ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಂಬಿ, ಕೈದಿಗಳ ಬರವೆಂದು ಇಲ್ಲಿ ಜೈಲು ಮುಚ್ಚಿದರು!

ನೆದರ್ಲೆಂಡ್‌ನಲ್ಲಿರುವ ಜೈಲುಗಳಿಗೆ ಕೈದಿಗಳ ಬರ ಕಾಣಿಸಿಕೊಂಡಿದೆ! ಕೈದಿಗಳಿಲ್ಲದೆ ಕೆಲವು ಜೈಲುಗಳಲ್ಲಿರುವ ಸಿಬ್ಬಂದಿ...

Srinivasa Murthy VN
Updated On : 17 Oct 2013, 11:50 am

ಲಂಡನ್: ನಮ್ಮ ದೇಶದಲ್ಲಿ ಗಲ್ಲಿಗೊಂದು ಜೈಲು ತೆರೆದರೂ ಕೈದಿಗಳ ಕೊರತೆಯಾಗುವುದಿಲ್ಲ. ಅಂಥದ್ದರಲ್ಲಿ ನೆದರ್ಲೆಂಡ್‌ನಲ್ಲಿರುವ ಜೈಲುಗಳಿಗೆ ಕೈದಿಗಳ ಬರ ಕಾಣಿಸಿಕೊಂಡಿದೆಯಂತೆ! ಕೈದಿಗಳಿಲ್ಲದೆ ಕೆಲವು ಜೈಲುಗಳಲ್ಲಿರುವ ಸಿಬ್ಬಂದಿ ಹಲವು ವರ್ಷದಿಂದ ನೊಣ ಹೊಡೆಯುತ್ತಿದ್ದಾರಂತೆ! ಹಾಗಾಗಿ ದೇಶದಲ್ಲಿ ಕನಿಷ್ಠ 8 ಜೈಲುಗಳಿಗೆ ಬೀಗ ಜಡಿಯಲು ಸರ್ಕಾರ ನಿರ್ಧರಿಸಿದೆ.
ಸರ್ಕಾರದ ಈ ನಿರ್ಧಾರದಿಂದಾಗಿ 1,200 ಸಿಬ್ಬಂದಿ ನೌಕರಿ ಕಳೆದುಕೊಳ್ಳಲಿದ್ದು, ಅವರಿಗೆ ಬದಲಿ ವ್ಯವಸ್ಥೆ ಕಲ್ಪಿಸುವ ಕುರಿತು ಚಿಂತನೆ ನಡೆಯುತ್ತಿದೆ.
ಸದ್ಯ ನೆದರ್ಲೆಂಡ್‌ನಲ್ಲಿರುವ ಜೈಲುಗಳಿಗೆ 14 ಸಾವಿರ ಕೈದಿಗಳನ್ನು ಇಡುವಷ್ಟು ಸಾಮರ್ಥ್ಯವಿದೆ. ಆದರೆ, ಅಲ್ಲಿರುವ ಕೈದಿಗಳ ಸಂಖ್ಯೆ ಕೇವಲ 12 ಸಾವಿರ. ಮುಂದಿನ ವರ್ಷದಿಂದ ಅಪರಾಧಗಳ ಪ್ರಮಾಣ ಇನ್ನಷ್ಟು ಇಳಿಮುಖವಾಗಲಿದೆ ಎಂದು ನೆದರ್ಲೆಂಡ್‌ನ ಕಾನೂನು ಸಚಿವಾಲಯ ಹೇಳಿದೆ.
60ಕ್ಕೂ ಹೆಚ್ಚು ಸಂಘಟನೆಗಳನ್ನು ಪ್ರತಿನಿಧಿಸುವ ಅಪರಾಧ ನ್ಯಾಯ ಒಕ್ಕೂಟವು ಬಂದೀಖಾನೆಗಳನ್ನು ಸಣ್ಣಪುಟ್ಟ ಅಪರಾಧಿಗಳಿಗಾಗಿ ಬಳಸಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದೆ. ಗಂಭೀರ, ಪದೇ ಪದೆ ಅಪರಾಧ ಎಸಗುವ ಮತ್ತು ಹಿಂಸಾಪ್ರವೃತ್ತಿಯ ಕೈದಿಗಳಿಗಳನ್ನಷ್ಟೇ ಕಂಬಿ ಹಿಂದೆ ಹಾಕಬೇಕು ಎಂದು ಆಗ್ರಹಿಸಿದೆ.

ಅಂಕಿ ಅಂಶ

102 ಜೈಲುಗಳಿದ್ದವು ನೆದರ್ಲೆಂಡ್‌ನಲ್ಲಿ 2006ರಲ್ಲಿ
14000 ಕೈದಿಗಳನ್ನು ಇಟ್ಟುಕೊಳ್ಳುವ ಸಾಮರ್ಥ್ಯ
12000 ಸದ್ಯ ದೇಶದಲ್ಲಿರುವ ಕೈದಿಗಳ ಸಂಖ್ಯೆ

ಜೈಲಿನ ಬಿಜಿನೆಸ್!
ಒಂದುಕಡೆ ನೆದರ್ಲೆಂಡ್‌ನಲ್ಲಿ ಕೈದಿಗಳ ಕೊರತೆಯಿದ್ದರೆ ನೆರೆಯ ಬೆಲ್ಜಿಯಂನ ಜೈಲುಗಳು ಕೈದಿಗಳಿಂದ ತುಂಬಿ ತುಳುಕುತ್ತಿವೆ. ಹೊಸ ಜೈಲುಗಳನ್ನು ನಿರ್ಮಿಸುವುದು ಬೆಲ್ಜಿಯಂ ಪಾಲಿಗೆ ಸಮಸ್ಯೆಯಾಗಿ ಕಾಡಿತ್ತು. ಈ ಹಿನ್ನೆಲೆಯಲ್ಲಿ ಅದಕ್ಕೆ ಪರಿಹಾರವಾಗಿ ಕಂಡದ್ದು ನೆದರ್ಲೆಂಡ್‌ನಲ್ಲಿ ಖಾಲಿ ಬಿದ್ದಿರುವ ಜೈಲುಗಳು. ಅದರಂತೆ 2010ರಲ್ಲಿ ಬೆಲ್ಜಿಯಂ ಮತ್ತು ನೆದರ್ಲೆಂಡ್ ಒಪ್ಪಂದವೊಂದಕ್ಕೆ ಸಹಿಹಾಕಿದ್ದವು. ಇದರನ್ವಯ ಬೆಲ್ಜಿಯಂ ಮೂರು ವರ್ಷಗಳ ಕಾಲ ತನ್ನ 500 ಕೈದಿಗಳನ್ನು ನೆದರ್ಲೆಂಡ್‌ನ ಜೈಲಿಗೆ ಕಳುಹಿಸಿಕೊಟ್ಟಿದೆ. ಇದಕ್ಕಾಗಿ ನೆದರ್ಲೆಂಡ್‌ಗೆ ಒಟ್ಟು 26 ಮಿಲಿಯನ್ ಯೂರೋ ಪಾವತಿಸಿತ್ತು. ಇದರಿಂದ ನೆದರ್ಲೆಂಡ್‌ನಲ್ಲಿ ಬಾಗಿಲು ಎಳೆಯಬೇಕಿದ್ದ ಜೈಲುಗಳ ಸಂಖ್ಯೆ 19ರಿಂದ 8ಕ್ಕಿಳಿದಿದೆ.

2009 ರಲ್ಲೇ ಇತ್ತು ಬೇಡಿಕೆ...
ಕೈದಿಗಳ ಕೊರತೆ ಎದುರಿಸುತ್ತಿರುವ ಜೈಲುಗಳಿಗೆ ಬಾಗಿಲೆಳೆಯಬೇಕೆಂಬ ಪ್ರಸ್ತಾಪ ಇವತ್ತು ನಿನ್ನೆಯದಲ್ಲ. 2009ರಲ್ಲೇ ಸರ್ಕಾರದ ಮುಂದೆ ಇಂತಹದ್ದೊಂದು ಪ್ರಸ್ತಾಪ ಇತ್ತು. ಆಗ 19 ಜೈಲುಗಳಿಗೆ ಬಾಗಿಲೆಳೆಯಲು ನಿರ್ಧರಿಸಲಾಗಿತ್ತು. ಆದರೆ, ಸದ್ಯ 8 ಜೈಲುಗಳನ್ನಷ್ಟೇ ಬಂದ್ ಮಾಡಲು ನಿರ್ಧರಿಸಲಾಗಿದೆ. ಇದರಿಂದ 1,200 ಸಿಬ್ಬಂದಿ ನೌಕರಿ ಕಳೆದುಕೊಳ್ಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement