ದಿಲ್ಲಿ ಕತ್ತಲಲ್ಲಿ ಸಿಲುಕಿದ್ದವರ ರಕ್ಷಣೆ
ದೆಹಲಿಯಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ರಾಜ್ಯದ 9 ಮಹಿಳೆಯರನ್ನು ದೆಹಲಿ ಪೊಲೀಸರ...
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ, ನ.11-
ದೆಹಲಿಯಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ರಾಜ್ಯದ 9 ಮಹಿಳೆಯರನ್ನು ದೆಹಲಿ ಪೊಲೀಸರ ಸಹಾಯದಿಂದ ಚಿಕ್ಕಬಳ್ಳಾಪುರ ಪೊಲೀಸರು ರಕ್ಷಿಸಿ ಕರೆ ತಂದಿದ್ದಾರೆ.
ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಗರ ಗೆರೆ ಹೋಬಳಿ ಚೋಳಶೆಟ್ಟಿ ಗ್ರಾಮದ 30 ವರ್ಷದ ವಿವಾಹಿತೆ ಮತ್ತು ಕೋಡಿಹಳ್ಳಿ ಗ್ರಾಮದ 18 ವರ್ಷದ ಯುವತಿ, ಬಾಗೇಪಲ್ಲಿ ತಾಲೂಕಿನ ಕೊತ್ತಪಲ್ಲಿ ಗ್ರಾಮದಲ್ಲಿ ಕೂಲಿ ಕಾರ್ಮಿಕಳು ನಾಪತ್ತೆಯಾಗಿರುವ ಬಗ್ಗೆ ಇತ್ತೀಚೆಗೆ ದೂರುಗಳು ದಾಖಲಾಗಿದ್ದವು. ಈ ಕುರಿತು ತನಿಖೆ ನಡೆಸಿದಾಗ ಕಾಣೆಯಾದ ಮಹಿಳೆಯರನ್ನು ದಲ್ಲಾಳಿಗಳು ದೆಹಲಿಯ ರೇಲ್ವೆ ಸ್ಟೇಷನ್ ಬಳಿ (ಜಿ.ಬಿ. ರಸ್ತೆ) ಇರುವ ವೇಶ್ಯಾವಾಟಿಕೆ ಕೇಂದ್ರಕ್ಕೆ ಕರೆದೊಯ್ದು ಮಾರಾಟ ಮಾಡಿರುವ ಬಗ್ಗೆ ಮಾಹಿತಿ ದೊರೆತಿತ್ತು. ಮಾರಾಟವಾದ ಮಹಿಳೆಯರ ರಕ್ಷಣೆಗೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ನಿರೀಕ್ಷಕ ದಯಾನಂದ, ಪೇದೆಗಳಾದ ಅರುಣಾ, ಪದ್ಮಾ ಮತ್ತು ಮಮ್ತಾಜ್ ಅವರನ್ನೊಳಗೊಂಡ ತಂಡ ರಚಿಸಿ ದೆಹಲಿಗೆ ಕಳುಹಿಸಲಾಗಿತ್ತು. ಪ್ರಕರಣ ಭೇದಿಸಿರುವ ಈ ತಂಡ ಚಿಕ್ಕಬಳ್ಳಾಪುರ ಜಿಲ್ಲೆಯ ಮೂವರು ಮಹಿಳೆಯರು ಸೇರಿದಂತೆ 9 ಜನರನ್ನು ರಕ್ಷಿಸಿದೆ ಎಂದು ಚಿಕ್ಕಬಳ್ಳಾಪುರ ಎಸ್‌ಪಿ ಎನ್.ಶಿವಪ್ರಸಾದ್ ತಿಳಿಸಿದ್ದಾರೆ.
ಬೇರೆ ಜಿಲ್ಲೆಯವರೂ ಪತ್ತೆ: ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ದುಷ್ಕರ್ಮಿಗಳು 80 ಸಾವಿರದಿಂದ 1 ಲಕ್ಷದವರೆಗೆ ಮಾರಾಟ ಮಾಡುತ್ತಿದ್ದರು. ಜಿಲ್ಲೆಯ ಮೂವರೊಂದಿಗೆ ತುಮಕೂರು ಜಿಲ್ಲೆಯ ಉಲಿಗೆರೆ ಗ್ರಾಮದ ಒಬ್ಬರು ಇದ್ದಾರೆ.
ಬೆಂಗಳೂರಿನ ಇಬ್ಬರು, ಮಂಡ್ಯ ಮತ್ತು ಆಂಧ್ರದ ಹಿಂದೂಪುರ ತಾಲೂಕಿನ ಬೀಜಗಾನಹಳ್ಳಿ ಗ್ರಾಮ, ಅನಂತಪುರ ಜಿಲ್ಲೆಯ ತಾಡಪತ್ರಿಯ ತಲಾ ಒಬ್ಬರು ವೇಶ್ಯಾವಾಟಿಕೆ ದಂಧೆಯಲ್ಲಿ ಸಿಲುಕಿಕೊಂಡಿದ್ದರು. ಇವರಲ್ಲಿ ಬೆಂಗಳೂರು ಮತ್ತು ಮಂಡ್ಯದ ಮಹಿಳೆಯರು ಪೊಲೀಸರೊಂದಿಗೆ ಬರಲು ನಿರಾಕರಿಸಿ ದೆಹಲಿಯಲ್ಲಿಯೇ ವಾಸಿಸುವುದಾಗಿ ಹೇಳಿದ್ದಾರೆ. ಉಳಿದವರನ್ನು ಕರೆದುಕೊಂಡು ಬರಲಾಗಿದೆ ಎಂದು ತಿಳಿಸಿದ್ದಾರೆ.
ಮೊದಲು ಸಾಂತ್ವನ: ಪ್ರಸ್ತುತ ವಶಕ್ಕೆ ಪಡೆದುಕೊಂಡಿರುವವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗುವುದು. ಅಲ್ಲಿ ಅವರ ಮನೋಬಲವನ್ನು ಹೆಚ್ಚಿಸಿ ಮಾಹಿತಿ ಕಲೆ ಹಾಕಲಾಗುವುದು. ನಂತರ ಮಹಿಳೆಯರನ್ನು ಯಾರ್ಯಾರು ಕರೆದುಕೊಂಡು ಹೋಗಿ ಮಾರಿದ್ದರು ಎನ್ನುವ ಬಗ್ಗೆ ವಿಚಾರಣೆ ನಡೆಸಲಾಗುವುದು. ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ನೊಂದ ಮಹಿಳೆಯರಿಗೆ ಸರ್ಕಾರದಿಂದ ದೊರೆಯಬೇಕಾದ ನೆರವನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ದಂಧೆಯಲ್ಲಿ ತೊಡಗಿದ್ದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಲು ಹೊಸ ತಂಡವೊಂದನ್ನು ರಚಿಸಲಾಗುವುದು. ಜತೆಗೆ ಹಿರಿಯ ಅಧಿಕಾರಿಗಳ ಸಹಕಾರದೊಂದಿಗೆ ಮುಂಬೈ, ಕೋಲ್ಕತಾ, ದೆಹಲಿಗೆ ಮತ್ತೆ ಪೊಲೀಸರ ವಿಶೇಷ ತಂಡವನ್ನು ಕಳುಹಿಸಿ ಮಾರಾಟವಾಗಿರುವ ಮಹಿಳೆಯರನ್ನು ರಕ್ಷಿಸಲಾಗುವುದು ಎಂದರು.