ಹಿರಿಯರ ಆಕಾಂಕ್ಷೆ; ಸಿದ್ದುಗೆ ಅಗ್ನಿ ಪರೀಕ್ಷೆ
ಸಂಪುಟದಲ್ಲಿ ಸ್ಥಾನ ಪಡೆಯುವುದಕ್ಕಾಗಿ ವಿಧಾನಪರಿಷತ್ ಸದಸ್ಯರು ದೆಹಲಿ ಹಾಗೂ ಬೆಂಗಳೂರು ಮಟ್ಟದಲ್ಲಿ ಲಾಬಿ..
ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 20-
ಸಂಪುಟದಲ್ಲಿ ಸ್ಥಾನ ಪಡೆಯುವುದಕ್ಕಾಗಿ ವಿಧಾನಪರಿಷತ್ ಸದಸ್ಯರು ದೆಹಲಿ ಹಾಗೂ ಬೆಂಗಳೂರು ಮಟ್ಟದಲ್ಲಿ ಲಾಬಿ ತೀವ್ರಗೊಳಿಸಿದ್ದು, ಇಟ್ಟ ಬೇಡಿಕೆಗಳಿಗೆಲ್ಲ ಸ್ಪಂದಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಗಿಪಟ್ಟು ಹಿಡಿದಿದ್ದಾರೆ.
ಆದರೆ, ಸಚಿವಾಕಾಂಕ್ಷಿ ಮೇಲ್ಮನೆ ಸದಸ್ಯರು ಹೈಕಮಾಂಡ್ಗೆ ಮೊರೆ ಇಟ್ಟಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಮುಂದೆ ಅಳಲು ತೋಡಿಕೊಳ್ಳಲು ಮುಂದಾಗಿದ್ದಾರೆ.
ವಿಧಾನಪರಿಷತ್ ಸದಸ್ಯರಿಗೆ ಸಂಪುಟದಲ್ಲಿ ಸ್ಥಾನ ನೀಡದೇ ಇರಲು ಸಿದ್ದರಾಮಯ್ಯ ನಿರ್ಣಯ ತೆಗೆದುಕೊಂಡಾಗ ಪ್ರಾತಿನಿಧ್ಯಕ್ಕೆ ಒಬ್ಬರಿಗಾದರೂ ಅವಕಾಶ ನೀಡಿ ಎಂಬ ಮನವಿ ವ್ಯಕ್ತವಾಗಿತ್ತು. ಒಲ್ಲದ ಮನಸ್ಸಿನಿಂದ ಸಿದ್ದರಾಮಯ್ಯ ಅವರು ಒಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಒಪ್ಪಿದ್ದರು. ಒತ್ತಡಕ್ಕೆ ಮಣಿಯುತ್ತಾರೆ ಎಂಬ ಸೂಚನೆ ಸಿಕ್ಕಿದ್ದೇ ತಡ, ಮೂವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂಬ ಆಗ್ರಹವನ್ನು ಹೈಕಮಾಂಡ್ ಮುಂದೆ ಇಡಲಾಗಿದೆ.
ಎರಡು ದಿನಗಳಿಂದ ಬೀಡು: ಈ ಸಂಬಂಧ ಪರಿಷತ್ ಹಿರಿಯ ಸದಸ್ಯ ಡಾ.ಎಸ್.ಆರ್.ಪಾಟೀಲ್ ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಇನ್ನಿಬ್ಬರು ಸದಸ್ಯರಾದ ಮೋಟಮ್ಮ ಹಾಗೂ ವೀರಣ್ಣ ಮತ್ತಿಕಟ್ಟಿ ಅವರನ್ನು ಸೇರಿಕೊಂಡಿದ್ದಾರೆ. ಪರಿಷತ್ನಲ್ಲಿ ಕಾಂಗ್ರೆಸ್ನ 17ಸದಸ್ಯರು ಇದ್ದಾರೆ. ಇವರೆಲ್ಲರೂ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಜತೆಗೆ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವ ಸಂಪ್ರದಾಯವನ್ನು ಕಾಂಗ್ರೆಸ್ ಇದುವರೆಗೆ ನಿಲ್ಲಿಸಿರಲಿಲ್ಲ ಎಂದು ಮನವಿ ಮಾಡಲು ನಿರ್ಧರಿಸಿದ್ದಾರೆ.
ತಮ್ಮ ಪರವೇ ಲಾಬಿ: ಆರಂಭದಲ್ಲಿ ಪರಿಷತ್ನ ಎಲ್ಲ ಸದಸ್ಯರ ಪರವಾಗಿ ಎಸ್.ಆರ್.ಪಾಟೀಲ್ರನ್ನು ದೆಹಲಿಗೆ ಕಳುಹಿಸಲು ನಿರ್ಧರಿಸಲಾಗಿತ್ತು. ಆದರೆ ರಾಜಧಾನಿ ತಲುಪಿದ ನಂತರ ಅವರ ವರಸೆ ಬದಾಗಿದ್ದು, ತಮಗೆ ಮಾತ್ರ ಸಚಿವ ಸ್ಥಾನ ಗಟ್ಟಿ ಮಾಡಿಕೊಂಡಿದ್ದಾರೆ ಎಂಬ ಅನುಮಾನ ಉಳಿದ ಸದಸ್ಯರನ್ನು ಕಾಡಲಾರಂಭಿಸಿದೆ. ಹೀಗಾಗಿ ಇತರರೂ ಈಗ ದೆಹಲಿ ತಲುಪಿದ್ದಾರೆ.
ಇನ್ನು ಒಲ್ಲದ ಮನಸ್ಸು: ದೆಹಲಿಯಲ್ಲಿ ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವುದು ಸುತಾರಾಂ ಇಷ್ಟವಿಲ್ಲ. ಮಂತ್ರಿ ಸ್ಥಾನಕ್ಕಾಗಿ ಶಾಸಕರಿಂದಲೂ ಒತ್ತಡ ಆರಂಭವಾಗಿದೆ. ಹೈಕಮಾಂಡ್ ಸೂಚಿಸಿದರೆ ಕೆಲವರಿಗೆ ಮಂತ್ರಿಗಿರಿ ನೀಡಲೇಬೇಕಾಗುತ್ತದೆ. ಹೀಗಾಗಿ ಮೇಲ್ಮನೆ ಸಚಿವರಿಗೆ ಮೂರು ಸ್ಥಾನ ನೀಡಿದರೆ, ನಿಗದಿತ ಕೋಟಾದಲ್ಲಿ ಖೋತಾ ಉಂಟಾಗಿ ಅನಗತ್ಯ ಕಿರಿಕಿರಿ ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ ಎಂಬ ತೀರ್ಮಾನಕ್ಕೆ ಅವರು ಬಂದಿದ್ದಾರೆ. ಪ್ರಾತಿನಿಧ್ಯಕ್ಕೆ ಒಬ್ಬರಿಗೆ ಸ್ಥಾನ ನೀಡಬಹುದು. ಆದರೆ ಮೂವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಸಿದ್ದರಾಮಯ್ಯ ಕಟ್ಟುನಿಟ್ಟಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಹೀಗಾಗಿ ಮಳೆ ನಿಂತರೂ ಹನಿ ನಿಂತಿಲ್ಲ ಎಂಬ ಸ್ಥಿತಿ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಆವರಿಸಿಕೊಂಡಿದ್ದು, ಅಧಿವೇಶನ ಆರಂಭಕ್ಕೆ ಮುನ್ನ ಪರಿಷತ್ನ ಒಬ್ಬ ಸದಸ್ಯರಿಗೆ (ಡಾ.ಎಸ್.ಆರ್.ಪಾಟೀಲ್) ಮಾತ್ರ ಸಚಿವ ಸ್ಥಾನ ಲಭಿಸಬಹುದು ಎಂದು ತಿಳಿದು ಬಂದಿದೆ.