ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಲೆಕ್ಕ ತಾಳೆಯಾಗದಿದ್ರೆ ತಾಳ ತಪ್ಪೀತು!

ಚುನಾವಣೆಯಲ್ಲಿ ಗೆದ್ದ ಸಂಭ್ರಮದಲ್ಲಿರುವ ಶಾಸಕರೇ ಎಚ್ಚರ! ನಿಮ್ಮ ಚುನಾವಣಾ ವೆಚ್ಚ ವಿವರ ಸಲ್ಲಿಸಲು ಕೇವಲ 2 ವಾರ ಬಾಕಿ ಉಳಿದಿದೆ.

Srinivasa Murthy VN
Updated On : 26 May 2013, 10:49 am

-ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು:
ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಸಂಭ್ರಮದಲ್ಲಿರುವ ಶಾಸಕರೇ ಎಚ್ಚರ!
ನಿಮ್ಮ ಚುನಾವಣಾ ವೆಚ್ಚ ವಿವರ ಸಲ್ಲಿಸಲು ಕೇವಲ 2 ವಾರ ಬಾಕಿ ಉಳಿದಿದೆ. ವಿವರ ಸಲ್ಲಿಸದಿದ್ದರೆ ಅಥವಾ ಸಲ್ಲಿಸಿದ ವಿವರ ದೋಷಪೂರಿತವಾಗಿದ್ದರೆ ಚುನಾವಣಾ ಆಯೋಗ ನಿಮ್ಮ ಗೆಲವಿನ ಯೋಗವನ್ನೇ ಬದಲಿಸುತ್ತದೆ ಜೋಕೆ!
ಅಂದರೆ, ಚುನಾವಣೆ ನಡೆದ 30 ದಿನಗಳ ಒಳಗೆ ಅಭ್ಯರ್ಥಿಗಳು ಹಾಗೂ 90 ದಿನಗಳ ಒಳಗೆ ರಾಜಕೀಯ ಪಕ್ಷಗಳು ವೆಚ್ಚ ವಿವರ ಸಲ್ಲಿಸಬೇಕು. ಹೀಗಾಗಿ ವೆಚ್ಚ ವಿವರಗಳನ್ನು ಅಳೆದು ತೂಗಲು ಚುನಾವಣೆ ವೇಳೆ ವೆಚ್ಚಕ್ಕೆ ಕಡಿವಾಣ ಹಾಕಿ ನಿಮ್ಮ ಬೆನ್ನುಹತ್ತಿದ್ದ ವೆಚ್ಚ ವೀಕ್ಷಕರು ಮುಂದಿನವಾರ ಮತ್ತೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಲೆಕ್ಕಾಚಾರ ತಾಳೆ: ಅಭ್ಯರ್ಥಿ ಮಾಡಿದ ವೆಚ್ಚದ ಪ್ರಮಾಣ ಎಷ್ಟು, ಸಲ್ಲಿಸಿರುವ ವಿವರದಲ್ಲಿ ತೋರಿಸಿರುವ ಲೆಕ್ಕ ಸರಿಯಾಗಿ ಇದೆಯೇ ಎಂಬುದನ್ನು ವೀಕ್ಷಕರು ಪರಿಶೀಲಿಸುವರು.    

ಬಳಿಕ ಶಾಸಕರಾಗಿ ಮುಂದುವರಿಯಲು ಅರ್ಹರೇ, ಅಲ್ಲವೇ? ಎಂದು ತೀರ್ಮಾನಿಸಲಿದ್ದಾರೆ. ಆದ್ದರಿಂದ ವೆಚ್ಚ ವಿವರವನ್ನೇ ತಪ್ಪಾಗಿ ಸಲ್ಲಿಸಿದವರು ಅಥವಾ ಇನ್ನೂ ಸಲ್ಲಿಸದೇ ಮೈಮರೆತವರು ಕೂಡಲೇ ಸರಿಯಾದ ವಿವರ ಸಲ್ಲಿಸಬೇಕು. ಇಲ್ಲವಾದರೆ,ಶಾಸಕ ಸ್ಥಾನಕ್ಕೆ ಕುತ್ತು ಬರುವುದು ಖಚಿತ.

ಏನೇನು ವಿವರ?

ಹೊಸ ನಿಯಮದಂತೆ ಅಭ್ಯರ್ಥಿಗಳು ಚುನಾವಣಾ ಆರ್ಥಿಕ ವ್ಯವಹಾರಕ್ಕೆಂದೇ ಪ್ರತ್ಯೇಕವಾಗಿ ತೆರೆದಿದ್ದ ಬ್ಯಾಂಕ್ ಖಾತೆ ವಿವರ ಸಲ್ಲಿಸಬೇಕಿದೆ. ಹಾಗೆಯೇ ತಮಗೆ ಬಂದಿದ್ದ ದೇಣಿಗೆ ಮತ್ತು ಸಹಾಯ ಧನದ ವಿವರ ದಾಖಲಿಸಲು ಇದ್ದ ಪುಸ್ತಕ, ನಿತ್ಯ ಸಂಚಾರ, ಊಟ ತಿಂಡಿ ಇತ್ಯಾದಿ ವೆಚ್ಚ ದಾಖಲಿಸಿದ್ದ ಪುಸ್ತಕದ ಮಾಹಿತಿಗಳನ್ನು ಅಭ್ಯರ್ಥಿಗಳು ಆಯೋಗಕ್ಕೆ ನೀಡಬೇಕಿದೆ. ಇದರೊಂದಿಗೆ ಬ್ಯಾಂಕ್ ಮೂಲಕ ವ್ಯವಹಾರಗಳನ್ನು ದಾಖಲಿಸುವುದಕ್ಕೆಂದೇ ಇರಿಸಿದ್ದ ಪ್ರತ್ಯೇಕ ಪುಸ್ತಕಗಳ ವಿವರಗಳನ್ನು ಕೊಡಬೇಕಿದೆ. ಒಟ್ಟಾರೆ ಚುನಾವಣಾ ವೆಚ್ಚ ರು. 16ಲಕ್ಷ ಮೀರದಂತೆ ವಿವರಗಳನ್ನು ಜೂನ್8 ಒಳಗೆ ಸಲ್ಲಿಸಬೇಕು.  ಬಹುತೇಕ ಶಾಸಕರು ಈಗಾಗಲೇ ತಮ್ಮ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ವೆಚ್ಚ ವಿವರ ಸಲ್ಲಿಸಿದ್ದಾರೆ. ಆದರೆ, ಅನೇಕ ಶಾಸಕರು ಇನ್ನೂ ಗೆಲುವಿನ ಸಂಭ್ರಮದಿಂದ ಹೊರಬಂದಿಲ್ಲ. ವೆಚ್ಚದ ವಿವರ ಸಲ್ಲಿಸುವ ಬಗ್ಗೆ ಅವರು ಇನ್ನೂ ಗಮನವನ್ನೇ ನೀಡಿಲ್ಲ.

ಶ್ಯಾಡೋ ಅಕೌಂಟ್ ಭಯದ ನೆರಳು
ಚುನಾವಣೆ ವೇಳೆ ಅಭ್ಯರ್ಥಿಗಳು ಮೂರು ರೀತಿಯ ಪುಸ್ತಕಗಳಲ್ಲಿ ವೆಚ್ಚ ವಿವರ ದಾಖಲಿಸಿದಂತೆ ಆಯೋಗದ ವೆಚ್ಚ ವೀಕ್ಷಕರೂ ಅಭ್ಯರ್ಥಿಗಳ ವೆಚ್ಚ ವಿವರ ನಿರ್ವಹಿಸಿದ್ದಾರೆ. ಹೇಗೆಂದರೆ, ಅಭ್ಯರ್ಥಿಯ ವೆಚ್ಚ ವಿವರವನ್ನು ಪ್ರತಿ ಕ್ಷೇತ್ರದ ಚುನಾವಣಾಧಿಕಾರಿಯೂ ನಿರ್ವಹಿಸಿದ್ದಾರೆ. (ಶ್ಯಾಡೋ ಅಕೌಂಟ್ ಸಿಸ್ಟಮ್). ಇದರ ಮೇಲೆಯೇ ವೆಚ್ಚ ವೀಕ್ಷಕರಾಗಿ ಬಂದಿದ್ದ ಹಿರಿಯ ಅಧಿಕಾರಿಗಳು ನಿಗಾ ವಹಿಸಿದ್ದರು. ಎಲ್ಲಾ ಚುನಾವಣಾಧಿಕಾರಿಗಳೂ ಈಗ ಅಭ್ಯರ್ಥಿಗಳಿಂದ ಸ್ವೀಕರಿಸಿದ ವಿವರಕ್ಕೂ ತಾವು ಅಭ್ಯರ್ಥಿ ಪರ ನಿರ್ವಹಿಸಿರುವ ಲೆಕ್ಕಕ್ಕೂ ತಾಳೆ ಹಾಕುತ್ತಿದ್ದಾರೆ. ಇದನ್ನು ಸದ್ಯದಲ್ಲೇ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಸಲ್ಲಿಸಲಿದ್ದಾರೆ. ಇದೆಲ್ಲವನ್ನೂ ಪರೀಶೀಲಿಸಿ ವೆಚ್ಚದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಜೂನ್ 8ರಂದು ಎಲ್ಲಾ ವೆಚ್ಚ ವೀಕ್ಷಕರು ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇವರು ಹೆಚ್ಚಿನ ವೆಚ್ಚ ದಾಖಲಿಸಿದ ಅಭ್ಯರ್ಥಿಗಳ ವಿವರವನ್ನು ಕೇಂದ್ರ ಆಯೋಗಕ್ಕೆ ಕಳುಹಿಸುತ್ತಾರೆ. ಅದರಲ್ಲಿ ವೆಚ್ಚ ಮಿತಿ ಮೀರಿದ ಅಭ್ಯರ್ಥಿ ವಿರುದ್ಧ ಕೈಗೊಳ್ಳಬಹುದಾದ ಕ್ರಮಗಳನ್ನೂ ಶಿಫಾರಸು ಮಾಡಿರುತ್ತಾರೆ. ಅಂದರೆ, ವೆಚ್ಚ ಮಿತಿ ಮೀರಿದವರಿಗೆ ಆಯೋಗ ತಕ್ಷಣ ನೋಟಿಸ್ ನೀಡುತ್ತದೆ. ಇದಕ್ಕೆ ಸಮಂಜಸ ಉತ್ತರ ನೀಡದಿದ್ದರೆ, ಆತನ ಶಾಸಕತ್ವ ರದ್ದುಗೊಳಿಸುತ್ತದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ವೆಚ್ಚ ವಿವರ ಸಲ್ಲಿಸಲು ಜೂ.8 ಕೊನೆ
ಚುನಾವಣಾ ಆಯೋಗ ಅಭ್ಯರ್ಥಿಗಳ ವೆಚ್ಚಕ್ಕೆ ಕಡಿವಾಣ ಹಾಕಲು ಈ ಚುನಾವಣೆಯಲ್ಲಿ ಎಲ್ಲಾ ರೀತಿಯ ಸರ್ಕಸ್ ಮಾಡಿತ್ತು. ಅನೇಕ ಹೊಸ ನಿಯಮಗಳನ್ನು ಜಾರಿಗೊಳಿಸಿತ್ತು. ಅಲ್ಲದೆ, ಇದನ್ನೆಲ್ಲಾ ನೋಡಿಕೊಳ್ಳಲು ಹೊರ ರಾಜ್ಯಗಳಿಂದ ಬಂದಿದ್ದ 180ಕ್ಕೂ ಹೆಚ್ಚಿನ ವೆಚ್ಚ ವೀಕ್ಷಕರನ್ನು ಅಭ್ಯರ್ಥಿಗಳ ಭೇಟೆಗೆ ನಿಯೋಜಿಸಿತ್ತು.

ಎಲ್ಲಾ ಅಭ್ಯರ್ಥಿಗಳು ವೆಚ್ಚ ವಿವರ ಸಲ್ಲಿಸುತ್ತಿದ್ದಾರೆ. ಆದರೆ, ನಮಗೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳಿಂದ ಇನ್ನೂ ಸಂಪೂರ್ಣ ವಿವರ ಬಂದಿಲ್ಲ. ವರದಿ ಬಂದ ನಂತರ ವೆಚ್ಚ ವೀಕ್ಷಕರು ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
-ಅನಿಲ್‌ಕುಮಾರ್ ಝಾ, ಮುಖ್ಯ ಚುನಾವಣಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement