ತೆಹೆಲ್ಕಾ ತೇಜ್ಪಾಲ ಮರ್ಯಾದೆ ಮಣ್ಣುಪಾಲ
ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಉರುಳು ತೆಹಲ್ಕಾ ಸಂಪಾದಕ ತರುಣ್ ತೇಜ್ಪಾಲ್ರನ್ನು ಬಿಗಿಯಾಗಿ ಸುತ್ತಿಕೊಳ್ಳಲು..
ಪಣಜಿ: ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಉರುಳು ತೆಹಲ್ಕಾ ನಿಯತಕಾಲಿಕೆಯ ಸಂಪಾದಕ ತರುಣ್ ತೇಜ್ಪಾಲ್ರನ್ನು ಇನ್ನಷ್ಟು ಬಿಗಿಯಾಗಿ ಸುತ್ತಿಕೊಳ್ಳಲು ಆರಂಭಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಗೋವಾ ಸರ್ಕಾರ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ತನಿಖೆ ಆರಂಭಿಸಲು ಮುಂದಾಗಿದೆ.
ಗೋವಾದ ಫೈವ್ಸ್ಟಾರ್ ಹೊಟೇಲ್ವೊಂದರಲ್ಲಿ ನಡೆದ ತೆಹೆಲ್ಕಾ 'ಥಿಂಕ್ ಫೆಸ್ಟಿವಲ್'ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಸಂಬಂಧ ಪೊಲೀಸರು ಸಂಬಂಧಪಟ್ಟ ಹೊಟೇಲ್ನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಕೇಳಿದ್ದಾರೆ. ಅಲ್ಲದೆ, ತರುಣ್ ತೇಜ್ಪಾಲ್ ಹಾಗೂ ತೆಹಲ್ಕಾ ಪತ್ರಿಕೆಗೆ ಸಮನ್ಸ್ ಜಾರಿ ಮಾಡಲು ಚಿಂತನೆ ನಡೆಸುತ್ತಿದ್ದಾರೆ.
ಈ ನಡುವೆ, ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ತರುಣ್ ತೇಜ್ಪಾಲ್ ತಮಗೆ ತಾವೇ ಶಿಕ್ಷೆ ವಿಧಿಸಿಕೊಂಡಿರುವ ಕ್ರಮಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದು ಶಿಕ್ಷೆಯಿಂದ ನುಣುಚಿಕೊಳ್ಳುವ ಪ್ರಯತ್ನ. ಇದು ಸರಿಯಲ್ಲ ಎಂದು ಹಲವು ಸಾಮಾಜಿಕ ಹೋರಾಟಗಾರರು, ಗಣ್ಯರು ಆಗ್ರಹಿಸಿದ್ದಾರೆ.
ಬೇಸರವಾಗಿದೆ: ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥೆ ನಡೆದುಕೊಂಡ ರೀತಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎನ್ಡಿಟಿವಿಗೆ ಪ್ರತಿಕ್ರಿಯೆ ನೀಡಿರುವ ಅವರು, ಪತ್ರಿಕೆ ಪ್ರತಿಕ್ರಿಯಿಸಿದ ರೀತಿಯಿಂದ ಬೇಸರವಾಗಿದೆ ಎಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತೆಗೆದುಕೊಂಡ ಕ್ರಮಕ್ಕೆ ಸಂಬಂಧಿಸಿ ಪತ್ರಿಕೆಯ ಇತರೆ ಪತ್ರಕರ್ತರಿಗೆ ತೃಪ್ತಿಯಾಗಿದೆ ಎನ್ನುವ ಹಂಗಾಮಿ ಸಂಪಾದಕಿ ಶೋಮಾ ಚೌಧುರಿ ವಾದ ಕೂಡ ಸರಿಯಲ್ಲ. ಬುಧವಾರ ರಾತ್ರಿ ತೇಜ್ಪಾಲ್ ಅವರ ಇ- ಮೇಲ್ ಅನ್ನಷ್ಟೇ ಎಲ್ಲ ಸಿಬ್ಬಂದಿಗೆ ರವಾನಿಸಲಾಗಿದೆ. ಆದರೆ, ನನ್ನ ಇ-ಮೇಲ್ ಕುರಿತು ಯಾವುದೇ ವಿವರಣೆ ಇಲ್ಲ ಎಂದು ದೂರಿದ್ದಾರೆ.
ಗೋವಾದಿಂದ ತನಿಖೆ
ತರುಣ್ ತೇಜ್ಪಾಲ್ ವಿರುದ್ಧ ಸ್ವಯಂಪ್ರೇರಿತವಾಗಿ ತನಿಖೆ ನಡೆಸುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ. ಘಟನೆಯನ್ನು ಪತ್ರಕರ್ತೆಯಿಂದಲೇ ಕೇಳ ಬಯಸುತ್ತೇವೆ. ಆಕೆ ದೂರು ನೀಡಬೇಕು ಎಂದು ಆಯೋಗದ ಸದಸ್ಯೆ ನಿರ್ಮಲಾ ಸಮಂತ್ ಹೇಳಿದ್ದಾರೆ. ಇದೇ ವೇಳೆ ಗೋವಾ ಸಿಎಂ ಮನೋಹರ್ ಪಾರಿಕ್ಕರ್ ಅಧಿಕಾರಿಗಳ ಜತೆ ಸಭೆ ನಡೆಸಿದರು. ಗೋವಾ ಪೊಲೀಸರು ಸ್ವಯಂ ಪ್ರೇರಿತ ತನಿಖೆಗೆ ಮುಂದಾಗಿದ್ದು, ತೇಜ್ಪಾಲ್, ಶೋಮಾ ಚೌಧರಿ ನಡುವಿನ ಇ-ಮೇಲ್ ಪರಿಶೀಲನೆಗೆ ಮುಂದಾಗಿದ್ದಾರೆ.
ಸಮಿತಿಯಿಂದ ವಜಾ
ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಪತ್ರಕರ್ತ ತರುಣ್ ತೇಜ್ಪಾಲ್ ಅವರನ್ನು ಪ್ರಸಾರ ಭಾರತಿಯ ಆಯ್ಕೆ ಸಮಿತಿ ಸದಸ್ಯ ಸ್ಥಾನದಿಂದ ವಜಾಗೊಳಿಸಲಾಗಿದೆ. ಮಂಗಳವಾರವಷ್ಟೇ ತರುಣ್ ತೇಜ್ಪಾಲ್ ಅವರ ಹೆಸರನ್ನು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಶಿಫಾರಸು ಮಾಡಿದ್ದರು. ಆದರೆ, ಈಗ ಅನ್ಸಾರಿ ತರುಣ್ ಶಿಫಾರಸನ್ನು ಹಿಂಪಡೆದಿದ್ದಾರೆ.