ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹೈ-ಕ ಮಾರ್ಗಸೂಚಿಗೆ ಅಸ್ತು

ಹೈದ್ರಾಬಾದ್ - ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371 ಜೆ ವಿಧಿ ತಿದ್ದುಪಡಿಯ ಮಾರ್ಗದರ್ಶಿ ಸೂತ್ರಕ್ಕೆ...

Srinivasa Murthy VN
Updated On : 27 Jul 2013, 12:44 pm

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜು.26-
ಹೈದ್ರಾಬಾದ್ - ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371 ಜೆ ವಿಧಿ ತಿದ್ದುಪಡಿಯ ಮಾರ್ಗದರ್ಶಿ ಸೂತ್ರಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ರಾಜ್ಯ ಮಂತ್ರಿ ಪರಿಷತ್ ಸಭೆಯಲ್ಲಿ ಒಪ್ಪಿಗೆ ನೀಡುವ ಈ ನಿರ್ಣಯ ಕೈಗೊಳ್ಳಲಾಗಿದೆ.
ಎಚ್.ಕೆ.ಪಾಟೀಲ್ ನೇತೃತ್ವದ ಸಂಪುಟ ಉಪ ಸಮಿತಿ ಸಭೆ ನೀಡಿದ ವರದಿಯನ್ನು ಒಪ್ಪಿಕೊಳ್ಳಲು ಸಭೆ ನಿರ್ಧರಿಸಿದೆ. ಆದರೆ ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಭೆಯ ನಿರ್ಣಯಗಳನ್ನು ಬಹಿರಂಗಗೊಳಿಸಿಲ್ಲ. ಸೋಮವಾರ ವಿಧಾನಮಂಡಲದ ಉಭಯ ಸದನದಲ್ಲಿ ಸಭೆಯ ವಿವರ  ಒದಗಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಹೈದ್ರಾಬಾದ್- ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದ 371ನೇ ಜೆ ವಿಧಿಗೆ ಕಳೆದ ವರ್ಷ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಇದರನ್ವಯ ಕರ್ನಾಟಕದ ಆರು ಜಿಲ್ಲೆಗಳಿಗೆ ವಿಶೇಷ ಸವಲತ್ತುಗಳು ಲಭಿಸಲಿವೆ. ಆದರೆ ಇದರ ಅನುಷ್ಠಾನಕ್ಕೆ ಮಾರ್ಗಸೂಚಿ ರಚಿಸಬೇಕಾಗಿದ್ದರ ಹಿನ್ನೆಲೆಯಲ್ಲಿ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿತ್ತು.
ಎಚ್.ಕೆ.ಪಾಟೀಲ್ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಹೈದ್ರಾಬಾದ್- ಕರ್ನಾಟಕ ಪ್ರದೇಶದ ಸಚಿವರಾದ ಖಮರುಲ್ ಇಸ್ಲಾಂ, ಡಾ.ಶರಣಪ್ರಕಾಶ್ ಪಾಟೀಲ್, ಶಿವರಾಜ್ ತಂಗಡಗಿ, ಪರಮೇಶ್ವರ ನಾಯ್ಕ್ ಆ ಭಾಗದ ಶಾಸಕರು, ತಜ್ಞರು ಸಮಿತಿಯಲ್ಲಿದ್ದರು. ಕಳೆದ ವಾರ ಈ ಸಮಿತಿ ತನ್ನ ವರದಿ ಸಲ್ಲಿಸಿತು.

ಮೀಸಲು: ಯಾರು ಹೈದ್ರಾಬಾದ್-ಕರ್ನಾಟಕ ಪ್ರದೇಶದವರು ಹಾಗೂ ಯಾವ್ಯಾವ ಹುದ್ದೆಗೆ ಎಷ್ಟು ಮೀಸಲು ನೀಡಬೇಕು ಎಂಬುದನ್ನು ವರದಿಯಲ್ಲಿ ಹೇಳಲಾಗಿದೆ. ಇದರ ಪ್ರಕಾರ ಜನವರಿ 1, 2013ರ ತನಕ ಅನ್ವಯವಾಗುವಂತೆ ಯಾರು 10 ವರ್ಷಗಳ ಕಾಲ ಹೈದ್ರಾಬಾದ್- ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳಲ್ಲಿ ನೆಲೆಸಿರುತ್ತಾರೋ ಅಂಥವರಿಗೆ ಅಥವಾ ಈ ಭಾಗದಲ್ಲಿ ಜನಿಸಿದವರಿಗೆ ಉದ್ಯೋಗದಲ್ಲಿ ಮೀಸಲು ನೀಡುವುದಕ್ಕೆ ಅವಕಾಶವಿದೆ.
ಅದೇ ರೀತಿ ಸರ್ಕಾರಿ ಇಲಾಖೆಗಳ ಡಿ.ದರ್ಜೆ ಹುದ್ದೆಯಲ್ಲಿ ಶೇ.95, ಶಿಕ್ಷಕರ ನೇಮಕದಲ್ಲಿ ಶೇ.75 ಹಾಗೂ ಎ,ಬಿ ಹಾಗೂ ಸಿ ದರ್ಜೆ ಹುದ್ದೆಗಳಲ್ಲಿ ಶೇ.70ರಷ್ಟು ಮೀಸಲು ಸೌಲಭ್ಯ ನೀಡುವುದಕ್ಕೆ ಶಿಫಾರಸು ಮಾಡಲಾಗಿದೆ.

ಮಾದರಿ: ಜತೆಗೆ ತೆಲಂಗಾಣ ಮತ್ತು ವಿದರ್ಭ ಮಾದರಿ ಪೈಕಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ವಿಸ್ತೃತ ವಿವರ ನೀಡಲಾಗಿದ್ದು, ಎರಡರ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಎರಡು ಮಾದರಿಗಳ ಲೋಪ- ಲಾಭಗಳ ಬಗ್ಗೆ ತಜ್ಞರ ಸಮಿತಿ ನೀಡಿದ ವರದಿಯ ಅನುಬಂಧವನ್ನು ಸಂಪುಟ ಉಪಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371ನೇ ಜೆ ತಿದ್ದುಪಡಿ ವಿಧೇಯಕದ ಮಾರ್ಗಸೂಚಿ ಬಗ್ಗೆ ಮಂತ್ರಿ ಪರಿಷತ್ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಇದರ ಸಂಪೂರ್ಣ ವಿವರವನ್ನು ಸೋಮವಾರ ನೀಡುತ್ತೇವೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ

ನಮ್ಮ ಭಾಗದ ಅಭಿವೃದ್ಧಿಗೆ ಅಗತ್ಯವಾದ ಬೇಡಿಕೆಗಳನ್ನು ಸಂಪುಟ ಉಪಸಮಿತಿ ಸಭೆ ಸಂದರ್ಭದಲ್ಲಿ ವಿವರಿಸಿದ್ದೆವು. ನಾವು ಬಯಸಿದ್ದಕ್ಕಿಂತ ಹೆಚ್ಚು ಸೌಲಭ್ಯ ನೀಡಲಾಗಿದೆ ಎಂದು ಸಭೆ ಬಳಿಕ ಕೆಲವು ಸಚಿವರು ಹೇಳಿದ್ದಾರೆ. ಅಷ್ಟಾದರೆ ಸಂತೋಷ.
- ವೈಜ್ಯನಾಥ್ ಪಾಟೀಲ್, ಮಾಜಿ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement