ಕೂಳು ಕೊಟ್ಟು ಗೋಳು ಕೊಡೋದು ನ್ಯಾಯವೇ?
ಗೃಹಪ್ರವೇಶ ಮಾಡಿ ಹಾಲು ಉಕ್ಕಿಸೋದು ಪದ್ಧತಿ. ಅದರ ಬದಲು ಅಲ್ಕೋಹಾಲ್ ಉಕ್ಕಿಸಿದ್ರೆ? ಅವಲಕ್ಷಣ ಅನ್ನಿಸಿಕೊಳ್ಳುತ್ತೆ.
ಬೆಂಗಳೂರು: ಗೃಹಪ್ರವೇಶ ಮಾಡಿ ಹಾಲು ಉಕ್ಕಿಸೋದು ಪದ್ಧತಿ. ಅದರ ಬದಲು ಅಲ್ಕೋಹಾಲ್ ಉಕ್ಕಿಸಿದ್ರೆ?
ಅವಲಕ್ಷಣ ಅನ್ನಿಸಿಕೊಳ್ಳುತ್ತೆ.
ಸಿದ್ದರಾಮಯ್ಯ ಹೆಸರು ಕೆಡಿಸಿಕೊಂಡವರಲ್ಲ. ಹಣಕಾಸಿನ ಜ್ಞಾನ ಹೊಂದಿರುವವರು. ಆಡಳಿತದಲ್ಲೂ ಹಿಡಿತ ಚೆನ್ನಾಗಿದೆ. ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದಾಗ ಒಳ್ಳೆಯ ನಿರೀಕ್ಷೆಗಳಿದ್ದವು. ಅದಕ್ಕೆ ತಕ್ಕಂತೆ ಮುಖ್ಯಮಂತ್ರಿಯಾಗುತ್ತಿದ್ದಂತೆ ಒಳ್ಳೆಯ ಘೋಷಣೆಗಳನ್ನೂ ಮಾಡಿದರು. ಆದರೆ ಜನರಿಗೆ ಕಡಿಮೆ ದರದಲ್ಲಿ ಮದ್ಯ ಪೂರೈಸಿ ಅಮಲೇರಿಸುವ ಘೋಷಣೆಯನ್ನು ಅವರಿಂದ ಯಾರೂ ನಿರೀಕ್ಷಿಸಿರಲಿಲ್ಲ!
ರಾಜ್ಯದಲ್ಲಿ ಸಾರಾಯಿ ನಿಷೇಧವಾದ ಬಳಿಕ ಬಡವರು ದುಬಾರಿ ಬೆಲೆ ತೆತ್ತು ಮದ್ಯ ಕುಡಿಯುತ್ತಿದ್ದಾರೆ. ಇದರಿಂದಾಗಿ ಅವರನ್ನು ಸಾಲದ ಕೂಪಕ್ಕೆ ತಳ್ಳಿದಂತಾಗಿದೆ. ಅದರ ಬದಲು ಸರ್ಕಾರವೇ ಕಡಿಮೆ ದರಕ್ಕೆ ಮದ್ಯ ಪೂರೈಕೆ ಮಾಡುವ ಮೂಲಕ ಅಂತಹ ವ್ಯಕ್ತಿಗಳಿಗೆ ಸಹಾಯ ಮಾಡಲು ಸಿದ್ದರಾಮಯ್ಯ ಮುಂದಾಗುತ್ತಿದ್ದಾರೆ. ಕಡಿಮೆ ದರದಲ್ಲಿ ಮದ್ಯ ಪೂರೈಸಿದರೆ ದುಬಾರಿ ಮದ್ಯಕ್ಕೆ ವೆಚ್ಚ ಮಾಡುತ್ತಿದ್ದ ಹಣ ಉಳಿಯುತ್ತದೆ ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ ಇರಬಹುದು.
ಆದರೆ ಪುಕ್ಕಟೆ ಸಿಕ್ಕರೆ ನಂಗೊಂದು, ನಮ್ಮ ಅಪ್ಗೊಂದು ಎಂಬಂತೆ ಕಾತರಿಸುವ ಜನರೇ ಹೆಚ್ಚಿರುವಾಗ, ಕಡಿಮೆ ದರಕ್ಕೆ ಮದ್ಯ ಕೊಟ್ಟರೆ ಕಡಿಮೆ ಕುಡಿದಾರೇ? ನೈಂಟಿ ಕುಡಿಯೋರು ಕ್ವಾರ್ಟರ್, ಹಾಫ್ ಬಾಟಲ್ ಎತ್ತಿಬಿಡುತ್ತಾರೆ.
ಆಮೇಲೆ ಟೈಟು ಟೈಟು, ಫುಲ್ ಟೈಟು!: 2007ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಸಾರಾಯಿ ನಿಷೇಧ ಜಾರಿ ಮಾಡಿತ್ತು. ಆದರೆ ದುಬಾರಿ ಮದ್ಯ ಮಾರಾಟ ಜಾರಿಯಲ್ಲಿದೆ. ಸಾರಾಯಿ ನಿಷೇಧದ ನಂತರ ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿ ಕುಡಿದು ತೂರಾಡುವವರ ಮತ್ತು ರಸ್ತೆ ಬದಿಯ ಗಟಾರಕ್ಕೆ ಬೀಳುವವರ, ಮನೆಗೆ ಬಂದು ಹೆಂಡತಿಯೊಂದಿಗೆ ಜಗಳ ತೆಗೆದು ಹೊಡೆಯುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು.
ಇದಕ್ಕೆ ಕಾರಣವೆಂದರೆ ಮದ್ಯ ದುಬಾರಿಯಾದದ್ದು. ದುಬಾರಿ ಎಂಬ ಕಾರಣಕ್ಕೇ ಹೆಚ್ಚು ಕುಡಿಯಲು ಸಾಧ್ಯವಾಗುತ್ತಿರಲಿಲ್ಲ. ಮೊದಲು ಕ್ವಾರ್ಟರ್ ಏರಿಸುತ್ತಿದ್ದವರು ಸಿಕ್ಸ್ಟಿ, ನೈಂಟಿಗೆ ಇಳಿದಿದ್ದರು.
ಇನ್ನೊಂದು ಅಂಶವೆಂದರೆ ಸರ್ಕಾರಿ ಕಡಿಮೆ ದರದ ಮದ್ಯಕ್ಕಿಂತ ದುಬಾರಿ ಮದ್ಯದ ಗುಣಮಟ್ಟ ಚೆನ್ನಾಗಿದೆ. ಅಲ್ಕೋಹಾಲ್ ಮತ್ತು ಸ್ಪಿರಿಟ್ ಪ್ರಮಾಣ ಕಡಿಮೆಯಿದೆ. ಸರ್ಕಾರಿ ಮದ್ಯಕ್ಕೆ ಹೊಂದಿಕೊಂಡ ಕುಡುಕರಿಗೆ ದುಬಾರಿ ಮದ್ಯದ ಸಿಕ್ಸ್ಟಿ- ನೈಂಟಿಗಳು ಕಿಕ್ ಕೊಡುತ್ತಿರಲಿಲ್ಲ. ಕ್ವಾರ್ಟರ್ ಏರಿಸೋಕೆ ದುಡ್ಡು ಸಾಲುತ್ತಿರಲಿಲ್ಲ.
ಹೀಗಾಗಿ ಕುಡ್ಕೊಂಡು, ತೂರಾಡ್ಕೊಂಡು, ತಂಗಾಳೀಲಿ ತೇಲಾಡ್ಕೊಂಡು ಬರೋ ಬದಲು, ನೆಟ್ಟಗೆ ಮನೆ ತಲುಪುತ್ತಿದ್ದರು.
ಇನ್ನೂ ಒಂದು ಸಂಗತಿಯನ್ನು ಗಮನಿಸಬೇಕು. ಸಾರಾಯಿ ನಿಷೇಧದಿಂದ ಸರ್ಕಾರಕ್ಕೆ ಯಾವ ನಷ್ಟವೂ ಆಗಿಲ್ಲ. ಬದಲಾಗಿ ಲಾಭವಾಗಿದೆ. ಸಾರಾಯಿ ನಿಷೇಧ ಆದಾಗಿನಿಂದ ಸರ್ಕಾರಕ್ಕೆ ಅಬಕಾರಿ ಇಲಾಖೆಯಿಂದ ಬರುತ್ತಿದ್ದ ಲಾಭ ಸತತವಾಗಿ ಹೆಚ್ಚಾಗುತ್ತಿದೆ.
ಸಾರಾಯಿ ನಿಷೇಧಕ್ಕೂ ಮುನ್ನ ವರ್ಷಕ್ಕೆ ಸರಾಸರಿ 153 ಲಕ್ಷ ಬಾಕ್ಸ್ ಮದ್ಯ ಮಾರಾಟವಾಗುತ್ತಿತ್ತು. ಇದು 2009- 10ರಲ್ಲಿ 389.9 ಲಕ್ಷ ಬಾಕ್ಸ್ಗೆ ಏರಿತು. 2010-11ರಲ್ಲಿ 490 ಲಕ್ಷ ಬಾಕ್ಸ್ ಮಾರಾಟವಾಯಿತು. ಅಂದರೆ ಜನ ಹೆಚ್ಚೆಚ್ಚು ಮದ್ಯ ಸೇವಿಸುತ್ತಿದ್ದಾರೆ. ಇನ್ನು ಅಗ್ಗದ ದರದ ಮದ್ಯವನ್ನೂ ಮಾರುಕಟ್ಟೆಗೆ ಬಿಟ್ಟರೆ ಹೇಗಿರಬಹುದು ಸ್ಥಿತಿ?
ಆದಾಯವೂ ಹೆಚ್ಚಿತ್ತು: ಮದ್ಯದ ಮಾರಾಟ ಹೆಚ್ಚಿದಂತೆ ಅಬಕಾರಿ ಇಲಾಖೆ ಆದಾಯವೂ ಹೆಚ್ಚಿದೆ. 2009- 10ರಲ್ಲಿ 7001 ಕೋಟಿ ಇದ್ದ ಅಬಕಾರಿ ಆದಾಯ 2012- 13ರಲ್ಲಿ 11,000 ಕೋಟಿ ದಾಟಿದೆ. ಸಾರಾಯಿ ನಿಷೇಧದಿಂದ ಸರ್ಕಾರದ ಆದಾಯ ಹೆಚ್ಚಿದೆ. ಕಳ್ಳಭಟ್ಟಿ ಹೆಚ್ಚು ಕಡಿಮೆ ಸ್ಥಗಿತಗೊಂಡಿದೆ. ನಕಲಿ ಮದ್ಯದ ಹಾವಳಿ ಗಮನಾರ್ಹವಾಗಿ ಕುಸಿದಿದೆ. ನಕಲಿ ಮದ್ಯ ಸೇವಿಸಿ ಸಾಯುವವರ ಸುದ್ದಿ ಕಾಣಿಸದೇ ಸಾಕಷ್ಟು ದಿನಗಳಾಗಿವೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮೊದಲಿನಷ್ಟು ಮುಕ್ತವಾಗಿ ಮದ್ಯ ಸಿಗುತ್ತಿಲ್ಲ. ಸಾಕಷ್ಟು ಗ್ರಾಮಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಇದು ಸತ್ಯವೂ ಹೌದು. ಆದರೆ ಸಾರಾಯಿ ನಿಷೇಧಕ್ಕೂ ಮೊದಲು ಸಾರಾಯಿ ಅಂಗಡಿ ಅಂತ ಬೋರ್ಡು ತೂಗುಹಾಕಿ ಅಧಿಕೃತವಾಗಿ ಮಾರಾಟ ಮಾಡುವಷ್ಟು ಮುಕ್ತವಾಗಂತೂ ಮದ್ಯ ಮಾರಾಟವಾಗುತ್ತಿಲ್ಲ.
ನಗರದಿಂದ ಮದ್ಯ ಖರೀದಿಸಿ, ಅದನ್ನು ಗ್ರಾಮಗಳಲ್ಲಿ ಮಾರಾಟ ಮಾಡುವ ಜನ ಇದ್ದೇ ಇರುತ್ತಾರೆ. ಅಂತಹ ದಂಧೆಗಳನ್ನು ತಡೆಯುವುದು ಕಷ್ಟವೇನಲ್ಲ. ಸರ್ಕಾರ ಗಟ್ಟಿ ಮನಸ್ಸು ಮಾಡಿದರೆ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರೆ ಹಳ್ಳಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆಯುವುದು ಕಷ್ಟವಲ್ಲ. ಹಾಗೆ ಮಾಡಿದರೆ ಎಲ್ಲ ಕಡೆ ಸುಲಭವಾಗಿ ಮದ್ಯ ಸಿಗುವುದಿಲ್ಲ. ಕುಡಿಯಲೆಂದೇ ದಿನವೂ ಸಮೀಪದ ಪೇಟೆ ಅಥವಾ ನಗರಕ್ಕೆ ಹೋಗುವುದು ಕಷ್ಟ. ಹೋದರೂ ಮದ್ಯ ದುಬಾರಿಯಾಗಿರುವುದರಿಂದ ಕಂಠಮಟ್ಟ ಕುಡಿಯಲು ಸಾಧ್ಯವಿಲ್ಲ.
ನಿಷೇಧದಿಂದ ಒಳ್ಳೆಯದು: ಯಾವ ದಿಕ್ಕಿನಿಂದ, ದೃಷ್ಟಿಯಿಂದ ನೋಡಿದರೂ ಸಾರಾಯಿ ನಿಷೇಧ ಎಂಬುದು ಸಮಾಜಕ್ಕೆ ಮತ್ತು ಸರ್ಕಾರಕ್ಕೆ ಒಳ್ಳೆಯದನ್ನೇ ಮಾಡಿದೆ. ನಷ್ಟವಾಗಿದ್ದು ಮತ್ತು ಕಷ್ಟವಾಗಿದ್ದು ಕುಡುಕರಿಗೆ ಮಾತ್ರ. ಸಮಾಜದಲ್ಲಿ ಕುಡುಕರು ದೊಡ್ಡ ಸಂಖ್ಯೆಯಲ್ಲಿದ್ದಾರೋ? ಮದ್ಯಪಾನ ಮಾಡದಿರುವವರೋ? ಮದ್ಯಪಾನ ಮಾಡದವರೇ ಹೆಚ್ಚಿದ್ದಾರೆ ಎಂದು ಯಾವ ಸಮೀಕ್ಷೆಯನ್ನೂ ನಡೆಸದೇ ಹೇಳಬಹುದು.
ಹಾಗಿರುವಾಗ ಸಮಾಜದ ದೊಡ್ಡ ಪ್ರಮಾಣದ ಜನಕ್ಕೆ ಸಹಾಯವಾಗುವ, ಒಳ್ಳೆಯದು ಮಾಡುವ ಮತ್ತು ಬಹುಸಂಖ್ಯಾತ ಜನರ ಬೆಂಬಲ ಹೊಂದಿರುವ ಸಾರಾಯಿ ನಿಷೇಧ ತೆರವು ಮಾಡಿ, ಕಡಿಮೆ ದರದ ಮದ್ಯ ಮಾರಾಟ ಮಾಡುವುದು ಸರ್ಕಾರಕ್ಕೆ ಮತ್ತು ಹೊಸ ಮುಖ್ಯಮಂತ್ರಿಗೆ ಶೋಭೆ ತರುವ ಸಂಗತಿಯೇ?
ಇಷ್ಟಕ್ಕೂ ಕಡಿಮೆ ದರದ ಮದ್ಯ ತಯಾರಿಕೆಯಿಂದ ಆಗುವ ಲಾಭವೇನು? ಕುಡಿಯಲು ಕಷ್ಟಪಡುತ್ತಿದ್ದ ಮತ್ತು ಹೆಚ್ಚು ದುಡ್ಡು ವ್ಯಯಿಸುತ್ತಿದ್ದ ಕುಡುಕರಿಗೆ ಸುಲಭವಾಗಿ ಕಡಿಮೆ ದುಡ್ಡಿನಲ್ಲಿ ಮದ್ಯ ದೊರೆಯುತ್ತದೆ. ಕಡಿಮೆ ದರಕ್ಕೆ ಮದ್ಯ ದೊರೆಯಿತು, ಹಾಗಾಗಿ ಸ್ವಲ್ಪ ದುಡ್ಡು ಉಳಿಯಿತು ಎಂದು ಚಿಂತಿಸುವಷ್ಟು ಬುದ್ಧಿ ಕುಡುಕನಿಗೆ ಇರುವುದಿಲ್ಲ. ಆತ ಕಡಿಮೆ ದರಕ್ಕೆ ಮದ್ಯ ದೊರೆಯಿತು ಎಂದು ಎರಡು ಪೆಗ್ ಹೆಚ್ಚೇ ಏರಿಸುತ್ತಾನೆ.ಪರಿಣಾಮವಾಗಿ ರಸ್ತೆ ಅಳೆಯುವವರು, ಗುಂಡಿಗೆ ಬೀಳುವವರು ಹೆಚ್ಚುತ್ತಾರೆ ಹೊರತು ಬೇರೇನೂ ಸಾಧನೆಯಾಗುವುದಿಲ್ಲ. ಬಡವರ ಉದ್ಧಾರವಂತೂ ಸಾಧ್ಯವೇ ಇಲ್ಲ.
ಅಲ್ಲದೆ, ಕಡಿಮೆ ದರದ ಮದ್ಯ ತಯಾರಿಸಲು ಸರ್ಕಾರ ಹೊಸ ದಾರಿ ಕಂಡುಕೊಳ್ಳಬೇಕು. ಅದಕ್ಕಾಗಿ ಹಣ ವೆಚ್ಚ ಮಾಡಬೇಕು. ಸರ್ಕಾರಿ ಸಾರಾಯಿ ಮಾರಾಟ ಜಾರಿಯಲ್ಲಿದ್ದಾಗ ಇದ್ದ ವ್ಯವಸ್ಥೆ ಈಗಿಲ್ಲ. ಸಾರಾಯಿ ಅಂಗಡಿ ಇಟ್ಟು ಊರ ಜನರಿಂದ ಶಾಪ ಹಾಕಿಸಿಕೊಳ್ಳುತ್ತಿದ್ದವರು ಜೀವನಕ್ಕೆ ಬೇರೆ ಮರ್ಯಾದಸ್ತ ದಾರಿ ಕಂಡುಕೊಂಡಿದ್ದಾರೆ. ಅಂತೂ ಸರ್ಕಾರ ಅಗ್ಗದ ಮದ್ಯದ ಹೆಸರಲ್ಲಿ ಮತ್ತದೇ ಸಾರಾಯಿಯನ್ನು ಜನರಿಗೆ ಕುಡಿಸಿದಂತಾಗುತ್ತದೆ. ಹಾಗೊಮ್ಮೆ ಅಗ್ಗದ ದರಕ್ಕೆ ಮದ್ಯ ನೀಡಲೇಬೇಕು ಎಂದಾದರೆ ಅದಕ್ಕೆ ಸರ್ಕಾರ ಹಣ ಖರ್ಚು ಮಾಡಬೇಕಾಗುತ್ತದೆ.
ಅಗ್ಗದ ದುಡ್ಡಿಗೆ ಒಳ್ಳೆಯ ಮದ್ಯವೇ ದೊರೆತರೆ, ಉಳಿದವರು ದುಬಾರಿ ಬೆಲೆತೆತ್ತು ಬೇರೆ ಮದ್ಯ ಏಕೆ ಕುಡಿಯಬೇಕು? ಅವರೂ ಅದನ್ನೇ ಕುಡಿದರೆ ಆಗ ಸರ್ಕಾರದ ಬೊಕ್ಕಸಕ್ಕೆ ಭಾರಿ ಪೆಟ್ಟು ಬೀಳುವುದು ಖಂಡಿತ. 1ರಂತೆ ತಿಂಗಳಿಗೆ 30 ಕೆ.ಜಿ. ಅಕ್ಕಿಯನ್ನೂ ಸರ್ಕಾರ ಘೋಷಣೆ ಮಾಡಿದೆ. ಇನ್ನು ಅಗ್ಗದ ಮದ್ಯವನ್ನೂ ಕೊಟ್ಟುಬಿಟ್ಟರೆ ಸ್ವರ್ಗಕ್ಕೆ ಮೂರೇ ಗೇಣು!
ಅಗ್ಗದ ಮದ್ಯ ಎಂಬ ಅಗ್ಗದ ಪ್ರಚಾರದಾಸೆಗೆ ಮರುಳಾಗಿ ಹೊಸ ಮುಖ್ಯಮಂತ್ರಿ ಅವರು ಸರ್ಕಾರಕ್ಕೆ ಮತ್ತು ಸಮಾಜಕ್ಕೆ ನಷ್ಟ ಮಾಡುವಂತಹ ತೀರ್ಮಾನ ಕೈಗೊಳ್ಳದಿರಲಿ ಎಂಬುದಷ್ಟೇ ನಮ್ಮ ಆಶಯ.
ಸಾರಾಯಿ ನಿಷೇಧದ ನಂತರ ಲಭ್ಯವಿರುವ ಮದ್ಯವನ್ನು ಆದಷ್ಟು ಕುಡಿದು ಮನೆಗೇ ಬರುತ್ತಿದ್ದ ಗಂಡಸರು, ಅಗ್ಗದ ಮದ್ಯ ಮಾರಾಟ ಆರಂಭವಾದರೆ ಕುಡಿದು ರಸ್ತೆಯಲ್ಲಿ ಬೀಳುವುದು ಖಂಡಿತ. ಬಡವರಿಗೆ ಅಗ್ಗದ ದರಕ್ಕೆ ಅಕ್ಕಿಕೊಡಲು ಮುಂದಾಗಿರುವ ಸರ್ಕಾರ, ಅಗ್ಗದ ದರಕ್ಕೆ ಮದ್ಯ ನೀಡಲು ಮುಂದಾಗಿ ಊಟವನ್ನೇ ಕಿತ್ತುಕೊಳ್ಳಲು ಮುಂದಾಗಿದೆ. ಅಕ್ಕಿ ಮೂಲಕ ಕೂಳು ಕೊಟ್ಟು, ಅಗ್ಗದ ಮದ್ಯದ ಮೂಲಕ ಗೋಳು ಕೊಡುವುದು ಸರಿಯೇ?
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕೊಂಚ ವಿಚಾರ ಮಾಡಿನೋಡಿ. ಮುಖ್ಯಮಂತ್ರಿಗಳು ತಮ್ಮನ್ನು ಭೇಟಿ ಮಾಡಿದ್ದಾರೆ ಎಂಬ ಕಾರಣಕ್ಕೆ ಇರಬೇಕು, ಸಮಾಜವನ್ನು ಕಾಪಾಡುವ ಜವಾಬ್ದಾರಿ ಹೊತ್ತಿರುವ ಸಾಹಿತಿಗಳು ಈ ಬಗ್ಗೆ ಭರ್ಜರಿ ಮೌನಕ್ಕೆ ಶರಣಾಗಿದ್ದಾರೆ.
ಸರ್ಕಾರಕ್ಕೆ ಲಾಭವೇ?
ಹೀಗಾಗಿ ಹೊಸ ಮಾರಾಟಗಾರರನ್ನು ಹುಡುಕಬೇಕು. ಅದಕ್ಕೊಂದು ಹೊಸ ನೆಟ್ವರ್ಕ್ ಸ್ಥಾಪಿಸಬೇಕು. ಪ್ರತಿಯೊಂದು ಕೂಡ ಹೊಸದಾಗೇ ಆಗಬೇಕು. ಇದರಿಂದ ಸರ್ಕಾರಕ್ಕೆ ಭಾರೀ ಎನ್ನಬಹುದಾದ ಲಾಭವಂತೂ ದಕ್ಕುವುದಿಲ್ಲ. ಬದಲಾಗಿ ನಷ್ಟವೇ ಹೆಚ್ಚು. ಅಗ್ಗದ ದುಡ್ಡಿಗೆ ಮುಗ್ಗಿದ ರೊಟ್ಟಿ ಎಂಬ ಮಾತೇ ಇದೆ. ಹಾಗೆಯೇ ಅಗ್ಗದ ಮದ್ಯ ಅಂದ ಮೇಲೆ ಈಗ ಮಾರಾಟವಾಗುತ್ತಿರುವ ದುಬಾರಿ ಮದ್ಯಕ್ಕಿಂತ ಒಳ್ಳೆಯ ಗುಣಮಟ್ಟದ ಮದ್ಯ ನೀಡುವುದು ಸಾಧ್ಯವೇ ಇಲ್ಲ.
- ವಿನಾಯಕ ಭಟ್ ಮೂರೂರು
ಕನ್ನಡಪ್ರಭ ಕರೆ
ಕಡಿಮೆ ದರಕ್ಕೆ ಮದ್ಯ ಕೊಡುವುದು ಸರಿಯೇ? ಈ ಕುರಿತು ಓದುಗರಅಭಿಪ್ರಾಯಗಳಿಗೆ ಆಹ್ವಾನ
ನಮ್ಮ ವಿಳಾಸ: ಸಂಪಾದಕರು, ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com