ಗಣಿ ಅಕ್ರಮ ಆರೋಪ: ಸಚಿವ ಸ್ಥಾನಕ್ಕೆ ಸಂತೋಷ್ ಲಾಡ್ ರಾಜಿನಾಮೆ
ಪ್ರತಿಪಕ್ಷಗಳ ತೀವ್ರ ಒತ್ತಡ ಹಾಗೂ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದ ವಾರ್ತಾ ಸಚಿವ ಸಂತೋಷ್ ಲಾಡ್...
- ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡಿದ ಕಾಂಗ್ರೆಸ್ಗೆ ಉರುಳಾಯ್ತು ಅದೇ ಅಸ್ತ್ರ
- ಅಕ್ರಮ ಅದಿರು ದಾಸ್ತಾನು ಪ್ರಕರಣಕ್ಕೆ ಬೆಲೆ ತೆತ್ತ ಸಚಿವ
- ರಾಜೀನಾಮೆ ಪಡೆಯುವಂತೆ ಹೈಕಮಾಂಡ್ ಆದೇಶ
- ಅಧಿವೇಶನದಲ್ಲಿ ಮುಜುಗರ ತಪ್ಪಿಸಿಕೊಳ್ಳಲು ಸರ್ಕಾರದ ನಡೆ
- ಲಾಡ್ ಅವರನ್ನು ಪದೇ ಪದೇ ಸಮರ್ಥಿಸಿಕೊಳ್ಳುತ್ತಿದ್ದ ಸಿಎಂ
- ಹಿರಿಯ ಸಚಿವರಿಂದಲೂ ಲಾಡ್ ರಾಜಿನಾಮೆಗೆ ಸಲಹೆ
- ಶುಕ್ರವಾರ ರಾತ್ರಿ 8 ಗಂಟೆಗೆ ಸಿಎಂ ಗೆ ರಾಜಿನಾಮೆ
- ನನ್ನದೇನೂ ತಪ್ಪಿಲ್ಲ ಎನ್ನುತ್ತಲೇ ರಾಜಿನಾಮೆ ನೀಡಿದ ಲಾಡ್
ಕನ್ನಡಪ್ರಭ ವಾರ್ತೆ, ಬೆಂಗಳೂರು, ನ.22-
ಪ್ರತಿಪಕ್ಷಗಳ ತೀವ್ರ ಒತ್ತಡ ಹಾಗೂ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದ ವಾರ್ತಾ ಸಚಿವ ಸಂತೋಷ್ ಲಾಡ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಶುಕ್ರವಾರ ರಾತ್ರಿ 8 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಅವರು ತಮ್ಮ ರಾಜಿನಾಮೆ ಸಲ್ಲಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ 9 ವರ್ಷಗಳ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಆರು ತಿಂಗಳು ಪೂರೈಸುವಷ್ಟರಲ್ಲೇ ಮೊದಲ ವಿಕೆಟ್ ಪತನಗೊಂಡಿದೆ.
ಸಂತೋಷ್ ಲಾಡ್ ರಾಜಿನಾಮೆ ಪಡೆದುಕೊಳ್ಳುವಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹಾಗೂ ಪ್ರತಿಪಕ್ಷಗಳಿಂದ ತೀವ್ರ ಒತ್ತಡ ವ್ಯಕ್ತವಾದ ಹಿನ್ನೆಲೆಯಲ್ಲಿ ಹಾಗೂ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಉಂಟಾಗಬಹುದಾದ ಮುಜುಗರ ತಪ್ಪಿಸಿಕೊಳ್ಳುವ ಉದ್ದೇಶದಿಂದ ಲಾಡ್ ರಾಜಿನಾಮೆ ಪಡೆಯಲಾಗಿದೆ.
ಅಕ್ರಮ ಗಣಿಗಾರಿಕೆಯಲ್ಲಿ ಸಂತೋಷ್ ಲಾಡ್ ಭಾಗಿಯಾಗಿಲ್ಲ. ಅವರಿಂದ ರಾಜಿನಾಮೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎರಡು ದಿನಗಳ ಹಿಂದಷ್ಟೇ ಲಾಡ್ ಅವರಿಗೆ ರಾಜಿನಾಮೆ ನೀಡುವಂತೆ ಸೂಚಿಸಿದ್ದರು. ಆದರೆ ಇದಕ್ಕೆ ಒಪ್ಪದ ಅವರು ಸ್ಥಾನ ಉಳಿಸಿಕೊಳ್ಳಲು ಹೈಕಮಾಂಡ್ ಮಟ್ಟದಲ್ಲಿ ತೀವ್ರ ಲಾಬಿ ನಡೆಸಿದ್ದರು. ಮಾತ್ರವಲ್ಲ ತಾವು ಯಾವುದೇ ತಪ್ಪು ಮಾಡದೇ ಇರುವುದರಿಂದ ರಾಜಿನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.
ಆದರೆ ಶುಕ್ರವಾರ ನಡೆದ ರಾಜಕೀಯ ಬೆಳವಣಿಗೆಗಳು ದಿನದ ಅಂತ್ಯಕ್ಕೆ ಸಂತೋಷ್ ಲಾಡ್ ರಾಜಿನಾಮೆಗೆ ಕಾರಣವಾಗಿವೆ. ಪಕ್ಷಕ್ಕೆ ಹಾಗೂ ಸರ್ಕಾರಕ್ಕಾಗುವ ಮುಜುಗರ ತಪ್ಪಿಸಲು ನಾನು ರಾಜಿನಾಮೆ ನೀಡಿದ್ದೇನೆ. ಆರೋಪಮುಕ್ತನಾಗಿ ಹೊರಬರುತ್ತೇನೆ ಎಂದು ಹೇಳಿದ್ದಾರೆ.
ಏನೇನಾಯ್ತು?: ರಾಜಿನಾಮೆ ವದಂತಿ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರು ಮಾಧ್ಯಮಗಳ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದರು. ಗೃಹಕಚೇರಿ ಕೃಷ್ಣಾದಲ್ಲೂ ಸುದ್ದಿಗಾರರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಮುಗುಮ್ಮಾಗಿಯೇ ಇದ್ದರು.
ಮಧ್ಯಾಹ್ನ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಸಂತೋಷ್ ಲಾಡ್ ಸಂಜೆ 4.05ರ ಸುಮಾರಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಜತೆ ಕುಮಾರ್ಪಾರ್ಕ್ ಬಳಿ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ 20 ನಿಮಿಷಗಳ ಕಾಲ ಚರ್ಚೆ ನಡೆಸಿದರು. ಸರ್ಕಾರ ಹಾಗೂ ಪಕ್ಷಕ್ಕೆ ಆಗುವ ಮುಜುಗರ ತಪ್ಪಿಸಲು ರಾಜಿನಾಮೆ ನೀಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಮನವರಿಕೆ ಮಾಡಿಕೊಟ್ಟರು ಎನ್ನಲಾಗಿದೆ. ಈ ಸಂದರ್ಭದಲ್ಲಿಯೇ ಅವರ ರಾಜಿನಾಮೆ ಸುದ್ದಿ ಹಬ್ಬಿತ್ತು.
ಇದಾದ ನಂತರ ಸುಮಾರು ಎರಡು ಗಂಟೆ ಕಾಲ ಯಾರ ಸಂಪರ್ಕಕ್ಕೂ ಸಿಗದ ಸಂತೋಷ್ ಲಾಡ್ ರಾತ್ರಿ 7 ಗಂಟೆ ಸುಮಾರಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರ ನಿವಾಸಕ್ಕೆ ತೆರಳಿ 20 ನಿಮಿಷಗಳ ಕಾಲ ಚರ್ಚೆ ನಡೆಸಿದರು. ಆದರೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನನಗೆ ರಾಜಿನಾಮೆ ನೀಡುವಂತೆ ಯಾರೂ ಸೂಚಿಸಿಲ್ಲ. ನಾನೇನು ತಪ್ಪು ಮಾಡಿಲ್ಲ. ಹೀಗಾಗಿ ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿಕೆ ನೀಡಿದ್ದರು. ಬಳಿಕ 7.40 ನಿಮಿಷಕ್ಕೆ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಸಂಡೂರ್ ಶಾಸಕ ತುಕಾರಾಂ ಜತೆ ಬಂದ ಸಂತೋಷ್ ಲಾಡ್ ಗೌಪ್ಯವಾಗಿ ಮಾತುಕತೆ ನಡೆಸಿದರು. ಆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ರಾಜಿನಾಮೆ ನೀಡಲೇಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು ಎನ್ನಲಾಗಿದೆ. ಸಂಜೆ 7.50ಕ್ಕೆ ಸಿಎಂ ಮನೆಗೆ ಭೇಟಿ ನೀಡಿದ ಗೃಹ ಸಚಿವ ಕೆ.ಜೆ. ಜಾರ್ಜ್ ಕೂಡಾ ಇದೇ ಸಲಹೆ ನೀಡಿದರು. ಹೀಗಾಗಿ ಅನಿವಾರ್ಯವಾಗಿ ರಾತ್ರಿ 8 ಗಂಟೆ ಸುಮಾರಿಗೆ ಸಂತೋಷ್ ಲಾಡ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಹಿರಿಯ ಸಚಿವರ ಸಭೆ: ಲಾಡ್ ಸಮರ್ಥನೆ ಮಾಡುತ್ತಲೇ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ನಾಲ್ಕು ದಿನಗಳ ಹಿಂದೆ ತಮ್ಮ ನಿರ್ಧಾರ ಬದಲಿಸಿಕೊಂಡಿದ್ದರು. ಸಮಾಜ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಅವರು ಬಿಡುಗಡೆ ಮಾಡಿದ ಎರಡನೇ ಕಂತಿನ ದಾಖಲೆ ಹಾಗೂ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಟೀಕೆಯಿಂದ ತತ್ತರಿಸಿದ ಸಿದ್ದರಾಮಯ್ಯ ಸಂಪುಟದ ಹಿರಿಯ ಸಚಿವರ ಜತೆ ರಹಸ್ಯ ಚರ್ಚೆ ನಡೆಸಿದ್ದರು. ಆ ಸಂದರ್ಭದಲ್ಲಿ ಸರ್ಕಾರ ತಕ್ಷಣಕ್ಕೆ ಮುಜುಗರ ಹಾಗೂ ಒತ್ತಡದಿಂದ ತಪ್ಪಿಸಿಕೊಳ್ಳಬೇಕಿದ್ದರೆ ಲಾಡ್ ರಾಜಿನಾಮೆ ಪಡೆಯುವುದು ಅನಿವಾರ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ದೋಷಮುಕ್ತನಾಗಿ ಬರುವೆ
ನನ್ನಿಂದ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರವಾಗುವುದನ್ನು ತಪ್ಪಿಸಲು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ಎಂದು ಸಂತೋಷ್ ಲಾಡ್ ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ರಾಜಿನಾಮೆ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಪಕ್ಷದ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಗಣಿಗುತ್ತಿಗೆ ಪ್ರದೇಶದ ಶೇ.15ರಷ್ಟು ಪ್ರದೇಶದಲ್ಲಿ ಅದಿರು ದಾಸ್ತಾನು ಮಾಡಿದ ಕಂಪನಿಗಳನ್ನು ಸುಪ್ರೀಂ ಕೋರ್ಟ್ ಬಿ ಕೆಟಗರಿ ವ್ಯಾಪ್ತಿಗೆ ಸೇರಿಸಿದೆ. ಆದರೆ ನಮ್ಮದು ಶೇ.15.07ರಷ್ಟು ಪ್ರದೇಶದಲ್ಲಿತ್ತು. ಹೀಗಾಗಿ ಸಿ ಕೆಟಗರಿ ವ್ಯಾಪ್ತಿಗೆ ಸೇರಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಯಲಿ ಎಂದರು. ನನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳ ಬಗ್ಗೆ ಸಾರ್ವಜನಿಕ ಚರ್ಚೆ ನಡೆದಿದೆ. ಯಾವುದೇ ಹೊಸ ಸಂಗತಿ ಇಲ್ಲ. ತನಿಖೆ ನಡೆಯಲಿ. ಆದರೆ ತನಿಖೆ ಸಂದರ್ಭದಲ್ಲಿ ನಾನು ಸಚಿವನಾಗಿ ಮುಂದುವರಿಯುವುದು ಸಮಂಜಸವಾಗಲಾರದು. ಈ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಿದ್ದೇನೆ. ನನಗೆ ವಿಶ್ವಾಸವಿದೆ. ನಾನು ಈ ಆರೋಪದಿಂದ ದೋಷಮುಕ್ತನಾಗಿ ಹೊರಬರುತ್ತೇನೆ ಎಂದರು.
ರಾಜಿನಾಮೆ ನೆಮ್ಮದಿ ತಂದಿದೆ. ಅಕ್ರಮ ಗಣಿಗಾರಿಕೆ ಕಳಂಕ ಹೊತ್ತವರು ಸಂಪುಟದಲ್ಲಿರಬಾರದು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು ಹೇಳುವುದರೊಂದಿಗೆ ಅವರನ್ನು ಕೈಬಿಡಬೇಕೆಂಬ ಕೂಗು ಹೆಚ್ಚಾಯಿತು. ಈ ರಾಜಿನಾಮೆ ಮೂಲಕ ಮುಂಬರುವ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಜುಗರದಿಂದ ಪಾರಾದಂತಾಗಿದೆ.
-ಎಸ್.ಆರ್. ಹಿರೇಮಠ್, ಸಮಾಜ ಪರಿವರ್ತನಾ ವೇದಿಕೆ
ಸಂತೋಷ್ ಲಾಡ್ ರಾಜಿನಾಮೆ ವಿಚಾರದಲ್ಲಿ ತಡವಾಗಿಯಾದರೂ ಮುಖ್ಯಮಂತ್ರಿಗಳು ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ಹೋರಾಟಕ್ಕೆ ಅವಕಾಶ ನೀಡದೆ, ಒತ್ತಡ ಬರುವ ಮುನ್ನವೇ ರಾಜಿನಾಮೆ ಪಡೆದುಕೊಂಡಿದ್ದರೆ ಚೆನ್ನಾಗಿತ್ತು. ಕೊನೆಗೂ ರಾಜಿನಾಮೆ ಪಡೆದುಕೊಳ್ಳುವ ಮೂಲಕ ಮುಖ್ಯಮಂತ್ರಿ ಮುಜುಗರದಿಂದ ಪಾರಾಗಿದ್ದಾರೆ.
-ಪ್ರಹ್ಲಾದ ಜೋಶಿ, ರಾಜ್ಯ ಬಿಜೆಪಿ ಅಧ್ಯಕ್ಷ
ಸಚಿವ ಲಾಡ್ ಮೇಲೆ ಆರೋಪ ಕೇಳಿ ಬಂದ ಪ್ರಾರಂಭದಲ್ಲೇರಾಜಿನಾಮೆ ಪಡೆದುಕೊಂಡಿದ್ದರೆ ಸರ್ಕಾರಕ್ಕೆ ಮುಜುಗರ ಉಂಟಾಗುತ್ತಿರಲಿಲ್ಲ. ಮೂಲ ಕಾಂಗ್ರೆಸಿಗರಲ್ಲಿ ನಾಲ್ವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಅವರಿಗೆ ಸ್ಥಾನ ನೀಡಲು ಮುಖ್ಯಮಂತ್ರಿಗೆ ಇಷ್ಟ ಇರಲಿಲ್ಲ. ಹೀಗಾಗಿ ಸಂತೋಷ್ ಲಾಡ್ ಅವರಿಂದ ರಾಜಿನಾಮೆ ಪಡೆದು, ಮುಜುಗರ ತಪ್ಪಿಸಿಕೊಂಡಿದ್ದಾರೆ.
-ಎಚ್.ಡಿ. ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ