ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೃತಪಟ್ಟವರೆಷ್ಟು?

ಉತ್ತರಾಖಂಡದಲ್ಲಿ ಮಹಾಪ್ರವಾಹದಿಂದ ಮೃತಪಟ್ಟವರ ಸಂಖ್ಯೆ ಎಷ್ಟು? 1 ಸಾವಿರವೋ ಅಥವಾ 10 ಸಾವಿರವೋ?

Srinivasa Murthy VN
Updated On : 29 Jun 2013, 11:35 am

ಡೆಹ್ರಾಡೂನ್:  ಉತ್ತರಾಖಂಡದಲ್ಲಿ ಮಹಾಪ್ರವಾಹದಿಂದ ಮೃತಪಟ್ಟವರ ಸಂಖ್ಯೆ ಎಷ್ಟು? 1 ಸಾವಿರವೋ ಅಥವಾ 10 ಸಾವಿರವೋ?
ಮಹಾದುರಂತ ಸಂಭವಿಸಿ 15 ದಿನಗಳ ಬಳಿಕವೂ ಇಂಥದ್ದೊಂದು ಗೊಂದಲಕ್ಕೆ ಕಾರಣವಾಗಿರುವುದು ರಾಜ ಕಾರಣಿಗಳು ದಿನಕ್ಕೊಂದರಂತೆ ನೀಡುತ್ತಿರುವ ಹೇಳಿಕೆಗಳು. ಇತ್ತೀಚೆಗಷ್ಟೇ ವಿಪತ್ತು ನಿರ್ವಹಣಾ ಸಚಿವ ಯಶ್ಪಾಲ್ ಆರ್ಯ ಅವರು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 5 ಸಾವಿರ ತಲುಪಬಹುದು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಈಗ ಉತ್ತರಾಖಂಡದ ಸ್ಪೀಕರ್ ಗೋವಿಂದ್ ಸಿಂಗ್ ಕುಂಜುವಾಲ್ ಈ ಸಂಖ್ಯೆ 10 ಸಾವಿರದ ಗಡಿ ದಾಟ ಬಹುದು ಎಂದಿದ್ದಾರೆ.
ಆದರೆ, ಕುಂಜುವಾಲ್ ಅವರ ಈ ಲೆಕ್ಕಾಚಾರವನ್ನು ಮುಖ್ಯಮಂತ್ರಿ ವಿಜಯ್ ಬಹುಗುಣ ತಳ್ಳಿಹಾಕಿದ್ದಾರೆ. ಈ ಲೆಕ್ಕಾಚಾರ ಸಮರ್ಪಕವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ, ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂದೆ ಮೃತರ ಸಂಖ್ಯೆ 900 ಎಂದು ಸ್ಪಷ್ಟಪಡಿಸಿದ್ದಾರೆ.
ಇದು ಸಾವಿನ ಸಂಖ್ಯೆಯ ಕುರಿತ ಗೊಂದಲವನ್ನು ಇನ್ನಷ್ಟು ಹೆಚ್ಚಿಸಿದೆ. ಈ ಎಲ್ಲಾ ಗೊಂದಲಕ್ಕೆ ಅವಶೇಷಗಳ ತೆರವು ಕಾರ್ಯಾಚರಣೆ ಪೂರ್ಣಗೊಂಡ ಬಳಿಕವಷ್ಟೇ ಸ್ಪಷ್ಟ ಉತ್ತರ ಸಿಗಲಿದೆ.
ಈ ನಡುವೆ, ಶುಕ್ರವಾರ ಮಳೆರಾಯ ಕೊಂಚ ಬಿಡುವು ನೀಡಿದ ಹಿನ್ನೆಲೆಯಲ್ಲಿ ಬದರಿನಾಥದಲ್ಲಿ ಸಿಕ್ಕಿಹಾಕಿಕೊಂಡಿರುವ 1313 ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಇದರಲ್ಲಿ 600 ಮಂದಿಯನ್ನು ಕಾಪ್ಟರ್ ಮೂಲಕ ಸ್ಥಳಾಂತರಿಸಿದರೆ, ಉಳಿದವರನ್ನು ಕಾಲ್ದಾರಿಯ ಮೂಲಕ ರಕ್ಷಣೆ ಮಾಡಲಾಯಿತು. ಇನ್ನೂ 600ಕ್ಕೂ ಹೆಚ್ಚು ಮಂದಿ ಸಿಕ್ಕಿಹಾಕಿಕೊಂಡಿದ್ದು ಅವರನ್ನು ಭಾನುವಾರ ಸ್ಥಳಾಂತರಿಸಲಾಗುವುದು. ಇದರೊಂದಿಗೆ ರಕ್ಷಣಾ ಕಾರ್ಯ ಬಹುತೇಕ ಮುಕ್ತಾಯಗೊಂಡಂತಾಗಲಿದೆ.
ಸ್ಥಳೀಯರತ್ತ ಗಮನ: ಸಂತ್ರಸ್ತ ಯಾತ್ರಾರ್ಥಿಗಳ ರಕ್ಷಣಾ ಕಾರ್ಯ ಬಹುತೇಕ ಪೂರ್ಣಗೊಂಡ ಬೆನ್ನಲ್ಲೇ ಅವಶೇಷಗಳನ್ನು ತೆರವುಗೊಳಿಸುವ ಮತ್ತು ಸ್ಥಳೀಯರ ಪುನರ್ವಸತಿ ಕಾರ್ಯ ಚುರುಕುಗೊಳಿಸಲಾಗಿದೆ. ರುದ್ರಪ್ರಯಾಗ, ಚಮೋಲಿ ಮತ್ತು ಉತ್ತರಕಾಶಿ ಜಿಲ್ಲೆಗಳಲ್ಲಿ 600 ಗ್ರಾಮಗಳು ಹೊರಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿವೆ. ಈ ಗ್ರಾಮಸ್ಥರಿಗೆ ಆಹಾರ ಪೂರೈಸುವ ಕಾರ್ಯವನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಪ್ಟರ್ ಹಿಂತೆಗೆತ ಶುರು
ಕಳೆದ ಹದಿನೈದು ದಿನಗಳಿಂದ ಪ್ರವಾಹಪೀಡಿತ ಪ್ರದೇಶದಲ್ಲಿ ಯುದ್ಧೋಪಾದಿಯಲ್ಲಿ  ಸಂತ್ರಸ್ತರ ರಕ್ಷಣಾ ಹಾಗೂ ಪರಿಹಾರ ಕಾರ್ಯದಲ್ಲಿ ತೊಡಗಿರುವ ಕಾಪ್ಟರ್‌ಗಳನ್ನು ವಾಯುಸೇನೆಯು ಭಾಗಶಃ ಹಿಂತೆಗೆದುಕೊಳ್ಳಲಿದೆ. ರಕ್ಷಣಾ ಕಾರ್ಯವು ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಾಯುಸೇನೆಯು ಈ ನಿರ್ಧಾರಕ್ಕೆ ಬಂದಿದೆ. ಆದರೂ, ತುರ್ತು ಸಂದರ್ಭಕ್ಕಾಗಿ 15 ಕಾಪ್ಟರ್‌ಗಳು ಸ್ಥಳದಲ್ಲೇ ಉಳಿಯಲಿದ್ದು, ಪರಿಹಾರ ಕಾರ್ಯದಲ್ಲಿ ನೆರವು ನೀಡಲಿವೆ.

ಕೇದಾರಕ್ಕೆ ವಿಶೇಷ ತಂಡ
ಕೇದಾರನಾಥ ದೇವಸ್ಥಾನಕ್ಕೆ ಆಗಿರುವ ಹಾನಿಯ ಕುರಿತು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಭಾನುವಾರ ಅವರು ದೇಗುಲಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಈ ತಂಡದಲ್ಲಿ ದೆಹಲಿ ಮತ್ತು ಡೆಹ್ರಾಡೂನ್‌ನ ಐವರು ಅಧಿಕಾರಿಗಳು ಇರಲಿದ್ದಾರೆ.  ಕೇದಾರನಾಥ ದೇಗುಲವಲ್ಲದೆ ಇಡೀ ಪಟ್ಟಣವನ್ನು ಸಂಪೂರ್ಣವಾಗಿ ವೈಜ್ಞಾನಿಕವಾಗಿ ಪುನರ್ ನಿರ್ಮಿಸಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ವಿಜಯ
ಬಹುಗುಣ ಹೇಳಿದ್ದಾರೆ.

ಕುಟುಂಬಗಳ ಶಿಫ್ಟ್
ಬಿಸಿಲಿನಿಂದಾಗಿ ಉತ್ತರಾಖಂಡ  ಪರ್ವತ ಪ್ರದೇಶಗಳಲ್ಲಿರುವ  ಹಿಮ ಕರಗಲು ಆರಂಭಿಸಿದ್ದು, ಇದರಿಂದ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಲು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಭಾಗೀರಥಿ ನದಿ ದಡದಲ್ಲಿರುವ 200 ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗಿದೆ

ಶವಗಳ ಅಂತ್ಯಸಂಸ್ಕಾರ
ಕೇದಾರನಾಥದಲ್ಲಿ ಮೃತಪಟ್ಟವರ ಸಾಮೂಹಿಕ ಅಂತ್ಯಸಂಸ್ಕಾರ ಕಾರ್ಯ ಮುಂದುವರಿದಿದ್ದು, ಶುಕ್ರವಾರ ಮತ್ತಷ್ಟು ಮೃತದೇಹಗಳಿಗೆ ಅಗ್ನಿಸ್ಪರ್ಶ ನೀಡಲಾಗಿದೆ. ಇದರಿಂದ ಈವರೆಗೆ ಒಟ್ಟು 52 ಶವಗಳ ಅಂತ್ಯಸಂಸ್ಕಾರ ನಡೆಸಿದಂತಾಗಿದೆ. ಸಾಂಕ್ರಾಮಿಕ ರೋಗದ ಭೀತಿ ಹಿನ್ನೆಲೆಯಲ್ಲಿ ಅನಾಥ ಶವಗಳ ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement