ಇಂದು ಸಚಿವ ಲಾಡ್ ರಾಜಿನಾಮೆ?
ಲಾಡ್ ಶುಕ್ರವಾರ ರಾಜಿನಾಮೆ ಸಲ್ಲಿಸಲಿದ್ದಾರೆ ಎಂಬ ಸುದ್ದಿ ಗುರವಾರ ಹಬ್ಬಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅವರು ಪದತ್ಯಾಗ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಬೆಂಗಳೂರು: ಅಕ್ರಮ ಗಣಿಗಾರಿಕೆಯ ಸುಳಿಯಲ್ಲಿ ಸಿಲುಕಿರುವ ವಾರ್ತಾ ಸಚಿವ ಸಂತೋಷ್‌ಲಾಡ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆಯೇ?
ಲಾಡ್ ಶುಕ್ರವಾರ ರಾಜಿನಾಮೆ ಸಲ್ಲಿಸಲಿದ್ದಾರೆ ಎಂಬ ಸುದ್ದಿ ಗುರವಾರ ಹಬ್ಬಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅವರು ಪದತ್ಯಾಗ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಬೆಳಗಾವಿಯಲ್ಲಿ ಸೋಮವಾರದಿಂದ ವಿಧಾನ ಮಂಡಲ ಅಧಿವೇಶ ಆರಂಭವಾಗಲಿದೆ. ಸಂತೋಷ್‌ಲಾಡ್ ವಿಚಾರವನ್ನೇ ಪ್ರತಿಪಕ್ಷಗಳು ಪ್ರಮುಖ ಅಸ್ತ್ರವಾಗಿ ಮಾಡಿಕೊಂಡು ಸರ್ಕಾರದ ಮೇಲೆ ದಾಳಿ ನಡೆಸಲಿವೆ. ಈ ಸಂದರ್ಭದಲ್ಲಿ ಆಗಬಹುದಾದ ಮುಜುಗರದಿಂದ ತಪ್ಪಿಸಿಕೊಳ್ಳಲು ಲಾಡ್ ರಾಜಿನಾಮೆ ಪಡೆಯಲು ಸಿಎಂ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಾಡ್ ನಿರಾಕರಣೆ : ಅದರೆ ರಾಜಿನಾಮೆ ಸಾಧ್ಯತೆಯನ್ನು ಸಚಿವ ಸಂತೋಷ್ ಲಾಡ್ ತಳ್ಳಿ ಹಾಕಿದ್ದಾರೆ. ರಾಜಿನಾಮೆ ನೀಡುವಂತೆ ಮುಖ್ಯಮಂತ್ರಿ ಅಥವಾ ಕೆಪಿಸಿಸಿ ಅಧ್ಯಕ್ಷರು ತಮಗೆ ಸೂಚಿಸಿಲ್ಲ ಎಂದು ಅವರು ಹೇಳಿದ್ದಾರೆ.
'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, ಇದು ಕೇವಲ ವದಂತಿ, ಒತ್ತಡ ಹೇರಲು ಈ ತಂತ್ರ ಅನುಸರಿಸಲಾಗುತ್ತಿದೆ. ನನ್ನಿಂದಾಗಿ ಮುಜುಗರದ ಸನ್ನಿವೇಶ ಉಂಟಾದರೆ ರಾಜಿನಾಮೆ ನೀಡುವುದಾಗಿ ನಾನು ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ಮೊದಲೇ ಹೇಳಿದ್ದೇನೆ ಎಂದು ಸಚಿವ ಸಂತೋಷ್‌ಲಾಡ್ ಹೇಳಿದ್ದಾರೆ.