ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಗುಳೆ ಹೊರಟವರು ಇಳೆಗೆ ದೂರಾದರು

ಕೂಲಿ ಅರಸಿ ಮಹಾರಾಷ್ಟ್ರಕ್ಕೆ ಗುಳೆ ಹೊರಟಿದ್ದ ಸರಕು ಸಾಗಣೆ ವಾಹನ ಉರುಳಿ ಬಿದ್ದ ಪರಿಣಾಮ 9 ಮಕ್ಕಳು, 9 ಮಹಿಳೆಯರು ಸೇರಿದಂತೆ 22 ಜನ ಸ್ಥಳದಲ್ಲೇ ಮೃತಪಟ್ಟಿದ್ದು..

Srinivasa Murthy VN
Updated On : 17 Nov 2013, 1:19 am

ಕನ್ನಡಪ್ರಭ ವಾರ್ತೆ ಬೆಳಗಾವಿ ನ.16
ಕೂಲಿ ಅರಸಿ ಮಹಾರಾಷ್ಟ್ರಕ್ಕೆ ಗುಳೆ ಹೊರಟಿದ್ದ ಸರಕು ಸಾಗಣೆ ವಾಹನ ಉರುಳಿ ಬಿದ್ದ ಪರಿಣಾಮ 9 ಮಕ್ಕಳು, 9 ಮಹಿಳೆಯರು ಸೇರಿದಂತೆ 22 ಜನ ಸ್ಥಳದಲ್ಲೇ ಮೃತಪಟ್ಟಿದ್ದು, 30 ಜನ ಗಂಭೀರವಾಗಿ ಗಾಯಗೊಂಡ ಘಟನೆ ಸವದತ್ತಿ ತಾಲೂಕಿನ ಹಲಕಿ ಕ್ರಾಸ್ ಬಳಿ ಶನಿವಾರ ಬೆಳಗಿನ ಜಾವ ಸಂಭವಿಸಿದೆ. ಗಾಯಾಳುಗಳ ಪೈಕಿ 9 ಜನರ ಸ್ಥಿತಿ ಗಂಭೀರವಾಗಿದೆ.
ಮೃತರನ್ನು ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಉಪ್ಪಲದಿನ್ನಿ ತಾಂಡಾದ ಬಾಲಚಂದ್ರ ಭೀಮಪ್ಪ ರಾಠೋಡ (40), ಅನಸೂಯಾಬಾಯಿ ಬಾಲಚಂದ್ರ ರಾಠೋಡ (30), ರಾಮು ರಾಠೋಡ (13), ಬೋಳಿ ರಾಮಪ್ಪ ಚವ್ಹಾಣ್ (9), ಸಿಂಧು ಗೋಪಾಲ ಚವ್ಹಾಣ್ (20), ಸುಶೀಲಾ ಗುರು ಚವ್ಹಾಣ್ (30), ಸಾರವ್ವ ರವಿ ಚವ್ಹಾಣ್ (25), ಸಾತಾಬಾಯಿ ರಾಮಪ್ಪ ಚವ್ಹಾಣ್ (20), ಪಾಂಡು ಸೋಮಪ್ಪ ಚವ್ಹಾಣ್ (28), ಸುಶೀಲಾ ಬಾಳಪ್ಪ ರಾಠೋಡ (20), ರಾಮಪ್ಪ ಲಕ್ಷ್ಮಣ ಚವ್ಹಾಣ್ (30), ಜ್ಯೋತಿಬಾಯಿ ಗೋಪಿಲಾಲ ಚವ್ಹಾಣ್ (28), ಮಾಳಿ ಸೋಮಪ್ಪ ರಾಠೋಡ (4), ಬಂಟೇಶ ಗುರಪ್ಪ ಚವ್ಹಾಣ್ (5) ಬಬಲಾ ರಾಮಪ್ಪ ಚವ್ಹಾಣ್ (2), ಶಿವರಾಜ ಪೀಲಪ್ಪ ಚವ್ಹಾಣ್ (4), ಮನಗೋಡ ತಾಂಡಾದ ಪಾಪ್ಪಿ ಗೋಪಾಲ ರಾಠೋಡ (40), ಸುಶೀಲಾ ಗೋಪಾಲ ರಾಠೋಡ (12), ಜಮಲಾಪುರ ತಾಂಡಾದ ಶ್ರುತಿಬಾಯಿ ರಾಮಪ್ಪ ರಾಠೋಡ (20), ತೋಳದಿನ್ನಿ ತಾಂಡಾದ ಪರಶುರಾಮ ಬಾಳಪ್ಪ ವಡ್ಡರ (6), ವನಕ್ರಾಸ್ ತಾಂಡಾದ ಲಕ್ಷ್ಮಿಬಾಯಿ ಅಂಬರೀಷ ವಡ್ಡರ (20) ಎಂದು ಗುರುತಿಸಲಾಗಿದೆ. ನಯನ(5) ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ.
ಗುಳೆ ಹೊರಟಿದ್ದರು: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಾಜನಕೊಳ್ಳ ತಾಂಡಾ, ಗೆದ್ದಲಮರಿ ತಾಂಡಾ, ಉಪ್ಪಲದಿನ್ನಿ ತಾಂಡಾ, ಜಮಲಾಪುರ ತಾಂಡಾ, ತೋಲದಿನ್ನಿ ತಾಂಡಾ, ಮಣಗೋಡ ತಾಂಡಾ ಮತ್ತು ಯರಕಿಹಾಳ ತಾಂಡಾದ ಸುಮಾರು 54 ಜನರು ಮಹಾರಾಷ್ಟ್ರದ ಸಾವಂತವಾಡಿಯ ಕಲ್ಲು ಗಣಿಗಾರಿಕೆ ಕೆಲಸಕ್ಕೆ ತೆರಳುತ್ತಿದ್ದರು. ಸರಕು ಸಾಗಣೆ ವಾಹನದಲ್ಲಿ ಸಜ್ಜೆ ಅಕ್ಕಿ, ಜೋಳ ಮತ್ತಿತರ ಧವಸ, ಧಾನ್ಯಗಳನ್ನು ತುಂಬಿಕೊಂಡು ಶುಕ್ರವಾರ ರಾತ್ರಿ 9 ಗಂಟೆಗೆ ಪಯಣ ಬೆಳೆಸಿದ್ದರು.
ಶನಿವಾರ ಮುಂಜಾನೆ 5.15ರ ಹೊತ್ತಿಗೆ ಸವದತ್ತಿ ತಾಲೂಕಿನ ಹಲಕಿ ಕ್ರಾಸ್ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಡೆ ಕಂಬಗಳಿಗೆ ಡಿಕ್ಕಿ ಹೊಡೆದು ಸುಮಾರು 15 ಅಡಿ ತಗ್ಗಿನಲ್ಲಿ ಉರುಳಿ ಬಿದ್ದಿದೆ. ವಾಹನದಲ್ಲಿ ತುಂಬಿದ್ದ ಧಾನ್ಯಗಳ ಚೀಲಗಳು ಪ್ರಯಾಣಿಕರ ಮೇಲೆ, ಅದರಲ್ಲೂ ಮಕ್ಕಳು, ಮಹಿಳೆಯರ ಮೇಲೆ ಬಿದ್ದಿದ್ದರಿಂದ ಉಸಿರುಗಟ್ಟಿ ಅಸುನೀಗಿದ್ದಾರೆ.
ವಾಹನದ ಕೆಳಗೆ ಸಿಲುಕಿಯೂ ಕೆಲವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ 9 ಜನರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದ್ದು, 13 ಜನರನ್ನು ಚಚಡಿ ಆಸ್ಪತ್ರೆಗೆ ಹಾಗೂ 8 ಜನರನ್ನು ಮುರಗೋಡ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೀವ ಉಳಿಸುವ ಸರಕೇ ಜೀವ ತೆಗೆಯಿತು: ಕೂಲಿ ಕಾರ್ಮಿಕರು ತಮ್ಮ ಜೊತೆಯಲ್ಲಿ ಸುಮಾರು 45 ಚೀಲಗಳಷ್ಟು ಸಜ್ಜೆ, ಬಿಳಿ ಜೋಳ, ಅಕ್ಕಿಯನ್ನು ಮಿನಿ ಸರಕು ಸಾಗಣೆ ವಾಹನದಲ್ಲಿ ಕೊಂಡೊಯ್ಯುತ್ತಿದ್ದರು.
ಈ ಧವಸ ಧಾನ್ಯಗಳಿಂದ ತಿಂಗಳ ಕಾಲ ನಿಶ್ಚಿಂತೆಯಿಂದ ಇರಬಹುದು. ಹೊಟ್ಟೆಪಾಡಿಗೆ ಬೇರೆಯವರ ಬಳಿ ಅಂಗಲಾಚಬೇಕಿಲ್ಲ ಎಂಬ ಆಲೋಚನೆ ಅವರದಾಗಿತ್ತು. ಆದರೆ ಈ ಚೀಲಗಳಿಂದಲೇ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. ಮಕ್ಕಳು, ಮಹಿಳೆಯರ ಮೇಲೆ ಈ ಚೀಲ ಬಿದ್ದಿದ್ದರಿಂದ ಹಲವರು ಉಸಿರುಕಟ್ಟಿ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ಸೇರಿ ಹಲವರು ಭೇಟಿ ನೀಡಿದ್ದರು.

1 ಲಕ್ಷ ಪರಿಹಾರ

ದುರಂತದಲ್ಲಿ ಮಡಿದವರ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡಲಾಗುವುದು. ಅಲ್ಲದೇ ಗಾಯಗೊಂಡು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿರುವ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರದ ವತಿಯಿಂದ ಭರಿಸಲಾಗುವುದು ಎಂದು ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ. ಆದರೆ, ಇದೇ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಅಬಕಾರಿ ಸಚಿವ ಸತೀಶ ಜಾರಕಿಹೊಳಿ, ದುರಂತದಲ್ಲಿ ಮಡಿದ ಕೂಲಿ ಕಾರ್ಮಿಕರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಲಾಗುವುದು. ಸದ್ಯ ಎಷ್ಟು ಪರಿಹಾರ ನೀಡಲಾಗುವುದು ಎಂದು ಘೋಷಿಸುವುದಿಲ್ಲ. ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿದ ಬಳಿಕವಷ್ಟೇ ನಿಖರ ಪರಿಹಾರದ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇಬ್ಬರ ಬಂಧನ

ಹಲಕಿ ಕ್ರಾಸ್ ಬಳಿ ಸಂಭವಿಸಿದ ಭೀಕರ ವಾಹನ ಅಪಘಾತಕ್ಕೆ ಸಂಬಂಧಿಸಿದಂತೆ ಲಾರಿ ಮಾಲೀಕ ಹಾಗೂ ಚಾಲಕ ಗೋಪಿಲಾಲ್ ನಾರಾಯಣ ರಾಠೋಡ್ ಮತ್ತು ಹನುಮಂತ ರಾಠೋಡ್ ಎಂಬವರನ್ನು ಬಂಧಿಸಲಾಗಿದೆ. ಸರಕು ಸಾಗಣೆ ವಾಹನದಲ್ಲಿ ಅಕ್ರಮವಾಗಿ 54 ಜನರನ್ನು ಸಾಗಿಸುವುದು ಮೋಟಾರು ವಾಹನ ಕಾಯ್ದೆ ಉಲ್ಲಂಘನೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜತೆಗೆ ಮಾನವ ಸಾಗಣೆ ಮಾಡುವುದು ಅಪರಾಧವಾಗಿದ್ದು, ಈ ಕುರಿತು ಕೂಡ ಲಾರಿ ಮಾಲೀಕನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗುವುದು. ಲಾರಿಯಲ್ಲಿ ಸಂಚರಿಸುವ ಒಬ್ಬ ಚಾಲಕ ಮತ್ತು ಇಬ್ಬರು ಹಮಾಲರು ಸೇರಿದಂತೆ ಮೂವರಿಗೆ ಮಾತ್ರ ಕುಳಿತುಕೊಳ್ಳಲು ಅನುಮತಿ ಇರುತ್ತದೆ. ಮೂವರಿಗೆ ಮಾತ್ರ ವಿಮೆ ಪರಿಹಾರ ದೊರೆಯುತ್ತದೆ. ಉಳಿದವರಿಗೆ ವಿಮೆ ಪರಿಹಾರ ದೊರೆಯುವುದಿಲ್ಲ. ಅದಕ್ಕಾಗಿ ಸರ್ಕಾರದಿಂದಲೇ ಪರಿಹಾರ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಕೋರಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಭಾಸ್ಕರರಾವ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement