ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೃಷ್ಣೆ ನೀರಿಗೆ ಮಹಾ ಕ್ಯಾತೆ!

3 ಟಿಎಂಸಿ ನೀರನ್ನು ಕೃಷ್ಣೆಗೆ ಹರಿಸುವ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರ ಈಗ ಹೊಸ ತಗಾದೆ ತೆಗೆದಿದೆ.ಮಹಾರಾಷ್ಟ್ರದ..

Srinivasa Murthy VN
Updated On : 23 May 2013, 1:19 am

-ಮಲ್ಲಿಕಾರ್ಜುನ ಸಿದ್ದಣ್ಣವರ
ಕನ್ನಡಪ್ರಭ ವಾರ್ತೆ ಬಾಗಲಕೋಟೆ ಮೇ 22


ನಾರಾಯಣಪುರ ಅಣೆಯಿಂದ ನೀರಿನ ಬೇಡಿಕೆ ಇಟ್ಟ ಮಹಾರಾಷ್ಟ್ರ
ಬಿಜೆಪಿ ನಿರ್ಲಕ್ಷ್ಯದಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಸಂಕಟ
ಇಂದು ಮಹಾರಾಷ್ಟ್ರಕ್ಕೆ  ಕರ್ನಾಟಕದ ನಿಯೋಗ

ಕೃಷ್ಣಾ ತೀರದ ನಗರ, ಹಳ್ಳಿಗಳಿಗೆ ಸದ್ಯ ಎದುರಾಗಿರುವ ಕುಡಿಯುವ ನೀರಿನ ಅಭಾವ ನೀಗಿಸಲು 3 ಟಿಎಂಸಿ ನೀರನ್ನು ಕೃಷ್ಣೆಗೆ ಹರಿಸುವ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರ ಈಗ ಹೊಸ ತಗಾದೆ ತೆಗೆದಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಮಹಾನಗರಕ್ಕೆ ಕರ್ನಾಟಕದ ನಾರಾಯಣಪುರ ಅಣೆಕಟ್ಟೆಯಿಂದ ಕುಡಿಯುವ ನೀರು ಪೂರೈಸಿದರೆ ಮಾತ್ರ ವಾರಾಣಾ ಮತ್ತು ಕಾಳಮ್ಮನವಾಡಿ ಅಣೆಕಟ್ಟೆಯಿಂದ ಕೃಷ್ಣೆಗೆ ನೀರು ಹರಿಸಲಾಗುವುದು ಎನ್ನುವುದು ಮಹಾರಾಷ್ಟ್ರದ ಈಗಿನ ಬೇಡಿಕೆ.
ಸತತ ಎರಡು ವರ್ಷಗಳ ಬರಗಾಲದಿಂದಾಗಿ ಕೃಷ್ಣಾ ತೀರದ ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಕೊಪ್ಪಳ, ರಾಯಚೂರು ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಹಾಹಾಕಾರ ಕುರಿತು ಬಿಜೆಪಿ ಸರ್ಕಾರವನ್ನು ಏರು ದನಿಯಲ್ಲಿ ತರಾಟೆಗೆ ತೆಗೆದುಕೊಳ್ಳುತ್ತ ಬಂದಿರುವ ಅಂದಿನ ಪ್ರತಿಪಕ್ಷದ ನಾಯಕ, ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹಾರಾಷ್ಟ್ರದ ಈ ತಗಾದೆ ನಿಜಕ್ಕೂ ಅಗ್ನಿ ಪರೀಕ್ಷೆ.
ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದೂ ಕುಡಿಯುವ ನೀರಿನ ವಿಷಯದಲ್ಲಿ ಎದ್ದಿರುವ ಪರಸ್ಪರ ಅಸಹಕಾರ ಕಾಂಗ್ರೆಸ್‌ನ್ನು ಮುಜುಗರಕ್ಕೀಡು ಮಾಡುವ ಸಾಧ್ಯತೆಯೂ ಇದೆ. ಅಲ್ಲದೇ ಕಾವೇರಿ ತೀರದಲ್ಲಿನ ಕುಡಿಯುವ ನೀರು ಅಭಾವ ನೀಗಿಸುವಲ್ಲಿ ತುರ್ತು ಹೆಜ್ಜೆ ಇಟ್ಟು ಪಾಸು ಆಗಿರುವ ಸಿದ್ದರಾಮಯ್ಯ ಅವರಿಗೆ ಈಗ ಕೃಷ್ಣೆ ಮಾತ್ರ ಕಷ್ಟ ಕಷ್ಟ ಎನಿಸಿದ್ದು ಸುಳ್ಳಲ್ಲ.
2003ರಿಂದ 2012ರ ಅವಧಿಯಲ್ಲಿ ಒಟ್ಟು ಐದು ಬಾರಿ ಬೇಸಿಗೆ ಸಂದರ್ಭದಲ್ಲಿ ವಾರಾಣಾ ಮತ್ತು ಕಾಳಮ್ಮನವಾಡಿ ಅಣೆಕಟ್ಟೆಗಳಿಂದ ಕೃಷ್ಣೆಗೆ ನೀರು ಹರಿಸಿಕೊಂಡಿದ್ದ ಕರ್ನಾಟಕಕ್ಕೆ ಈ ಬಾರಿ ಅದೇಕೋ ಬೆವರು ಸುರಿಸುವಂತಾಗಿದೆ.
ಮಹಾರಾಷ್ಟ್ರಕ್ಕೆ ನಿಯೋಗ: ಈ ಹೊಸ ಬೇಡಿಕೆ ಮತ್ತು ಅಸಹಕಾರದ ಮಧ್ಯೆಯೂ ಸ್ವತಃ ಸಿದ್ದರಾಮಯ್ಯ ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ ಚೌಹಾಣ್, ಜಲಸಂಪನ್ಮೂಲ ಸಚಿವ ನಿಂಬಾಳ್ಕರ್ ಅವರೊಂದಿಗೆ ದೂರವಾಣಿಯಲ್ಲಿ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ. ನಮ್ಮ ಬೇಡಿಕೆಯಂತೆ 3 ಟಿಎಂಸಿ ನೀರು ಕೃಷ್ಣೆಗೆ ಹರಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಗೋಗರೆದಿದ್ದಾರೆ.

ಆದರೂ ಅಂಥ ಹೇಳಿಕೊಳ್ಳುವಂಥ ಪ್ರಗತಿ ಕಾಣದೇ ಇರುವುದಕ್ಕೆ ಕರ್ನಾಟಕದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಕಾರ್ಯದರ್ಶಿ ಸತ್ಯಮೂರ್ತಿ ಮತ್ತು ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ನೇತೃತ್ವದ ನಿಯೋಗ ಗುರುವಾರ ಮಹಾರಾಷ್ಟ್ರಕ್ಕೆ ತೆರಳಿ, ಅಲ್ಲಿನ ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳನ್ನು ಕಂಡು ಕೃಷ್ಣೆಗೆ ನೀರು ಹರಿಸುವಂತೆ ಮತ್ತೊಮ್ಮೆ ಮನವಿ ಮಾಡಲಿದೆ. ಜತೆಗೆ ಸೊಲ್ಲಾಪುರಕ್ಕೆ ನಾರಾಯಣಪುರ ಅಣೆಕಟ್ಟಿನಿಂದ ನೀರು ಹರಿಸಲು ಸಾಧ್ಯವಿಲ್ಲ ಎನ್ನುವ ಅಸಹಾಯಕತೆಯನ್ನೂ ಹೇಳಿಕೊಳ್ಳಲಿದೆ. ಆದರೆ, ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ಸಚಿವ ನಿಂಬಾಳ್ಕರ್ ತಮ್ಮ ಅಧಿಕಾರಿಗಳ ಕೃಷ್ಣೆಯುದ್ದಕ್ಕೂ ಪ್ರವಾಸ ಮಾಡಿ, ಆಲಮಟ್ಟಿ ಅಣೆಕಟ್ಟೆಯ ಬಳಿ ಒಂದು ದಿನ ತಂಗಿದ್ದರು. ಕೃಷ್ಣೆಗೆ ನೀರು ಹರಿಸುವ ವಿಚಾರ ಚರ್ಚೆಗೆಂದು ಕರ್ನಾಟಕದ ಅಂದಿನ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಾರ್ಯದರ್ಶಿ ಸತ್ಯಮೂರ್ತಿ ಅವರನ್ನು ಆಲಮಟ್ಟಿಗೆ ಬರುವಂತೆ ಕೋರಿದ್ದರು. ಚುನಾವಣೆಯ ಕಣದಲ್ಲಿದ್ದ ಸಚಿವ ಬೊಮ್ಮಾಯಿ ಮತ್ತು ಅಧಿಕಾರಿಗಳು ಅದನ್ನು ನಿರ್ಲಕ್ಷಿಸಿದ್ದರು. ಅದನ್ನೇ ನಿಂಬಾಳ್ಕರ್ ಅವಮಾನವೆಂದು ಭಾವಿಸಿರುವುದೇ ಈಗ ಕೃಷ್ಣೆಗೆ ನೀರು ಹರಿಸುವಲ್ಲಿನ ಮಹಾರಾಷ್ಟ್ರದ ನಿರಾಸಕ್ತಿಗೆ ಅಸಲಿ ಕಾರಣ ಎಂದು ಮೂಲಗಳು ಹೇಳಿವೆ.

 ಸೊಲ್ಲಾಪುರಕ್ಕೆ ನೀರು ಅಸಾಧ್ಯ
ಸೊಲ್ಲಾಪುರ ಮಹಾನಗರವೂ ಕಳೆದ ಒಂದು ದಶಕದಿಂದ ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿದೆ. ಅದು ನಾರಾಯಣಪುರ ಅಣೆಕಟ್ಟೆಯಿಂದ ಸುಮಾರು 150 ಕಿಮೀ ದೂರದಲ್ಲಿದೆ. ನಾರಾಯಣಪುರದಿಂದ ಸೊಲ್ಲಾಪುರದವರೆಗೆ ಎಸ್ಕೇಪ್ ಕಾಲುವೆ (ಹೆಚ್ಚುವರಿ ನೀರು ಹರಿಸುವ ಕಾಲುವೆ) ಇದ್ದರೂ ಅಂಚಿಗೆ ನೀರು ತಲುಪುವುದೇ ಇಲ್ಲ. 2009ರ ಬೇಸಿಗೆಯಲ್ಲಿ ಮಹಾರಾಷ್ಟ್ರದ ಬೇಡಿಕೆಯನ್ನು ಪುರಸ್ಕರಿಸಿದ ಕರ್ನಾಟಕ ಸರ್ಕಾರ ಈ ಕಾಲುವೆ ಮೂಲಕ ನೀರು ಹರಿಸಿತು. ಆದರೆ, ಮಧ್ಯದಲ್ಲಿರುವ ಗ್ರಾಮೀಣರು ಆ ನೀರನ್ನು ತಮ್ಮೂರಿನ ಹಳ್ಳ, ಹೊಳೆಗಳಿಗೆ ಹರಿಸಿದ್ದರಿದ 50 ಕಿ.ಮೀ. ಅಂತರದವರೆಗೂ ನೀರು ಸಾಗಲಿಲ್ಲ.

 ಹೇಮಾವತಿ ಜಲಾಶಯ

ಗರಿಷ್ಠ ಮಟ್ಟ  2922 ಅಡಿ
ಈಗಿನ ಮಟ್ಟ 2854.08 ಅಡಿ
ಎಷ್ಟು ದಿನಕ್ಕೆ?
2 ತಿಂಗಳವರೆಗೆ(ಕೆಆರ್‌ಎಸ್‌ಗೆ ನೀರು ಬಿಡದಿದ್ದರೆ)

 ಮಲಪ್ರಭಾ ಜಲಾಶಯ

ಗರಿಷ್ಠ ಮಟ್ಟ 2075.50
ಈಗಿನ ಮಟ್ಟ 4.621
ಎಷ್ಟು ದಿನಕ್ಕೆ?
ಜೂನ್ ತಿಂಗಳಅಂತ್ಯದವರೆಗೆ

ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ
2175
ಈಗಿನ ಮಟ್ಟ
3.83
ಎಷ್ಟು ದಿನಕ್ಕೆ?
ಜೂನ್ ತಿಂಗಳ ಅಂತ್ಯದವರೆಗೆ

ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ
1819
ಈಗಿನ ಮಟ್ಟ
1757
ಎಷ್ಟು ದಿನಕ್ಕೆ?
15ರಿಂದ 20 ದಿನಗಳವರೆಗೆ ವಿದ್ಯುತ್ ಉತ್ಪಾದಿಸ ಬಹುದು

ಭದ್ರಾ ಜಲಾಶಯ

ಗರಿಷ್ಠ ಮಟ್ಟ
186
ಈಗಿನ ಮಟ್ಟ
114
ಎಷ್ಟು ದಿನಕ್ಕೆ?
01 ತಿಂಗಳವರೆಗೆ

ಕೃಷ್ಣಾ ತೀರದಲ್ಲಿನ ಕುಡಿಯುವ ನೀರಿನ ಸತ್ಯಾಸತ್ಯತೆ ಅರಿಯಲು ಬಂದಿದ್ದ ಮಹಾರಾಷ್ಟ್ರದ ನಿಯೋಗವನ್ನು ನಿರ್ಲಕ್ಷಿಸಿರುವ ಹಿಂದಿನ ಬಿಜೆಪಿ ಸರ್ಕಾರದಿಂದಾಗಿ ಇಂದು ಕೃಷ್ಣೆಗೆ ಕುಡಿಯುವ ನೀರು ಹರಿಸುವಲ್ಲಿ ಕಷ್ಟಪಡಬೇಕಾಗಿದೆ. ಪ್ರಯತ್ನ ಮಾಡುತ್ತೇವೆ.
-ಸಿದ್ದು ನ್ಯಾಮಗೌಡ, ಜಮಖಂಡಿ ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement