ರಂಗೇರಿದ ವಿಧಾನಸೌಧ
ಖಾತೆ ಹಂಚಿಕೆ ಆಗುತ್ತಿದ್ದಂತೆ ಕೆಲವು ಸಚಿವರು ಕೆಲಸ ಆರಂಭಿಸಿದ್ದರಿಂದ ವಿಧಾನಸೌಧಕ್ಕೆ ಸೋಮವಾರ ರಂಗೇರಿತ್ತು.
ಕ.ಪ್ರ.ವಾರ್ತೆ ಬೆಂಗಳೂರು ಮೇ 20-
ಖಾತೆ ಹಂಚಿಕೆ ಆಗುತ್ತಿದ್ದಂತೆ ಕೆಲವು ಸಚಿವರು ಕೆಲಸ ಆರಂಭಿಸಿದ್ದರಿಂದ ವಿಧಾನಸೌಧಕ್ಕೆ ಸೋಮವಾರ ರಂಗೇರಿತ್ತು. ಭಾನುವಾರ ಸಂಜೆ ಖಾತೆ ಹಂಚಿಕೆಯಾಗುತ್ತಿದ್ದಂತೆ ಕೆಲ ಸಚಿವರು ಸೋಮವಾರ ಬೆಳಗ್ಗೆ ವಿಧಾನಸೌಧದಲ್ಲಿ ಕಾಣಿಸಿಕೊಂಡು ತಮಗೆ ನಿಗದಿಯಾಗಿರುವ ಕೊಠಡಿಗಳಿಗೆ ಪೂಜೆ ಪುನಸ್ಕಾರದೊಂದಿಗೆ ಪ್ರವೇಶ ಪಡೆದುಕೊಂಡರು. ಹೀಗಾಗಿ ಶಕ್ತಿ ಕೇಂದ್ರದಲ್ಲಿ ಸಂಭ್ರಮದ ವಾತಾವರಣ ಉಂಟಾಗಿತ್ತು.
ಬಳಿಕ ಸಚಿವರು ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ಅವರೊಂದಿಗೆ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಗೃಹ ಸಚಿವ ಕೆ.ಜೆ. ಜಾರ್ಜ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಎಚ್.ಕೆ. ಪಾಟೀಲ್, ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ದಿನೇಶ್ ಗುಂಡೂರಾವ್, ವಾರ್ತಾ ಸಚಿವ ಸಂತೋಷ್ ಲಾಡ್ ಅವರು ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಇಲಾಖೆ ಅಧಿಕಾರಿಗಳಿಂದ ತಮ್ಮ ಖಾತೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆದರು. ಅಲ್ಲದೆ, ತಾವು ಹೊಂದಿರುವ ಉದ್ದೇಶಗಳನ್ನು ವಿವರಿಸಿ, ಆ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವಂತೆಯೂ ಸಲಹೆ ಮಾಡಿದರು.
ಇನ್ನೊಂದೆಡೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಹಾಗೂ ವಸತಿ ಸಚಿವ ಅಂಬರೀಷ್ ಅವರೂ ವಿಧಾನಸೌಧಕ್ಕೆ ಆಗಮಿಸಿ ತಮ್ಮ ಕೊಠಡಿಗಳನ್ನು ವೀಕ್ಷಿಸಿ ವಾಪಸ್ ತೆರಳಿದರು. ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಚಿವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇಲಾಖೆಯಲ್ಲಿ ತಮ್ಮ ಆದ್ಯತೆಗಳೇನು ಎಂಬುದನ್ನು ವಿವರಿಸಿದರು. ಅಲ್ಲದೆ, ವಹಿಸಿಕೊಟ್ಟಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಭರವಸೆಯನ್ನೂ ವ್ಯಕ್ತಪಡಿಸಿದರು.
ಕೃಷ್ಣಾ ನದಿ ನೀರು ಪೂರ್ಣ ಬಳಕೆಗೆ ಕ್ರಮ
ಬೆಂಗಳೂರು: ಕೃಷ್ಣಾ ನದಿಯಿಂದ ರಾಜ್ಯಕ್ಕೆ ಲಭ್ಯವಾಗುವ 177 ಟಿಎಂಸಿ ನೀರಿನ ಸಂಪೂರ್ಣ ಬಳಕೆಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸುವುದಾಗಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಕೃಷ್ಣಾ ಕೊಳ್ಳದಲ್ಲಿ ಕಾಮಗಾರಿಗಳು ಪೂರ್ಣ ಪ್ರಮಾಣದಲ್ಲಿ ಮುಗಿಯದ ಕಾರಣ ನದಿಯಿಂದ ರಾಜ್ಯಕ್ಕೆ ಲಭ್ಯವಾಗುವ ನೀರಿನ ಸಂಪೂರ್ಣ ಬಳಕೆ ಇದುವರೆಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಸೋಮವಾರ ಸಚಿವರಾಗಿ ನೂತನ ಕೊಠಡಿಗೆ ಪ್ರವೇಶ ಪಡೆದು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣೆ ಮತ್ತು ಕಾವೇರಿ ಎರಡು ಕಣ್ಣುಗಳಿದ್ದಂತೆ. ಯಾವುದೇ ನದಿ ಪಾತ್ರದ ಜನರಿಗೆ ಅನ್ಯಾಯವಾಗಲು ಅವಕಾಶವಿಲ್ಲ. ಈ ಎರಡೂ ಕೊಳ್ಳಗಳ ವ್ಯಾಪ್ತಿಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಮುಂದಿನ ಐದು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ತಮಗೆ ಜಲಸಂಪನ್ಮೂಲ ಖಾತೆಯನ್ನು ವಹಿಸುವ ಮೂಲಕ ದೊಡ್ಡ ಜವಾಬ್ದಾರಿ ಹೊರಿಸಲಾಗಿದೆ. ಇದನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ. ಇನ್ನು 1ತಿಂಗಳು ಇಲಾಖೆಯ ಬಗ್ಗೆ ಸಂಪೂರ್ಣ ತಿಳಿದುಕೊಂಡು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಇಲಾಖೆಯ ಪ್ರಗತಿ ತೀವ್ರಗೊಳಿಸಲಾಗುವುದು. ಹೀಗಾಗಿ ಒಂದು ತಿಂಗಳು ತಮ್ಮ ತವರು ಜಿಲ್ಲೆ ಬಿಜಾಪುರಕ್ಕೂ ಹೋಗುವುದಿಲ್ಲ ಎಂದರು.
ವೈದ್ಯ, ಎಂಜಿನಿಯರಿಂಗ್ ಸೀಟು ನಿಗದಿ; 22ಕ್ಕೆ ಸಭೆ
ಬೆಂಗಳೂರು: ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಕುರಿತಂತೆ ಮೇ 22ರ ಬುಧವಾರ ಖಾಸಗಿ ಆಡಳಿತ ಮಂಡಳಿ ಮುಖ್ಯಸ್ಥರ ಸಭೆ ಕರೆಯಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ. ಸಚಿವರಾಗಿ ಸೋಮವಾರ ತಮ್ಮ ಕೊಠಡಿ ಪ್ರವೇಶಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಲ್ಕ ನಿಗದಿ ಮತ್ತು ಸೀಟು ಹಂಚಿಕೆ ಕುರಿತಂತೆ ಪ್ರತಿ ವರ್ಷ ಒಪ್ಪಂದ ಮಾಡಿಕೊಳ್ಳಬೇಕಾಗಿದೆ. ಈ ಬಾರಿ ಚುನಾವಣೆ ಇದ್ದುದರಿಂದ ಅದು ಸಾಧ್ಯವಾಗಿಲ್ಲ. ಆದ್ದರಿಂದ ಮೇ 22ರಂದು ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ಸಭೆ ಕರೆಯಲಾಗಿದೆ ಎಂದು ಹೇಳಿದರು.
ಬಹುತೇಕ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳು ಕಾಂಗ್ರೆಸ್ ಮುಖಂಡರು, ಸಚಿವರಿಗೆ ಸೇರಿದ್ದು, ಹೀಗಿರುವಾಗ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಕುರಿತಂತೆ ಆಡಳಿತ ಮಂಡಳಿ ಒತ್ತಡಕ್ಕೆ ಸರ್ಕಾರ ಮಣಿಯಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಿಕ್ಷಣ ಸಂಸ್ಥೆಗಳು ಯಾರಿಗೆ ಸೇರಿದ್ದು ಎಂಬುದು ಮುಖ್ಯವಲ್ಲ. ಒಂದು ಸರ್ಕಾರವಾಗಿ ವಿದ್ಯಾರ್ಥಿಗಳ ಹಿತ ರಕ್ಷಿಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೆಲವು ಸರ್ಕಾರಿ ಆಸ್ಪತ್ರೆಗಳು ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಇರುವ ಕುರಿತು ಗೊಂದಲ ಉಂಟಾಗಿರುವ ಬಗ್ಗೆ ಕೆಲ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಸುಧಾರಣೆಗೆ ಅಗತ್ಯ ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದರು.
ವಾರ್ತಾ ಇಲಾಖೆ ಖಾಲಿ ಹುದ್ದೆಗಳ ಭರ್ತಿ
ಬೆಂಗಳೂರು: ವಾರ್ತಾ ಇಲಾಖೆಯಲ್ಲಿ ಖಾಲಿ ಇರುವ ಅಗತ್ಯ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸುವುದಾಗಿ ಮೂಲಸೌಕರ್ಯ ಮತ್ತು ವಾರ್ತಾ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಸಚಿವರಾಗಿ ಸೋಮವಾರ ತಮ್ಮ ನೂತನ ಕೊಠಡಿ ಪ್ರವೇಶಿಸಿ ವಾರ್ತಾ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ವಾರ್ತಾ ಇಲಾಖೆಗೆ ವಾರ್ಷಿಕ 33 ಕೋಟಿ ಬಜೆಟ್ ಇದೆ. ಈ ಪೈಕಿ 17 ಕೋಟಿ ಸಿಬ್ಬಂದಿ ವೇತನಕ್ಕೆ ಹೋಗುತ್ತದೆ. ಉಳಿದ ಮೊತ್ತದಲ್ಲಿ ಇಲಾಖೆ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಬೇಕಾಗುತ್ತದೆ. ಹಣಕಾಸು ವಿಚಾರದಲ್ಲಿ ತಮ್ಮ ಖಾತೆ ಸಣ್ಣದಾದರೂ ಜವಾಬ್ದಾರಿ ಹೆಚ್ಚಾಗಿದೆ. ಆದ್ದರಿಂದ ಅಗತ್ಯವಿರುವ ಹುದ್ದೆಗಳು ಖಾಲಿ ಇದ್ದರೆ ಅದನ್ನು ಭರ್ತಿ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಇದಕ್ಕೂ ಮುನ್ನ ಅವರು ವಾರ್ತಾ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಇಲಾಖೆಯ ಬಜೆಟ್ ಎಷ್ಟು? ಇದರಲ್ಲಿ ಪ್ರಚಾರಕ್ಕೆ ಎಷ್ಟು ಹಣ ಬಳಸಲಾಗುತ್ತದೆ? ಇತರೆ ಇಲಾಖೆಗಳ ಪ್ರಚಾರಕ್ಕೆ ಆಯಾ ಇಲಾಖೆಗಳು ಅನುದಾನ ನೀಡುತ್ತವೆಯೇ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ಪಡೆದರು.
ನರೇಗಾ ಅವ್ಯವಹಾರಕ್ಕೆ ಕಡಿವಾಣ
ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಮುಂದಿನ ದಿನಗಳಲ್ಲಿ ಈ ಅವ್ಯವಹಾರಗಳಿಗೆ ಪೂರ್ಣ ಕಡಿವಾಣ ಹಾಕುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ. ಸಚಿವರಾಗಿ ತಮ್ಮ ನೂತನ ಕೊಠಡಿ ಪ್ರವೇಶಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ. ಕೇಂದ್ರಕ್ಕೆ ಸರಿಯಾಗಿ ವರದಿ ಕಳುಹಿಸಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ಕೇಂದ್ರ ಸಚಿವ ಜೈರಾಮ್ ರಮೇಶ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಲ್ಲಿ ಸಾಕಷ್ಟು ಕೆಲಸಗಳಾಗಬೇಕಿದ್ದು. ಈ ಕುರಿತಂತೆ ಚರ್ಚಿಸಲು ತಾವೇ ರಾಜ್ಯಕ್ಕೆ ಬರುವುದಾಗಿ ಜೈರಾಮ್ ರಮೇಶ್ ಹೇಳಿದ್ದಾರೆ. ಕೇಂದ್ರದ ಯೋಜನೆಗಳಲ್ಲಿ ಹಣಕಾಸು ಸಮಸ್ಯೆ ಕಂಡುಬಂದಲ್ಲಿ ಅದನ್ನು ಬಗೆಹರಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು. ತಮ್ಮ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರದ ಯೋಜನೆಗಳಾವುವು, ಅವುಗಳ ಸ್ಥಿತಿಗತಿ ಏನು ಎಂಬ ಬಗ್ಗೆ ಸೋಮವಾರದಿಂದಲೇ ಅಧಿಕಾರಿಗಳೊಂದಿಗೆ ಸಭೆ ಆರಂಭಿಸಲಾಗಿದ್ದು, ಶೀಘ್ರವೇ ಇಲಾಖೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.