ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಶಿವ.. 'ಶಿವ... ಮಗ್ಗು'ಲಿಗೆ ಸರಿಯುತ್ತಿವೆ ಸರ್ಕಾರಿ ಶಾಲೆಗಳು

Srinivasa Murthy VN
Updated On : 21 Nov 2013, 12:23 pm

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು, ಪ್ರೊ.ಯು.ಆರ್. ಅನಂತಮೂರ್ತಿ- ಹೀಗೆ ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ನೆಲೆವೀಡಾದ ಮಲೆನಾಡಿನಲ್ಲೀಗ ಎಲ್ಲಿ ನೋಡಿದರಲ್ಲಿ ಇಂಗ್ಲಿಷ್ ಹಾವಳಿ. ಖಾಸಗಿ ಶಾಲೆಗಳ ಪೈಪೋಟಿ ಎದುರಿಸಲಾಗದೆ ಕನ್ನಡ ಶಾಲೆಗಳು ಸೊರಗುತ್ತಿವೆ. ನಗರದಲ್ಲಿ ಮಾತ್ರವಲ್ಲ, ಹಳ್ಳಿಗಳಲ್ಲಿಯೂ ಈ ಪರಿಸ್ಥಿತಿ ಉದ್ಭವಿಸಿದೆ. ಹಾಲಿ 951 ಕಿರಿಯ ಪ್ರಾಥಮಿಕ, 955 ಹಿರಿಯ ಪ್ರಾಥಮಿಕ ಶಾಲೆಗಳಿವೆ. ಇದುವರೆಗೆ 27 ಶಾಲೆಗಳು ಮುಚ್ಚಿವೆ. ಈ ವರ್ಷ ವಿದ್ಯಾರ್ಥಿಗಳು ದಾಖಲಾಗದ ಐದು ಶಾಲೆ ಮುಚ್ಚಲಾಗಿತ್ತು. ಇವುಗಳಲ್ಲಿ ಎರಡು ಶಾಲೆಗಳನ್ನು ಕಸರತ್ತು ನಡೆಸಿ ಪುನರಾರಂಭಿಸಲಾಗಿದೆ.
ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 2,454 ಶಿಕ್ಷಕರ ಹುದ್ದೆಗಳಿವೆ. ಆದರೆ, 2,143 ಶಿಕ್ಷಕರು ಮಾತ್ರ ಇದ್ದಾರೆ. ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 7356 ಹುದ್ದೆಗಳಿಗೆ, 6745 ಶಿಕ್ಷಕರಿದ್ದಾರೆ. ಕೆಲವು ತಾಲೂಕುಗಳಲ್ಲಿ 20-18 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರೂ ಇದ್ದಾರೆ. ಆದರೆ, ಪರವಾಗಿಲ್ಲ ಎಂಬ ಸ್ಥಿತಿಯೇನೂ ಇಲ್ಲ. ಬಹುತೇಕ ಶಿಕ್ಷಕರು ನಗರ ಪ್ರದೇಶದಲ್ಲಿಯೇ ಕೇಂದ್ರೀಕರಿಸಿದ್ದು, ಗ್ರಾಮಗಳಲ್ಲಿ ಶಿಕ್ಷಕರ ವ್ಯಾಪಕ ಕೊರತೆ ಇದೆ. ಮಲೆನಾಡಿನ ಒಳನಾಡಿನಲ್ಲಿರುವ ಶಾಲೆಗಳಿಗೆ ಹೋಗಲು ಶಿಕ್ಷಕರು ಹಿಂದೇಟು ಹಾಕುತ್ತಿದ್ದಾರೆ.

ಜನಪ್ರತಿನಿಧಿಗಳ ಪ್ರಯತ್ನವೇನು?
ಜಿಲ್ಲೆಯ ಜನಪ್ರತಿನಿಧಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಪ್ರವೇಶ ನೀಡಲು ಶಿಫಾರಸು ಮಾಡುವುದರಲ್ಲೆ ತೊಡಗಿಕೊಂಡಿದ್ದಾರೆ. ಈ ನಡುವೆ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರು ಆಯನೂರಿನಲ್ಲಿ ಮಾದರಿ ಸರ್ಕಾರಿ ಶಾಲೆ ನಿರ್ಮಿಸುವ ಪ್ರಯತ್ನ, ನಗರ ಪ್ರದೇಶದ ಶಾಲೆಗಳಿಗೆ ಸ್ವಂತ ಕಟ್ಟಡ, ನಿವೇಶನ ಕೊಡಿಸುವಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರ ಪ್ರಯತ್ನ ಗುರುತಿಸಬಹುದು.

ಶತಮಾನದ ದಾಟಿದ ಶಾಲೆ
ಜಿಲ್ಲೆಯಲ್ಲಿ 15ಕ್ಕೂ ಹೆಚ್ಚು ಶತಮಾನ ದಾಟಿದ ಶಾಲೆಗಳಿವೆ. ತೀರ್ಥಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1906ರಲ್ಲಿ ಆರಂಭವಾಗಿದೆ. ರಾಷ್ಟ್ರಕವಿ ಕುವೆಂಪು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಅನಂತಮೂರ್ತಿ, ಕಮಕೋಡು ನರಸಿಂಹಶಾಸ್ತ್ರಿ, ಮಾಜಿ ಶಾಸಕ ಕೋಣಂದೂರು ಲಿಂಗಪ್ಪ, ಲೇಖಕ ಹಾ.ಮಾ. ನಾಯಕ್ ಓದಿದ್ದು ಇದೇ ಶಾಲೆಯಲ್ಲಿ. ಕಡಿದಾಳು ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಜಿಲ್ಲೆಯ ಮೊದಲ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಅವರು ಪ್ರಾಥಮಿಕ ಶಿಕ್ಷಣ ಪೂರೈಸಿದ್ದು ಇಲ್ಲಿಯೇ. ಶಿವಮೊಗ್ಗದ ಮೇನ್ ಮಿಡ್ಲ್ ಸ್ಕೂಲ್‌ಗೆ 112 ವರ್ಷ. ಇಲ್ಲಿ ಖ್ಯಾತ ಹೋರಾಟಗಾರ್ತಿ ಪೊನ್ನಮ್ಮಾಳ್, ನ್ಯಾಯಮೂರ್ತಿ ರಾಮಾ ಜೋಯಿಸ್ ಸೇರಿದಂತೆ ಹಲವು ಗಣ್ಯರು ಓದಿದ್ದಾರೆ. ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿರಿಗೆರೆ ಶಿವಮೂರ್ತಿ ಶಿವಾಚಾರ್ಯ ಸ್ವಾಮಿ, ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಓದಿದ್ದಾರೆ.

ಸರ್ಕಾರಿ ಶಾಲೆಗಳು ಇಳಿಮುಖ
ಇದರ ನೇರ ಪರಿಣಾಮ ಸರ್ಕಾರಿ ಕನ್ನಡ ಶಾಲೆಗಳ ಮೇಲಾಗುತ್ತಿದೆ. ಕೆಳ ಮತ್ತು ಕೆಳ ಮಧ್ಯಮ ವರ್ಗದ ಮಕ್ಕಳು ಮಾತ್ರ ಕನ್ನಡ ಶಾಲೆಗಳಿಗೆ ಸೇರುತ್ತಿದ್ದಾರೆ. ಜನನ ಪ್ರಮಾಣ ಕಡಿಮೆಯಾಗಿರುವುದು ಹಾಗೂ ಹಳ್ಳಿ- ಹಳ್ಳಿಗೂ ಖಾಸಗಿ ಶಾಲೆಗಳ ಬಸ್‌ಗಳು ಬರುತ್ತಿರುವುದು ಕನ್ನಡ ಶಾಲೆಗೆ ಮಕ್ಕಳ ಸೇರ್ಪಡೆ ಪ್ರಮಾಣ ಕಡಿಮೆಯಾಗಲು ಪ್ರಮುಖ ಕಾರಣವೆಂದು ಶಿಕ್ಷಣ ತಜ್ಞರು ಹೇಳುತ್ತಾರೆ. ಗ್ರಾಮಾಂತರ ಪ್ರದೇಶದಲ್ಲಿ ಕನ್ನಡ ಶಾಲೆಗಳಲ್ಲಿ ಸ್ಥಿತಿ ಶೋಚನೀಯವಾಗಿದೆ. ತೀರ್ಥಹಳ್ಳಿ ತಾಲೂಕಿನ ಚೆಂಗಾರು ಗ್ರಾಮದ ಮಕ್ಕಳು ಶಾಲೆಗೆ ಹೋಗಲು ಮಾಲತಿ ನದಿ ದಾಟಬೇಕು. ಶಿವಮೊಗ್ಗ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಆದರೆ, ಇವತ್ತಿಗೂ ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಇಲ್ಲ. ಇವಿಷ್ಟೇ ಅ, ಶೌಚಾಲಯ ಇಲ್ಲದಿರುವುದು ಜಿಪಂ ಸಾಮಾನ್ಯ ಸಭೆಯಲ್ಲೂ ಚರ್ಚೆಯಾಗಿದೆ. ಇದರ ಜತೆಗೆ ಮಲೆನಾಡಿನ ಬಹುತೇಕ ಶಾಲೆಗಳು ಅರಣ್ಯದಲ್ಲಿದ್ದು, ಇವುಗಳನ್ನು ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ತಮ್ಮದಾಗಿಸಿಕೊಳ್ಳುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಯತ್ನ ಕುಂಟುತ್ತಾ ಸಾಗಿದೆ. ನಗರ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳು ಅನಾಥವಾಗಿವೆ. ರಿಪೇರಿ, ಶೌಚಾಲಯ, ಆಟದ ಮೈದಾನ ಇಲ್ಲದಿರುವುದು ಇತ್ಯಾದಿ ಸಮಸ್ಯೆಗಳಿದ್ದರೂ ಗಮನಿಸುವವರಿಲ್ಲದಂತಾಗಿದೆ. ಇನ್ನೊಂದೆಡೆ ಆಂಗ್ಲ ಶಾಲೆಗಳು ಮೆರೆಯುತ್ತಿವೆ. ಕನ್ನಡ ಮಾಧ್ಯಮವೆಂದು ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಪಾಠ ಮಾಡುತ್ತಿದ್ದರೂ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿದೆ.

ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಲು ಜಿಲ್ಲೆಯಲ್ಲಿ ವಿಶೇಷ ಪ್ರಯತ್ನ ನಡೆಸುತ್ತಿದ್ದೇವೆ. ಯಾವುದೇ ಮಗು ಕನಿಷ್ಠ 7 ದಿನ ಶಾಲೆಗೆ ಹೋಗದಿದ್ದರೆ ಅದನ್ನು ಗುರುತಿಸುವ ಜವಾಬ್ದಾರಿಯನ್ನು ಆಶಾ ಕಾರ್ಯಕರ್ತೆಯರಿಗೆ ನೀಡಲಾಗಿದೆ. ಚೈಲ್ಡ್ ಹೆಲ್ಪ್‌ಲೈನ್ ಸ್ಥಾಪಿಸಲಾಗಿದ್ದು, ಶಾಲೆಯ ಬಗೆಗಿನ ಯಾವುದೇ ದೂರು ಅಲ್ಲಿ ಸ್ವೀಕರಿಸಲಾಗುವುದು.
-ಸಸಿಕಾಂತ್ ಸೆಂಥಿಲ್, ಸಿಇಒ, ಜಿಪಂ, ಶಿವಮೊಗ್ಗ

- ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement