ಗಾಂಧಿಗಾಗಿ ಕಬ್ಬನ್ ಪಾರ್ಕ್ ಡಿನೋಟಿಫೈ
ವಿಧಾನಸೌಧ ಹಾಗೂ ವಿಕಾಸಸೌಧ ನಡುವಿನ ಕಿರು ಉದ್ಯಾನದಲ್ಲಿ 'ಧ್ಯಾನಸ್ಥ ಗಾಂಧಿ' ಪ್ರತಿಮೆ ಸ್ಥಾಪನೆಗೆ ಮುಂದಾಗಿರುವ ಸರ್ಕಾರದ...
ಕನ್ನಡಪ್ರಭ ವಾರ್ತೆ, ಬೆಂಗಳೂರು, ಅ.16-
ವಿಧಾನಸೌಧ ಹಾಗೂ ವಿಕಾಸಸೌಧ ನಡುವಿನ ಕಿರು ಉದ್ಯಾನದಲ್ಲಿ 'ಧ್ಯಾನಸ್ಥ ಗಾಂಧಿ' ಪ್ರತಿಮೆ ಸ್ಥಾಪನೆಗೆ ಮುಂದಾಗಿರುವ ಸರ್ಕಾರದ ಕ್ರಮ ವಿವಾದಕ್ಕೆ ಕಾರಣವಾಗಿದೆ.
ಪ್ರತಿಮೆ ಸ್ಥಾಪನೆಗೆ ಹೈಕೋರ್ಟ್ ಅನುಮತಿ ಸಿಗದೇ ಹೋಗಬಹುದೆಂಬ ಕಾರಣಕ್ಕೆ ರಾಜ್ಯ ಸರ್ಕಾರ ವಿಧಾನಸೌಧ ಸುತ್ತಲಿನ 49.34 ಎಕರೆ ಜಾಗವನ್ನು ಕಬ್ಬನ್ ಪಾರ್ಕ್ ವ್ಯಾಪ್ತಿಯಿಂದ ಡಿನೋಟಿಫೈ ಮಾಡಿ ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಉಭಯ ಸದನಗಳ ಒಪ್ಪಿಗೆ ಪಡೆದಿದೆ. ಈ ಸಂಬಂಧ ರಾಜ್ಯಪತ್ರ ಹೊರಡಿಸಲಾಗಿದೆ. ಆದರೆ ಇದು ಕಾನೂನು ಬಾಹಿರ ಎಂಬ ಕೂಗು ಈಗ ವ್ಯಕ್ತವಾಗಿದೆ.
ಉಭಯ ಇಲಾಖೆ ಆಕ್ಷೇಪ: ಅಧಿವೇಶನದ ಕೊನೆ ದಿನದ ಕೊನೆ ಕ್ಷಣಗಳಲ್ಲಿ ಸರ್ಕಾರ ಈ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಿತ್ತು. ಆದರೆ ಯಾವ ಉದ್ದೇಶಕ್ಕೆ ತಿದ್ದುಪಡಿ ಮಾಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿರಲಿಲ್ಲ. ಆದರೆ ಈಗ ಇದರ ನೈಜ ಉದ್ದೇಶ ಬಹಿರಂಗಗೊಂಡಿದ್ದು, ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು, ತೋಟಗಾರಿಕೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಜತೆಗೆ ಈ ಬಗ್ಗೆ ಹೈಕೋರ್ಟ್ ಮೆಟ್ಟಿಲೇರುವ ಬಗ್ಗೆ ಚಿಂತನೆ ನಡೆದಿದೆ.
ಏನಿದು ವಿವಾದ?: ವಿಧಾನಸೌಧ ಹಾಗೂ ವಿಕಾಸಸೌಧ ಮಧ್ಯದ ಉದ್ಯಾನದಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸಬೇಕು ಎಂಬುದು ಮೂಲತಃ ರಾಜ್ಯ ಸರ್ಕಾರದ ಪ್ರಸ್ತಾಪವಲ್ಲ. ಇದು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಸಂಕಲ್ಪ. ಈ ಜಾಗದಲ್ಲಿ 25 ಅಡಿ ಎತ್ತರದ ವೇದಿಕೆ ಮೇಲೆ, ಅಷ್ಟೇ ಎತ್ತರದ ಧ್ಯಾನಸ್ಥ ಗಾಂಧಿ ಪ್ರತಿಮೆ ಸ್ಥಾಪಿಸುವಂತೆ ಅವರು ಅಂದಿನ ಬಿಜೆಪಿ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದರು. ಆದರೆ ಕಾರಣಾಂತರಗಳಿಂದ ಇದಕ್ಕೆ ಒಪ್ಪಿಗೆ ದೊರಕಿರಲಿಲ್ಲ. ಏಕೆಂದರೆ ಲೋಕೋಪಯೋಗಿ, ನಗರಾಭಿವೃದ್ಧಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಅಧಿಕಾರಿಗಳ ವಿರೋಧಕ್ಕೆ ಪ್ರಮುಖವಾಗಿ ಮೂರು ಕಾರಣಗಳಿದ್ದವು. ಮೊದಲನೆಯದಾಗಿ ಈ ಜಾಗದಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸಿದರೆ ವಿಧಾನಸೌಧ ಹಾಗೂ ವಿಕಾಸಸೌಧದ ಅಂದಕ್ಕೆ ತೊಂದರೆಯಾಗುತ್ತದೆ. ಎರಡನೆಯದಾಗಿ ವಿಧಾನಸೌಧದ ಸುತ್ತಲಿನ ಪ್ರದೇಶಗಳಲ್ಲಿ ಪ್ರತಿಮೆಗಳ ಸಂಖ್ಯೆ ಹೆಚ್ಚಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಹೈಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ ಎಂದು ವಾದ ಮಂಡಿಸಲಾಗಿತ್ತು.
ಆದೇಶ ಏನು?: ಎಸ್.ಎಂ.ಕೃಷ್ಣ ಅವರು ತಮ್ಮ ಅವಧಿಯಲ್ಲಿ ನೇತಾಜಿ ಸುಭಾಷ್ಚಂದ್ರ ಬೋಸ್ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಸ್ಥಾಪಿಸಲು ಮುಂದಾಗಿದ್ದರು. ಆದರೆ ವಿಧಾನಸೌಧ ಸುತ್ತಲಿನ ಪ್ರದೇಶ ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಯಾವುದೇ ನಿರ್ಮಾಣ ಮಾಡುವಾಗ ಪಾರ್ಕ್ ಪ್ರಿಸರ್ವೇಶನ್ ಆಕ್ಟ್ ಪ್ರಕಾರ ತೋಟಗಾರಿಕೆ ಇಲಾಖೆ ಒಪ್ಪಿಗೆ ಪಡೆಯಬೇಕು. ಜತೆಗೆ ಈ ರೀತಿ ಪ್ರತಿಮೆಗಳನ್ನು ನಿಲ್ಲಿಸುತ್ತಾ ಹೋದರೆ ವಿಧಾನಸೌಧ ಸ್ಮಾರಕವಾಗಿ ಬಿಡುತ್ತದೆ ಎಂದು ಖಾಸಗಿ ವ್ಯಕ್ತಿಯೊಬ್ಬರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಕೋರ್ಟ್ ಎಚ್ಚರಿಸಿತ್ತು: ವಿಚಾರಣೆ ನಡೆಸಿದ ನ್ಯಾಯಾಲಯ ಸಾರ್ವಜನಿಕ ಸ್ಥಳದಲ್ಲಿ ಮನಬಂದಂತೆ ಪ್ರತಿಮೆ ಸ್ಥಾಪಿಸುವಂತಿಲ್ಲ. ಇನ್ನು ಮುಂದೆ ಯಾವುದೇ ಪ್ರತಿಮೆ ಅಥವಾ ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಹೈಕೋರ್ಟ್ ಒಪ್ಪಿಗೆ ಪಡೆಯಬೇಕು ಎಂದು ಆದೇಶ ನೀಡಿತ್ತು.
ಕೊನೆ ದಿನದಲ್ಲಿ ಅಂಗೀಕಾರ: ಹೀಗಾಗಿ ಬಿಜೆಪಿ ಸರ್ಕಾರದ ಇಬ್ಬರು ಮುಖ್ಯಮಂತ್ರಿಗಳು ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿರಲಿಲ್ಲ. ಜಗದೀಶ್ಶೆಟ್ಟರ್ ಅಧಿಕಾರದಿಂದ ಕೆಳಗಿಳಿಯುವ ಕೊನೆ ದಿನದಲ್ಲಿ ಅಂಗೀಕಾರ ನೀಡಿದ್ದರು. ಆದರೆ ಹೊಸ ಸರ್ಕಾರ ಬಂದ ನಂತರ ಮತ್ತೆ ಕಾನೂನು ಕಟ್ಟಳೆ ಬಗ್ಗೆ ಅಧಿಕಾರಿಗಳು ಗಮನ ಸೆಳೆದರು. ಆದರೆ ತಮ್ಮ ಪ್ರಸ್ತಾಪದಿಂದ ಶಂಕರಮೂರ್ತಿ ಅವರು ಹಿಂದೆ ಸರಿಯಲು ಒಪ್ಪದೇ ಇದ್ದುದರಿಂದ ಸರ್ಕಾರ 49 ಎಕರೆ ಪ್ರದೇಶವನ್ನು ಕಬ್ಬನ್ ಪಾರ್ಕ್ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಇದರಿಂದ ಈ ಭಾಗದಲ್ಲಿ ಯಾವುದೇ ನಿರ್ಮಾಣ ಮಾಡಬೇಕಿದ್ದರೆ ಹೈಕೋರ್ಟ್ ಅನುಮತಿಗೆ ಕಾಯುವುದು ತಪ್ಪುತ್ತದೆ ಎಂದು ಈ ಕ್ರಮ ತೆಗೆದುಕೊಳ್ಳಲಾಗಿದೆ.
ಆದರೆ ಸರ್ಕಾರ ಉದ್ದೇಶ ತಿಳಿಸದೇ ಡಿನೋಟಿಫೈ ಮಾಡಿರುವುದು ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರನ್ನು ಕೆರಳಿಸಿದೆ. ಹೀಗಾಗಿ ಈ ವಿಚಾರ ಸಂಬಂಧ ಮತ್ತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲು ಚಿಂತನೆ ನಡೆದಿದೆ.
ಶಾಸ್ತ್ರಿ ಪ್ರತಿಮೆಗೆ ಮುಸುಕು
ಗಾಂಧಿ ಪ್ರತಿಮೆ ಸ್ಥಾಪನೆ ಪ್ರಸ್ತಾಪದೊಂದಿಗೆ ಮಾಜಿ ಪ್ರಧಾನಿ ದಿ.ಲಾಲ್ ಬಹದ್ದೂರ್ ಶಾಸ್ತ್ರಿ ಪ್ರತಿಮೆ ಅನಾವರಣ ವಿವಾದವೂ ಥಳಕು ಹಾಕಿಕೊಂಡಿದೆ. ವಿಧಾನಸೌಧದ ಆವರಣದಲ್ಲಿ ಈಗಾಗಲೇ ಶಾಸ್ತ್ರಿ ಪ್ರತಿಮೆ ಸಿದ್ದವಾಗಿದೆ. ಆದರೆ ಇದರ ಅನಾವರಣಕ್ಕೆ ಇದೇ ಕಾನೂನಿನ ಅಡ್ಡಿ ಇದೆ. ಹೀಗಾಗಿ ಶಾಸ್ತ್ರಿ ಪ್ರತಿಮೆಗೆ ಮುಸುಕು ಹಾಕಿ ನಿಲ್ಲಿಸಿಡಲಾಗಿದೆ. ಅ.2ರಂದು ಅನಾವರಣ ಮಾಡುವ ಪ್ರಸ್ತಾಪ ಬಂದಿತ್ತಾದರೂ, ರಾಜ್ಯ ಹಿಂಜರಿದಿದೆ.
ಕಬ್ಬನ್ ಪಾರ್ಕ್ನಲ್ಲಿ ಬರಿ ಪ್ರತಿಮೆ
ವಿಧಾನಸೌಧ ಮಾತ್ರವಲ್ಲ, ಉತ್ತರದಲ್ಲಿನ ಪೊಲೀಸ್ ತಿಮ್ಮಯ್ಯ ಸರ್ಕಲ್, ದಕ್ಷಿಣದ ಹಡ್ಸನ್ ಸರ್ಕಲ್, ಪೂರ್ವದ ಎಡ್ವರ್ಡ್ ಪ್ರತಿಮೆ ಪ್ರದೇಶ ಹಾಗೂ ಪಶ್ಚಿಮದಲ್ಲಿನ ಡಿಜಿ ಕಚೇರಿಯನ್ನು ಗಡಿಯಾಗಿ ಹೊಂದಿರುವ ಪ್ರದೇಶದವರೆಗೆ ಕಬ್ಬನ್ಪಾರ್ಕ್ ವ್ಯಾಪ್ತಿಯಿದೆ. ಆದರೆ ದಿಕ್ಕು ದಿಕ್ಕಿಗೂ ಪ್ರತಿಮೆಗಳೇ. ಕ್ವೀನ್ಸ್ ಪ್ರತಿಮೆ, ಎಡ್ವರ್ಡ್ ಪ್ರತಿಮೆ, ಕಬ್ಬನ್, ಶೇಷಾದ್ರಿ ಅಯ್ಯರ್, ಚಾಮರಾಜೇಂದ್ರ ಒಡೆಯರ್, ದೇವರಾಜ್ ಅರಸ್, ಕೆಂಗಲ್ ಹನುಮಂತಯ್ಯ, ಬಿ.ಆರ್.ಅಂಬೇಡ್ಕರ್, ಜವಾಹರ್ ಲಾಲ್ ನೆಹರೂ, ನಿಜಲಿಂಗಪ್ಪ, ಬಾಬು ಜಗಜೀವನ್ರಾಂ ಸೇರಿದಂತೆ ಹಲವು ಪ್ರತಿಮೆಗಳಿವೆ. ಇವುಗಳ ಸಾಲಿಗೆ ಇನ್ನೆಷ್ಟು ಸೇರಬೇಕು ಎಂಬುದು ಸಾರ್ವಜನಿಕರ ಪ್ರಶ್ನೆ.
ಹೈಕೋರ್ಟ್ ಅನುಮತಿ ಇಲ್ಲದೇ ವಿಧಾನಸೌಧ ಸುತ್ತಲಿನ ಪ್ರದೇಶಗಳಲ್ಲಿ ಏನೂ ಮಾಡಲಾಗದ ಸ್ಥಿತಿ ಇತ್ತು. ಹೀಗಾಗಿ ಸರ್ಕಾರ ಈ ವಿಧೇಯಕವನ್ನು ಜಾರಿಗೆ ತಂದಿದೆ. ಗಾಂಧಿ ಪ್ರತಿಮೆ ಸ್ಥಾಪನೆ ಹಿಂದೆ ಸದುದ್ದೇಶವಿದೆ. ಆದರೆ ಇದಕ್ಕೂ ಕೆಲವು ವಿಘ್ನ ಸಂತೋಷಿಗಳು ಅಡ್ಡಿಪಡಿಸುತ್ತಿದ್ದಾರೆ.
- ಡಿ.ಎಚ್.ಶಂಕರಮೂರ್ತಿ, ಸಭಾಪತಿ, ವಿಧಾನಪರಿಷತ್
- ರಾಘವೇಂದ್ರ ಭಟ್