ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿ
ರಾಜ್ಯ ಗುಪ್ತಚರ ಇಲಾಖೆ ಎಡಿಜಿಪಿ ಅವರನ್ನು ಬದಲಿಸಿರುವ ರಾಜ್ಯ ಸರ್ಕಾರ, ಅಧಿಕಾರಕ್ಕೆ ಬಂದ ನಂತರ ಪ್ರಥಮ ಬಾರಿಗೆ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ.
18 ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗ
ಬೆಂಗಳೂರು, ಮೈಸೂರು ಆಯುಕ್ತರ ಬದಲು
ಕನ್ನಡಪ್ರಭ ವಾರ್ತೆ ಬೆಂಗಳೂರು ಜೂ. 29
ರಾಜ್ಯ ಗುಪ್ತಚರ ಇಲಾಖೆ ಎಡಿಜಿಪಿ ಅವರನ್ನು ಬದಲಿಸಿರುವ ರಾಜ್ಯ ಸರ್ಕಾರ, ಅಧಿಕಾರಕ್ಕೆ ಬಂದ ನಂತರ ಪ್ರಥಮ ಬಾರಿಗೆ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. ಬೆಂಗಳೂರು ಹಾಗೂ ಮೈಸೂರು ನಗರ ಪೊಲೀಸ್ ಆಯುಕ್ತರನ್ನು ಬದಲಿಸುವ ಜತೆಗೆ ಹೊಸ ಹುದ್ದೆಯನ್ನೂ ಸೃಷ್ಟಿಸಿದೆ.
ಪೊಲೀಸ್ ಇಲಾಖೆಯ 18 ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಬಡ್ತಿ ಹಾಗೂ ಹೊಸ ಹುದ್ದೆಯ ಸೃಷ್ಟಿ ಜತೆಗೆ ಹುದ್ದೆಯ ದರ್ಜೆಯನ್ನೂ ಉನ್ನತೀಕರಿಸಲಾಗಿದೆ. ಗುಪ್ತಚರ ಇಲಾಖೆಯ ಎಡಿಜಿಪಿ ಗೋಪಾಲ್ ಬಿ. ಹೊಸೂರ್ ಅವರನ್ನು ವರ್ಗಾಯಿಸಿ, ಅವರ ಸ್ಥಾನಕ್ಕೆ ಆಶಿತ್ ಮೋಹನ್ ಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ. ಗೋಪಾಲ್ ಬಿ. ಹೊಸೂರ್ ಅವರಿಗೆ ಹೋಮ್ಗಾರ್ಡ್ಸ್ ವಿಭಾಗ ತೋರಿಸಲಾಗಿದೆ. ಅಶಿತ್ ಮೋಹನ್ ಪ್ರಸಾದ್ ಅವರು ಕೇಂದ್ರ ಗುಪ್ತಚರ ಇಲಾಖೆಯಲ್ಲಿ 8 ವರ್ಷ ಕೆಲಸ ಮಾಡಿದ್ದರು ಎಂಬುದು ಗಮನಾರ್ಹ ಸಂಗತಿ. ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಬಿಪಿನ್ ಗೋಪಾಲಕೃಷ್ಣ ಅವರಿಗೆ ಡಿಜಿಪಿಯಾಗಿ ಬಡ್ತಿ ನೀಡಿ, ಸಿಐಡಿಗೆ ವರ್ಗಾಯಿಸಲಾಗಿದೆ.
ಸಿಐಡಿ ಆರ್ಥಿಕ ವಿಭಾಗ ಐಜಿಯಾಗಿದ್ದ ಬಿ. ದಯಾನಂದ್ ಅವರನ್ನು ಬೆಂಗಳೂರು ಸಂಚಾರ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ. ಬೆಂಗಳೂರು ನಗರ ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಡಾ. ಎಂ. ಅಬ್ದುಲ್ ಸಲೀಂ ಅವರನ್ನು ಮೈಸೂರು ನಗರ ಪೊಲೀಸ್ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ.
ಪೊಲೀಸ್ ವಸತಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎಂ.ಎನ್. ರೆಡ್ಡಿ ಅವರ ಸೇವೆಯನ್ನು ಗೃಹ ಇಲಾಖೆ ವಾಪಸ್ ಪಡೆದು, ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ಬೆಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಲಯವನ್ನು ಪೂರ್ವ ಮತ್ತು ಪಶ್ಚಿಮ ಎಂದು ವಿಂಗಡಿಸಿ, ಕಾನೂನು ಮತ್ತು ಸುವ್ಯವಸ್ಥೆ ಜಂಟಿ ಆಯುಕ್ತರ ಹುದ್ದೆ ಸೃಷ್ಟಿಸಲಾಗಿದೆ. ಅಪರಾಧ ವಿಭಾಗದ ಪಶ್ಚಿಮ ಎಂಬುದನ್ನು ಮರುರಚಿಸಿ, ಬೆಂಗಳೂರು ಅಪರಾಧವನ್ನು ಒಟ್ಟುಗೂಡಿಸಿ ಆ ಹುದ್ದೆಯನ್ನು ಹೆಚ್ಚುವರಿ ಪೊಲೀಸ್ ಆಯುಕ್ತರ ದರ್ಜೆಗೆ ಉನ್ನತೀಕರಿಸಲಾಗಿದೆ. ಇದಕ್ಕೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ವನ್ನೂ ಸೇರಿಸಲಾಗಿದೆ.
ಐಪಿಎಸ್ ಅಧಿಕಾರಿಗಳು-ವರ್ಗಾವಣೆಗೊಂಡ ಸ್ಥಳ: ಬಿಪಿನ್ ಗೋಪಾಲಕೃಷ್ಣ- ಡಿಜಿಪಿ, ಸಿಐಡಿ; ಬಿ.ಜಿ.ಜೆ. ಮಿರ್ಜಿ- ಎಡಿಜಿಪಿ ಮತ್ತು ಪ್ರಧಾನ ಕಾರ್ಯದರ್ಶಿ, ಗೃಹ ಇಲಾಖೆ; ಎಂ.ಎನ್. ರೆಡ್ಡಿ- ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ; ಆಶಿತ್ ಮೋಹನ್ ಪ್ರಸಾದ್- ಎಡಿಜಿಪಿ, ಗುಪ್ತಚರ; ಅಲೋಕ್ ಮೋಹನ್- ಎಡಿಜಿಪಿ, ಆಡಳಿತ ಮತ್ತು ಎಡಿಜಿಪಿ, ಆಂತರಿಕ ಭದ್ರತೆ ವಿಭಾಗ (ಹೆಚ್ಚುವರಿ); ರಾಘವೇಂದ್ರ ಎಚ್. ಔರಾದ್ಕರ್- ಎಡಿಜಿಪಿ ಮತ್ತು ಬೆಂಗಳೂರು ಪೊಲೀಸ್ ಆಯುಕ್ತ; ಎನ್.ಎಸ್. ಮೆಘರಿಕ್- ಎಡಿಜಿಪಿ, ಅಪರಾಧ ಮತ್ತು ತಾಂತ್ರಿಕ ಸೇವೆಗಳು; ಸಂಜಯ್ ಸಹಾಯ್- ಐಜಿಪಿ, ಆಂತರಿಕ ಭದ್ರತೆ ವಿಭಾಗ; ಡಾ. ಎಸ್. ಪರಶಿವಮೂರ್ತಿ- ಐಜಿಪಿ, ಪೂರ್ವ ವಲಯ, ದಾವಣಗೆರೆ; ಗೋಪಾಲ್ ಬಿ. ಹೊಸೂರ್- ಐಜಿಪಿ, ಹೋಮ್ಗಾರ್ಡ್ಸ್; ಎನ್. ಶಿವಕುಮಾರ್- ಐಜಿಪಿ, ಯೋಜನೆ ಮತ್ತು ಆಧುನೀಕರಣ, ದಾವಣಗೆರೆ; ಡಾ.ಎಂ. ಅಬ್ದುಲ್ ಸಲೀಂ- ಐಜಿಪಿ ಮತ್ತು ಮೈಸೂರು ನಗರ ಪೊಲೀಸ್ ಆಯುಕ್ತ; ಕೆ.ಎಲ್. ಸುಧೀರ್- ಐಜಿಪಿ ಮತ್ತು ಅಗ್ನಿ ಸೇವೆಗಳ ಹೆಚ್ಚುವರಿ ನಿರ್ದೇಶಕ; ಬಿ. ದಯಾನಂದ- ಐಜಿಪಿ ಮತ್ತು ಬೆಂಗಳೂರು ನಗರ ಸಂಚಾರ ಮತ್ತು ಭದ್ರತೆಯ ಹೆಚ್ಚುವರಿ ಪೊಲೀಸ್ ಆಯುಕ್ತ; ಸೈಯದ್ ಉಲ್ಫತ್ ಹುಸೇನ್- ಐಜಿಪಿ, ಆಡಳಿತ (ಮುಖ್ಯ ಕಚೇರಿ), ಬೆಂಗಳೂರು; ಬಿಜಯ್ ಕುಮಾರ್ ಸಿಂಗ್- ಡಿಐಜಿ ಮತ್ತು ಹೊಸದಾಗಿ ರಚಿಸಲಾಗಿರುವ ಬೆಂಗಳೂರು ನಗರ ಪೂರ್ವ ವಲಯದ ಕಾನೂನು ಮತ್ತು ಸುವ್ಯವಸ್ಥೆಯ ಜಂಟಿ ಆಯುಕ್ತ; ಎಸ್. ರವಿ- ಡಿಐಜಿ ಮತ್ತು ಹೊಸದಾಗಿ ರಚಿಸಲಾಗಿರುವ ಬೆಂಗಳೂರು ನಗರ ಪಶ್ಚಿಮ ವಲಯದ ಕಾನೂನು ಮತ್ತು ಸುವ್ಯವಸ್ಥೆಯ ಜಂಟಿ ಆಯುಕ್ತ.
ಬೆಂಗಳೂರು ನಗರ ಪಶ್ಚಿಮ ವಲಯದ ಅಪರಾಧ ವಿಭಾಗದ ಜಂಟಿ ಆಯುಕ್ತರಾಗಿದ್ದ ಐಜಿಪಿ ಪ್ರಣಬ್ ಮೊಹಂತಿ ಅವರ ಹುದ್ದೆಯನ್ನು ಪುನರ್ರಚಿಸಿ ಬೆಂಗಳೂರು ನಗರದ ಅಪರಾಧದ ಹೆಚ್ಚುವರಿ ಪೊಲೀಸ್ ಆಯುಕ್ತರನ್ನಾಗಿಸಲಾಗಿದೆ.