'ಮರ್ಯಾದಾ ಹತ್ಯೆ': ಇನ್ನೂ ಆಬಲವಾಡಿಗೆ ಮರಳದ ಪ್ರಿಯಕರನ ಕುಟುಂಬ
ಮದ್ದೂರು ತಾಲೂಕು ಆಬಲವಾಡಿ ಗ್ರಾಮದ ಸುವರ್ಣಾಳ 'ಮರ್ಯಾದಾ ಹತ್ಯೆ' ಘಟನೆ ನಡೆದು ಎರಡು ವರ್ಷಗಳಾದರೂ ಜೀವ ಭಯದಿಂದ..
ಮಂಡ್ಯ: ಮದ್ದೂರು ತಾಲೂಕು ಆಬಲವಾಡಿ ಗ್ರಾಮದ ಸುವರ್ಣಾಳ 'ಮರ್ಯಾದಾ ಹತ್ಯೆ' ಘಟನೆ ನಡೆದು ಎರಡು ವರ್ಷಗಳಾದರೂ ಜೀವ ಭಯದಿಂದ ಯುವತಿಯ ಪ್ರಿಯಕರ ಗೋವಿಂದರಾಜು ಕುಟುಂಬ ಇನ್ನೂ ಗ್ರಾಮಕ್ಕೆ ಹಿಂದಿರುಗಿಲ್ಲ.
ಸುವರ್ಣಾಳ ಹತ್ಯೆಯಾದ ದಿನವೇ ಇಡೀ ಕುಟುಂಬ ಸದಸ್ಯರು ಗ್ರಾಮ ತೊರೆದಿದ್ದಾರೆ. ಹಳ್ಳಿಯಲ್ಲಿರುವ ಅವರ ಮನೆ ಅನಾಥವಾಗಿದೆ. ಆದರೆ, ಜಿಲ್ಲಾಡಳಿತ ಪರಿಹಾರ ಮೊತ್ತವನ್ನು ನೊಂದವರ ಕೈಗೆ ತಲುಪಿಸಿ ಕೈತೊಳೆದುಕೊಂಡಿದೆ. ಆಬಲವಾಡಿ ಗ್ರಾಮಸ್ಥರು ಗೋವಿಂದರಾಜು ಕುಟುಂಬ ಗ್ರಾಮದಲ್ಲಿ ಬಂದು ನೆಲೆಸಿದರೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಇಷ್ಟಾದರೂ ಆ ಕುಟುಂಬ ಗ್ರಾಮಕ್ಕೆ ಮರಳುವ ಧೈರ್ಯ ತೋರುತ್ತಿಲ್ಲ. ಗೋವಿಂದರಾಜು ಸಹೋದರ ತಿಮ್ಮಪ್ಪ, ಆಬಲವಾಡಿ ಗ್ರಾಪಂನಲ್ಲಿ 2ನೇ ಬ್ಲಾಕ್ನಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಗೆಲವು ಸಾಧಿಸಿದ್ದರು. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಕಾಯ್ದೆ 13 (1) (ಸಿ) ಪ್ರಕಾರ ಗ್ರಾಪಂನ ಮೂರು ಸಾಮಾನ್ಯ ಸಭೆಗಳಿಗೆ ಗೈರು ಹಾಜರಾದ ಕಾರಣ ತಿಮ್ಮಪ್ಪ ಅವರ ಸದಸ್ಯತ್ವವೂ ರದ್ದುಗೊಂಡಿದೆ.
ಸುವರ್ಣಾಳ ಹತ್ಯೆ ಬೆಳಕಿಗೆ ಬಂದ ಒಂದೂವರೆ ತಿಂಗಳ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದರು. ನಂತರ 2012, ಫೆ.27ರಂದು ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯಕ್ಕೆ ಸುಮಾರು 51 ಪುಟಗಳ ದೋಷಾರೋಪಣ ಪಟ್ಟಿ (ಸ್ಪೆಷಲ್ ಕೇಸ್ ನಂ.19, 12) ಸಲ್ಲಿಸಿದೆ. ಈಗ ಪ್ರಕರಣದ 8ನೇ ಆರೋಪಿ ದವಲನ ರಾಮಣ್ಣ ಮತ್ತು 10ನೇ ಆರೋಪಿ ಬಡೇರ ಕೃಷ್ಣ ತಮ್ಮನ್ನು ಆರೋಪ ಮುಕ್ತಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಕಕ್ಷಿದಾರರ ಪರ ಸರ್ಕಾರಿ ಅಭಿಯೋಜಕ ಮುಚ್ಚಂಡಿ ಆಕ್ಷೇಪಣೆ ಸಲ್ಲಿಸಿದ್ದಾರೆ. 1ನೇ ಅಪರ ಜಿಲ್ಲಾ ನ್ಯಾಯಾಲಯದಲ್ಲಿ ಡಿ.11ರಂದು ಈ ಅರ್ಜಿ ವಿಚಾರಣೆಗೆ ಬರಲಿದೆ. ನ್ಯಾಯಾಧೀಶರು ಆರೋಪ ಮುಕ್ತಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಮೇಲಿನ ವಾದ- ಪ್ರತಿವಾದ ಆಲಿಸಿ ಇತ್ಯರ್ಥಪಡಿಸಿದ ಬಳಿಕವಷ್ಟೇ ಪ್ರಕರಣದಲ್ಲಿನ 27 ಸಾಕ್ಷಿಗಳ ವಿಚಾರಣೆ ಆರಂಭವಾಗಲಿದೆ.
ಮರ್ಯಾದಾ ಹತ್ಯೆ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕಾಗಿದ್ದ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದ ನ್ಯಾಯಾಧೀಶ ಬೆಳ್ಳುಂಕೆ ಅವರು ಇದೀಗ ಪ್ರಕರಣ ವಿಚಾರಣೆಗೂ ಮುನ್ನವೇ ವರ್ಗಾವಣೆ ಹೊಂದಿದ್ದಾರೆ. ಮುಂದೆ ಆಗಮಿಸುವ ನ್ಯಾಯಾಧೀಶರು ಇಡೀ ಪ್ರಕರಣವನ್ನು ಮತ್ತೊಮ್ಮೆ ಅಧ್ಯಯನ ಮಾಡಲು ಸಾಕಷ್ಟು ಸಮಯಾವಕಾಶ ಬೇಕು. ಹೀಗಾಗಿ ಪ್ರಕರಣದ ವಿಚಾರಣೆ ಪ್ರಕ್ರಿಯೆ ಇನ್ನಷ್ಟು ತಡವಾಗುವ ಸಾಧ್ಯತೆಗಳಿದೆ ಎನ್ನುತ್ತಾರೆ ವಕೀಲರು.
ಅಂದು ಏನಾಗಿತ್ತು?
ಆಬಲವಾಡಿ ಗ್ರಾಮದ ಸುವರ್ಣ ಮತ್ತು ಗೋವಿಂದರಾಜು ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. 2011, ನ.6ರಂದು ಅರಿಶಿನಗೇಟ್ ಬಳಿಯಿದ್ದ ಇಬ್ಬರನ್ನೂ ಆರೋಪಿ ರವಿ ಹಾಗೂ ಇತರರು ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಗೋವಿಂದರಾಜು ಮೇಲೆ ದವಲನ ರಾಮಕೃಷ್ಣ ಸೇರಿದಂತೆ ಕೆಲವರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ನಂತರ ಸುವರ್ಣಾಳ ಮೇಲೂ ಹಲ್ಲೆ ಮಾಡಿದ್ದರು. ಇದರಿಂದ ಅಸ್ವಸ್ಥಗೊಂಡಿದ್ದ ಸುವರ್ಣಾಳನ್ನು, ಗೋವಿಂದರಾಜು ವಾಸವಿದ್ದ ಮನೆಗೆ ಎತ್ತಿಕೊಂಡು ಬಂದ ಆರೋಪಿಗಳು ನೇಣು ಬಿಗಿದಿದ್ದಾರೆ ಎಂದು ಕಕ್ಷಿದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಡಿಎನ್ಎ ಪರೀಕ್ಷೆ ಸಾಧ್ಯವಾಗಲಿಲ್ಲ
ಪೊಲೀಸರು ತನಿಖೆ ಕಾಲದಲ್ಲಿ ಸುವರ್ಣಾಳನ್ನು ನೇಣು ಬಿಗಿಯಲಾಯಿತು ಎನ್ನಲಾದ ಗೋವಿಂದರಾಜು ಮನೆಯಲ್ಲಿ ಪತ್ತೆಯಾದ ಕುರುಹುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆಕೆಯ ಶವವನ್ನು ಸುಟ್ಟಿದ್ದ ಸ್ಥಳದಲ್ಲಿ ದೊರೆತ ಮೂಳೆ ಚೂರುಗಳನ್ನು 2012ರ ಜನವರಿ 25ರಂದು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕೊಡಲಾಗಿತ್ತು. ಆದರೆ, ತಜ್ಞರು ಮೂಳೆ ಚೂರನ್ನು ಪರೀಕ್ಷೆಗೊಳಪಡಿಸಲು ಬರುವುದಿಲ್ಲ ಎಂದಿದ್ದರು. ನಂತರ ಜನವರಿ 27ರಂದು ಪೊಲೀಸರು ಡಿಎನ್ಎ ಕೇಂದ್ರಕ್ಕೆ ತೆರಳಿದಾಗ ರಕ್ತದ ಸ್ಯಾಂಪಲ್ ಮತ್ತು ಪೂರಕ ದಾಖಲಾತಿಗಳನ್ನು ಒದಗಿಸಲು ಸಾಧ್ಯವಾಗಲಿಲ್ಲ. ಜ.30ರಂದು ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ಆಸ್ಪತ್ರೆಯ ವಿಧಿವಿಜ್ಞಾನ ತಜ್ಞರು ಮೂಳೆಗಳನ್ನು ಪರೀಕ್ಷೆಗೆ ಒಳಪಡಿಸಲು ಆಗುವುದಿಲ್ಲ ಎಂದು ಮೌಖಿಕವಾಗಿ ತಿಳಿಸಿರುವ ಅಂಶವನ್ನು ಚಾರ್ಚ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಜಾಮೀನು ಪಡೆದ ಆರೋಪಿಗಳು
ಮರ್ಯಾದಾ ಹತ್ಯೆ ಪ್ರಕರಣದ ಆರೋಪಿಗಳಾದ ಸುವರ್ಣಾ ತಂದೆ ದವಲನ ರಾಮಕೃಷ್ಣ, ಆರ್. ತಿಮ್ಮೇಶ, ಮಲ್ಲೇಶ, ಎಚ್.ಟಿ. ಮುರುಗೇಶ, ಯಾಮೇಗೌಡ, ರವಿ, ರಾಜು, ದವಲನ ರಾಮಣ್ಣ, ಸಿ. ತಿಮ್ಮೇಶ, ಬಡೇರ ಕೃಷ್ಣ, ಎ.ಜೆ. ಪ್ರವೀಣ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ. ಈ ಪೈಕಿ ಪ್ರಮುಖ ಆರೋಪಿ ದವಲನ ರಾಮಕೃಷ್ಣ, ಮತ್ತೆ 2012ರ ಏಪ್ರಿಲ್ 30ರಂದು ಗೋವಿಂದರಾಜುನ ಮತ್ತೊಬ್ಬ ಸಹೋದರ ತಿಮ್ಮೇಶನ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಮೇ 1ರಂದು ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದಲ್ಲಿ ತಿಮ್ಮೇಶನ ಮೇಲಿನ ಹಲ್ಲೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಮುಕ್ತಗೊಳಿಸಿದ್ದಾರೆ.
- ಎಂ. ಅಫ್ರೋಜ್ ಖಾನ್