ಸ್ಪಾಟ್ ಫಿಕ್ಸಿಂಗ್: ಶ್ರೀಶಾಂತ್ ಜೈಲಿಗೆ
ಮತ್ತೆ ಹಣದಾಟಕ್ಕೆ ಕ್ರಿಕೆಟ್ ಬಲಿಯಾಗಿದೆ! ಇದುವರೆಗೆ ಪಾಕಿಸ್ತಾನದಲ್ಲಿ ಫೇಮಸ್ ಆಗಿದ್ದ ಸ್ಪಾಟ್ ಫಿಕ್ಸಿಂಗ್ ಭೂತ ಭಾರತಕ್ಕೂ ಕಾಲಿಟ್ಟಿದೆ.
ನವದೆಹಲಿ/ಮುಂಬೈ: ಮತ್ತೆ ಹಣದಾಟಕ್ಕೆ ಕ್ರಿಕೆಟ್ ಬಲಿಯಾಗಿದೆ! ಇದುವರೆಗೆ ಪಾಕಿಸ್ತಾನದಲ್ಲಿ ಫೇಮಸ್ ಆಗಿದ್ದ ಸ್ಪಾಟ್ ಫಿಕ್ಸಿಂಗ್ ಭೂತ ಭಾರತಕ್ಕೂ ಕಾಲಿಟ್ಟಿದೆ.
ಆರಂಭದಿಂದಲೂ ವಿವಾದಗಳ ಸರಮಾಲೆಯನ್ನೇ ಹೊತ್ತುಕೊಂಡು ಬಂದಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಮತ್ತೊಂದು ಕರಾಳ ಮುಖ ಈ ಮೂಲಕ ಬಯಲಾಗಿದೆ. ಸ್ಪಾಟ್ ಫಿಕ್ಸಿಂಗ್ನಲ್ಲಿ ತೊಡಗಿದ್ದ ರಾಜಸ್ಥಾನ ರಾಯಲ್ಸ್ ತಂಡದ ಎಸ್. ಶ್ರೀಶಾಂತ್, ಅಜಿತ್ ಚಾಂಡಿಲಾ ಹಾಗೂ ಅಂಕಿತ್ ಚೌವಾಣ್ ಅವರನ್ನು ಬುಧವಾರ ತಡ ರಾತ್ರಿ ಬಂಧಿಸಲಾಗಿದೆ. ಈ ಆಟಗಾರರೊಂದಿಗೆ 14 ಬುಕ್ಕಿಗಳನ್ನು ಸಹ ಬಂಧಿಸಲಾಗಿದೆ.
ಓವರ್ಗೆ 60 ಲಕ್ಷ: ಐಪಿಎಲ್ ಪಂದ್ಯದ ಓವರ್ ಒಂದರಲ್ಲಿ ಬುಕ್ಕಿಗಳು ಹೇಳಿದಂತೆ ಬೌಲಿಂಗ್ ಮಾಡಲು ರು. 60 ಲಕ್ಷಕ್ಕೂ ಅಧಿಕ ಹಣವನ್ನು ಪಡೆದ ಆರೋಪವನ್ನು ಈ ಆಟಗಾರರು ಎದುರಿಸುತ್ತಿದ್ದಾರೆ.
ದೆಹಲಿ ಪೊಲೀಸರ ವಿಶೇಷ ಘಟಕ ಈ ಮೂವರು ಐಪಿಎಲ್ ಕ್ರಿಕೆಟಿಗರನ್ನು ಬುಧವಾರ ತಡ ರಾತ್ರಿ ಮುಂಬೈನಲ್ಲಿ ಬಂಧಿಸಿದೆ. ವಾಂಖೆಡೆ ಮೈದಾನದಲ್ಲಿ ಮುಂಬೈ ಮತ್ತು ರಾಜಸ್ಥಾನ ನಡುವೆ ಪಂದ್ಯ ನಡೆದ ದಿನವೇ ಈ ಇಬ್ಬರನ್ನು ಬಂಧಿಸಲಾಗಿದೆ.
ಶ್ರೀಶಾಂತ್ ಅವರನ್ನು ಸ್ನೇಹಿತರ ನಿವಾಸದಿಂದ ಬಂಧಿಸಿದರೆ, ಚೌವಾಣ್ ಮತ್ತು ಚಾಂಡಿಲಾ ತಂಗಿದ್ದ ನಾರಿಮನ್ ಪಾಯಿಂಟ್ ಹೋಟೆಲ್ನಲ್ಲಿ ಬಂಧಿಸಲಾಗಿದೆ. ಬಂಧಿಸಲಾದ ಆಟಗಾರರ ವಿರುದ್ಧ ಐಪಿಸಿಯ ಕಲಂ 420 (ವಂಚನೆ) ಹಾಗೂ 120-ಬಿ (ಅಪರಾಧಕ್ಕೆ ಸಂಚು) ಅಡಿ ಪ್ರಕರಣ ದಾಖಲಿಸಲಾಗಿದೆ.
ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ಸಹ ಈ ಆಟಗಾರರನ್ನು ಬುಕ್ ಮಾಡುವ ಸಾಧ್ಯತೆಗಳಿವೆ. ಒಂದು ವೇಳೆ ಈ ಕಾಯ್ದೆಯಡಿ ಇವರ ವಿರುದ್ಧ ಪ್ರಕರಣ ದಾಖಲಾದರೆ ಜಾಮೀನು ಮತ್ತು ತಪ್ಪೊಪ್ಪಿಗೆ ನೀಡುವ ಮುನ್ನವೇ ಅವರನ್ನು ಜೈಲಿಗೆ ತಳ್ಳಬಹುದಾಗಿದೆ.
14 ಬುಕ್ಕಿಗಳ ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ 14 ಬುಕ್ಕಿಗಳನ್ನು ಬಂಧಿಸಲಾಗಿದೆ ಎಂದು ದೆಹಲಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅಲ್ಲಿನ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಹೇಳಿದ್ದಾರೆ.
ಆಟಗಾರರು ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ 3 ಪಂದ್ಯಗಳ ದೃಶ್ಯಗಳ ತುಣುಕುಗಳನ್ನು ಸಾಕ್ಷ್ಯಗಳನ್ನಾಗಿ ನೀಡುವುದಾಗಿ ಪೊಲೀಸರು ಹೇಳಿದ್ದಾರೆ.್ಙ
ಶ್ರೀಶಾಂತ್ ಮೋಸ
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಶ್ರೀಶಾಂತ್ ತಮ್ಮ ಎರಡನೇ ಓವರ್ನ ಆರಂಭಕ್ಕೂ ಮುನ್ನ ಸೊಂಟದಲ್ಲಿ ಟವೆಲ್ ಅನ್ನು ಧರಿಸಲು ಒಪ್ಪಿದ್ದರು. ತಮ್ಮ ಬುಕ್ಕಿ ಬೆಟ್ಟಿಂಗ್ನಲ್ಲಿ ಹಣ ಹೂಡಲು ಕಾಲಾವಕಾಶ ನೀಡುವ ಉದ್ದೇಶದಿಂದ ಶ್ರೀಶಾಂತ್ ಓವರ್ ಆರಂಭಿಸುವ ಮುನ್ನ ಹೆಚ್ಚು ವಾರ್ಮ್ಅಪ್ ಮಾಡಿದರು.
ಶ್ರೀಶಾಂತ್ನ ಸ್ನೇಹಿತ ಹಾಗೂ ಕ್ಲಬ್ ಆಟಗಾರನಾಗಿರುವ ಜಿಜು ಜನಾರ್ದನ್ ಶ್ರೀಶಾಂತ್ ಹಾಗೂ ಬುಕ್ಕಿ ನಡುವೆ ಸಂಪರ್ಕವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಒಪ್ಪಂದದಲ್ಲಿ ಶ್ರೀಶಾಂತ್ ಆ ಓವರ್ನಲ್ಲಿ 14ಕ್ಕೂ ಹೆಚ್ಚು ರನ್ ನೀಡಬೇಕಿತ್ತು. ಈ ಫಿಕ್ಸಿಂಗ್ನಿಂದ ಬುಕ್ಕಿ ಕೋಟ್ಯಂತರ ಹಣ ಸಂಪಾದಿಸಿದ್ದು, ಶ್ರೀಶಾಂತ್ಗೆ 40 ಲಕ್ಷ ನೀಡಲಾಯಿತು ಎಂದು ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ತಿಳಿಸಿದ್ದಾರೆ.
ಚೌವಾಣ್ ಚೇಷ್ಟೆ
ಮುಂಬೈ ವಿರುದ್ಧದ ಪಂದ್ಯದಲ್ಲಿ ಚೌವಾಣ್ ತಮ್ಮ 2ನೇ ಓವರ್ನಲ್ಲಿ 13 ಅಥವಾ ಅದಕ್ಕಿಂತ ಹೆಚ್ಚು ರನ್ ನೀಡಬೇಕಿತ್ತು. ಗ್ಲೆನ್ ಮ್ಯಾಕ್ಸ್ವೆಲ್ಗೆ ಬೌಲಿಂಗ್ ಮಾಡಿದ ಚೌವಾಣ್ ಆ ಓವರ್ನಲ್ಲಿ 15 ರನ್ ನೀಡಿದ್ದರು. ಈ ಫಿಕ್ಸಿಂಗ್ ಒಪ್ಪಂದದಿಂದ ಚೌವಾಣ್ ಬುಕ್ಕಿಯಿಂದ 60 ಲಕ್ಷ ಪಡೆಯಬೇಕಿತ್ತು. ಬುಕ್ಕಿ ಈ ಓವರ್ಗೆ ಬೆಟ್ಟಿಂಗ್ ಹೂಡಲು ಚೌವಾಣ್ ತಮ್ಮ ಕೈಯಲ್ಲಿದ್ದ ವ್ರಿಸ್ಟ್ಬ್ಯಾಂಡ್ ತಿರುಗಿಸಬೇಕಿತ್ತು.
ಅಜಿತನ ವಂಚನೆ
ಅಜಿತ್ ಚಾಂಡಿಲಾ ಮೇ 5ರಂದು ನಡೆದ ಪುಣೆ ವಿರುದ್ಧದ ಪಂದ್ಯದಲ್ಲಿ 1 ಓವರ್ನಲ್ಲಿ 14 ರನ್ಗಳಿಗಿಂತ ಹೆಚ್ಚಿನ ರನ್ ನೀಡಬೇಕಿತ್ತು. ಈ ಒಪ್ಪಂದದ ಅನುಸಾರ ಚಾಂಡಿಲಾ ಬುಕ್ಕಿಗೆ ಸೂಚನೆ ನೀಡಲು ತಮ್ಮ ಜೆರ್ಸಿಯನ್ನು ಮೇಲೆತ್ತುವ ಮೂಲಕ ಸೂಚನೆ ನೀಡಬೇಕಿತ್ತು, ಆದರೆ ಚಾಂಡಿಲಾ ಈ ಸನ್ನೆಯನ್ನು ಮಾಡಲು ಮರೆತರು. ಚಾಂಡಿಲಾ ಸೂಚನೆ ನೀಡಲು ಮರೆತ ಹಿನ್ನೆಲೆಯಲ್ಲಿ ಚಾಂಡಿಲಾ ಮುಂಚಿತವಾಗಿ ಪಡೆದಿದ್ದ 20 ಲಕ್ಷ ಹಣವನ್ನು ಹಿಂತಿರುಗಿಸುವಂತೆ ಬುಕ್ಕಿಗಳು ಒತ್ತಾಯಿಸಿದ್ದರು.
ಸ್ಪಾಟ್ ಫಿಕ್ಸಿಂಗ್ ಎಂದರೇನು?
ಸ್ಪಾಟ್ ಫಿಕ್ಸಿಂಗ್ ಎಂದರೆ, ಒಬ್ಬ ಆಟಗಾರ ಪೂರ್ವ ನಿರ್ಧಾರದಂತೆ ಆಡುವುದು. ಉದಾಹರಣೆಗೆ ಒಬ್ಬ ಬೌಲರ್ ಉದ್ದೇಶ ಪೂರ್ವಕವಾಗಿ ವೈಡ್ ಅಥವಾ ನೋಬಾಲ್ ಎಸೆಯುವುದು ಅಥವಾ ಒಬ್ಬ ಬ್ಯಾಟ್ಸ್ಮನ್ ಎರಡಂಕಿ ರನ್ಗಳಿಸುವುದಿಲ್ಲ ಎಂದು ಪೂರ್ವ ನಿರ್ಧಾರಿತವಾಗಿ ಆಡುವುದು. ಇದನ್ನು ಬುಕ್ಕಿಗಳೇ ನಿರ್ಧರಿಸಿ, ಇದರ ಮೇಲೆಯೇ ಬೆಟ್ಟಿಂಗ್ ಕಟ್ಟಿ ಹಣ ಗಳಿಸುತ್ತಾರೆ. ಕ್ರಿಕೆಟ್ ಬೆಟ್ಟಿಂಗ್ ಭಾರತ ಹಾಗೂ ನೆರೆಯ ರಾಷ್ಟ್ರಗಳಲ್ಲಿ ಒಂದು ಲಾಭದಾಯಕ ವ್ಯಾಪಾರವಾಗಿದೆ. ಹಾಗಾಗಿ ಬುಕ್ಕಿಗಳು ಆಟಗಾರರಿಗೆ ಹಣದ ಆಮಿಷ ಅಥವಾ ಬೆದರಿಕೆ, ಒತ್ತಡದ ಮೂಲಕ ಇದೇ ರೀತಿಯಲ್ಲಿ ಆಡಬೇಕೆಂದು ತಿಳಿಸುತ್ತಾರೆ. ನಂತರ ಆಟಗಾರರು ಯಾವ ರೀತಿಯಲ್ಲಿ ಆಡುತ್ತಾರೆ ಎಂದು ಮೊದಲೇ ತಿಳಿದ ಬುಕ್ಕಿಗಳು ಬೆಟ್ಟಿಂಗ್ನಲ್ಲಿ ಹಣ ಮಾಡುತ್ತಾರೆ. ಕೆಲವೊಮ್ಮೆ ಪ್ರತಿ ಚೆಂಡಿಗೂ ಬೆಟ್ಟಿಂಗ್ ನಡೆಯುತ್ತದೆ.
ಈ ಪ್ರಕರಣದಿಂದ ಅಚ್ಚರಿ ಹಾಗೂ ಆಘಾತವಾಗಿದೆ. ಸ್ಪಾಟ್ ಫಿಕ್ಸಿಂಗ್ ಮತ್ತು ಭ್ರಷ್ಟಾಚಾರ ಕ್ರೀಡೆಗೆ ಅಂಟಿಕೊಂಡಿದ್ದು, ಬಿಸಿಸಿಐ ಹಾಗೂ ರಾಜಸ್ಥಾನ ರಾಯಲ್ಸ್ ಈ ಬೆಳವಣಿಗೆ ಸಹಿಸುವುದಿಲ್ಲ. ಹಾಗಾಗಿ ಆಟಗಾರರ ವಿರುದ್ಧ ಯಾವುದೇ ಕ್ರಮ ಜರುಗಿಸಿದರೂ ಆಡಳಿತ ಮಂಡಳಿ ಬೆಂಬಲ ನೀಡುತ್ತದೆ.
-ರಾಹುಲ್ ದ್ರಾವಿಡ್, ರಾಜಸ್ಥಾನ ರಾಯಲ್ಸ್ ತಂಡದ ನಾಯಕ