಿನಲ್ಲಿ ವಿವಿಧ ಮೂಲಗಳಿಂದ 9729.60 ಕೋಟಿ ಆದಾಯ ನಿರೀಕ್ಷಿಸಿದ್ದರೂ ಸಂಗ್ರಹವಾಗಿದ್ದು ಮಾತ್ರ 4689.08 ಕೋಟಿ ಮಾತ್ರ. ಹೀಗಾಗಿ 9920.35 ಕೋಟಿ ವೆಚ್ಚ ಮಾಡುವ ಕಡೆ 4890.28 ಕೋಟಿ ವೆಚ್ಚ ಮಾಡಿ ಕೈಕಟ್ಟಿ ಕುಳಿತುಕೊಳ್ಳಬೇಕಾಯಿತು.
ಹಾಗೆಂದು ಕನಸು ಕಾಣುವುದು ತಪ್ಪಲ್ಲ ಎಂದು ಬಿಬಿಎಂಪಿ ಆಡಳಿತ ತೀರ್ಮಾನಿಸಿದೆ. ಇದಕ್ಕೆ ಅದು ನಿರೀಕ್ಷಿಸಿರುವ ಆದಾಯ ಮತ್ತು ಅದಕ್ಕೆ ಹಾಕಿಕೊಂಡಿರುವ ಕಾರ್ಯಕ್ರಮಗಳೇ ಉದಾಹರಣೆ.  
ಈ ನಿರೀಕ್ಷೆ ಹುಸಿಯಾದರೆ ವೆಚ್ಚದಲ್ಲೂ ಅದು ಪ್ರತಿಧ್ವನಿಸಿ ಬೆಂಗಳೂರು ಅಭಿವೃದ್ಧಿ ಎಂಬುದು ಕಾಗದದಲ್ಲೇ ಉಳಿಯಬೇಕಾಗುತ್ತದೆ. ಆದರೆ, ಬಜೆಟ್ ಮಂಡಿಸಿದ ಬಿಜೆಪಿ ಆಡಳಿತ ಮಾತ್ರ ಕನಸು ಕಾಣುವುದರಲ್ಲೇ ಮತ್ತೊಂದು ವರ್ಷ ಪೂರೈಸಲು ಮುಂದಾಗಿದೆ.
2013-14ನೇ ಸಾಲಿನಲ್ಲಿ ಒಟ್ಟು 8520.56 ಕೋಟಿ ಆದಾಯ ನಿರೀಕ್ಷೆಯಲ್ಲಿರುವ ಬಿಬಿಎಂಪಿ ಇದರಲ್ಲಿ 3307.50 ಕೋಟಿ ತೆರಿಗೆ ಆದಾಯ, 2290.04 ಕೋಟಿ ತೆರಿಗೆಯೇತರ ಆದಾಯ ನಿರೀಕ್ಷಿಸಿದೆ. ಜತೆಗೆ ಸರ್ಕಾರದಿಂದ 1732.88 ಕೋಟಿ ಅನುದಾನ ಬರಬಹುದು ಎಂದು ಆಂದಾಜಿಸಿದೆ. ಜತೆಗೆ ಸಾಲ ಮತ್ತಿತರ ಮೂಲಗಳಿಂದ 1114.84 ಕೋಟಿ ಪಡೆದುಕೊಳ್ಳಲು ಯೋಚಿಸಿದೆ.

ಹಳೇ ಯೋಜನೆಗಳೇ ಹೆಚ್ಚು: ಈ ಮಧ್ಯೆ ಹಿಂದಿನ ಬಜೆಟ್‌ನಲ್ಲಿ ರೂಪಿಸಿದ್ದ ಯೋಜನೆಗಳನ್ನು ಮುಂದುವರಿಸಲು ಆದ್ಯತೆ ನೀಡಲಾಗಿದೆ. ಅಲ್ಲದೆ, ಆ ಬಜೆಟ್‌ನಲ್ಲಿ ಅನುದಾನ ನಿಗದಿಪಡಿಸಿದರೂ ಒದಗಿಸಲು ಸಾಧ್ಯವಾಗದ ಕಾರಣ ಮತ್ತೆ ಅದೇ ಹೆಸರುಗಳನ್ನು ಪ್ರಸ್ತಾಪಿಸಿ ಮತ್ತೆ ಅನುದಾನ ನಿಗದಿಪಡಿಸಲಾಗಿದೆ. ಹೊಸಕೆರೆಹಳ್ಳಿಯ ರೆಫರಲ್ ಆಸ್ಪತ್ರೆ ಉನ್ನತೀಕರಣಕ್ಕೆ 3ಕೋಟಿ, ಪಾಲಿಕೆ ಶಾಲೆಗಳಲ್ಲಿ ಉಪಗ್ರಹ ಆಧಾರಿತ ಪಠ್ಯಕ್ರಮ ಬೋಧನೆ ಅಳವಡಿಸಲು 5ಕೋಟಿ, ಕಿತ್ತೂರು ರಾಣಿ ಚನ್ನಮ್ಮ ಸ್ಟೇಡಿಯಂ ಮುಂಭಾಗದಲ್ಲಿ ಚನ್ನಮ್ಮ ಕಂಚಿನ ಪ್ರತಿಮೆ ಸ್ಥಾಪನೆ, ಇದೇ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು 9ಕೋಟಿ, ವಲಯ ಪಾದಚಾರಿ ಮಾರ್ಗಗಳ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ 54ಕೋಟಿ ಇದಕ್ಕೆ ಕೆಲವು ಉದಾಹರಣೆಗಳು.

ಹೊಸದೂ ಇದೆ: ಹಾಗೆಂದು ಬಜೆಟ್‌ನಲ್ಲಿ ಹೊಸದೇನೂ ಇಲ್ಲ ಎಂದು ಅರ್ಥವಲ್ಲ. ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳಲು ಮತ್ತು ವಿದ್ಯಾಭ್ಯಾಸಕ್ಕೆ ನೆರವು ನೀಡಲು 5 ಕೋಟಿ, ಪತ್ರಿಕೆ ವಿತರಕ, ಕಾರು ತೊಳೆಯುವವ ಹಾಗೂ ಹಾಲು ಮಾರಾಟ ಮಾಡುವವರಿಗೆ ವಾರ್ಡ್‌ಗೆ 50ರಂತೆ ಸೈಕಲ್‌ಗಳನ್ನು ವಿತರಣೆ, ಕೂಲಿ ಕಾರ್ಮಿಕರು, ಚಿಂದಿ ಆಯುವವರು, ಅಲೆಮಾರಿ ಜನಾಂಗದವರು ಸಫಾಯಿ ಕರ್ಮಚಾರಿಗಳೂ ಸೇರಿದಂತೆ ಬಡವರ ಆರೋಗ್ಯ ಸುಧಾರಿಸಲು ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆಯಡಿ 20 ಕೋಟಿ, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಹಾಗೂ 6ವರ್ಷದೊಳಗಿನ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆಗಾಗಿ ಕಾರ್ಯಕ್ರಮ, ಸತ್ತ ಪ್ರಾಣಿಗಳ ವಿಲೇವಾರಿ ಸಮಸ್ಯೆ ಪರಿಹಾರಕ್ಕಾಗಿ ನಗರದ ಆಯ್ದ ಸ್ಥಳಗಳಲ್ಲಿ ಸತ್ತ ಪ್ರಾಣಿಗಳ ಸಂಸ್ಕರಣಾ ಘಟಕ (ಚಿತಾಗಾರ) ಸ್ಥಾಪಿಸಲು # 3ಕೋಟಿ... ಹೀಗೆ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ಜಾರಿಗೆ ತರುವ ಬಗ್ಗೆ ಘೋಷಣೆ ಹೊರಡಿಸಲಾಗಿದೆ. ಇದರ ಜತೆಗೆ ಹಲವೆಡೆ ಗ್ರೇಡ್ ಸೆಪರೇಟಪ್‌ಗಳ ಸ್ಥಾಪನೆ, ರಸ್ತೆ ವಿಸ್ತರಣೆ, ಸಿಗ್ನಲ್‌ಫ್ರೀ ಕಾರಿಡಾರ್‌ಗಳು, ಎಲಿವೇಟೆಡ್ ಯೋಜನೆಗಳ ಕುರಿತು ಪ್ರಸ್ತಾಪಿಸಲಾಗಿದೆ.

ವಾಸ್ತವಕ್ಕೆ ದೂರವಾದ ಗುರಿ
ಆದಾಯ ಸಂಗ್ರಹಣೆಗಾಗಿ ಕಂದಾಯ ವಿಭಾಗ, ಕಾಮಗಾರಿ ವಿಭಾಗ, ನಗರ ಯೋಜನೆ ವಿಭಾಗ, ಮಾರುಕಟ್ಟೆ, ಜಾಹೀರಾತು ವಿಭಾಗಗಳನ್ನೇ ಮತ್ತೆ ನೆಚ್ಚಿಕೊಂಡಿದೆ. ಹಿಂದೆ ಇದೇ ವಿಭಾಗಗಳಲ್ಲಿ ಆದ ನಿರಾಶೆ ಮರೆತು ಮತ್ತೆ ಅಷ್ಟೇ ಪ್ರಮಾಣದ ಗುರಿ ಹಾಕಿಕೊಳ್ಳಲಾಗಿದೆ ಎಂದರೆ ಬಜೆಟ್ ವಾಸ್ತವಕ್ಕೆ ಎಷ್ಟು ದೂರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ, 2012-13ನೇ ಸಾಲಿನಲ್ಲಿ ಒಟ್ಟು ಆದಾಯ ಗುರಿ 9729.60 ಕೋಟಿ ಪೈಕಿ ಸರ್ಕಾರದ ಅನುದಾನವಾಗಿ 1707.30 ಕೋಟಿ ನಿರೀಕ್ಷಿಸಲಾಗಿತ್ತು. ಆದರೆ, ಸಂಗ್ರಹವಾಗಿರುವ ಆದಾಯ 4689.08 ಕೋಟಿ ಪೈಕಿ ಸರ್ಕಾರದ ಅನುದಾನದಿಂದಲೇ 1361.29 ಕೋಟಿ ಬಂದಿದೆ ಎಂದರೆ, ಬಿಬಿಎಂಪಿ ಒಟ್ಟಾರೆ ಸಂಗ್ರಹಿಸಿದ ಆದಾಯ 3327.79 ಕೋಟಿ ಮಾತ್ರ. ಹೀಗಾಗಿ ಮತ್ತೆ ತಾನೇ ಸ್ವಂತವಾಗಿ 6500 ಕೋಟಿಗೂ ಹೆಚ್ಚು  ಆದಾಯ ಸಂಗ್ರಹಿಸುವುದಾಗಿ ಗುರಿ ಹಾಕಿಕೊಂಡಿರುವುದನ್ನು ಗಮನಿಸಿದಾಗ ಈ ಬಾರಿಯೂ ಬಜೆಟ್ ಕೇವಲ ಸುಳ್ಳಿನ ಕಂತೆ ಎಂಬುದು ಸ್ಪಷ್ಟವಾಗುತ್ತದೆ.

ಪ್ರತಿ ಬಜೆಟ್‌ನಲ್ಲೂ ಪ್ರಸ್ತಾಪ!

ಕೆಲವು ಯೋಜನೆಗಳು ಕಳೆದ ಮೂರು ವರ್ಷಗಳಿಂದ ಹೊಸ ಯೋಜನೆಯಂತೆ ಪ್ರಸ್ತಾಪವಾಗುತ್ತಿವೆ. ಅವುಗಳೆಂದರೆ, ಆಸ್ಪತ್ರೆ ನಿರ್ಮಾಣ ಮತ್ತು ಕ್ರೀಡಾಂಗಣ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳು.
ಇದೇರೀತಿ ಹೊಸಕೆರೆಹಳ್ಳಿಯ ರೆಫರಲ್ ಆಸ್ಪತ್ರೆ ಉನ್ನತೀಕರಣಕ್ಕೆ 3ಕೋಟಿ. ಪಾಲಿಕೆ ಶಾಲೆಗಳಲ್ಲಿ ಉಪಗ್ರಹ ಆಧಾರಿತ ಪಠ್ಯಕ್ರಮ ಬೋಧನೆ ಅಳವಡಿಸಲು 5ಕೋಟಿ. ಪಾರಂಪರಿಕ ತಾಣ ಪುರಭವನವನ್ನು ನವೀಕರಿಸಲು 3ಕೋಟಿ. ಕಿತ್ತೂರು ರಾಣಿ ಚನ್ನಮ್ಮ ಸ್ಟೇಡಿಯಂ ಮುಂಭಾಗದಲ್ಲಿ ಚನ್ನಮ್ಮ ಕಂಚಿನ ಪ್ರತಿಮೆ ಸ್ಥಾಪನೆ, ಇದೇ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು 9ಕೋಟಿ ನೀಡಲು ಎಂದಿನಂತೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಹಾಗೆಯೇ ಕೆ.ಆರ್.ಮಾರುಕಟ್ಟೆಯಲ್ಲಿ ಎರಡನೇ ಮಹಡಿ ಅಭಿವೃದ್ಧಿಗೊಳಿಲು 3ಕೋಟಿ. ವಲಯ ಪಾದಚಾರಿ ಮಾರ್ಗಗಳ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ 54ಕೋಟಿ ನೀಡುವ ಬಗ್ಗೆಯೂ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments