ಕನಕ ಸದ್ಭಾವನಾ ಜ್ಯೋತಿಗೆ ಉಡುಪಿಯಲ್ಲಿ ಸ್ವಾಗತ
ಕ.ಪ್ರ. ವಾರ್ತೆ, ಉಡುಪಿ, ನ. 20-
ಉಡುಪಿ ಶ್ರೀಕೃಷ್ಣನನ್ನು ಒಲಿಸಿಕೊಂಡ ಕನಕದಾಸರಿಗೆ ಉಡುಪಿಯಲ್ಲೇ ಸೂಕ್ತ ಸ್ಥಾನಮಾನ ದೊರೆಯುತ್ತಿಲ್ಲ ಎಂಬ ವಿವಾದದ ನಡುವೆ, ನ.15ರಂದು ಕಾಗಿನೆಲೆಯಿಂದ ಹೊರಟ 'ಕನಕ ಸದ್ಭಾವನಾ ಜ್ಯೋತಿ' ಬುಧವಾರ ಕನಕದಾಸ ಜಯಂತಿ ಸಂದರ್ಭ ಉಡುಪಿಗೆ ಆಗಮಿಸಿತು.
ಕಾಗಿನೆಲೆ ಕನಕ ಗುರುಪೀಠದ ಮೈಸೂರು ಶಾಖಾ ಮಠದ ಶ್ರೀಶಿವಪುರಿ ಶಿವಾನಂದ ಮಹಾಸ್ವಾಮೀಜಿ ನೇತೃತ್ವದಲ್ಲಿ ಆಗಮಿಸಿದ ಈ ಜ್ಯೋತಿಯನ್ನು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು ಕೃಷ್ಣಮಠಕ್ಕೆ ಬರಮಾಡಿಕೊಂಡರು. ಇದಕ್ಕೂ ಮೊದಲು ನಗರದ ಹೊರಭಾಗದಲ್ಲಿರುವ ಜೋಡುಕಟ್ಟೆಯಿಂದ ಕನಕ ಸದ್ಭಾವನಾ ಜ್ಯೋತಿಯನ್ನು ಶ್ರೀಶಿವಪುರಿ ಮಹಾಸ್ವಾಮಿ ನೇತೃತ್ವದಲ್ಲಿ ಮೆರವಣಿಗೆ ಮೂಲಕ ಕೃಷ್ಣಮಠಕ್ಕೆ ತರಲಾಯಿತು. ಸುಮಾರು 200ಕ್ಕೂ ಹೆಚ್ಚು ಕುರುಬ ಸಮಾಜದ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು.
ಮೊದಲು ರಥಬೀದಿಯಲ್ಲಿರುವ ಕನಕನ ಗುಡಿಯಲ್ಲಿ ಉಭಯ ಶ್ರೀಗಳು ಆರತಿ ಎತ್ತಿ ಪೂಜೆ ಸಲ್ಲಿಸಿದರು. ನಂತರ ಪೇಜಾವರ ಶ್ರೀಗಳು ಶ್ರೀಶಿವಪುರಿ ಮಹಾಸ್ವಾಮಿ ಮತ್ತು ಇತರರಿಗೆ ಕನಕ ಗೋಪುರದ ಕೆಳಗಿನ ಮತ್ತು ಕೃಷ್ಣಮಠದೊಳಗಿನ ಕನಕನ ಕಿಂಡಿ ಮೂಲಕ ಶ್ರೀಕೃಷ್ಣನ ದರ್ಶನ ಮಾಡಿಸಿದರು.
ಕನಕದಾಸರಿಗೆ ಅಪಚಾರ ಇಲ್ಲ: ಶಿವಪುರಿ ಸ್ವಾಮೀಜಿ
ಕೃಷ್ಣಮಠದಲ್ಲಿ ಕನಕದಾಸರಿಗೆ ಯಾವುದೇ ಅಪಚಾರಗಳು ನಡೆಯುತ್ತಿಲ್ಲ ಎಂದು ಶ್ರೀಶಿವಪುರಿ ಶಿವಾನಂದ ಮಹಾಸ್ವಾಮೀಜಿ ಹೇಳಿದ್ದಾರೆ. ಯಾರೋ ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ವಿವಾದವಾಗುವಂತೆ ಮಾಡಿದ್ದಾರೆ. ಆದರೆ ಉಡುಪಿಯಲ್ಲಿ ಕೃಷ್ಣ ಮತ್ತು ಕನಕದಾಸ ನಡುವೆ ಯಾವುದೇ ಭೇದ ಇಲ್ಲದೆ ಪೂಜೆ ನಡೆಯುತ್ತಿದೆ. ಕೃಷ್ಣಮಠದೊಳಗೆ ಕನಕದಾಸರ ಹೆಸರಿನಲ್ಲಿ ಸಭಾಭವನ ನಿರ್ಮಿಸಲಾಗಿದೆ, ಅದರಲ್ಲಿ ಕನಕದಾಸರ ವಿಗ್ರಹ ಪ್ರತಿಷ್ಠಾಪಿಸಲಾಗಿದೆ, ಪ್ರಸಾದ ವಿತರಣೆಯಾಗುತ್ತಿದೆ ಎಂಬುದು ತಮಗೆ ಮನವರಿಕೆಯಾಗಿದೆ ಎಂದರು. ಪೇಜಾವರ ಶ್ರೀಗಳು ಮಾತನಾಡಿ, ಕೆಲವರು ಹೊಟ್ಟೆಕಿಚ್ಚಿನಿಂದ ಉಡುಪಿಯಲ್ಲಿ ಕನಕದಾಸರಿಗೆ ಅಪಚಾರವಾಗುತ್ತಿದೆ ಎಂದು ವಿವಾದ ಹುಟ್ಟು ಹಾಕಿದ್ದಾರೆ. ಆದರೆ ಅದಕ್ಕೆ ಕುರುಬ ಸಮುದಾಯದವರು ಬೆಲೆ ನೀಡಬಾರದು ಎಂದರು.