ಸ್ಪೀಕರ್ ಮಾತೇ ಇಲ್ಲ ...
ಈ ಬಾರಿ ವಿಧಾನಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಗುವವರು ಯಾರು? ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
-ಸಂಪುಟ ವಿಸ್ತರಣೆ ಪೂರ್ಣಗೊಂಡ ನಂತರವೇ ಈ ಹುದ್ದೆಗಳ ಬಗ್ಗೆ ಚರ್ಚಿಸಲು ನಾಯಕರ ನಿರ್ಧಾರ
-ಪ್ರತಿಪಕ್ಷ ಸಾಲಿನಲ್ಲಿ ಘಟಾನುಘಟಿ ನಾಯಕರಿರುವುದರಿಂದ ಪ್ರಬಲರನ್ನು ಈ ಸ್ಥಾನದಲ್ಲಿ ಕೂರಿಸಲು ಚಿಂತನೆ
ಕ.ಪ್ರ.ವಾರ್ತೆ ಬೆಂಗಳೂರು ಮೇ 16
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಲು ಭಾರಿ ಪೈಪೋಟಿ ನಡೆಯುತ್ತಿದೆ. ಆದರೆ, ಮಹತ್ವದ ವಿಧಾನಸಭೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಮಾತ್ರ ಈ ವರೆಗೆ ಯಾರಿಂದಲೂ ಬೇಡಿಕೆ ಬಂದಿಲ್ಲ.
ಈ ಬಾರಿ ವಿಧಾನಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಗುವವರು ಯಾರು? ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಮಂತ್ರಿ ಸ್ಥಾನಕ್ಕಾಗಿ ಎಲ್ಲರೂ ಪಟ್ಟು ಹಿಡಿದು ಕುಳಿತಿರುವುದರಿಂದ ಈ ಹುದ್ದೆಗಳ ಬಗ್ಗೆ ಇನ್ನೂ ಚರ್ಚೆ ಆರಂಭವಾಗಿಲ್ಲ. ಜೊತೆಗೆ ಅದು ಸದ್ಯಕ್ಕೆ ಯಾರಿಗೂ ಬೇಡದ ಹುದ್ದೆ. ಒಂದು ವೇಳೆ ಮಂತ್ರಿ ಸ್ಥಾನ ಸಿಗದವರು ಸಭಾಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಪ್ರಯತ್ನಿಸುತ್ತಾರೆ. ಸಂಪುಟ ವಿಸ್ತರಣೆ ಪ್ರಕ್ರಿಯೆ ಬಳಿಕ ವಿಧಾನಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆ ಕುರಿತು ಚರ್ಚೆ ಕೈಗೆತ್ತಿಕೊಳ್ಳಲು ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ಪೀಕರ್ ಹುದ್ದೆಗೆ ಪ್ರಸ್ತುತ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಮತ್ತು ವಿ. ಶ್ರೀನಿವಾಸ ಪ್ರಸಾದ್ ಮತ್ತು ಸಿ.ಎಸ್. ನಾಡಗೌಡ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಆದರೆ, ಮೂವರೂ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಆದರೂ ಅವರ ಮನವೊಲಿಸಲು ನಾಯಕರು ಮುಂದಾಗಿದ್ದಾರೆ. ಮೂವರ ಪೈಕಿ ಒಬ್ಬರನ್ನು ಸಭಾಧ್ಯಕ್ಷ ಹುದ್ದೆಗೆ ತರಲು ತೀರ್ಮಾನಿಸಿದ್ದಾರೆ.
ಅನುಭವಸ್ಥ ನಾಯಕರು: ಕಾಗೋಡು ತಿಮ್ಮಪ್ಪ, ಶ್ರೀನಿವಾಸ ಪ್ರಸಾದ್ ಮತ್ತು ನಾಡಗೌಡರಿಗೆ ಶಾಸನ ಸಭೆಯ ನಡಾವಳಿಗಳ ಬಗ್ಗೆ ಅನುಭವ ಇದೆ. ಆದ್ದರಿಂದ ಸ್ಪೀಕರ್ ಹುದ್ದೆಗೆ ಮೂವರ ಪೈಕಿ ಒಬ್ಬರನ್ನು ನೇಮಕ ಮಾಡುವುದು ಸೂಕ್ತ ಎಂಬುದು ನಾಯಕರ ಅಭಿಪ್ರಾಯವಾಗಿದೆ. ಆದರೆ, ಅವರೊಂದಿಗೆ ನಾಯಕರು ಇನ್ನೂ ಮಾತುಕತೆ ನಡೆಸಿಲ್ಲ. ಒಟ್ಟಿನಲ್ಲಿ ಅವರ ಹೆಸರು ಕೇಳಿ ಬರುತ್ತಿರುವುದು ನಿಜ ಎಂದು ದೆಹಲಿಯಲ್ಲಿ ಬಿಡಾರ ಹೂಡಿರುವ ನಾಯಕರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಈ ಮೊದಲು ಶ್ರೀನಿವಾಸಪುರ ಕ್ಷೇತ್ರದಿಂದ ಆರಿಸಿ ಬಂದಿರುವ ಶಾಸಕ ರಮೇಶ್ ಕುಮಾರ್ ಅವರ ಹೆಸರು ಸ್ಪೀಕರ್ ಹುದ್ದೆಗೆ ಪ್ರಸ್ತಾಪವಾಗಿತ್ತು. ಆದರೆ, ಮತ್ತೆ ಸ್ಪೀಕರ್ ಆಗುವ ಬಯಕೆ ರಮೇಶ್ ಕುಮಾರ್ ಅವರಲ್ಲಿ ಇಲ್ಲ. ಜನತಾದಳ ಸರ್ಕಾರದ ಸಂದರ್ಭದಲ್ಲಿ ಆ ಹುದ್ದೆಯನ್ನು ಅವರು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದರು. ಹೀಗಾಗಿ ಅವರ ಹೆಸರು ಚಾಲ್ತಿಗೆ ಬಂದಿತ್ತು. ಸದನದಲ್ಲಿ ಹಿರಿಯ ಶಾಸಕರಾದ ಅರ್.ವಿ.ದೇಶಪಾಂಡೆ ಅವರ ಹೆಸರೂ ಚರ್ಚೆಗೆ ಬಂದಿತ್ತು. ಮಂತ್ರಿ ಸ್ಥಾನ ಸಿಗುವುದು ಖಚಿತ ಆಗಿರುವುದರಿಂದ ಅವರ ಹೆಸರನ್ನೂ ಚರ್ಚೆಯಿಂದ ಕೈ ಬಿಡಲಾಗಿದೆ.
ವಿಧಾನಸಭೆಯಲ್ಲಿ ಈ ಬಾರಿ ಪ್ರತಿಪಕ್ಷ ಪಾಳಯದಲ್ಲಿ ಘಟಾನುಘಟಿ ನಾಯಕರಿದ್ದಾರೆ. ಅದರಲ್ಲೂ ಜಾತ್ಯತೀತ ಜನತಾದಳ ಪ್ರಮುಖ ಪ್ರತಿಪಕ್ಷವಾಗಿರಲಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್ ಮತ್ತು ಎಚ್.ಡಿ. ಕುಮಾರಸ್ವಾಮಿ, ಬಿ. ಶ್ರೀರಾಮುಲು, ರೈತ ಸಂಘದ ಕೆ.ಎಸ್.ಪುಟ್ಟಣ್ಣಯ್ಯ ಅವರು ಮೊದಲ ಸಾಲಿನಲ್ಲಿರಲಿದ್ದಾರೆ. ಕಳೆದ ಅವಧಿಯಲ್ಲಿ ಸ್ಪೀಕರ್ ಹುದ್ದೆ ಅತ್ಯಂತ ವಿವಾದಕ್ಕೆ ಒಳಗಾಗಿತ್ತು.
ಹೀಗಿರುವಾಗ ಪ್ರತಿಪಕ್ಷಗಳನ್ನು ಸಮರ್ಥವಾಗಿ ಎದುರಿಸುವ ಸಂದರ್ಭದಲ್ಲಿ ಸ್ಪೀಕರ್ ಪಾತ್ರ ಪ್ರಮುಖವಾಗಿರುತ್ತದೆ. ಹೀಗಾಗಿ ಅನುಭವಸ್ಥರನ್ನು ಆ ಸ್ಥಾನದಲ್ಲಿ ಕೂರಿಸಬೇಕು ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಹೀಗಾಗಿಯೇ ಕಾಗೋಡು ತಿಮ್ಮಪ್ಪ, ಶ್ರೀನಿವಾಸ ಪ್ರಸಾದ್ ಮತ್ತು ನಾಡಗೌಡರ ಹೆಸರನ್ನು ಹರಿಯ ಬಿಡಲಾಗಿದೆ ಎಂದು ತಿಳಿದು ಬಂದಿದೆ.
ಹುದ್ದೆ ಒಪ್ಪುವರೇ ?: ಶ್ರೀನಿವಾಸ ಪ್ರಸಾದ್ ಅವರು ಲೋಕಸಭೆ ಸದಸ್ಯರಾಗಿದ್ದವರು. ಜೊತೆಗೆ ಕೇಂದ್ರದಲ್ಲಿ ಗ್ರಾಹಕ ಮತ್ತು ಸಾರ್ವಜನಿಕರ ವಿತರಣೆ ರಾಜ್ಯ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿ ಹಲವು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇನ್ನು ನಾಡಗೌಡರು ಐದನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಅವರು ಕಾರ್ಮಿಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ 1999ರಿಂದ 2004ರ ವರೆಗೆ ಮುಖ್ಯ ಸಚೇತಕರಾಗಿದ್ದರು. ಆದರೆ, ಸ್ಪೀಕರ್ ಹುದ್ದೆಯನ್ನು ಇವರಲ್ಲಿ ಯಾರು ಒಪ್ಪುತ್ತಾರೆ ಎಂಬ ಪ್ರಶ್ನೆ ಮೂಡಿದೆ.
ಇನ್ನು ವಿಧಾನಸಭೆ ಉಪಾಧ್ಯಕ್ಷ, ಆಡಳಿತ ಪಕ್ಷದ ಮುಖ್ಯ ಸಚೇತಕ, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಹುದ್ದೆಗಳ ವಿಚಾರದಲ್ಲೂ ಚರ್ಚೆ ಆರಂಭವಾಗಿಲ್ಲ. ಜೂನ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ವಿಧಾನ ಮಂಡಲ ಅಧಿವೇಶನ ಕರೆಯುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಸಮಯ ಇರುವುದರಿಂದ ಅವಸರ ಮಾಡದಿರಲು ನಾಯಕರು ನಿರ್ಧರಿಸಿದ್ದಾರೆ.
ಇದಕ್ಕೂ ಮುನ್ನ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರಕ್ಕೆ ವಿಧಾನಸಭೆ ಅಧಿವೇಶನ ಕರೆಯಬೇಕಿದೆ. ಬಹುತೇಕ ಮೇ 20ರ ಬಳಿಕ ಅಧಿವೇಶನ ಕರೆಯುವ ಸಾಧ್ಯತೆ ಇದೆ. ಆದರೆ, ಇದಕ್ಕಾಗಿ ತಾತ್ಕಾಲಿಕವಾಗಿ (ಪ್ರೋಟರ್ಮ್) ಸ್ಪೀಕರ್ ನೇಮಕ ಮಾಡಿಕೊಳ್ಳಬಹುದು. ಅವರು ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಬೇಕಾಗುತ್ತದೆ. ಅದಕ್ಕೆ ಹಿರಿಯ ಶಾಸಕರ ಹೆಸರನ್ನು ಪರಿಗಣಿಸಲಾಗುತ್ತದೆ.
ಈ ಹಿಂದೆ ಆರ್.ವಿ.ದೇಶಪಾಂಡೆ ಅವರು ಈ ಕೆಲಸವನ್ನು ನಿಭಾಯಿಸಿದ್ದರು. ಈ ಬಾರಿಯೂ ಅವರೇ ಶಾಸಕರಿಗೆ ಪ್ರಮಾಣ ವಚನ ಬೋಧಿಸಬಹುದು. ಬಳಿಕ ಚುನಾವಣೆ ಮೂಲಕ ಸಭಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ.
ಕಳಂಕಿತರೆನ್ನಲು ಮಾನದಂಡ ಏನು?
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಸಂಪುಟಕ್ಕೆ ಕಳಂಕಿತರನ್ನು ಸೇರಿಸಿಕೊಳ್ಳುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಮರು ಪ್ರಶ್ನೆ ಎಸೆದ ಸಿದ್ದರಾಮಯ್ಯ, 'ಸದ್ಯಕ್ಕೆ ಕಳಂಕಿತರನ್ನು ಅಳೆಯಲಿಕ್ಕೆ ಯಾವುದೇ ಮಾನದಂಡ ಇಲ್ಲ' ಎಂದರು. ಆದರೆ, ಲೋಕಾಯುಕ್ತರು ಮತ್ತು ಸುಪ್ರೀಂ ಕೋರ್ಟ್ನಿಂದ ದೋಷಿಗಳಾಗಿದ್ದರೆ ಅಂಥವರನ್ನು ಕಳಂಕಿತರೆನ್ನಬಹುದು ಎಂದರು. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದು, ಸುಪ್ರೀಂ ಕೋರ್ಟ್ ಗಣಿ ಪರವಾನಗಿ ರದ್ದು ಮಾಡಿರುವ ವ್ಯಕ್ತಿಗಳು ಲೋಕಾಯುಕ್ತ ತನಿಖೆಗೊಳಪಟ್ಟವರ ಆಯ್ದ ಪ್ರಕರಣಗಳಿವೆ. ಇಂಥ ಪ್ರಕರಣಗಳಲ್ಲಿ ದಾಖಲೆ ಪರಿಶೀಲಿಸಿದ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು. ಹಿಂದಿನ ಬಿಜೆಪಿ ಸರ್ಕಾರ ಕೈಗೊಂಡಿರುವ ಗೋಹತ್ಯೆ ನಿಷೇಧ ಕಾಯ್ದೆ, ವಿಶ್ವವಿದ್ಯಾಲಯ ಕಾಯ್ದೆ ಸೇರಿದಂತೆ ಹಲವು ನಿರ್ಧಾರಗಳ ಬಗ್ಗೆ ಮರುಪರಿಶೀಲಿಸಲಾಗುವುದು ಎಂದೂ ಅವರು ಹೇಳಿದರು. ಮದ್ಯಪಾನ ನಿಷೇಧಕ್ಕೆ ತಮ್ಮ ತಾತ್ವಿಕ ವಿರೋಧ ಇದೆ ಎಂದೂ ಹೇಳಿದರು.
ಸಂಪುಟದಲ್ಲಿ ಜೈನರಿಗೆ ಆದ್ಯತೆ ನೀಡಲು ಆಗ್ರಹ
ಬೆಂಗಳೂರು: ಅಲ್ಪಸಂಖ್ಯಾತರಾದ ಜೈನ ಸಮುದಾಯಕ್ಕೆ ಸೇರಿದ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕೆಂದು ಕರ್ನಾಟಕ ಜೈನ್ ಅಸೋಸಿಯೇಷನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ. ಕಾಂಗ್ರೆಸ್ ಪಕ್ಷದಿಂದಲೇ ಮೂಡಬಿದಿರೆ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಆಯ್ಕೆಯಾಗಿರುವ ಹಿರಿಯ ಶಾಸಕರಾದ ಅಭಯಚಂದ್ರ ಜೈನ್ ಹಾಗೂ ಎರಡನೇ ಬಾರಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕ್ಷೇತ್ರದಿಂದ ಆಯ್ಕೆಯಾಗಿರುವ ಡಿ.ಸುಧಾಕರ್ ಅವರಿಗೆ ಸಚಿವ ಸಂಪುಟದಲ್ಲಿ ಆದ್ಯತೆ ನೀಡಬೇಕೆಂದು ಅಸೋಸಿಯೇಷನ್ನ ಕಾರ್ಯದರ್ಶಿ ಟಿ.ಜಿ. ದೊಡ್ಡಮನಿ ಅವರು ಒತ್ತಾಯಿಸಿದ್ದಾರೆ.
-ಕೆ.ವಿ. ಪ್ರಭಾಕರ್