ಮೂಕ ಮಕ್ಕಳ ಹಂಸಧ್ವನಿ
ಆ ಮಕ್ಕಳಲ್ಲಿ ಕಲಿಕೆ 'ಧ್ಯಾನ'ವಿದೆ. ಆದರೆ ಈ ತುಡಿತಕ್ಕೆ ಮಾತಿನ ರೂಪ ಕೊಡುವ ಶಕ್ತಿ ಇಲ್ಲ..! ಈ ಮಕ್ಕಳೇನೋ ವಾಕ್-ಶ್ರವಣ ಸಾಮರ್ಥ್ಯದಿಂದ ವಂಚಿತರಾಗಿದ್ದಾರೆ.
29 ತಿಂಗಳಿಂದ ಸಂಬಳ ನೀಡದಿದ್ದರೂ ಕಾನೂನು ಸಂಘರ್ಷ ಮಾಡುತ್ತ ಪಾಠ ಮಾಡುತ್ತಿರುವ ಶಿಕ್ಷಕರು
ಕನ್ನಡಪ್ರಭ ವಾರ್ತೆ, ಬೆಂಗಳೂರು, ನ.13-
ಆ ಮಕ್ಕಳಲ್ಲಿ ಕಲಿಕೆ 'ಧ್ಯಾನ'ವಿದೆ. ಆದರೆ ಈ ತುಡಿತಕ್ಕೆ ಮಾತಿನ ರೂಪ ಕೊಡುವ ಶಕ್ತಿ ಇಲ್ಲ..!
ಈ ಮಕ್ಕಳೇನೋ ವಾಕ್-ಶ್ರವಣ ಸಾಮರ್ಥ್ಯದಿಂದ ವಂಚಿತರಾಗಿದ್ದಾರೆ. ಆದರೆ ಇದೆಲ್ಲವೂ ಇರುವ ಸರ್ಕಾರ ಮಾತ್ರ ಕಣ್ಣಿಲ್ಲದವರಂತೆ, ಹೃದಯ ಹೀನರಂತೆ ವರ್ತಿಸುತ್ತಿದೆ. ಅಂತಹ ಮಕ್ಕಳ ಶಾಲೆಯನ್ನೇ ಮುಚ್ಚಲು ಹೊರಟಿದೆ.
ಇದು ಬೆಂಗಳೂರಿನ ಇಂದಿರಾನಗರದಲ್ಲಿರುವ ಹಂಸಧ್ವನಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ದುಸ್ಥಿತಿ. ಒಂದೆಡೆ ಎರಡು ಮಕ್ಕಳಿದ್ದರೂ ಗ್ರಾಮೀಣ ಕನ್ನಡಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಆದರೆ ಅವರದೇ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದಲ್ಲಿ ಬರುವ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಸಲ್ಲದ ಕಾರಣ ನೀಡಿ ಈ ಶಾಲೆ ಮುಚ್ಚಲೇಬೇಕು ಎಂದು ಹಠ ಹಿಡಿದುಕುಳಿತಿದೆ. ಪರಿಣಾಮ ಶಾಲಾ ಶಿಕ್ಷಕರಿಗೆ 29 ತಿಂಗಳಿಂದ ವೇತನವನ್ನೇ ನೀಡಿಲ್ಲ. ಉತ್ಸಾಹ ಕಳೆದುಕೊಂಡ ಶಿಕ್ಷಕರು ಅರೆಮನಸಿನಿಂದ ಈ ಮಕ್ಕಳಿಗೆ ಪಾಠ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಎರಡು ವರ್ಷದಿಂದ ಇಲಾಖೆ ಜತೆ ಕಾನೂನು ಸಂಘರ್ಷ ನಡೆಸುತ್ತಿರುವ ಶಾಲೆ ಶಿಕ್ಷಕರು ಖುದ್ದು ಸಿಎಂ ಸಿದ್ದರಾಮಯ್ಯನವರಿಗೆ ಜನಸ್ಪಂದನ ಕಾರ್ಯಕ್ರಮದಲ್ಲಿ ಎರಡು ಬಾರಿ ಮನವಿ ನೀಡಿದ್ದಾರೆ. ಆದರೆ ಪಲಿತಾಂಶ ಮಾತ್ರ ಶೂನ್ಯ. ಶಾಲೆ ಮುಚ್ಚಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಅಧಿಕಾರಿ ಮಾತ್ರ ನೀವು ಯಾರಿಗೆ ದೂರು ಕೊಟ್ಟರೂ ಅಷ್ಟೇ ಎಂಬ ದರ್ಪದ ಉತ್ತರವನ್ನು ಮತ್ತೆ ಮತ್ತೆ ನೀಡಿ ಶಿಕ್ಷಕರು ಹಾಗೂ ಮಕ್ಕಳ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತಿದ್ದಾರೆ.
ಯಾವುದು ಈ ಶಾಲೆ: ನ್ಯಾಶಿಯೋ ಸಂಸ್ಥೆ ನಡೆಸುತ್ತಿರುವ ಹಂಸಧ್ವನಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆಗೆ ಒಳ್ಳೆಯ ಇತಿಹಾಸವಿದೆ. ರಾಜ್ಯದ ದಕ್ಷ ಪೊಲೀಸ್ ಅಧಿಕಾರಿ ಎಂದು ಹೆಸರು ಗಳಿಸಿದ್ದ ನಿವೃತ್ತ ಡಿಜಿಪಿ ನಿಜಾಮುದ್ದೀನ್ ಪತ್ನಿ ಲಕ್ಷ್ಮಿ ನಿಜಾಮುದ್ದೀನ್ 1980ರಲ್ಲಿ ಕರ್ನಾಟಕ ಸೊಸೈಟಿ ನಿಯಮಗಳ ಅಡಿ ಈ ಶಾಲೆ ಸ್ಥಾಪಿಸಿದರು.
ಸ್ವತಃ ಅಂಗವಿಕಲರಾಗಿದ್ದ ಲಕ್ಷ್ಮಿ ವಾಕ್-ಶ್ರವಣ ಸಮಸ್ಯೆ ಹೊಂದಿದ ಮಕ್ಕಳಿಗಾಗಿ ನಿರ್ಮಿಸಲು ಹೊರಟ ಶಾಲೆಗೆ ಹಲವಾರು ದಾನಿಗಳು, ಸಮಾಜಸೇವಕರು, ಉದ್ಯಮಿಗಳು ನೆರವು ನೀಡಿದ್ದರು. ಡಾ.ರಾಜ್ಕುಮಾರ್ ಕುಟುಂಬ ವರ್ಗದ ವಜ್ರೇಶ್ವರಿ ಕಂಬೈನ್ಸ್, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಕನ್ನಡಪ್ರಭ ಪತ್ರಿಕೆ ಮಾಜಿ ಸಂಪಾದಕ ದಿ. ಖಾದ್ರಿ ಶಾಮಣ್ಣ ಮೊದಲಾದವರು ಕಟ್ಟಡಕ್ಕೆ ಧನ ಸಹಾಯ ನೀಡಿದ್ದರು.
ಶಾಲೆ ನಿರ್ಮಾಣಕ್ಕೆ ನಾಲ್ಕೂವರೆ ಎಕರೆ ಜಾಗವನ್ನು ಸರ್ಕಾರ 100 ವರ್ಷಗಳಿಗಾಗಿ ಭೋಗ್ಯಕ್ಕೆ ನೀಡಿತ್ತು. ಜತೆಗೆ ಅನುದಾನ ನೀಡಿ ಶಿಕ್ಷಕರನ್ನು ನೇಮಿಸಿತ್ತು. ಇಬ್ಬರು ಕಚೇರಿ ಸಹಾಯಕರು ಸೇರಿ 12 ಶಿಕ್ಷಕರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆದರೆ ಎರಡು ವರ್ಷಗಳ ಹಿಂದೆ ಈ ಶಾಲೆ ಮುಖ್ಯ ಶಿಕ್ಷಕರು ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂತು.
ಪರಿಶೀಲನೆ ನಡೆಸಿದ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶಕರು ಶಾಲೆಗೆ ಆಡಳಿತ ಮಂಡಳಿ ಇಲ್ಲ. ಮತ್ತು ಅನುದಾನಿತ ಶಾಲೆಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಹೇಳಿ ಶಾಲೆ ಮುಚ್ಚಲು ಆದೇಶಿಸಿದರು. ಜತೆಗೆ ಶಿಕ್ಷಕರ ಸಂಬಳ ತಡೆಯಲಾಗಿದೆ. ಹೈಕೋರ್ಟ್ ಮೆಟ್ಟಿಲೇರಿದ ಶಿಕ್ಷಕರು ಆದೇಶಕ್ಕೆ ಮಧ್ಯಂತರ ತಡೆ ತಂದಿದ್ದಾರೆ. ಆದರೆ ಇಲಾಖೆ ನಿರ್ದೇಶಕ ಜಯವಿಭವಸ್ವಾಮಿ ಮಾತ್ರ ಶಾಲೆ ಮುಚ್ಚಿಸಲು ಪಣ ತೊಟ್ಟವರಂತೆ ವರ್ತಿಸುತ್ತಿದ್ದಾರೆ.
ಭೂಮಿ ಮೇಲೆ ಕಣ್ಣು: ಸರ್ಕಾರದ ನಿರ್ಧಾರದ ಬಗ್ಗೆ ಶಿಕ್ಷಕರು ಬೇರೆಯದೇ ವ್ಯಾಖ್ಯಾನ ಮಾಡುತ್ತಿದ್ದಾರೆ. ಹಲವು ಮೂಲಗಳಿಂದ ಸಂಗ್ರಹಿಸಿದ ಮಾಹಿತಿ ಪ್ರಕಾರ ನಿರ್ದೇಶನಾಲಯ ಶಾಲೆಗೆ ನೀಡಿದ್ದ ಭೋಗ್ಯವನ್ನು ರದ್ದುಪಡಿಸಿ ಅದನ್ನು ಖಾಸಗಿ ಬಿಲ್ಡರ್ಗಳಿಗೆ ನೀಡಲು ನಿರ್ಧರಿಸಿದೆ. ಇಂದಿರಾನಗರದಲ್ಲಿ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಈ ಜಾಗದಲ್ಲಿ ಕಲ್ಯಾಣ ಮಂಟಪ ಹಾಗೂ ವಾಣಿಜ್ಯ ಮಳಿಗೆ ನಿರ್ಮಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಹೀಗಾಗಿ ಈ ಶಾಲೆ ಮಕ್ಕಳನ್ನು ಕೋರಮಂಗಲದಲ್ಲಿರುವ ಶೀಲಾ ಕೊತ್ವಾಲ್ ಶಾಲೆಗೆ ವರ್ಗಾಯಿಸಿ ಎಂದು ಒತ್ತಡ ಹೇರುತ್ತಿದೆ. ಆದರೆ ಅಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅವಕಾಶ ಕಲ್ಪಿಸುವುದು ಸಾಧ್ಯವಿಲ್ಲ.
ಸಿದ್ದರಾಮಯ್ಯ ಬಂದಿದ್ದರು: ಕುತೂಹಲಕಾರಿ ಸಂಗತಿ ಎಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಈ ಶಾಲೆಯ ಮಕ್ಕಳ ಕ್ರೀಡಾಕೂಟ ಉದ್ಘಾಟನೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮಾತ್ರವಲ್ಲ ಕಟ್ಟಡ ನಿರ್ಮಾಣಕ್ಕೆ ನೆರವನ್ನೂ ನೀಡಿದ್ದರು. ಆದರೆ ಅವರೇ ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲಿ ಶಾಲೆ ಮುಚ್ಚುವುದಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಮಾತ್ರವಲ್ಲ 3-8-2013ರಂದು ಶಿಕ್ಷಕರು ಜನಸ್ಪಂದನ ಕಾರ್ಯಕ್ರಮಕ್ಕೆ ಬಂದು ನೀಡಿದ ದೂರಿನ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಟಿಪ್ಪಣಿ ಬರೆದಿದ್ದರೂ ಪ್ರಯೋಜನವಾಗಿಲ್ಲ.
ಆಡಳಿತ ಮಂಡಳಿಯಲ್ಲಿ ಅವ್ಯವಹಾರವಾಗಿದೆ ಎಂದು ಶಾಲೆ ಮುಚ್ಚುವುದು ಯಾವ ನ್ಯಾಯ? ಸರ್ಕಾರವೇ ಆಡಳಿತಾಧಿಕಾರಿಯನ್ನು ನೇಮಿಸುವುದಕ್ಕೆ ಅವಕಾಶವಿದೆ. 29 ತಿಂಗಳಿಂದ ಸಂಬಳವಾಗದಿದ್ದರೂ ನಾವು ಮಕ್ಕಳಿಗೆ ಕಲಿಸುವುದನ್ನು ಬಿಟ್ಟಿಲ್ಲ. ಹೋರಾಟ ನಡೆಸುತ್ತಿದ್ದೇವೆ. ಏಕೆಂದರೆ ನಮಗೆ ಇದೇ ಬದುಕು.
- ನಫೀಸಾ ಸುಲ್ತಾನ್. ಹಿರಿಯ ಶಿಕ್ಷಕಿ
- ರಾಘವೇಂದ್ರ ಭಟ್