ಗೆಳೆಯನ ಕಳಕೊಂಡು ಗಳಗಳನೆ ಅತ್ತ ಸಿದ್ದು
ಮೇಲ್ನೋಟಕ್ಕೆ ತುಂಬ ಒರಟಾಗಿ ಕಂಡರೂ ಆಂತರ್ಯದಲ್ಲಿ ಸಿದ್ದರಾಮಯ್ಯ ಅವರು ಮೆದು ಹೃದಯಿ ಎಂಬುದು ಮತ್ತೆ ಸಾಬೀತಾಯಿತು.
ಕನ್ನಡಪ್ರಭ ವಾರ್ತೆ ಮೈಸೂರು ಮೇ 17
ಮೇಲ್ನೋಟಕ್ಕೆ ತುಂಬ ಒರಟಾಗಿ ಕಂಡರೂ ಆಂತರ್ಯದಲ್ಲಿ ಸಿದ್ದರಾಮಯ್ಯ ಅವರು ಮೆದು ಹೃದಯಿ ಎಂಬುದು ಮತ್ತೆ ಸಾಬೀತಾಯಿತು. ತಮ್ಮ ಬಾಲ್ಯದ ಗೆಳೆಯ ಹಾಲಿನ ರಾಮಣ್ಣ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೆಹಲಿಯಿಂದ ನೇರವಾಗಿ ಮೈಸೂರಿಗೆ ಬಂದ ಸಿದ್ದರಾಮಯ್ಯ ಅವರು, ಗೆಳೆಯನ ಅಂತಿಮ ದರ್ಶನದಲ್ಲಿ ಅಕ್ಷರಶಃ ಗದ್ಗದಿತರಾಗಿ ಕಣ್ಣೀರಿಟ್ಟರು.
72 ವರ್ಷ ವಯಸ್ಸಿನ ಹಾಲಿನ ರಾಮಣ್ಣ ಅವರು ಅನಾರೋಗ್ಯದಿಂದಾಗಿ ಶುಕ್ರವಾರ ನಿಧನರಾದರು. ಮೈಸೂರಿನ ಇಟ್ಟಿಗೆಗೂಡಿನ ರಾಮಣ್ಣ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ ಅವರು, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪಾರ್ಥಿವ ಶರೀರದ ಬಳಿ ನಿಂತು ಕಂಬನಿಗರೆದರು. ಪಾರ್ಥಿವ ಶರೀರವನ್ನು ಅಂತಿಮ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವವರೆಗೂ ಸಿದ್ದರಾಮಯ್ಯ ಜಾಗ ಬಿಟ್ಟು ಕದಲಲಿಲ್ಲ. ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದಂತೆ ರಾಮಣ್ಣ ಅವರ ಕುಟುಂಬದವರ ರೋದನ ಮುಗಿಲು ಮುಟ್ಟಿತು. ಸಿದ್ದರಾಮಣ್ಣ ಬಂದಿದ್ದಾರೆ ಮಾತನಾಡಿ ಎಂದು ಚೀರಿಕೊಂಡರು. ಬಳಿಕ ರಾಮಣ್ಣ ಅವರ ಮಕ್ಕಳಾದ ಸತೀಶ್, ಸರ್ವೇಶ್ ಮತ್ತು ಸುದೇಶ್ ಅವರಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ, ಧೈರ್ಯ ಕಳೆದುಕೊಳ್ಳಬೇಡಿ, ನಾನಿದ್ದೇನೆ ಎಂದು ಸಂತೈಸಿದರು.
ಸಿದ್ದರಾಮಯ್ಯ ಅವರು ಬಿಡುವು ಸಿಕ್ಕಾಗಲೆಲ್ಲ ರಾಮಣ್ಣ ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದರು. ಕಳೆದ ಏಪ್ರಿಲ್ 14 ರಂದು ಮತ್ತು ಮೇ 3 ರಂದು ಸಿದ್ದರಾಮಯ್ಯ ಅವರು ಮನೆಗೆ ಭೇಟಿ ನೀಡಿ, ಒಂದೂವರೆ ಗಂಟೆ ಮಾತನಾಡಿದ್ದರು ಎಂದು ಅವರ ಕುಟುಂಬ ವರ್ಗದವರು ನೆನಪಿಸಿಕೊಂಡರು. ಆದರೆ, ಮೇ 4 ರಂದು ರಾಮಣ್ಣ ಅವರಿಗೆ ಮಾತು ನಿಂತು ಹೋಯಿತು ಎಂದು ರಾಮಣ್ಣ ಅವರ ಪತ್ನಿ ಸರೋಜಮ್ಮ ಹೇಳಿದರು.
ಗೆಳೆತನ ಹೇಗಾಯ್ತು?: ಸಿದ್ದರಾಮಯ್ಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿ ಹಾಗೂ ಕುಪ್ಪೆಗಾಲ ಅಕ್ಕಪಕ್ಕದ ಗ್ರಾಮಗಳು. ರಾಮಣ್ಣ ಹಾಲಿನ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದರೆ, ಸಿದ್ದರಾಮಯ್ಯ ವಿದ್ಯಾಭ್ಯಾಸಕ್ಕಾಗಿ ಬಂದರು. ಈ ಸಂದರ್ಭದಲ್ಲಿ ಇವರಿಬ್ಬರು ಒಂದೇ ಕೊಠಡಿಯಲ್ಲಿ ಹಲವು ವರ್ಷ ಉಳಿದುಕೊಂಡಿದ್ದರು. ಅಂದು ಆರಂಭವಾದ ಸ್ನೇಹ ಇಂದಿನವರೆಗೂ ಮುಂದುವರಿದಿತ್ತು. ಇವರಿಬ್ಬರ ಸ್ನೇಹಕ್ಕೆ ಯಾವತ್ತೂ ಧಕ್ಕೆ ಬಂದಿರಲಿಲ್ಲ. ಮೂಲತಃ ಕುಪ್ಪೆಗಾಲದವರಾದ ಹಾಲಿನ ರಾಮಣ್ಣ ಅವರಿಗೆ ಅವರಿಗೆ ಪತ್ನಿ, ಮೂವರು ಪುತ್ರರಿದ್ದಾರೆ.
ಸಂಪುಟ ರಚನೆ ಹಿಂದೆ ವಿಶ್ವನಾಥ್ ಮಾಸ್ಟರ್ ಮೈಂಡ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟ ರಚನೆ ಹಿಂದೆ ಸಂಸದ ಎಚ್. ವಿಶ್ವನಾಥ್ ಅವರ ಮಾಸ್ಟರ್ ಮೈಂಡ್ ಕೆಲಸ ಮಾಡಿದೆ.
ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಹೇಳಿಕೆ ನೀಡಿದ್ದ ವಿಶ್ವನಾಥ್, ಸಂಪುಟದಲ್ಲಿ ಕಳಂಕಿತರು, ರಿಯಲ್ ಎಸ್ಟೇಟ್ ಕುಳಗಳು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಅವಕಾಶ ನೀಡದಂತೆ ಆಗ್ರಹಿಸಿದ್ದರು. ಈ ಹೇಳಿಕೆ ದೆಹಲಿ ಮಟ್ಟದಲ್ಲಿ ಭಾರಿ ಕೆಲಸ ಮಾಡಿದ್ದು, ಕಳಂಕ ಎದುರಿಸುತ್ತಿದ್ದ ಡಿ.ಕೆ. ಶಿವಕುಮಾರ್, ರೋಶನ್ ಬೇಗ್, ಅನಿಲ್ ಲಾಡ್ ಮೊದಲಾದವರಿಗೆ ಸಚಿವ ಸ್ಥಾನ ಮರೀಚಿಕೆಯಾಗುವ ಸಾಧ್ಯತೆ ಇದೆ. ಅದೇ ರೀತಿ ಸಂಪುಟದಲ್ಲಿ ಹೇಳಿಕೊಳ್ಳುವಂತ ರಿಯಲ್ ಎಸ್ಟೇಟ್ ಉದ್ಯಮಿಗಳೂ ಕಾಣುತ್ತಿಲ್ಲ. ಜತೆಗೆ ವಿಧಾನ ಪರಿಷತ್ನ ಯಾವುದೇ ಸದಸ್ಯರಿಗೆ ಸ್ಥಾನ ದೊರೆತಿಲ್ಲ.