ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿವಿ ಆಡಳಿತಕ್ಕೆ ಸಿಎಂ ಹಸ್ತಕ್ಷೇಪ

Srinivasa Murthy VN
Updated On : 29 Jun 2013, 11:40 am

ಬೆಂವಿವಿ ವಿಶೇಷಾಧಿಕಾರಿ ಡಾ. ಸಿ. ಶಿವರಾಜು ಮುಂದುವರಿಸಲು ಶಿಫಾರಸು
-ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಬೆಂಗಳೂರು ಜೂ. 29

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ನೇಮಕಕ್ಕೆ ಮುಖ್ಯಮಂತ್ರಿಗಳು ಪ್ರಭಾವ ಬೀರುತ್ತಿದ್ದಾರೆ ಎಂಬ ಅಂಶಗಳು ಕೇಳುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ವಿಶ್ವವಿದ್ಯಾಲಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಶೇಷಾಧಿಕಾರಿಗೆ ಹಾಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಯಲ್ಲಿ  ಮುಂದುವರಿಸಲು ಶಿಫಾರಸು ಮಾಡಿದ್ದಾರೆ.
ಇದರಿಂದ ವಿಶ್ವವಿದ್ಯಾಲಯ ಸಣ್ಣ ಪುಟ್ಟ ಹುದ್ದೆಗಳಿಗೂ ಮುಖ್ಯಮಂತ್ರಿಗಳಿಂದ ಸಹಿ ಹಾಕಿಸಿಕೊಂಡು ಪತ್ರ ತರುವ ಪ್ರಕ್ರಿಯೆ ಪ್ರಾರಂಭವಾಗಿದೆ. ವಿಶ್ವವಿದ್ಯಾಲಯ ಮುಖ್ಯಮಂತ್ರಿಗಳ ವ್ಯಾಪ್ತಿಗೆ ಬಾರದಿದ್ದರೂ ಹಸ್ತಕ್ಷೇಪ ಮಾಡಿ ಒಬ್ಬ ವ್ಯಕ್ತಿಯನ್ನು ವಿಶೇಷಾಧಿಕಾರಿಯಾಗಿ ಮುಂದುವರಿಸುವಂತೆ ಶಿಫಾರಸು ಮಾಡಿರುವುದು ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಈಗಾಗಲೇ ವಿಶೇಷಾಧಿಕಾರಿ ಹುದ್ದೆ ಹಾಗೂ ಕೆಲವು ಹುದ್ದೆಗಳಿಗೆ ಬೆಂಗಳೂರು ವಿವಿ ಕುಲಪತಿಗಳು ಅರ್ಹರಿಂದ ಅರ್ಜಿ ಆಹ್ವಾನಿಸಿದ್ದಾರೆ. ಅರ್ಜಿ ಪರಿಶೀಲಿಸಿ ಅರ್ಹ ವ್ಯಕ್ತಿಗಳನ್ನು ನೇಮಕ ಮಾಡಲು ಮುಂದಾಗಿರುವ ಸಂದರ್ಭದಲ್ಲಿ ಸಮತಾ ಸೈನಿಕ ದಳದವರು ಹಾಲಿ ಪ.ಜಾ. ಮತ್ತು ಪ.ಪಂಗಡದ ವಿಶೇಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸಿ. ಶಿವರಾಜು ಅವರನ್ನೇ ಮುಂದುವರಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದು ಸಹಿ ಮಾಡಿಸಿ ಕೊಂಡು ಬಂದಿದ್ದಾರೆ.
ಕಾನೂನು ಏನು?: ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ 2000, 29ರ ಪ್ರಕಾರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹುದ್ದೆಗಳ ನೇಮಕ ಮಾಡುವ ಅಧಿಕಾರಿ ಸಿಂಡಿಕೇಟ್ ಸಭೆಗೆ ವಿಚಾರ ತಂದು ಆನಂತರ ಸದಸ್ಯರ ಒಪ್ಪಿಗೆ ಪಡೆದು ನೇಮಕ ಮಾಡಬೇಕಾಗಿರುತ್ತದೆ.
ಇಲ್ಲವೆ, ಕೆಎಸ್‌ಯು 56 ಪ್ರಕಾರ ಕುಲಪತಿಗಳು ತಮ್ಮ ವಿಶೇಷಾಧಿಕಾರ ಬಳಿಸಿಕೊಂಡು ವಿವಿಯ ಕೆಲಸ ಕಾರ್ಯಗಳಿಗೆ ತುರ್ತಾಗಿ ಅಧಿಕಾರಿಗಳು ಬೇಕಾದಲ್ಲಿ ನೇಮಕ ಮಾಡಬಹುದಾಗಿದೆ. ಸಹಿ ಮಾಡಿರುವುದರಲ್ಲೇನಿದೆ: ಸಮತಾ ಸೈನಿಕ ದಳದ ಎಂ.ವೆಂಕಟಸ್ವಾಮಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಪ.ಜಾ. ಮತ್ತು ಪ.ಪಂಗಡದ ವಿಶೇಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸಿ. ಶಿವರಾಜು 10 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿನಿಲಯಗಳ ಪ್ರಧಾನ ಕ್ಷೇಮಪಾಲಕರಾಗಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಹಗಲು ರಾತ್ರಿ ಸ್ಪಂದಿಸಿದ್ದಾರೆ. ಹೀಗಾಗಿ ಮುಂದಿನ 3 ವರ್ಷಕ್ಕೆ ಮುಂದುವರಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಭು ಕೃಪೆ: ಡಾ.ಎನ್.ಪ್ರಭುದೇವ್ ಬೆಂಗಳೂರು ವಿವಿ ಕುಲಪತಿಯಾಗಿದ್ದ ಸಂದರ್ಭದಲ್ಲಿ ಕೆಲವು ಹುದ್ದೆಗಳಿಗೆ ಸಿಂಡಿಕೇಟ್ ಸಭೆ ಅನುಮತಿ ಪಡೆಯದೇ ನೇಮಕ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಶಿವರಾಜು ಅವರನ್ನು ನೇಮಕಮಾಡಲಾಗಿತ್ತು. ಹೀಗಾಗಿ ಡಾ.ಎನ್.ಪ್ರಭುದೇವ್  ಕೃಪೆ ಶಿವರಾಜು ಅವರಿಗೂ ಇತ್ತು.

ನನಗೆ ಸಿಎಂ ಸಹಿ ಮಾಡಿರುವ ಪತ್ರ ಬಂದಿದೆ. ನಾವು ಈಗಾಗಲೇ ಕೆಲವು ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದ್ದೇವೆ. ಪ್ರತಿಯೊಬ್ಬರ ಅರ್ಹತೆ ನೋಡಿ ಹುದ್ದೆಗೆ ನೇಮಕಮಾಡಲಾಗುತ್ತದೆ. ಅರ್ಜಿ ಸಲ್ಲಿಸಿರುವವರಿಗಿಂತ ಹೆಚ್ಚಿನ ಅರ್ಹತೆ ಶಿವರಾಜು ಅವರಿಗೆ ಇದ್ದರೆ ಅವರನ್ನೇ ಮುಂದುವರಿಸುತ್ತೇವೆ.
-ಪ್ರೊ.ಬಿ.ತಿಮ್ಮೇಗೌಡ, ಕುಲಪತಿ, ಬೆಂಗಳೂರು ವಿವಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement