ಶ್ರೀನಿ ಹಾದಿ ಸುಗಮ
ಗುರುನಾಥ್ ಮೇಯಪ್ಪನ್ ಆರೋಪ ಮುಕ್ತರಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ಎನ್.ಶ್ರೀನಿವಾಸನ್ ಅತಿ ಶೀಘ್ರದಲ್ಲೆ...
ಕೋಲ್ಕತಾ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಎಸ್‌ಕೆ ತಂಡದ ಸಿಇಒ ಗುರುನಾಥ ಮೇಯಪ್ಪನ್ ಹಾಗೂ ರಾಜಸ್ಥಾನ ರಾಯಲ್ಸ್‌ನ ಸಹ ಮಾಲೀಕ ರಾಜ್ ಕುಂದ್ರಾ ಅವರ ವಿರುದ್ಧ ತನಿಖಾ ಸಮಿತಿ ಯಾವುದೇ ಸಾಕ್ಷಿ ಸಿಗದ ಕಾರಣ ಇವರನ್ನು ನಿರ್ದೋಷಿ ಎಂದು ಬಿಸಿಸಿಐ ಕಾರ್ಯಕಾರಿ ಸಮಿತಿಯಲ್ಲಿ ಘೋಷಿಸಲಾಯಿತು.
ಗುರುನಾಥ್ ಮೇಯಪ್ಪನ್ ಈ ಪ್ರಕರಣದಿಂದ ಮುಕ್ತರಾದ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ಎನ್.ಶ್ರೀನಿವಾಸನ್ ಅತಿ ಶೀಘ್ರದಲ್ಲೆ ಮತ್ತೆ ತಮ್ಮ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದ್ದಾರೆ. ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಶ್ರೀನಿವಾಸನ್, ನವದೆಹಲಿಯಲ್ಲಿ ಆ.2 ರಂದು ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿ ಸಭೆಯ ಒಳಗಾಗಿ ವಾಪಸ್ಸಾಗುವ ಸಾಧ್ಯತೆಗಳಿವೆ.
ಹೈ ಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳಾದ ಟಿ.ಜಯರಾಮ್ ಚೌತಾ ಹಾಗೂ ಆರ್.ಬಾಲಸುಬ್ರಮಣ್ಯಮ್ ನೇತೃತ್ವದ ತನಿಖಾ ಸಮಿತಿ ಭಾನುವಾರ ಬೆಳಗ್ಗೆ ತಮ್ಮ ವರದಿಯನ್ನು ಬಿಸಿಸಿಐಗೆ ಸಲ್ಲಿಸಿತು. ರಾಜ್ ಕುಂದ್ರಾ, ಇಂಡಿಯಾ ಸಿಮೆಂಟ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಪ್ಪು ಮಾಡಿರುವ ಬಗ್ಗೆ ಯಾವುದೇ ಸಾಕ್ಷಿಗಳು ದೊರೆತಿಲ್ಲ. ಈಗ ಈ ವರದಿಯನ್ನು ಐಪಿಎಲ್ ಆಡಳಿತ ಮಂಡಳಿಗೆ ವರ್ಗಾಯಿಸಲಾಗಿದ್ದು, ಆ.2ರಂದು ನಡೆಯಲಿರುವ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಸಿಸಿಐ ಉಪಾಧ್ಯಕ್ಷ ನಿರಂಜನ್ ಶಾ ತಿಳಿಸಿದ್ದಾರೆ.