ಕನ್ನಡಪ್ರಭ ವಾರ್ತೆ, ಬೆಂಗಳೂರು, ಜೂ. 19-
ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡದ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ನಾಲ್ಕು ಸಾವಿರ ಕೋಟಿ ನಷ್ಟವಾಗುತ್ತಿದೆ.
ಪರವಾನಗಿ ನೀಡುವುದನ್ನು ಕಳೆದ 20 ವರ್ಷದ ಹಿಂದೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಸರ್ಕಾರಕ್ಕೆ ಪ್ರತಿವರ್ಷ ಭಾರಿ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಅಂದರೆ, ಪರವಾನಗಿ ನೀಡದಿರುವುದರಿಂದ ಮದ್ಯದ ಅಕ್ರಮ ಮಾರಾಟ ಮತ್ತು ಸಾಗಣೆ ಪ್ರಮಾಣ ಹೆಚ್ಚಾಗಿದ್ದು, ಸರ್ಕಾರ ಕಯ್ಯಾರೆ ಆದಾಯ ಕಳೆದುಕೊಳ್ಳುತ್ತಿದೆ.
ಸರ್ಕಾರ ಪರವಾನಗಿ ನಿಲ್ಲಿಸಿರುವುದರಿಂದ ರಾಜ್ಯದಲ್ಲಿ ಮದ್ಯ ಪ್ರಿಯರ ಸಂಖ್ಯೆ ಅಥವಾ ಮದ್ಯ ಬಳಕೆ ಪ್ರಮಾಣವೇನೂ ಕಡಿಮೆ ಆಗಿಲ್ಲ.ಕಡಿಮೆ ಆಗಿರುವುದು ಸರ್ಕಾರಕ್ಕೆ ಬರುವ ಆದಾಯ ಮಾತ್ರ. ಮದ್ಯದ ಅಕ್ರಮ ಮಾರಾಟ ಮತ್ತು ಸಾಗಣೆ ಜೊತೆಗೆ ಹಾಲಿ ಇರುವ ಪರವಾನಗಿಯನ್ನು ಗುತ್ತಿಗೆಗೆ ನೀಡುವ ಮತ್ತು ಮಾರಾಟ ಮಾಡುವ ದಂಧೆ ಮಿತಿ ಮೀರಿದೆ. ಮದ್ಯದಂಗಡಿಗಳಿಗೆ ಬೇಡಿಕೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ಇದರಿಂದ ಆಬಕಾರಿ ಇಲಾಖೆಗೆ ತಾಪತ್ರಯವಿದೆ. ಏಕೆಂದರೆ, ಅಕ್ರಮಗಳಿಗೆ ಕಡಿವಾಣ ಹಾಕುವ ಜವಾಬ್ದಾರಿ ಇಲಾಖೆ ಹೆಗಲೇರಿದೆ.
ರಾಜ್ಯದಲ್ಲಿ ಹೆಚ್ಚಿದ ಜನಸಂಖ್ಯೆಗೆ ಅನುಗುಣವಾಗಿ ಮದ್ಯಪ್ರಿಯರ ಸಂಖ್ಯೆ ಕೂಡ ಎರಡರಿಂದ ಮೂರು ಪಟ್ಟು ಏರಿಕೆಯಾಗಿದೆ. ಆದರೆ, ಈ ಅನುಪಾತಕ್ಕೆ ಸಮನಾಗಿ ಅಬಕಾರಿ ಇಲಾಖೆಗೆ ಬರುವ ಆದಾಯದಲ್ಲಿ ಮಾತ್ರ ಹೆಚ್ಚಳವಾಗಿಲ್ಲ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಹೆಚ್ಚಾಗಿದ್ದಾರೆ ಮದ್ಯಪ್ರಿಯರು: 1966ರ ಅವಧಿಯಲ್ಲಿ ಮದ್ಯಪಾನಕ್ಕೆ ಸರ್ಕಾರವೇ ಮನ್ನಣೆ ನೀಡಿತ್ತು. ಅಂದರೆ, ಸಾರ್ವಜನಿಕರು ಕಳ್ಳಬಟ್ಟಿಯಂಥ ಮದ್ಯ ಕುಡಿದು ಆರೋಗ್ಯ ನಾಶ ಮಾಡಿಕೊಳ್ಳುತ್ತಾರೆಂದು ಆಗಿನ ಸರ್ಕಾರ ವೈಜ್ಞಾನಿಕವಾಗಿ ತಯಾರಿಸುವ ಮದ್ಯ ಎಂಬ ಕಾರಣ ನೀಡಿ ಬ್ರಾಂದಿ, ವಿಸ್ಕಿ ಮಾರಾಟಕ್ಕೆ ಅವಕಾಶ ನೀಡಿತ್ತು. ಇದರಿಂದ ಅಬಕಾರಿ ಇಲಾಖೆ ಸರ್ಕಾರದ ಪಾಲಿಗೆ ಆದಾಯದ ಮೂಲ ಆಯಿತು.
ಆದರೆ, 1992ರಲ್ಲಿ ಮದ್ಯದಂಗಡಿಗಳ ಸಂಖ್ಯೆ 9000 ಮೀರುತ್ತಿದ್ದಂತೆ ಇದೇ ಕಾಂಗ್ರೆಸ್ ಸರ್ಕಾರ ಹೊಸ ಬಾರ್ ಮತ್ತು ವೈನ್ ಸ್ಟೋರ್ಗಳಿಗೆ ಲೈಸೆನ್ಸ್ ನೀಡಿಕೆ ಸ್ಥಗಿತಗೊಳಿಸಿತು. ಅಂದು ಕೈಗೊಂಡ ನಿರ್ಧಾರ ಮುಂದೆ ಸರ್ಕಾರಕ್ಕೆ ನಷ್ಟದ ಶಾಸನದಂತಾಗಿ ಹೋಯಿತು.
ಏಕೆಂದರೆ, ಅಂದು ರಾಜ್ಯದಲ್ಲಿದ್ದ ಜನಸಂಖ್ಯೆ ಬರೀ 4.39ಕೋಟಿ. ಮದ್ಯಪ್ರಿಯರ ಸಂಖ್ಯೆ ಕೂಡ ಕಡಿಮೆ ಇತ್ತು. ಆದರೆ, ಈಗ ಜನಸಂಖ್ಯೆ ಮತ್ತು ಮದ್ಯಪ್ರಿಯರ ಸಂಖ್ಯೆಯ ಗಾತ್ರ, ಸ್ವರೂಪ ಎಲ್ಲವೂ ಬದಲಾಗಿದೆ. ಅಂದರೆ ರಾಜ್ಯದ ಜನಸಂಖ್ಯೆ ಈಗ 6.10ಕೋಟಿಯನ್ನೂ ಮೀರಿದೆ. ಆದರೆ, ಮದ್ಯದಂಗಡಿಗಳು ಮಾತ್ರ ಇನ್ನೂ 9000 ಮಾತ್ರ.
ಅಬಕಾರಿ ಇಲಾಖೆಯದು ಒಂದು ರೀತಿ ದ್ವಿಪಾತ್ರ ನಟನೆ. ಇದು ಮದ್ಯ ಮಾರಾಟ ಹೆಚ್ಚಾಗುವಂತೆ ಮಾಡಿ ಅದರಿಂದ ಸರ್ಕಾರಕ್ಕೆ ಆದಾಯ ಬರುವಂತೆಯೂ ಮಾಡಬೇಕು. ಜತೆಗೆ ಮದ್ಯ ಸೇವನೆಯಿಂದ ಆರೋಗ್ಯಕ್ಕೆ ಹಾನಿಯಾಗದಂತೆ ಕೂಡ ಎಚ್ಚರ ವಹಿಸಬೇಕು. ಇದಕ್ಕಾಗಿ ಇಲಾಖೆ ಕಾಲಕಾಲಕ್ಕೆ ಮದ್ಯದಂಗಡಿಗಳ ವಹಿವಾಟು ಅಧ್ಯಯನ ನಡೆಸಬೇಕು. ಮದ್ಯಪ್ರಿಯರ ಸಮೀಕ್ಷೆ ನಡೆಸಬೇಕು. ಅದಕ್ಕೆ ತಕ್ಕಂತೆ ವೈಜ್ಞಾನಿಕ ರೀತಿಯಲ್ಲಿ ಮದ್ಯ ಪೂರೈಕೆಯಾಗುವಂತೆ ಮಾಡಿ ಮದ್ಯದಿಂದ ಸಮಾಜಿಕ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಆದರೆ, ಆ ನಿಟ್ಟಿನಲ್ಲಿ ಇಲಾಖೆ ಈವರೆಗೂ ಕ್ರಮ ಕೈಗೊಂಡಿಲ್ಲ.
ಸರ್ಕಾರ ಪರವಾನಗಿ ನೀಡದ ಕಾರಣ ಮದ್ಯದಂಗಡಿಗಳಿಗೆ ಬೇಡಿಕೆ ಇನ್ನೂ ಹೆಚ್ಚಾಗಿದೆ. ಇದು ಹಾಲಿ ಪರವಾನಗಿ ಪಡೆದವರಿಗೆ ಸುಗ್ಗಿಯಾಗಿ ಪರಿಣಮಿಸಿದೆ. ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಮದ್ಯದಂಗಡಿಗಳ ಮಾಲೀಕರು ತಮ್ಮ ಪರವಾನಗಿಯನ್ನು ರೂ. 50 ಲಕ್ಷದಿಂದ ರೂ. 1 ಕೋಟಿ ವರೆಗೂ ಮಾರಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ದಿನ, ವಾರ ಮತ್ತು ತಿಂಗಳ ಲೆಕ್ಕದಲ್ಲಿ ಪರವಾನಗಿಯನ್ನು ಗುತ್ತಿಗೆಗೆ ಕೊಟ್ಟಿದ್ದಾರೆ.
ಇನ್ನು ಗ್ರಾಮಗಳಲ್ಲಿ ಪರವಾನಗಿ ಇಲ್ಲದ ವೈನ್ಸ್ ಸ್ಟೋರ್ಗಳೂ ಹೆಚ್ಚುತ್ತಿವೆ. ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟ ಜೋರಾಗಿದೆ. ಇದರ ವಿರುದ್ಧ ಇಲಾಖೆ ಹೋರಾಟ ನಡೆಸಲು ಮಂದಾದರೆ ಅದು ಪರೋಕ್ಷವಾಗಿ ಇಲಾಖೆ ಕ್ರಮಕ್ಕೇ ವಿರುದ್ಧವಾಗುತ್ತದೆ.
ಅಂದರೆ, ತಿಂಗಳಿಗೆ ಇಂತಿಷ್ಟು ಪ್ರಮಾಣದ ಮದ್ಯ ಮಾರಾಟ ಮಾಡಬೇಕೆಂಬ ಗುರಿ ನಿಗದಿಯಾಗಿರುತ್ತದೆ. ಹೀಗಿರುವಾಗ ಬಾರ್ಗಳಿಂದ ತಂದು ಹಳ್ಳಿಗಳಲ್ಲಿ ಕೊಂಚ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದನ್ನು ತಡೆದರೆ ಮದ್ಯ ಮಾರಾಟ ಗುರಿ ಮುಟ್ಟುವುದನ್ನು ಅಧಿಕಾರಿಗಳೇ ತಡೆದಂತಾಗುತ್ತದೆ.
ಹೇಗೆ ತಪ್ಪುತ್ತಿದೆ?
ಮದ್ಯ ಮಾರಾಟದಿಂದ ಇಲಾಖೆಗೆ ಪ್ರತಿವರ್ಷ 2000ಕೋಟಿಯಿಂದ 3 ಸಾವಿರ ಕೋಟಿ ವರೆಗೂ ಆದಾಯ ಹೆಚ್ಚಾಗಬೇಕು. ಆದರೆ, ಅನಧಿಕೃತ ಮಾರಾಟ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ನಿರೀಕ್ಷಿತ ಆದಾಯ ಬರುತ್ತಿಲ್ಲ. 2007ರಲ್ಲಿ ಇಲಾಖೆಗೆ 5000ಕೋಟಿ ವರೆಗೂ ಆದಾಯ ಬರುತ್ತಿತ್ತು. ನಂತರ ಬೆಳವಣಿಗೆ ದರ ಹೆಚ್ಚಾಗಿ ಇಷ್ಟೊತ್ತಿಗೆ 14,000ಕೋಟಿ ಮೀರಬೇಕಿತ್ತು. ಆದರೆ, 2012-13ನೇ ಸಾಲಿಗೆ ಇಲಾಖೆ ಗಳಿಸಿದ ಆದಾಯ 11000ಕೋಟಿ ಮಾತ್ರ. ಅದೂ ಅಧಿಕಾರಿಗಳು ನಕಲಿ ಮದ್ಯ ತಯಾರಿಕೆ ತಡೆದು ಮಾರಾಟದ ಗುರಿ ಬೆನ್ನು ಹತ್ತಿದ್ದಕ್ಕೆ ಇದು ಸಾಧ್ಯವಾಗಿದೆ. ವೈನ್ ಸ್ಟೋರ್ಗಳ ಸಂಖ್ಯೆ ಹೆಚ್ಚಿಸಿದರೆ 11000ಕೋಟಿ ಆದಾಯವನ್ನು 14000ಕೋಟಿಗೆ ಏರಿಸಬಹುದು ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
- ಶಿವಕುಮಾರ್ ಬೆಳ್ಳಿತಟ್ಟೆ