ತಗ್ಗಿದ ಫೈಲಿನ್ ಅಬ್ಬರ
ಪೂರ್ವ ಕರಾವಳಿಗೆ ಶನಿವಾರ ರಾತ್ರಿ ಅಪ್ಪಳಿಸಿದ ಫೈಲಿನ್ ಚಂಡಮಾರುತದ ಅಬ್ಬರ ಸೋಮವಾರದ ವೇಳೆಗೆ ಬಹುತೇಕ ತಗ್ಗಿದೆ.
ಭುವನೇಶ್ವರ/ಗೋಪಾಲಪುರ: ಪೂರ್ವ ಕರಾವಳಿಗೆ ಶನಿವಾರ ರಾತ್ರಿ ಅಪ್ಪಳಿಸಿದ ಫೈಲಿನ್ ಚಂಡಮಾರುತದ ಅಬ್ಬರ ಸೋಮವಾರದ ವೇಳೆಗೆ ಬಹುತೇಕ ತಗ್ಗಿದೆ. ಆದರೆ, ಫೈಲಿನ್ ಬಂದು ಹೋದ ತರುವಾಯ ಸುರಿದ ಮಳೆಯಿಂದಾಗಿ ಒಡಿಶಾ, ಆಂಧ್ರ, ಬಿಹಾರ ಮತ್ತು ಛತ್ತೀಸ್‌ಗಡದಲ್ಲಿ ಭಾರಿ ಪ್ರವಾಹ ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ.
ಫೈಲಿನ್ ಸಾಗಿದ ಮಾರ್ಗ ಯುದ್ಧಭೂಮಿಯಂತಾಗಿದ್ದು, ಅಲ್ಲಲ್ಲಿ ಉರುಳಿ ಬಿದ್ದ ಮರಗಳು, ಕಟ್ಟಡಗಳು, ವಿದ್ಯುತ್ ಕಂಬಗಳು ಫೈಲಿನ್ ರುದ್ರನರ್ತನಕ್ಕೆ ಸಾಕ್ಷಿಯಾಗಿ ನಿಂತಿವೆ. ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿಗಳಿಗೆ ಹಾನಿಯಾಗಿದೆ. ಲಕ್ಷಾಂತರ ಮಂದಿ ಮನೆ, ಮಠಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಚಂಡಮಾರುತ ಅಪ್ಪಳಿಸುವ ಮೊದಲೇ ಭಾರಿ ಸಂಖ್ಯೆಯಲ್ಲಿ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದರಿಂದಾಗಿ ದೊಡ್ಡಮಟ್ಟದ ಜೀವಹಾನಿ ತಪ್ಪಿದೆ. ಈ ಚಂಡಮಾರುತಕ್ಕೆ 27 ಮಂದಿ ಮೃತಪಟ್ಟಿದ್ದಾರೆ.
27
ಮಂದಿ ಫೈಲಿನ್‌ಗೆ ಜೀವ ಕಳೆದುಕೊಂಡವರು
9 ಲಕ್ಷ
ಮಂದಿ ಚಂಡಮಾರುತದ ಮೊದಲೇ ಸ್ಥಳಾಂತರ
ರು. 2400 ಕೋಟಿ
ಒಡಿಶಾವೊಂದರಲ್ಲೇ ಹಾನಿಗೀಡಾದ ಬತ್ತದ ಬೆಳೆಗೆ ಆದ ಹಾನಿಯ ಮೌಲ್ಯ
14,511
ಗ್ರಾಮಗಳು ಒಡಿಶಾದ 12 ಜಿಲ್ಲೆಗಳಲ್ಲಿ ಹಾನಿಗೊಳಗಾದ ಹಳ್ಳಿಗಳು
2.34 ಲಕ್ಷ
ಗಂಜಂ ಜಿಲ್ಲೆಯೊಂದರಲ್ಲೇ ಹಾನಿಗೀಡಾದ ಮನೆಗಳು