ಜಂಬೂಸವಾರಿಗೆ ಜನಸಾಗರ
ರಾಜರ ಕಾಲದ ವೈಭವ ನೆನಪಿಸುವ, ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯು...
ಕ.ಪ್ರ.ವಾರ್ತೆ, ಮೈಸೂರು, ಅ. 14-
ರಾಜರ ಕಾಲದ ವೈಭವ ನೆನಪಿಸುವ, ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯು ವಿಜಯದಶಮಿಯ ದಿನವಾದ ಸೋಮವಾರ ಲಕ್ಷಾಂತರ ಹೃನ್ಮನಗಳನ್ನು ಸೂರೆಗೊಂಡಿತು.
ದೇಶ- ವಿದೇಶಗಳಿಂದ ಆಗಮಿಸಿದ್ದ ಐದು ಲಕ್ಷಕ್ಕೂ ಅಧಿಕ ಮಂದಿ ಈ ವೈಭವದ ಕ್ಷಣಗಳನ್ನು ಸಾಕ್ಷೀಕರಿಸಿದರು. ನವರಾತ್ರಿಯ ವೈಭವಕ್ಕೆ ಕಳಸಪ್ರಾಯವಾದ ಜಂಬೂ ಸವಾರಿಯಲ್ಲಿ ಗಜರಾಜ ಅರ್ಜುನ ಸತತ ಎರಡನೆ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಿದ. ಸುಡು ಬಿಸಿಲನ್ನು ಲೆಕ್ಕಿಸದೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅರಮನೆ ಎದುರು ನೆರೆದಿದ್ದ ಜನರ ಸಂಭ್ರಮ ಮುಗಿಲು ಮುಟ್ಟಿತ್ತು.
ವಿಶ್ವವಿಖ್ಯಾತ ದಸರಾ ಮಹೋತ್ಸವದ ಕೊನೆ ದಿನವಾದ ವಿಜಯದಶಮಿ ಅಂಗವಾಗಿ ನಡೆದ ಜಂಬೂಸವಾರಿಯಲ್ಲಿ ಗತಕಾಲದ ವೈಭವವೇ ಕಣ್ಣೆದುರಿಗೆ ಬಂದಂತಿತ್ತು. ಅಂಬಾರಿ ನೋಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಅಂಬಾರಿ ಬಂದಾಕ್ಷಣ ಜನರು ಭಕ್ತಿಭಾವದಿಂದ ನಮಿಸುತ್ತಾ, ಜೈ ಚಾಮುಂಡೇಶ್ವರಿ ಮಾತೆ ಎಂದು ಘೋಷಣೆ ಹಾಕಿ, ಪುನೀತ ಭಾವ ತಳೆದರು.
ಈ ಬಾರಿ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದು, ರಾಜ್ಯದಲ್ಲಿ ಉತ್ತಮವಾಗಿ ಮಳೆ, ಬೆಳೆಯಾಗಿರುವುದು, ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿರುವುದರಿಂದ 403ನೇ ದಸರೆಯನ್ನು ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ಸಕಲ ಸಿದ್ಧತೆ ಮಾಡಿತ್ತು. ಅಂತೆಯೇ ಜನಸಾಗರ ಕೂಡ ಹರಿದು ಬಂದಿತ್ತು.
ಗತವೈಭವ ಮರುಕಳಿಕೆ: ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಅರಮನೆ ಆವರಣದ ವಿಶೇಷ ವೇದಿಕೆಯಲ್ಲಿ ನಿಂತು ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡುವಾಗ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಗೈರು ಹಾಜರಿ ಎದ್ದು ಕಂಡಿತು.
21 ಸುತ್ತು ಕುಶಾಲ ತೋಪುಗಳನ್ನು ಸಿಡಿಸಿ, ರಾಷ್ಟ್ರಗೀತೆ ನುಡಿಸಲಾಯಿತು. ಅರಮನೆ ಉತ್ತರದಲ್ಲಿರುವ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ 1.12 ರಿಂದ 1.40 ಗಂಟೆಯೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜ ಪೂಜೆ ನೆರವೇರಿಸಿದರು. ನಂತರ ಅರಮನೆ ಆವರಣಕ್ಕೆ ಬಂದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಲರಾಮ ಮತ್ತು ಗಜೇಂದ್ರ ಆನೆಗಳು ವೇದಿಕೆಯತ್ತ ಬಂದವು. ಸೊಂಡಿಲೆತ್ತಿ ಗಣ್ಯರಿಗೆ ವಂದಿಸುತ್ತಾ ಮೆರವಣಿಗೆ ಚಾಲನೆಗೆ ಅನುಮತಿ ಕೋರಿದವು. ಇದಕ್ಕೆ ಗಣ್ಯರು ಮಾತ್ರವಲ್ಲದೆ, ನೆರೆದಿದ್ದ ಸಹಸ್ರಾರು ಮಂದಿಯಿಂದ ಚಪ್ಪಾಳೆಯ ಮೂಲಕ ಹಸಿರು ನಿಶಾನೆ ನೀಡಿದರು. ಮೆರವಣಿಗೆಯಿಂದ ಅರಮನೆ ಆವರಣದಲ್ಲಿ ಹೊಸದೊಂದು ಲೋಕವೇ ಅನಾವರಣಗೊಂಡಿತು.
ಮೆರುಗಿನ ಮೆರವಣಿಗೆ: ವೀರಗಾಸೆ, ನಾದಸ್ವರ, ಮಂಗಳ ವಾದ್ಯ, ನೌಪತ್, ನಿಶಾನೆ ಆನೆಗಳು, ವಾದ್ಯ ವೃಂದ, ಫಿರಂಗಿ ಗಾಡಿಗಳು ಒಂದರ ಹಿಂದೆ ಒಂದರಂತೆ ಸಾಗಿದವು. ನಡುವೆ ನಾಡಿನ ಕಲೆ, ಸಂಸ್ಕೃತಿ, ಪರಂಪರೆ, ಪ್ರಗತಿಯನ್ನು ಪ್ರತಿಬಿಂಬಿಸುವ ಜಾನಪದ ಕಲಾ ತಂಡಗಳು, ಸ್ತಬ್ಧ ಚಿತ್ರಗಳು ಸಾಗಿದವು. ಕಲಾವಿದರು ಸ್ವಲ್ಪವೂ ಆಯಾಸ ತೋರಿಸಿಕೊಳ್ಳದೆ ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರುಗು ತುಂಬಿದರು.
ಅವುಗಳ ಹಿಂದೆ ನಾದಸ್ವರ, ಆನೆ ಗಾಡಿ, ಅಡ್ಡಪಲ್ಲಕ್ಕಿ, ಪಂಚ ಕಳಸ, ಅರಮನೆಯ ಗೌರವ ನಿಶಾನೆಗಳು, ಪಟ್ಟದ ಆನೆ, ಪಟ್ಟದ ಕುದುರೆ, ಒಂಟೆಗಳು, ಇಂಗ್ಲಿಷ್ ಬ್ಯಾಂಡ್, ಪೊಲೀಸ್ ಅಶ್ವದಳ ಮುನ್ನಡೆದವು. ಇವುಗಳ ಹಿಂದೆ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿ ವಿಗ್ರಹ ಹೊತ್ತು ಗಜರಾಜ ಅರ್ಜುನ ತನ್ನ ಸಂಗಾತಿಗಳಾದ ಸರಳ ಮತ್ತು ವರಲಕ್ಷ್ಮಿಯೊಂದಿಗೆ ಸಂಜೆ 4ಕ್ಕೆ ಬಂದ.
ವಿಶೇಷ ವೇದಿಕೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್, ಮೇಯರ್ ಎನ್. ಎಂ.ರಾಜೇಶ್ವರಿ, ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ, ಜಿಲ್ಲಾಧಿಕಾರಿ ಸಿ.ಶಿಶಾ, ಪೊಲೀಸ್ ಆಯುಕ್ತ ಡಾ. ಎಂ.ಎ.ಸಲೀಂ ಇದ್ದರು.
ಮೆರವಣಿಗೆಯು ಶ್ರೀ ಚಾಮರಾಜ ವೃತ್ತ, ಶ್ರೀ ಕೃಷ್ಣರಾಜ ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಕಾಲೇಜು ವೃತ್ತ, ಹೈವೆ ವೃತ್ತದ ಮೂಲಕ 5 ಕಿ.ಮೀ. ದೂರದ ಬನ್ನಿಮಂಟಪ ಕ್ರಮಿಸಿತು. ಅಲ್ಲಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರ ಸಮ್ಮುಖದಲ್ಲಿ ಪಂಜಿನ ಕವಾಯತು ನಡೆಯಿತು. ಇದರೊಂದಿಗೆ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ದಸರಾ ಮಹೋತ್ಸವಕ್ಕೆ ತೆರೆ ಬಿದ್ದಿತು.
ನಾಡಿನ ಜನರಿಗೆ ಸನ್ಮಂಗಳವಾಗಲಿ: ಸಿಎಂ
ಮೈಸೂರು: ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವಕ್ಕೆ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದಾರೆ. ತಾಯಿ ಚಾಮುಂಡೇಶ್ವರಿಯು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಕೋರಿದರು. ಅರಮನೆಯ ಉತ್ತರ ದ್ವಾರದಲ್ಲಿ ಸೋಮವಾರ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ನಮ್ಮ ನಿರೀಕ್ಷೆಗೂ ಮೀರಿ ಜನ ಸೇರಿದ್ದಾರೆ. ಇದಕ್ಕೆ ನಾಡಿನಲ್ಲಿ ತೃಪ್ತಿಕರ ಮಳೆ, ಬೆಳೆ ಆಗಿರುವುದೇ ಕಾರಣ. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಆರೋಗ್ಯ, ಉತ್ತಮ ಮಳೆ, ಬೆಳೆ ಕರುಣಿಸಲಿ. ನಾಡಿನ ಸಮಸ್ತ ಜನತೆಗೆ ದಸರಾ ಶುಭಾಶಯಗಳು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ನೇತೃತ್ವದಲ್ಲಿ ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿ, ಯಾವುದೇ ಲೋಪ ಉಂಟಾಗದಂತೆ ನೋಡಿಕೊಳ್ಳಲಾಗಿದೆ. ದಸರಾ ಉಪ ಸಮಿತಿ ಸದಸ್ಯರು ಮತ್ತು ಅಧಿಕಾರಿಗಳು ಉತ್ತಮ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.
ವೇದಿಕೆ ಹತ್ತದ ಸಚಿವ ಮಹದೇವಪ್ಪ
ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮೆರವಣಿಗೆಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತಾದರೂ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಪ್ಪಾರ್ಚನೆ ಮಾಡುವಾಗ ವಿಶೇಷ ವೇದಿಕೆ ಏರಲಿಲ್ಲ. ಹಿಂದೆಲ್ಲಾ ಜಂಬೂ ಸವಾರಿಗೆ ಮುಖ್ಯ ಅತಿಥಿಯಾಗಿ ಆಹ್ವಾನಿತರಾದವರು ವೇದಿಕೆ ಹತ್ತಿರುವ ನಿದರ್ಶನಗಳಿವೆ. ಅರಮನೆ ಆವರಣದಲ್ಲಿ ನಿರ್ಮಿಸಿರುವ ವಿಶೇಷ ವೇದಿಕೆಗೆ ಶಿಷ್ಟಾಚಾರದ ಪ್ರಕಾರ ಮುಖ್ಯಮಂತ್ರಿ, ಅವರ ಪತ್ನಿ, ರಾಜವಂಶಸ್ಥರು, ಜಿಲ್ಲಾ ಉಸ್ತುವಾರಿ ಸಚಿವರು, ಮೇಯರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಾತ್ರ ಏರಬೇಕು. ಆದರೆ ಕೆಲವೊಮ್ಮೆ ಶಿಷ್ಟಾಚಾರ ಉಲ್ಲಂಘನೆಯಾಗಿತ್ತು. ಈ ಬಾರಿ ಕೂಡ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಆಗಮಿಸಿರಲಿಲ್ಲ.
ಎಡಕ್ಕೆ ವಾಲಿದ್ದ ಅಂಬಾರಿ
ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಕೆ.ಆರ್. ವೃತ್ತಕ್ಕೆ ಆಗಮಿಸುವ ಮುನ್ನವೇ ಎಡಕ್ಕೆ ವಾಲಿತ್ತು. ಅರಮನೆ ಆವರಣದಲ್ಲಿ ಪುಷ್ಪಾರ್ಚನೆಗೊಂಡ ಬಳಿಕ ಬಲರಾಮ ದ್ವಾರ, ಹಳೆ ಪ್ರತಿಮೆ ಬಳಸಿ ನಗರ ಬಸ್ ನಿಲ್ದಾಣಕ್ಕೆ ಬರುತ್ತಲೇ ಅರ್ಜುನ ಹೊತ್ತಿದ್ದ ಚಿನ್ನದ ಅಂಬಾರಿಯು ಎಡಕ್ಕೆ ವಾಲಿತು. ಈ ವೇಳೆ ಅರ್ಜುನ ಒಮ್ಮೆ ಮೈಯನ್ನು ಒದರಿದ. ಕೂಡಲೇ ಎಚ್ಚೆತ್ತ ಮಾವುತ ದೊಡ್ಡಮಾಸ್ತಿ ಆನೆಯನ್ನು ನಿಯಂತ್ರಿಸಿದರು. ಬಳಿಕ ಅದನ್ನು ಸರಿಪಡಿಸಲಾಯಿತು. ಸಯ್ಯಾಜಿರಾವ್ ರಸ್ತೆ ಪ್ರವೇಶಿಸುತ್ತಿದ್ದಂತೆ ಮತ್ತೊಮ್ಮೆ ಅಂಬಾರಿ ವಾಲಿತು. ಸರಿಪಡಿಸಿದರೂ ಮೆರವಣಿಗೆಯುದ್ದಕ್ಕೂ ಅಂಬಾರಿ ವಾಲಿಕೊಂಡೇ ಇತ್ತು.
ಖಾಸಗಿ ದರ್ಬಾರ್ ಅಂತ್ಯ
ದಸರಾ ಮಹೋತ್ಸವದ ಅಂಗವಾಗಿ ಕಳೆದ ಒಂಭತ್ತು ದಿನಗಳಿಂದ ಅರಮನೆಯಲ್ಲಿ ನಡೆದ ಮೈಸೂರು ರಾಜವವಂಶಸ್ಥರ ಖಾಸಗಿ ದರ್ಬಾರ್ ಸೋಮವಾರ ಅಂತ್ಯಗೊಂಡಿತು. ದಸರಾ ಆರಂಭವಾದ ದಿನ ಬೆಳಗಿನ ಜಾವ ಮಂಗಳಸ್ನಾನ, ಎಣ್ಣೆಶಾಸ್ತ್ರ ಮುಗಿಸಿ ಚಾಮುಂಡಿತೊಟ್ಟಿಯಲ್ಲಿ ಕಂಕಣಧಾರಣೆ ಮಾಡಿದ್ದರು. ನಂತರ ಅಂಬಾವಿಲಾಸ ಅರಮನೆಯಲ್ಲಿ ವಿರಾಜಿಸಿದ್ದ ಸಿಂಹಾಸನ ಏರಿ ಖಾಸಗಿ ದರ್ಬಾರ್ಗೆ ಅಧಿಕೃತವಾಗಿ ಚಾಲನೆ ನೀಡಿ ಮೈಸೂರು ವೈಭವವನ್ನು ಮರುಕಳಿಸಿದರು. ಪ್ರತಿದಿನ ಸಂಜೆ ಮಾತ್ರ ಸಿಂಹಾಸನರೂಢರಾಗಿ ದರ್ಬಾರ್ ನಡೆಸುತ್ತಿದ್ದ ಒಡೆಯರ್ ವಿಜಯದಶಮಿಯಂದು ಕೊನೆಗೊಳಿಸಿದರು.
2ನೇ ಬಾರಿಗೆ ಅರ್ಜುನನ ಪರಾಕ್ರಮ
ಸತತ ಎರಡನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತ ಅರ್ಜುನ ತನ್ನ ಭುಜಬಲದ ಪರಾಕ್ರಮ ಮೆರೆದ. ಒಂದು ವರ್ಷದ ಹಿಂದೆ ಅರ್ಜುನ ಆನೆಯನ್ನು ಕಂಡರೆ ಎಲ್ಲರಿಗೂ ಏನೋ ಒಂಥರಾ ಭಯ. ಆತ ತುಂಟ, ಕೋಪಿಷ್ಟ ಎಂಬ ಕಾರಣಕ್ಕೆ ಆತನ ಬಳಿ ಹೋಗಲು ಬಹುತೇಕರು ಅಂಜುತ್ತಿದ್ದರು. ಒಮ್ಮೆ ವಾಪಸ್ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ನಂತರ ತನ್ನ ಕುಕೃತ್ಯಗಳಿಂದಾಗಿ ದಸರೆಯಿಂದಲೂ ಡಿಬಾರ್ ಆಗಿದ್ದ.
ಅರಮನೆ ಅಂಗಳಕ್ಕೆ ಬಂದರೂ ವೇದಿಕೆಗೆ ಬಾರದ ಒಡೆಯರ್!
ಕಳೆದ ಮೂರು ವರ್ಷಗಳಿಂದ ಜಂಬೂ ಸವಾರಿ ವೇಳೆ ಅರಮನೆ ಅಂಗಳಕ್ಕೆ ಬಾರದೇ ಇದ್ದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಈ ಬಾರಿ ಅರಮನೆ ಅಂಗಳಕ್ಕೆ ಆಗಮಿಸಿದ್ದರು. ಆದರೆ, ಪುಷ್ಪಾರ್ಚನೆ ವೇಳೆ ವಿಶೇಷ ವೇದಿಕೆ ಮೇಲೆ ಏರಲಿಲ್ಲ. ಹೀಗಾಗಿ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಮೂರು ವರ್ಷಗಳ ಹಿಂದೆ ರಥದಲ್ಲಿ ಹೋಗುವಾಗ ಕಾಲಿಗೆ ಏಟು ಬಿದ್ದಿದ್ದರಿಂದ ಅನಾರೋಗ್ಯ ನೆಪದಲ್ಲಿ ಜಂಬೂ ಸವಾರಿ ವೇಳೆ ಅರಮನೆ ಅಂಗಳಕ್ಕೆ ಆಗಮಿಸುತ್ತಿರಲಿಲ್ಲ. ಆದರೆ ಈ ಬಾರಿ ಆಗಮಿಸಿ ಸಿಎಂ ಸಿದ್ದರಾಮಯ್ಯ, ಸಚಿವರಾದ ವಿ. ಶ್ರೀನಿವಾಸಪ್ರಸಾದ್ ಜತೆ ಅರ್ಧ ಗಂಟೆಗೂ ಹೆಚ್ಚು ಕಾಲ ಕುಳಿತು ಎದ್ದು ಹೋದರು. ವಿಶೇಷ ವೇದಿಕೆಯತ್ತ ಬರಲೇ ಇಲ್ಲ. ರಾಜವಂಶಸ್ಥರ ಕುಟುಂಬದವರು ಅಂಬಾರಿ ಕಟ್ಟುವಾಗ ಹಾಗೂ ಜಂಬೂ ಸವಾರಿ ಸಾಗುವಾಗ ಅಂಬಾವಿಲಾಸ ಅರಮನೆಯ ತಮ್ಮ ನಿವಾಸದ ಮಹಡಿಯಲ್ಲಿ ನಿಂತು ವೀಕ್ಷಿಸುತ್ತಾರೆ.
ಮಾವುತರು, ಕಾವಾಡಿಗಳಿಗೆ ಬಿಎಸ್ವೈ, ಶೋಭಾ ಉಪಾಹಾರ
ದಸರೆಯಲ್ಲಿ ಭಾಗವಹಿಸಲು ಆಗಮಿಸಿರುವ ಆನೆ ಮಾವುತರು, ಕಾವಾಡಿಗಳ ಕುಟುಂಬದವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಭಾನುವಾರ ಬೆಳಗ್ಗೆ ಉಪಾಹಾರ ವ್ಯವಸ್ಥೆ ಮಾಡಿದ್ದರು. ಅರಮನೆ ಆವರಣದಲ್ಲಿರುವ ಆನೆ ಬಿಡಾರದ ಪಕ್ಕದಲ್ಲಿ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಆನೆ ಮಾವುತರು, ಕಾವಾಡಿಗಳ ಕುಟುಂಬದವರಿಗೆ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಉಪಾಹಾರ ಬಡಿಸಿದರು. ಯಡಿಯೂರಪ್ಪ ಅವರೊಟ್ಟಿಗೆ ಕುಳಿತು ಉಪಾಹಾರ ಸೇವಿಸಿದರು. ಬಳಿಕ ಆನೆ ಬಲರಾಮನಿಗೆ ವಿಶೇಷ ಪೂಜೆ ಸಲ್ಲಿಸಿ, ಕಬ್ಬು ಬೆಲ್ಲ ನೀಡಿದರು.
- ಅಂಶಿ ಪ್ರಸನ್ನಕುಮಾರ್