ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಾಳೆ ಸಚಿವರ ಪ್ರಮಾಣ

ಸಂಪುಟ ವಿಸ್ತರಣೆಗೆ ಸಿದ್ಧವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.

Srinivasa Murthy VN
Updated On : 17 May 2013, 2:19 am

- ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಸಂಪುಟ ವಿಸ್ತರಣೆಗೆ ಸಿದ್ಧವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಸಮಾಲೋಚಿಸಲಿದ್ದಾರೆ. ಹೀಗಾಗಿ ಶುಕ್ರವಾರ ನಡೆಯಬೇಕಿದ್ದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಶನಿವಾರಕ್ಕೆ ಮುಂದೂಡಲಾಗಿದೆ.
ರಾಹುಲ್ ಗಾಂಧಿ ದೆಹಲಿಯಲ್ಲಿರದ ಕಾರಣ ಗುರುವಾರ ಅವರನ್ನು ಭೇಟಿ ಮಾಡಲು ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗಲಿಲ್ಲ. ಶುಕ್ರವಾರ ಬೆಳಿಗ್ಗೆ 10.30ಕ್ಕೆ ರಾಹುಲ್ ಭೇಟಿಗೆ ಸಮಯ ನಿಗದಿಯಾಗಿದೆ.
ಈಗಾಗಲೇ ದೂರವಾಣಿ ಮೂಲಕ ಸಮಾಲೋಚಿಸಿರುವ ಸಿದ್ದರಾಮಯ್ಯ ಅವರದ್ದು ಶುಕ್ರವಾರದ ಭೇಟಿ ಔಪಚಾರಿಕವಷ್ಟೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರದ ಮೊದಲ ಭೇಟಿ ಇದು.
ಸಂಪುಟಕ್ಕೆ ಸೇರಲಿರುವ ಸುಮಾರು 20 ಸಚಿವರ ಪಟ್ಟಿಯನ್ನು ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿದ್ದಾರೆ. ಇಬ್ಬರು ಸಚಿವರ ಹೊರತಾಗಿ ಎಲ್ಲರಿಗೂ ಒಪ್ಪಿಗೆ ದಕ್ಕಿದೆ. ಕಾಂಗ್ರೆಸ್‌ನ ವಿವಿಧ ಮೂಲಗಳಿಂದ ಎಐಸಿಸಿಗೆ ದಾಖಲಾಗಿರುವ ದೂರುಗಳ ಹಿನ್ನೆಲೆಯಲ್ಲಿ ಆ ಇಬ್ಬರ ಹೆಸರನ್ನು ತಡೆ ಹಿಡಿಯಲಾಗಿದೆ. ದೂರುಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ವಿವರಣೆ ಪಡೆದ ನಂತರ ಆ ಎರಡು ಹೆಸರುಗಳಿಗೆ ಮುಕ್ತಿ ನೀಡುವ ನಿರೀಕ್ಷೆ ಇದೆ.
ರಾಹುಲ್ ಭೇಟಿ ವೇಳೆ 'ಇಬ್ಬರಿಗೆ ಮುಕ್ತಿ': ಈಗಾಗಲೇ ಹೈಕಮಾಂಡ್ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವುದಿಲ್ಲ ಮತ್ತು ಕಳಂಕಿತರಿಗೆ ಅವಕಾಶ ನೀಡಬಾರದು ಎಂಬ ಸೂಚನೆ ನೀಡಿದೆ. ಇಷ್ಟಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಪಟ್ಟಿಯಲ್ಲಿ ಇಬ್ಬರ ಹೆಸರಿಗೆ ಮುಕ್ತಿ ಸಿಗಬೇಕಿದೆ. ಶುಕ್ರವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ವೇಳೆ ಈ ಸಿದ್ದರಾಮಯ್ಯ ಈ ಬಗ್ಗೆ ವಿವರಣೆ ನೀಡಲಿದ್ದಾರೆ ಅಥವಾ ಸೋನಿಯಾಗಾಂಧಿ ಅವರನ್ನು ಮತ್ತೊಮ್ಮ ಭೇಟಿಯಾಗುವ ಸಾಧ್ಯತೆಯೂ ಇದೆ. ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಅವರು ಬೆಂಗಳೂರಿಗೆ ವಾಪಸಾಗಲಿದ್ದಾರೆ.

ಸಂಭವನೀಯ ಸಚಿವರ ಪಟ್ಟಿ
- ಮೈಸೂರು- ಶ್ರೀನಿವಾಸ್ ಪ್ರಸಾದ್, ತನ್ವೀರ್ ಸೇಠ್
- ಚಾಮರಾಜನಗರ- ಮಹದೇವ್ ಪ್ರಸಾದ್
- ಬೆಂಗಳೂರು- ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ರೋಷನ್ ಬೇಗ್
- ಮಂಡ್ಯ - ಅಂಬರೀಶ್
- ರಾಮನಗರ- ಡಿ.ಕೆ.ಶಿವಕುಮಾರ್
- ತುಮಕೂರು - ಟಿ.ಬಿ. ಜಯಚಂದ್ರ
- ಚಿಕ್ಕಮಗಳೂರು- ಮೋಟಮ್ಮ
- ಕಾರವಾರ - ಆರ್.ವಿ. ದೇಶಪಾಂಡೆ
- ಚಿತ್ರದುರ್ಗ - ಆಂಜನೇಯ
- ದಾವಣಗೆರೆ- ಶಾಮನೂರು ಶಿವಶಂಕರಪ್ಪ
- ಯಾದಗಿರಿ- ಡಾ.ಎ.ಬಿ.ಮಾಲಕರೆಡ್ಡಿ
- ಬೀದರ್ - ರಾಜಶೇಖರ್ ಪಾಟೀಲ್
- ಬೆಳಗಾವಿ - ರಮೇಶ್ ಜಾರಕಿಹೋಳಿ, ಪ್ರಕಾಶ್ ಹುಕ್ಕೇರಿ
- ಧಾರವಾಡ - ವೀರಣ್ಣ ಮತ್ತಿಕಟ್ಟಿ/ವಿನಯ ಕುಲಕರ್ಣಿ
- ಬಿಜಾಪುರ - ಎಂ.ಬಿ.ಪಾಟೀಲ್
- ಗದಗ - ಎಚ್.ಕೆ. ಪಾಟೀಲ್
- ದಕ್ಷಿಣ ಕನ್ನಡ - ರಮಾನಾಥ ರೈ
- ಉಡುಪಿ - ವಿನಯ್‌ಕುಮಾರ್ ಸೊರಕೆ
-ಬಾಗಲಕೋಟೆ- ಎಸ್.ಆರ್. ಪಾಟೀಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement