ವಿಐಎಸ್‌ಎಲ್ ಖಾಸಗೀಕರಣಕ್ಕೆ ತಡೆ
ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ(ವಿಐಎಸ್‌ಎಲ್) ಪುನಶ್ಚೇತನಗೊಳಿಸಲು ಕೇಂದ್ರದ ಉಕ್ಕು ಸಚಿವ ಬೇಣಿ ಪ್ರಸಾದ್ ವರ್ಮಾ..
ನವದೆಹಲಿ: ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ(ವಿಐಎಸ್‌ಎಲ್) ಪುನಶ್ಚೇತನಗೊಳಿಸಲು ಕೇಂದ್ರದ ಉಕ್ಕು ಸಚಿವ ಬೇಣಿ ಪ್ರಸಾದ್ ವರ್ಮಾ ತಾತ್ವಿಕವಾಗಿ ಒಪ್ಪಿದ್ದಾರೆ.
ಪುನಶ್ಚೇತನ ಸ್ವರೂಪ ಕುರಿತು ಭಾರತೀಯ ಉಕ್ಕು ಪ್ರಾಧಿಕಾರದ(ಎಸ್‌ಎಐಎಲ್) ಪ್ರತಿನಿಧಿಗಳು ಹಾಗೂ ಮುಖ್ಯಮಂತ್ರಿಗಳೊಂದಿಗೆ ಶೀಘ್ರ ಬೆಂಗಳೂರಿನಲ್ಲಿ ಸಭೆ ನಡೆಸಿ ಚರ್ಚಿಸಿದ ನಂತರ ಅಂತಿಮ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಪುನಶ್ಚೇತನ ಪ್ರಸ್ತಾವದ ಹಿನ್ನೆಲೆಯಲ್ಲಿ ಸದ್ಯಕ್ಕೆ ವಿಐಎಸ್‌ಎಲ್ ಖಾಸಗೀಕರಣ ಪ್ರಕ್ರಿಯೆಗೆ ತೆರೆ ಬಿದ್ದಿದೆ.
ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ನೇತೃತ್ವದ ನಿಯೋಗ ಗುರುವಾರ ಉಕ್ಕು ಸಚಿವ ಬೇಣಿ ಪ್ರಸಾದ್ ವರ್ಮಾ ಅವರನ್ನು ಭೇಟಿ ಮಾಡಿ ಚರ್ಚಿಸಿದ ಫಲಶೃತಿ ಇದು. ನಿಯೋಗದಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಲೋಕಸಭಾ ಸದಸ್ಯರಾದ ಜಯಪ್ರಕಾಶ್ ಹೆಗ್ಡೆ, ಬಿ.ವೈ. ರಾಘವೇಂದ್ರ, ಶಾಸಕ ಅಪ್ಪಾಜಿ ಗೌಡ, ಮಾಜಿ ಶಾಸಕ ಸಂಗಮೇಶ್ ಹಾಗೂ ವಿಐಎಸ್‌ಎಲ್ ಕಾರ್ಮಿಕ ಮುಖಂಡರು ಇದ್ದರು.
ಮನವರಿಕೆ ಮಾಡಿದ ನಿಯೋಗ: ನಿಯೋಗವು ವಿಐಎಸ್‌ಎಲ್ ಕಾರ್ಖಾನೆ ಮುಂದಿರುವ ಸಮಸ್ಯೆಗಳು, ಅವುಗಳ ನಿವಾರಣೆಗೆ ಪರಿಹಾರೋಪಾಯಗಳನ್ನು ಸಚಿವರಿಗೆ ಮನದಟ್ಟು ಮಾಡಿಕೊಟ್ಟಿತು. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ವಿಐಎಸ್‌ಎಲ್ ಖಾಸಗೀಕರಿಸುವ ಪ್ರಸ್ತಾಪಕ್ಕೆ ಸಚಿವ ಬೇನಿ ಪ್ರಸಾದ್ ವರ್ಮಾ ತಾತ್ಕಾಲಿಕ ತಡೆ ನೀಡಿದರು. ಸಚಿವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೋಡು ತಿಮ್ಮಪ್ಪ ಅವರು, 'ವಿಐಎಸ್‌ಎಲ್ ಪುನಶ್ಚೇತನಕ್ಕೆ ಸಚಿವರು ತಾತ್ವಿಕವಾಗಿ ಒಪ್ಪಿದ್ದಾರೆ. ನಮ್ಮ ಸಮಸ್ಯೆಗಳನ್ನು ಅವರಿಗೆ ವಿವರಿಸಿದ್ದೇವೆ. ಸದ್ಯಕ್ಕೆ ಕಾರ್ಖಾನೆ ಹರಾಜು ಪ್ರಕ್ರಿಯೆಗೆ ಸ್ಧಗಿತಗೊಳಿಸಿದ್ದಾರೆ' ಎಂದರು. ವಿಐಎಸ್‌ಎಲ್ ಖಾಸಗಿಕರಿಸುವ ಪ್ರಸ್ತಾಪಕ್ಕೆ ಸದ್ಯಕ್ಕೆ ತಡೆ ಬಿದ್ದಿರುವುದರಿಂದ ಕಾರ್ಮಿಕರು ಪ್ರತಿಭಟನೆ ಕೈಬಿಡಬೇಕು ಎಂದು ಕಾರ್ಮಿಕ ಮುಖಂಡರೂ ಆದ ರಾಜ್ಯ ಸಭಾ ಸದಸ್ಯ ಆಯನೂರು ಮಂಜುನಾಥ ಮನವಿ ಮಾಡಿದರು.
ನಷ್ಟದಲ್ಲಿಲ್ಲ: ವಿಐಎಸ್‌ಎಲ್ ಕೇವಲ 150 ಕೋಟಿ ನಷ್ಟ ಅನುಭವಿಸಿದೆ. ಇತರೆ ಉಕ್ಕು ಘಟಕಗಳಿಗೆ ಹೋಲಿಸಿದರೆ ಈ ನಷ್ಟ ಬಹುದೊಡ್ಡದೇನಲ್ಲ. ಅಲ್ಲದೇ ಕಾರ್ಖಾನೆಗೆ ಸರ್ಕಾರ ಹೂಡಿರುವ ಬಂಡವಾಳ 100 ಕೋಟಿ ಮಾತ್ರ. ಕಾರ್ಖಾನೆಯಲ್ಲಿ ಸಿದ್ಧವಾದ 60000 ಟನ್ ಉಕ್ಕು ಇದೆ. ಹೀಗಾಗಿ ವಿಐಎಸ್‌ಎಲ್ ಭಾರಿ ನಷ್ಟದಲ್ಲಿದೆ ಎಂದು ಪರಿಗಣಿಸುವ ಅಗತ್ಯವಿಲ್ಲ. ಈ ಅಂಶವನ್ನು ಉಕ್ಕು ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು. ಸಂಸದರಾದ ಆಯನೂರು ಮಂಜುನಾತ್ ಹಾಗೂ ಬಿ.ವೈ.ರಾಘವೇಂದ್ರ ಅವರು ಇದೇ ವೇಳೆ ಪ್ರತ್ಯೇಕವಾಗಿ ಸಚಿವರಿಗೆ ಮನವಿ ಸಲ್ಲಿಸಿದರು.
-ಕನ್ನಡಪ್ರಭ ಪ್ರತಿನಿಧಿಯಿಂದ