ಸಿದ್ದು ಖಾತೆ ಓಪನ್
ತೀವ್ರ ಕಸರತ್ತಿನ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟದ ಸದಸ್ಯರಿಗೆ ಖಾತೆ ಹಂಚಿಕೆ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 19-
ತೀವ್ರ ಕಸರತ್ತಿನ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟದ ಸದಸ್ಯರಿಗೆ ಖಾತೆ ಹಂಚಿಕೆ ಮಾಡಿದ್ದಾರೆ.
ಖಾತೆಗಳ ಪಟ್ಟಿ ಶನಿವಾರವೇ ಸಿದ್ಧವಾಗಿತ್ತಾದರೂ ತಮಗೆ ಸಿಗಲಿರುವ ಖಾತೆಗಳ ಬಗ್ಗೆ ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಆ ಪಟ್ಟಿಯನ್ನು ಭಾನುವಾರ ಇಡೀ ದಿನ ಪರಿಷ್ಕರಣೆಗೆ ಒಳಪಡಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಯಿತು. ಪಟ್ಟಿ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಇಂಧನ ಖಾತೆಯನ್ನು ತಮ್ಮ ಬಳಿಯಲ್ಲೇ ಇಟ್ಟುಕೊಂಡಿದ್ದಾರೆ. ನೆಚ್ಚಿನ ಹಣಕಾಸು ಇಲಾಖೆಯನ್ನೂ ಹೊಂದಿದ್ದಾರೆ.
ಉಳಿದಂತೆ ಗಣಿ ಮತ್ತು ಭೂವಿಜ್ಞಾನ, ಗುಪ್ತಚರ, ಬೆಂಗಳೂರು ಅಭಿವೃದ್ಧಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಐಟಿಬಿಟಿ ಸೇರಿದಂತೆ ಹದಿನೈದಕ್ಕೂ ಹೆಚ್ಚು ಪ್ರಮುಖ ಖಾತೆಗಳನ್ನು ಸಿದ್ದರಾಮಯ್ಯ ಅವರು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
ಮತ್ತೊಂದು ಮಹತ್ವದ ಖಾತೆಯಾದ ಗೃಹ ಇಲಾಖೆಯನ್ನು ಹೈಕಮಾಂಡ್ ಅದೇಶದ ಮೇರೆಗೆ ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರ ಪ್ರತಿನಿಧಿಸುವ ಕೆ.ಜೆ.ಜಾರ್ಜ್ ಅವರಿಗೆ ವಹಿಸಲಾಗಿದೆ. ತೋಟಗಾರಿಗೆ ಇಲಾಖೆ ಬೇಡ ಎಂದು ಮುನಿಸಿಕೊಂಡಿದ್ದ ಅಂಬರೀಷ್ ಅವರಿಗೆ ವಸತಿ ಖಾತೆ ನೀಡಲಾಗಿದೆ. ಈ ಮೊದಲು ವಸತಿ ಖಾತೆ ನಿರೀಕ್ಷೆ ಮಾಡಿದ್ದ ಶಿವರಾಜ ತಂಗಡಗಿ ಅವರಿಗೆ ಸಣ್ಣ ನೀರಾವರಿ ಇಲಾಖೆ ಕೊಡ ಮಾಡಲಾಗಿದೆ.
ಇನ್ನು ಉನ್ನತ ಶಿಕ್ಷಣ ಬೇಡ ಎಂದಿದ್ದ ಆರ್.ವಿ.ದೇಶಪಾಂಡೆ ಅವರಿಗೆ ಪ್ರವಾಸೋದ್ಯಮ ಇಲಾಖೆಯನ್ನೂ ಕೊಡಲಾಗಿದೆ.
ಅದೇ ರೀತಿ ಕಾನೂನು ಮತ್ತು ಸಂಸದೀಯ ಇಲಾಖೆ ಬಗ್ಗೆ ಅಪಸ್ವರ ಎತ್ತಿದ್ದ ಟಿ.ಬಿ. ಜಯಚಂದ್ರ ಅವರು ಆ ಖಾತೆ ಜೊತೆಗೆ ಪಶುಸಂಗೋಪನಾ ಇಲಾಖೆಯನ್ನೂ ನೋಡಿಕೊಳ್ಳಲಿದ್ದಾರೆ. ರಾಜ್ಯ ಸಚಿವ ಸ್ಥಾನಮಾನ ನೀಡಿದ್ದರಿಂದ ಅಸಮಾಧಾನಗೊಂಡಿದ್ದವರ ಪೈಕಿ ಡಾ.ಶರಣಪ್ರಕಾಶ್ ಪಾಟೀಲ್ ಅವರಿಗೆ ವೈದ್ಯ ಶಿಕ್ಷಣ ಇಲಾಖೆ ವಹಿಸಲಾಗಿದೆ. ಶಾಮನೂರು ಶಿವಶಂಕರಪ್ಪ ಅವರಿಗೆ ತೋಟಗಾರಿಕೆ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.
ಉಮಾಶ್ರೀ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಕ್ಕಿದ್ದು ಬಂಪರ್ ಹೊಡೆದಿದ್ದಾರೆ.
ಗಮನಾರ್ಹ ಖಾತೆಯಾದ ಮುಜರಾಯಿ ಪ್ರಕಾಶ್ ಹುಕ್ಕೇರಿ ಅವರಿಗೆ ಸಿಕ್ಕಿದ್ದು, ಬಾಬುರಾವ್ ಚಿಂಚನಸೂರು ಅವರಿಗೆ ಕ್ರೀಡಾ ಇಲಾಖೆ ಜವಾಬ್ದಾರಿ ವಹಿಸುವ ಮೂಲಕ ಸಿದ್ದರಾಮಯ್ಯ ಅವರು ಅಚ್ಚರಿ ಮೂಡಿಸಿದ್ದಾರೆ. ಬೃಹತ್ ಕೈಗಾರಿಕೆ ಇಲಾಖೆ ನಿರೀಕ್ಷಿಸಿದ್ದ ಎಂ.ಬಿ.ಪಾಟೀಲ್ ಅವರಿಗೆ ಜಲಸಂಪನ್ಮೂಲ ಇಲಾಖೆ ಸಿಕ್ಕಿದೆ.
ತಮ್ಮ ಅಪ್ತರಾದ ಶ್ರೀನಿವಾಸ ಪ್ರಸಾದ್ ಅವರಿಗೆ ಕಂದಾಯ ಮತ್ತು ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಲೋಕೋಪಯೋಗಿ, ಮಹದೇವ ಪ್ರಸಾದ್ ಅವರಿಗೆ ಸಹಕಾರ ಇಲಾಖೆಯನ್ನು ಸಿದ್ದರಾಮಯ್ಯ ಅವರು ಕೊಟ್ಟಿದ್ದಾರೆ. ಮತ್ತೊಂದು ಪ್ರಮುಖ ಖಾತೆಯಾದ ಸಾರಿಗೆ ರಾಮಲಿಂಗಾರೆಡ್ಡಿ ಅವರಿಗೆ ದೊರೆತಿದೆ.
ಸಿದ್ದು ಸಂಪುಟ
ಸಂಪುಟ ದರ್ಜೆ ಸಚಿವರು
- ಆರ್.ವಿ. ದೇಶಪಾಂಡೆ- ಉನ್ನತ ಶಿಕ್ಷಣ, ಪ್ರವಾಸ
- ಖಮರುಲ್ ಇಸ್ಲಾಂ -ವಕ್ಫ್, ಪೌರಾಡಳಿತ, ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ಉದ್ದಿಮೆ
- ಪ್ರಕಾಶ್ ಬಿ. ಹುಕ್ಕೇರಿ -ಮುಜರಾಯಿ, ಸಣ್ಣ ಕೈಗಾರಿಕೆ, ಸಕ್ಕರೆ
- ಟಿ.ಬಿ. ಜಯಚಂದ್ರ- ಕಾನೂನು ಮತ್ತು ಸಂಸದೀಯ, ಪಶು ಸಂಗೋಪನೆ, ಮಾನವ ಹಕ್ಕುಗಳು
- ರಾಮಲಿಂಗಾರೆಡ್ಡಿ -ಸಾರಿಗೆ
- ರಮಾನಾಥ ರೈ -ಅರಣ್ಯ ಮತ್ತು ಪರಿಸರ
- ಎಚ್.ಕೆ. ಪಾಟೀಲ್- ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್
- ಶಾಮನೂರು ಶಿವಶಂಕರಪ್ಪ- ಕೃಷಿ ಉತ್ಪನ್ನ ಮಾರುಕಟ್ಟೆ, ತೋಟಗಾರಿಕೆ
- ಡಾ.ಎಚ್.ಸಿ. ಮಹದೇವಪ್ಪ -ಲೋಕೋಪಯೋಗಿ
- ವಿ. ಶ್ರೀನಿವಾಸ ಪ್ರಸಾದ್- ಕಂದಾಯ
- ಕೆ.ಜೆ. ಜಾರ್ಜ್- ಗೃಹ
- ಮಹದೇವಪ್ರಸಾದ್ -ಸಹಕಾರ
- ಅಂಬರೀಷ್ -ವಸತಿ
- ವಿನಯಕುಮಾರ್ ಸೊರಕೆ- ನಗರಾಭಿವೃದ್ಧಿ (ಬೆಂ.ಬಿಟ್ಟು), ಕರ್ನಾಟಕ ನೀರು ಸರಬರಾಜು ಮತ್ತು ನಗರ ಮೂಲ ಸೌಕರ್ಯ, ನಗರ ಯೋಜನೆ, ಭೂ ಸಾರಿಗೆ ನಿರ್ದೇಶನಾಲಯ
- ಬಾಬುರಾವ್ ಚಿಂಚನಸೂರು- ಜವಳಿ, ಬಂದರು, ಒಳನಾಡು ಸಾರಿಗೆ
- ಯು.ಟಿ. ಖಾದರ್- ಆರೋಗ್ಯ, ಕುಟುಂಬ ಕಲ್ಯಾಣ
- ಸತೀಶ್ ಜಾರಕಿಹೊಳಿ -ಅಬಕಾರಿ
- ಎಚ್. ಆಂಜನೇಯ -ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
- ಎಂ.ಬಿ. ಪಾಟೀಲ್- ಬೃಹತ್, ಮಧ್ಯಮ ನೀರಾವರಿ
- ಶಿವರಾಜ್ ತಂಗಡಗಿ- ಸಣ್ಣ ನೀರಾವರಿ
ರಾಜ್ಯ ಸಚಿವರು
ಅಭಯಚಂದ್ರ ಜೈನ್ - ಯುವಜನ, ಮೀನುಗಾರಿಕೆ
ಕೃಷ್ಣಬೈರೇಗೌಡ - ಕೃಷಿ
ದಿನೇಶ್ ಗುಂಡೂರಾವ್ ಆಹಾರ ಮತ್ತು ನಾಗರಿಕ ಹಾಗೂ ಗ್ರಾಹಕ ವ್ಯವಹಾರಗಳು
ಶರಣಪ್ರಕಾಶ್ ಪಾಟೀಲ್ - ವೈದ್ಯಕೀಯ ಶಿಕ್ಷಣ
ಕಿಮ್ಮನೆ ರತ್ನಾಕರ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಉಮಾಶ್ರೀ - ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ
ಸಂತೋಷ್ ಲಾಡ್ - ಮೂಲಸೌಕರ್ಯ ಮತ್ತು ವಾರ್ತೆ
ಟಿ.ಪಿ. ಪರಮೇಶ್ವರ ನಾಯಕ - ಕಾರ್ಮಿಕ
ಸಿದ್ದರಾಮಯ್ಯ-
ಸಂಪುಟ ವ್ಯವಹಾರ, ಆಡಳಿತ ಸುಧಾರಣೆ, ಹಣಕಾಸು, ಸಣ್ಣ ಉಳಿತಾಯ, ಲಾಟರಿ, ಗುಪ್ತಚರ, ಬೆಂಗಳೂರು ನಗರಾಭಿವೃದ್ಧಿ, ಯೋಜನೆ ಮತ್ತು ಸಾಂಖ್ಯಿಕ, ಗಣಿ ಮತ್ತು ಭೂವಿಜ್ಞಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ರೇಷ್ಮೆ, ಇಂಧನ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ.