ಗುಟ್ಟೊಂದ ಹೇಳುವೆ ಪುಟಾಣಿ...
ಪ್ರೀತಿಯ ಪುಟಾಣಿಗಳೇ ಮಕ್ಕಳ ದಿನಾಚರಣೆ ಶುಭಾಶಯಗಳು. ಸರ್ಕಾರ ಮಕ್ಕಳಿಗಾಗಿ ಏನು ಮಾಡಬೇಕು?...
ಕನ್ನಡಪ್ರಭ ಪುಟಾಣಿ ಓದುಗರಿಗೆ ಸಿಎಂ ಓಲೆ
ಪ್ರೀತಿಯ ಪುಟಾಣಿಗಳೇ ಮಕ್ಕಳ ದಿನಾಚರಣೆ ಶುಭಾಶಯಗಳು
ಸರ್ಕಾರ ಮಕ್ಕಳಿಗಾಗಿ ಏನು ಮಾಡಬೇಕು? ಪಾಲಕರು ಮಕ್ಕಳಿಗೆ ಏನು ನೀಡಬೇಕು? ಹಾಗೂ ನೀವು ಮಕ್ಕಳಾಗಿ ಈ ಸಮಾಜಕ್ಕೆ ಏನು ಕೊಡಬೇಕು? ಎನ್ನುವುದನ್ನು ನೆನಪಿಸುವುದೇ ಈ ದಿನಾಚರಣೆ ಉದ್ದೇಶ.
ನೀವು ಗಳಿಸುವ ದುಡ್ಡು, ಐಶ್ವರ್ಯ, ಅಂತಸ್ತಿಗಿಂತ ಹೆಚ್ಚು ಗೌರವ ಸಿಗುವುದು ನೀವು ಪಡೆಯುವ ಜ್ಞಾನಕ್ಕೆ. ಈ ಜ್ಞಾನ ಗಳಿಸಲು ಇರುವ ಏಕೈಕ ಮಾರ್ಗ ಶಿಕ್ಷಣ. ನಿಮ್ಮ ಶೈಕ್ಷಣಿಕ ಜೀವನದ ಪ್ರತಿ ಅಕ್ಷರದಲ್ಲಿ ನಿಮ್ಮ ಪಾಲಕರ ಬೆವರಿದೆ, ಶಿಕ್ಷಕರ ಶ್ರಮವಿದೆ. ಜೀವನಪರ್ಯಂತ ನೀವು ಇವರಿಬ್ಬರಿಗೆ ಋಣಿಯಾಗಿರಬೇಕು.
ಶಿಕ್ಷಣವೆಂದರೆ ಕೇವಲ ಪುಸ್ತಕಗಳನ್ನು ಓದುವುದು ಮಾತ್ರವಲ್ಲ. ನೀವು ಕ್ರೀಡಾಂಗಣದಲ್ಲಿ ಕಲಿಯುವ ಪ್ರತಿ ಆಟ, ಸ್ನೇಹಿತರೊಂದಿಗೆ ಆಡುವ ಭಾಷೆ, ಶಾಲಾ ವಾತಾವರಣದಲ್ಲಿ ಬೆರೆಯುವ ಪರಿ ಇವೆಲ್ಲ ನಿಮ್ಮ ಕಲಿಕೆಯ ಭಾಗವಾಗಿರುತ್ತವೆ. ಮುಂದೆ ನೀವೇ ನಾಯಕರಾಗಬಹುದು.
ರಾಜ್ಯದ ಶೇ.16ರಷ್ಟು ಜನಸಂಖ್ಯೆ ಮಕ್ಕಳೇ ಎಂಬುದು ಸಂತಸದ ಸಂಗತಿ. ರಾಜ್ಯದ ಆಯವ್ಯಯದಲ್ಲಿ ಶೇ.13ರಷ್ಟು ಹಣ ನಿಮಗೆ ಮೀಸಲು. ಪ್ರತಿ ವರ್ಷ ನಿಮಗಾಗಿ 15 ಸಾವಿರ ಕೋಟಿಗೂ ಅಧಿಕ ಹಣ ನೀಡುತ್ತಿದ್ದೇವೆ. ನೀವು ಶಾಲೆಗೆ ಬರಬೇಕು, ಈ ನಾಡಿನ ಹೆಸರನ್ನು ಚಿರಕಾಲ ಬೆಳಗಬೇಕು ಎಂಬ ಅಭಿಲಾಷೆ ನನ್ನದಾಗಿದೆ. ಇಪ್ಪತ್ತೊಂದನೇ ಶತಮಾನ ಭವ್ಯ ಭಾರತದ್ದು ಎಂದು ಜಗತ್ತೇ ಮಾತನಾಡಿಕೊಳ್ಳುತ್ತಿದೆ. ಇದರರ್ಥ 21ನೇ ಶತಮಾನವನ್ನು ಆಳುವ ತಾಕತ್ತು ಹಾಗೂ ಜವಾಬ್ದಾರಿ ನಿಮ್ಮ ಮೇಲಿದೆ. ಈ ರಾಜ್ಯದ ಒಂದು ಕೋಟಿಗೂ ಅಧಿಕ ಮಕ್ಕಳಲ್ಲಿದೆ. ತಮ್ಮ ವಿಕಸನಕ್ಕಾಗಿ ರಾಜ್ಯ ಸರ್ಕಾರ ನೀಡುತ್ತಿರುವ ಸಾವಿರಾರು ಕೋಟಿ ರುಪಾಯಿ ಅನುದಾನ, ಕ್ಷೀರಭಾಗ್ಯ, ಬಿಸಿಯೂಟ ಯೋಜನೆಗಳು ಯಾವುದೇ ಮತ ಬೇಟೆಗಲ್ಲ. ನಾಳೆ ಈ ರಾಜ್ಯದ ಉನ್ನತಿಯ ಹೊಣೆ ಹೊರಲಿರುವ ನಿಮ್ಮನ್ನು ಸಶಕ್ತರನ್ನಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದಕ್ಕೆ ಉತ್ತಮ ವೇದಿಕೆಯನ್ನು ನಾವು ನಿರ್ಮಿಸಿದ್ದೇವೆ ಅಷ್ಟೇ. ಆಯವ್ಯಯದ ದೊಡ್ಡ ಪಾಲನ್ನು ಮಕ್ಕಳಿಗೆ ಕೊಟ್ಟಿರುವಾಗ ಇದಕ್ಕೆ ಪ್ರತಿಯಾಗಿ ಈ ರಾಜ್ಯಕ್ಕೆ ನೀವೂ ಕೊಡುಗೆ ನೀಡಿ, ರಾಜ್ಯಕ್ಕೆ ಕೀರ್ತಿಗೌರವವನ್ನು ತನ್ನಿ.
ಇದೇ ಸಂದರ್ಭದಲ್ಲಿ ತಮ್ಮ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು ಶಿಕ್ಷಣ ಕೊಡಿಸುತ್ತಿರುವ ಅಪ್ಪ-ಅಮ್ಮಂದಿರನ್ನು ಎಂದೂ ಕೈ ಬಿಡುವುದಿಲ್ಲ. ಶಿಕ್ಷಣಕ್ಕೆ ಈ ರಾಜ್ಯದ ಪ್ರಜೆಗಳು ನೀಡುವ ತೆರಿಗೆ ಹಣ ಬಳಕೆಯಾಗುತ್ತಿದೆ, ಸರ್ಕಾರ ನಮ್ಮ ಸೇವೆ ಬಯಸಿದಾಗ ನೀಡುವ ಉದಾರತೆ ಬೆಳೆಸಿಕೊಳ್ಳುತ್ತೇವೆ. ಶಿಕ್ಷಕರು ಹಾಗೂ ಗುರು-ಹಿರಿಯರನ್ನು ಗೌರವಿಸಿ ನಮ್ಮ ಸಂಸ್ಕೃ ಬೆಳಗುವ ಕೆಲಸ ಮಾಡುತ್ತೇವೆ. ಅತಿ ಮುಖ್ಯವಾಗಿ ಯಾವುದೇ ಕೆಟ್ಟ ಚಟಗಳತ್ತ ಮುಖಮಾಡುವುದಿಲ್ಲ ಎಂದು ನಿಮ್ಮ ಮುಕ್ತ ಮನಸ್ಸಿನಿಂದ ಪ್ರತಿಜ್ಞೆಮಾಡಿ.
ನಿಮ್ಮ ಅಭ್ಯುದಯಕ್ಕಾಗಿ ಶ್ರಮಿಸುತ್ತೇನೆ ಎಂದು ನಾನೂ ಪ್ರತಿಜ್ಞೆ ಮಾಡುತ್ತೇನೆ.
ಇತಿ ನಿಮ್ಮ ಪ್ರೀತಿಯ
ಸಿದ್ದರಾಮಯ್ಯ
ಗಲಾಟೆ ಸಾಹೇಬ್ರು!
ನಾನು ಮನೆಯಲ್ಲಿ ಒಬ್ಬನೇ ಮಗ. ಉಳಿದವರೆಲ್ಲ ಅಕ್ಕ-ತಂಗಿಯರು. ಹೀಗಾಗಿ ಯಾರು ನನಗೆ ಹೊಡಿತಿರ್ಲಿಲ್ಲ. ಬೈತಿರ್ಲಿಲ್ಲ. ಆದ್ದರಿಂದ ಮನೆಯಲ್ಲಿ ನನ್ನ ಗಲಾಟೆ ಹೆಚ್ಚಾಗಿರ್ತಿತ್ತು. ನಮ್ಮಪ್ಪ ವಕೀಲಿ ವೃತ್ತಿ ಮಾಡ್ತಿದ್ರು. ಸಣ್ಣವನಿರುವಾಗಲೇ ಅವರ ಬೆನ್ನ ಹಿಂದೆ ಕೋರ್ಟ್ಗೆ ಹೋಗ್ತಿದ್ದೆ. ಪುರಸಭೆ ಅಧ್ಯಕ್ಷರಾಗಿದ್ದಾಗಲೂ ಹಠ ಹಿಡಿದು ಅವರ ಜತೆ ಅಲ್ಲಿಗೂ ಲಗ್ಗೆ ಇಡುತ್ತಿದ್ದೆ. ಮನೆಯಲ್ಲಿ ಮಾಡುತ್ತಿದ್ದ ಗಲಾಟೆ, ಕೀಟಲೆ ಅಲ್ಲಿಯೂ ಮುಂದುವರಿಯುತ್ತಿತ್ತು. ಶಾಲೆಯಲ್ಲೂ ಕೂಡ ನನ್ನದೇ ಗಲಾಟೆ ಹೆಚ್ಚಿರುತ್ತಿದ್ದರಿಂದ ಶಿಕ್ಷಕರು ನನ್ನನ್ನೇ 'ಮಾನಿಟರ್'ನನ್ನಾಗಿ ನೇಮಿಸುತ್ತಿದ್ದರು. ನಾನು ಶಾಲೆಗೆ ಹೋಗುವ ದಿನಗಳದು. ಒಂದು ನಾಟಕದಲ್ಲಿ ಭೀಮನ ಪಾತ್ರ ನಿರ್ವಹಿಸಲು ಹೇಳಿದ್ದರು. ಭೀಮನ ಗದೆಯಿರದ ಹಿನ್ನೆಲೆಯಲ್ಲಿ ಹಾಕಿ ಸ್ಟಿಕ್ನ್ನೇ ಗದೆಯನ್ನಾಗಿ ಉಪಯೋಗಿಸಲು ಕೊಟ್ಟಿದ್ರು. ಆದರೆ ನಾನು ಗದೆ ಬೀಸುವ ಅಬ್ಬರದಲ್ಲಿ ವೇದಿಕೆ ಮೇಲಿದ್ದ ಬಲ್ಬ್ಗಳನ್ನೆಲ್ಲ ಒಡೆದುಹಾಕಿದ್ದೆ.
-ಆರ್.ವಿ.ದೇಶಪಾಂಡೆ, ಉನ್ನತ ಶಿಕ್ಷಣ ಸಚಿವರು
ಕ್ಲಾಸಿಗೆ ಚಕ್ಕರ್, ಪಿಕ್ಚರ್ಗೆ ಹಾಜರ್
ನಾನು ತರಗತಿಯಲ್ಲಿ ಒಬ್ಬ ಅವರೇಜ್ ವಿದ್ಯಾರ್ಥಿ. ಆದರೆ ಶಾಲೆಯಲ್ಲಿ ನಮ್ಮದೇ ಆದ ಒಂದು ಗ್ಯಾಂಗ್ ಇತ್ತು. ಗುಲ್ಬರ್ಗದ ಯಾವುದೇ ಚಿತ್ರ ಮಂದಿರಕ್ಕೆ ಹೊಸ ಚಿತ್ರ ಬಂದಿದ್ದರೆ ಬಿಡುತ್ತಿರಲಿಲ್ಲ. ಕ್ಲಾಸ್ಗೆ ಬಂಕ್ ಹಾಕಿ ಥಿಯೇಟರ್ಗೆ ಹಾಜರಾಗುತ್ತಿದ್ದೆವು. ನಾವು ಶಾಲೆಯಲ್ಲಿ ಕೂತಿದ್ದರೆ ನಮ್ಮ ಗ್ಯಾಂಗ್ನಲ್ಲಿ ಯಾರಾದರೂ ಒಬ್ಬರು ಕೂಗುತ್ತಿದ್ದರು, 'ಹೇ ಈ ಥಿಯೇಟರ್ನಲ್ಲಿ ಹೊಸ ಫಿಲ್ಮ್ ಬಂದೈತಿ' ಎಂದು. ಆಗ ಶಾಲೆಯಿಂದ ನೇರವಾಗಿ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದ್ದೆವು. ಈ ವಿಚಾರ ನಮ್ಮ ಶಾಲೆಯಲ್ಲಿ ಹಾಗೂ ಮನೆಯಲ್ಲಿ ಎಲ್ಲರಿಗೂ ಗೊತ್ತಿತ್ತು. ಶಾಲೆಯಲ್ಲಿ ಫುಲ್ ಫ್ರೀಡಂ ಇತ್ತು. 'ಇವತ್ತು ಯಾವ ಚಿತ್ರ ನೋಡಿದ್ರಪ್ಪಾ' ಅಂತ ಶಿಕ್ಷಕರೇ ನಮ್ಮನ್ನು ಕೇಳುತ್ತಿದ್ದರು.
-ಶರಣಪ್ರಕಾಶ್ ಪಾಟೀಲ್, ವೈದ್ಯ ಶಿಕ್ಷಣ ರಾಜ್ಯ ಸಚಿವರು
ಥ್ರೋ ಬಾಲ್ ಭಾರತಿ!
ನಾನು ಸ್ಕೂಲ್ ದಿನಗಳಿಂದಲೂ ಸ್ಪೋರ್ಟ್ಸ್ನಲ್ಲಿ ನಾನೇ ಮೊದಲು ಬರುತ್ತಿದ್ದೆ. ಶಾಲೆ ಮತ್ತು ಕಾಲೇಜಿನಲ್ಲಿ ನನಗೆ ಥ್ರೋ ಬಾಲ್ ಭಾರತಿ ಅಂತಲೇ ಕರೆಯುತ್ತಿದ್ದರು. ಈಗಲೂ ಕ್ರೀಡೆ ನೆನಪಾದರೆ ಮೈ ಜುಂ ಎನ್ನುತ್ತದೆ. ಆಗ ಬೇರೆಯವರು 'ಅಯ್ಯೋ ಈ ಭಾರತಿ ಬರದಿದ್ದರೆ ನಾನೇ ಗೆಲ್ಲುತ್ತೇವೆ' ಎಂದು ಮಾತನಾಡಿಕೊಳ್ಳುತ್ತಿದ್ದರು. ಒಂದಿನ ಥ್ರೋ ಬಾಲ್ ಗೇಮ್ ಆಯೋಜಿಸಿದ್ದರು. ನಾನು ಸುಮ್ಮನೆ ಬೇರೆ ವಿದ್ಯಾರ್ಥಿನಿಯರನ್ನು ಆಟವಾಡಿಸಲು ಆ ದಿನ ಗೇಮ್ ಶುರುವಾದ ಮೇಲೂ ಫೀಲ್ಡ್ ಕಡೆ ಹೋಗಲಿಲ್ಲ.'ಅಬ್ಬಾ ಈ ಭಾರತಿ ಬರಲಿಲ್ಲ. ಇವತ್ತು ನಮ್ಮದೇ ಗೆಲವು' ಎಂದುಕೊಳ್ಳುವಾಗ ಎಂಟ್ರಿ ಕೊಟ್ಟೆ ನೋಡಿ. 'ಅಯ್ಯೋ ಯಾಕಮ್ಮ ಬಂದೆ' ಅಂತ ಪೆಚ್ಚು ಮೋರೆ ಹಾಕಿದ್ದು ಈಗಲೂ ನೆನಪಿದೆ. ಇಂಥ ತರಲೆಗಳನ್ನು ಸಾಕಷ್ಟು ಬಾರಿ ಮಾಡಿದ್ದೇನೆ. ಬಾಲ್ಯ, ಶಾಲೆ ಅಂದಾಕ್ಷಣ ನನಗೆ ಸ್ಪೋರ್ಟ್ಸ್ನಲ್ಲಿ ಮಾಡಿದ ಇಂಥ ಘಟನೆಗಳು ನೆನಪಾಗುತ್ತವೆ.
-ಭಾರತಿ ವಿಷ್ಣುವರ್ಧನ್, ಹಿರಿಯ ನಟಿ
ಅಣ್ಣನ ಕೀಟಲೆಗಳು...
ನನ್ನ ಅಣ್ಣ ನೀರಜ್ ಮಹಾತುಂಟ. ಅಪ್ಪ ಹೊಡೆಯುತ್ತಾರೆಂದು ಆತನ ಬಹಳಷ್ಟು ತುಂಟತನವನ್ನು ಅಪ್ಪನ ಹತ್ರ ಹೇಳುತ್ತಿರಲಿಲ್ಲ. ಆದಾಗ್ಯೂ ಆತ ಯಾವಾಗಲೂ ನನಗೆ ಹೊಡೆಯುತ್ತಿದ್ದ. ಒಮ್ಮೆ ನನ್ನ ಅಪ್ಪ-ಅಮ್ಮ ಇಬ್ಬರೂ ಸಂಬಂಧಿಕರ ಮನೆಗೆ ಹೋಗಿದ್ದರು. ಆಗ ನನ್ನನ್ನು ಹಿಡಿದು ಕನ್ನಡಿಯ ಮುಂದೆ ಕೂರಿಸಿ, 'ನೋಡು, ಈಗ ನಿನ್ನನ್ನು ಹೇಮಾ ಮಾಲಿನಿಯಂತೆ ಮಾಡುತ್ತೇನೆ' ಎಂದು ಹೇಳಿ ಒಂದು ಕತ್ತರಿಯನ್ನು ತೆಗೆದುಕೊಂಡು ನನ್ನ ಕೂದಲನ್ನೆಲ್ಲ ತನಗೆ ಇಷ್ಟ ಬಂದಂತೆ ಕತ್ತರಿಸಿ ಹಾಕಿದ. ನಾನು ಎಷ್ಟು ಅತ್ತರೂ ಪ್ರಯೋಜನವಾಗಲಿಲ್ಲ. ಅವನು ಮಾಡಿದುದು ಎಷ್ಟು ಅಸಹ್ಯಕರವಾಗಿತ್ತೆಂದರೆ, ನನ್ನ ಇಡೀ ತಲೆಯನ್ನು ಆಮೇಲೆ ಬೋಳಿಸಬೇಕಾಯಿತು. ಈಗ ನನ್ನಣ್ಣ ಬಹಳ ಹೆಮ್ಮೆಯಿಂದ ಹೇಳುತ್ತಾನೆ. 'ಅಂದು ನಾನು ಬಲವಂತವಾಗಿ ನಿನ್ನ ಕೂದಲು ಕತ್ತರಿಸಿ, ನಂತರ ಬೋಡಿ ಹೊಡೆಸಿದರಿಂದಲೇ ನಿನಗೆ ಇಂದು ಉದ್ದದ ಚೆಂದ ಕೂದಲಿದೆ' ಎನ್ನುತ್ತಿದ್ದ.
-ಶಾಲಿನಿ ರಜನೀಶ್, ಹಿರಿಯ ಐಎಎಸ್ ಅಧಿಕಾರಿ