ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿದ್ಯಾರ್ಥಿಗಳಿಗೆ ಸಿಗುತ್ತೆ ಹುಳು ಆಹಾರ

Srinivasa Murthy VN
Updated On : 27 Jul 2013, 11:51 am

-ಪ್ರಕಾಶ ಎಸ್. ಶೇಟ್
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಜು.27

ವಿದ್ಯಾರ್ಥಿಗಳು ಹುಳು - ಹುಪ್ಪಟೆ ಇರುವ ಆಹಾರ ಸೇವಿಸಬೇಕಾದ ಪರಿಸ್ಥಿತಿ ಉಂಟಾಗಿದೆಯೇ? ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ವಿದ್ಯಾರ್ಥಿನಿಲಯ ಮತ್ತು ವಸತಿ ಶಾಲೆಗಳಲ್ಲಿರುವ ಪರಿಸ್ಥಿತಿಯನ್ನು ಅವಲೋಕಿಸಿದರೆ ಇಂಥ ಪ್ರಶ್ನೆ ಉಂಟಾಗುತ್ತದೆ.
ರಾಜ್ಯ ಸರ್ಕಾರ ಪೂರೈಸುವ ಆಹಾರ ವಸ್ತುಗಳು ಮತ್ತು ಧಾನ್ಯ ವಿದ್ಯಾರ್ಥಿ ನಿಲಯಗಳಿಗೆ 2 ತಿಂಗಳ ಬಳಿಕ ಸೇರುತ್ತಿರುವುದರಿಂದ ಇಂಥ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಒದಗಿಸಲು ರೂಪಿಸಿದ ಹೊಸ ವ್ಯವಸ್ಥೆ ಕಾರಣ.
ಹಿಂದಿನ ಸರ್ಕಾರದ ವ್ಯವಸ್ಥೆ:  ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳಿಗೆ ಆಹಾರ ಪದಾರ್ಥ ಪೂರೈಸುವ ನೂತನ ಪದ್ಧತಿಯನ್ನು ಬಿಜೆಪಿ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಜಾರಿಗೆ ತಂದಿತ್ತು. ಈ ಪದ್ಧತಿಯ ಪರಿಣಾಮ ವಿದ್ಯಾರ್ಥಿಗಳು ಹುಳು ಹಿಡಿದ ಆಹಾರ ತಿನ್ನುವಂತಾಗಿದೆ. ಅದರಲ್ಲಿಯೂ ಮಳೆಯ ಅಬ್ಬರದಿಂದ ಆಹಾರ ಪದಾರ್ಥಗಳಿಗೆ ಬೇಗನೆ ಹುಳು ಹಿಡಿಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಶುಚಿ-ರುಚಿಯಾದ ಆಹಾರ ಗಗನಕುಸುಮವಾಗಿದೆ.
ಏನಿದು ಹೊಸ ಪದ್ಧತಿ?: ಈ ಹಿಂದೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳಿಗೆ ಆಹಾರ ಪದಾರ್ಥ ವಿತರಿಸುವ ಜವಾಬ್ದಾರಿ ಆಯಾ ಜಿಲ್ಲಾ ಪಂಚಾಯಿತಿಗೆ ವಹಿಸಲಾಗಿತ್ತು. ಜಿಪಂ ಆಹಾರ ಪೂರೈಕೆಗೆ ಟೆಂಡರ್ ಕರೆದು ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು.  
ಆದರೆ ಈಗ ರಾಜ್ಯದ 18 ಜಿಲ್ಲೆಗಳ ವಿದ್ಯಾರ್ಥಿ ನಿಲಯಕ್ಕೆ ಆಹಾರ ಪೂರೈಸುವ ಜವಾಬ್ದಾರಿಯನ್ನು ಬೆಂಗಳೂರು ಮೂಲದ ನ್ಯಾಷನಲ್ ಕನ್ಸೂಮರ್ಸ್ ಆಫ್ ಇಂಡಿಯಾ ಲಿಮಿಟೆಡ್ ಎಂಬ ಒಂದೇ ಸಂಸ್ಥೆಗೆ ವಹಿಸಿದೆ. ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಈ ನೂತನ ಪದ್ಧತಿ ಅಳವಡಿಸಿರುವುದಾಗಿ ತಿಳಿಸಿತ್ತು. ಆದರೆ ಈ ನೂತನ ಪದ್ಧತಿ ವಿದ್ಯಾರ್ಥಿಗಳು ಕೆಟ್ಟಿರುವ ಆಹಾರ ತಿನ್ನುವಂತೆ ಮಾಡಿದೆ.
ಹೊಸ ನಿಯಮದ ಅವಾಂತರ: ಒಂದೇ ಸಂಸ್ಥೆ ಆಹಾರ ಪದಾರ್ಥ ಪೂರೈಸುತ್ತಿರುವುದರಿಂದ ಎರಡು ತಿಂಗಳಿಗೊಮ್ಮೆ ಆಹಾರ ಪದಾರ್ಥ ರಾಜ್ಯದ ಮೂಲೆ ಮೂಲೆಯಲ್ಲಿರುವ ಹಾಸ್ಟೆಲ್ ಸೇರುತ್ತಿವೆ. ಬಹುತೇಕ ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿರುವುದರಿಂದ ಅಲ್ಲಿ ಆಹಾರ ಪದಾರ್ಥ ದಾಸ್ತಾನಿಡಲು ಗೋದಾಮು ವ್ಯವಸ್ಥೆಯೇ ಇಲ್ಲ. ಆಹಾರ ಪದಾರ್ಥಗಳಿಗೆ ಹುಳು ಹುಪ್ಪಡಿ ತಗಲುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ಉಣಬಡಿಸುವುದು ಅಸಾಧ್ಯವಾಗಿದೆ. ಆಹಾರ ಪದಾರ್ಥ ದಾಸ್ತಾನಿಡಲು ಜಾಗವಿಲ್ಲದಿರುವ ಸ್ಥಿತಿಯಿರುವಾಗ ಅದನ್ನು ರಕ್ಷಿಸಲು ಬೇರೆ ದಾರಿಯಿಲ್ಲ. ಏತನ್ಮಧ್ಯೆ ಹಾಳು ಮೂಳು ಆಹಾರ ಪದಾರ್ಥವನ್ನೇ ಅದ್ಹೇಗೋ ಶುಚಿಗೊಳಿಸಿ ವಿದ್ಯಾರ್ಥಿಗಳಿಗೆ ಊಟ ಬಡಿಸಲಾಗುತ್ತಿದೆಯಾದರೂ ವಿದ್ಯಾರ್ಥಿಗಳು ಕಳಪೆ ಆಹಾರ ಸೇವಿಸಿ ಅನಾರೋಗ್ಯಕ್ಕೆ ಈಡಾಗುತ್ತಾರೋ ಎಂಬ ಆತಂಕ ಹಾಸ್ಟೆಲ್ ಮೇಲ್ವಿಚಾರಕರಿಗೆ ಎದುರಾಗಿದೆ.

ಹೊಸ ಪದ್ಧತಿ ಎಲ್ಲೆಲ್ಲಿ?
ಚಿಕ್ಕಬಳ್ಳಾಪುರ, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಬಿಜಾಪುರ, ಬಾಗಲಕೋಟೆ, ಹಾವೇರಿ, ಬಳ್ಳಾರಿ, ತುಮಕೂರು, ರಾಯಚೂರು, ಮೈಸೂರು, ಧಾರವಾಡ, ದಾವಣಗೆರೆ, ಗದಗ, ಕೋಲಾರ, ಕೊಡಗು, ಕೊಪ್ಪಳ, ಉತ್ತರ ಕನ್ನಡ ಜಿಲ್ಲೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement