ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಹಜ ಸ್ಥಿತಿಯತ್ತ ಕೊಡಗು, ಕಪಿಲಾ ತೀರದಲ್ಲಿ ಪ್ರವಾಹ ಭೀತಿ

ಧಾರಾಕಾರ ಮಳೆಯಿಂದ ತತ್ತರಿಸಿದ್ದ ಕೊಡಗು ಜಿಲ್ಲೆಯಾದ್ಯಂತ ವರುಣನ ಅಬ್ಬರ ತಗ್ಗಿದ್ದು ಸಹಜ ಸ್ಥಿತಿಗೆ ಮರಳಿದೆ.

Srinivasa Murthy VN
Updated On : 28 Jun 2013, 11:41 am

ಕ.ಪ್ರ. ವಾರ್ತೆ, ಬೆಂಗಳೂರು, ಜೂ.27-
ಧಾರಾಕಾರ ಮಳೆಯಿಂದ ತತ್ತರಿಸಿದ್ದ ಕೊಡಗು ಜಿಲ್ಲೆಯಾದ್ಯಂತ ವರುಣನ ಅಬ್ಬರ ತಗ್ಗಿದ್ದು ಸಹಜ ಸ್ಥಿತಿಗೆ ಮರಳಿದೆ. ಕೇರಳದ ವಯನಾಡಿನಲ್ಲಿ ಸತತ ಮಳೆಯಿಂದ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದ್ದು ನೀರು ಹೊರ ಬಿಡುತ್ತಿರುವುದರಿಂದ ಕಪಿಲಾ ತೀರ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಸುಳ್ಯ ತಾಲೂಕು ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಬಾಲಕಿಯೊಬ್ಬಳು ಕೊಚ್ಚಿ ಹೋಗಿ ಮೃತಪಟ್ಟಿದ್ದಾಳೆ.
ಕೇರಳದ ವಯನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಸಮೀಪದ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಗುರುವಾರ ಜಲಾಶಯಕ್ಕೆ 35 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಹೀಗಾಗಿ ಕಪಿಲಾ ನದಿ ತೀರದ ಶ್ರೀಕಂಠೇಶ್ವರ ದೇವಸ್ಥಾನದ ಬಳಿಯಿರುವ ಹದಿನಾರು ಕಾಲು ಮಂಟಪ ಭಾಗಶಃ ಮುಳುಗಿದೆ. ಮೈಸೂರು-ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗಳು ಶೇ.80 ರಷ್ಟು ತುಂಬಿವೆ. ಪ್ರವಾಹ ಭೀತಿ ಎದುರಾಗಿದ್ದರಿಂದ ತಗ್ಗು ಪ್ರದೇಶದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ. ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಶಾಲೆಯಿಂದ ಹಿಂತಿರುಗುತ್ತಿದ್ದ ಬಾಲಕಿಯೊಬ್ಬಳು ನೀರಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾಳೆ. ಕುತ್ತಮೊಟ್ಟೆ ನಿವಾಸಿ ಕೃಷ್ಣ ಶೆಟ್ಟಿ ಎಂಬವರ ಪುತ್ರಿ ಉಬರಡ್ಕ ಮಿತ್ತೂರು ಸರ್ಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಸುರಕ್ಷಾ (11) ಗುರುವಾರ ಸಂಜೆ ಶಾಲೆಯಿಂದ ಹಿಂತಿರುಗುತ್ತಿದ್ದ ವೇಳೆ ಸಣ್ಣ ಪಾಲವೊಂದನ್ನು (ತೋಡಿನ ಸೇತುವೆ) ದಾಟುವ ವೇಳೆ ನೀರಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾಳೆ.
ಹಾಸನ ಜಿಲ್ಲೆ ಸಕಲೇಶಪುರ ಸೇರಿದಂತೆ ಇತರೆಡೆ ಭಾರಿ ಮಳೆಯಾಗುತ್ತಿದ್ದು ಹೇಮಾವತಿ ಜಲಾಶಯ ಭರ್ತಿಗೆ 8 ಅಡಿ ಮಾತ್ರ ಬಾಕಿ ಇದೆ. ಜಲಾಶಯದ ಗರಿಷ್ಠ ಸಾಮರ್ಥ್ಯ 2933 ಅಡಿ ಪೈಕಿ ಗುರುವಾರ 2884.30 ಅಡಿ ಸಂಗ್ರಹವಾಗಿತ್ತು. ಯಗಚಿ ಜಲಾಶಯಕ್ಕೂ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು ಪ್ರಮುಖ ನದಿಗಳ ಪ್ರವಾಹದಲ್ಲೂ ಇಳಿಮುಖವಾಗಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರಿ ಮಳೆ ಮುಂದುವರಿದಿದ್ದರಿಂದ ಭದ್ರಾ ನದಿ ಒಳ ಹರಿವು ಹೆಚ್ಚಳವಾಗಿದೆ. ತುಂಗಾ ನದಿ ತುಂಬಿ ಹರಿಯುತ್ತಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ.
ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು, ನದಿಗಳಲ್ಲೂ ಪ್ರವಾಹ ಇಳಿಮುಖವಾಗಿದೆ. ಕಾವೇರಿ, ಲಕ್ಷಣತೀರ್ಥ, ಹಾರಂಗಿ ನದಿಗಳಲ್ಲಿ ಕಳೆದ 3 ದಿನಗಳಿಂದ ಕಂಡು ಬಂದಿದ್ದ ಪ್ರವಾಹ ಸ್ಥಿತಿ ಗುರುವಾರ ಇಳಿಕೆಯಾಗಿದೆ. ಕಾವೇರಿ ಕಣಿವೆಯಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವಿನಲ್ಲಿ ಹೆಚ್ಚಳವಾಗಿದ್ದು ಜಲಾಶಯ ಭರ್ತಿಗೆ ಕೇವಲ 9 ಅಡಿ ಬಾಕಿ ಇದೆ. ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಪ್ರವಾಹ ಭೀತಿ ಎದುರಾಗಿದ್ದು ತೀರ ಪ್ರದೇಶದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕುಶಾಲನಗರ ಹಾರಂಗಿ ಪುನರ್ವಸತಿ ವಿಭಾಗದ ಕಾರ್ಯಪಾಲಕ ಅಭಿಯಂತರ ಎನ್. ಸಿದ್ದರಾಜು ಸೂಚಿಸಿದ್ದಾರೆ. ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೆಆರ್‌ಎಸ್ ಅಣೆಕಟ್ಟೆಗೆ 20 ಸಾವಿರ ಕ್ಯುಸೆಕ್‌ಗೂ ಅಧಿಕ ನೀರು ಬಂದಿದ್ದು ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.

ಕೊಚ್ಚಿ ಹೋದಾತ ಇನ್ನೂ ನಾಪತ್ತೆ: ಕೊಡಗಿನ ನಿಟ್ಟೂರು- ಬಾಳೆಲೆ ಸಂಪರ್ಕ ರಸ್ತೆಯ ಮೇಲೆ ಕಳೆದ ಮೂರು ದಿನಗಳಿಂದಲೂ ಲಕ್ಷ್ಮಣ ತೀರ್ಥ ನದಿ ನೀರು ಅಪಾಯಕಾರಿಯಾಗಿ ಹರಿಯುತ್ತಿದ್ದು, ಗುರುವಾರ ಮಳೆ ಕೊಂಚ ಬಿಡುವು ನೀಡಿದ ಹಿನ್ನೆಲೆಯಲ್ಲಿ ಪ್ರವಾಹ ಇಳಿಮುಖವಾಗಿದೆ. ಲೋಕೋಪಯೋಗಿ ಇಲಾಖೆ ರಸ್ತೆ ಹಾಗೂ ಸಂಪರ್ಕ ಸೇತುವೆ ಮುಳುಗಡೆಯಾಗಿದ್ದು ಗುರುವಾರವೂ ವಾಹನ ಸಂಚಾರ ನಿಷೇಧಿಸಲಾಗಿತ್ತು. ನಿಟ್ಟೂರು ನಿವಾಸಿ, ಖಾಸಗಿ ಬಸ್ ನಿರ್ವಾಹಕ ಸುಬ್ರಮಣ್ಯ (38) ಜೂನ್ 25ರಂದು ಲಕ್ಷ್ಮಣ ತೀರ್ಥ ಪ್ರವಾಹದಲ್ಲಿ ಕೊಚ್ಚಿ ಹೊಗಿದ್ದು ಇನ್ನೂ ಶವ ಪತ್ತೆಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು ಸಮೀಪ ಉಳ್ಳಾಲದಲ್ಲಿ ಕಡಲ್ಕೊರೆತ ಮುಂದುವರಿದಿದೆ. ತೀರ ಪ್ರದೇಶದ ಜನತೆಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಲಾಗಿದೆ.

ಟಿಬಿ ಡ್ಯಾಂಗೆ ಒಂದೇ ದಿನ 35 ಸಾವಿರ ಕ್ಯುಸೆಕ್ ನೀರು
ಮುನಿರಾಬಾದ್: ತುಂಗಭದ್ರಾ ಜಲಾಶಯಕ್ಕೆ ಗುರುವಾರ ಒಂದೇ ದಿನ ಸುಮಾರು 35,000 ಕ್ಯುಸೆಕ್ ನೀರು ಹರಿದು ಬಂದಿದೆ. ಶಿವಮೊಗ್ಗದ ಭದ್ರಾ ಜಲಾಶಯ ಭರ್ತಿಯಾಗಿದ್ದು ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದ ನೀರಿನ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಗುರುವಾರ ಬೆಳಗ್ಗೆ 8ಕ್ಕೆ ಜಲಾಶಯದ ಒಳಹರಿವು ಸುಮಾರು 8,023 ಕ್ಯುಸೆಕ್ ಇತ್ತು. ಸಂಜೆ 5ಕ್ಕೆ ಅದು 24,000 ಕ್ಯುಸೆಕ್‌ಗೆ ತಲುಪಿದ್ದು, ಸಂಜೆ 7 ಗಂಟೆ ವೇಳೆಗೆ ಜಲಾಶಯಕ್ಕೆ ಸುಮಾರು 35,000 ಕ್ಯುಸೆಕ್ ನೀರು ಹರಿದು ಬಂದಿದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement